ದೇವೇಗೌಡರ ಪತ್ನಿ ಚೆನ್ನಮ್ಮ ಅನಾರೋಗ್ಯ ಉಸಿರಾಟದ ತೊಂದರೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ
ದೇವೇಗೌಡ ಧರ್ಮಪತ್ನಿ ಚೆನ್ನಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ ಚೆನ್ನಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಕಳೆದ ಮೂರು ದಿನಗಳಿಂದ ತಜ್ಞ ವೈದ್ಯರ ನಿಗಾದೊಂದಿಗೆ ತೀವ್ರ ನಿಗಾ ಘಟಕದಲ್ಲಿ ಚೆನ್ನಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಚೆನ್ನಮ್ಮ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ವಯೋಸಹಜ ಆರೋಗ್ಯ ಏರುಪೇರಿನಿಂದಾಗಿ ತಕ್ಷಣವೇ ಅವರನ್ನು ಸಮೀಪದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು
ಚೆನ್ನಮ್ಮ ಅವರು ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆಯೇ ಪುತ್ರರಾದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಎಚ್.ಡಿ. ರೇವಣ್ಣ ಕುಟುಂಬದ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಬಳಿ ಆರೋಗ್ಯ ವಿಚಾರಿಸಿದರು. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಾಯಿಯ ಚಿಕಿತ್ಸೆ ಜವಾಬ್ದಾರಿ ಹೊತ್ತಿರುವ ತಜ್ಞ ವೈದ್ಯರ ತಂಡದೊಂದಿಗೆ ಸುದೀರ್ಘವಾಗಿ ಮಾತನಾಡಿ, ಚಿಕಿತ್ಸೆಯ ಪ್ರಗತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
"ಚೆನ್ನಮ್ಮ ಅವರಿಗೆ ಸದ್ಯ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ. ಆಕ್ಸಿಜನ್ ಮಟ್ಟದಲ್ಲಿನ ಸಣ್ಣ ಏರುಪೇರು ನಿವಾರಿಸಲು ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಅಭಿಮಾನಿಗಳು ಮತ್ತು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ." ಎಂದು ವೈದ್ಯರ ತಂಡ ಭರವಸೆ ನೀಡಿದೆ. ಹಾಸನ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಜೆಡಿಎಸ್ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಕುಟುಂಬದ ಹಿತೈಷಿಗಳು ಆಸ್ಪತ್ರೆಯ ಬಳಿ ಆಗಮಿಸಿ ಮಾಹಿತಿ ಪಡೆಯುತ್ತಿದ್ದಾರೆ. ಚೆನ್ನಮ್ಮ ಅವರು ಬೇಗ ಗುಣಮುಖರಾಗಲಿ ಎಂದು ಜೆಡಿಎಸ್ ಕಾರ್ಯಕರ್ತರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ.

