ಚೆನ್ನಮ್ಮ ಅಂತಿಮಯಾತ್ರೆಗೆ ಜನಸಾಗರ, ಡಿಸಿಗಳೊಂದಿಗೆ ಸಿಎಂ ಸಭೆ, ಲಾಲ್‌ಬಾಗ್‌ನಲ್ಲಿ ಟನಲ್ ವಿರುದ್ಧ ಜನಜಾಗೃತಿ
ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಅಂತಿಮ ಯಾತ್ರೆಗೆ ಕೊಂಡೊಯ್ಯುವ ವೇಳೆ ಹೆಚ್.ಡಿ.ದೇವೇಗೌಡರು ಭಾವುಕರಾದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಬೆಂಗಳೂರಿನ ಅಸ್ಮಿತೆ ಮತ್ತು ಪ್ರಮುಖ ಪರಿಸರ ತಾಣವಾಗಿರುವ ಲಾಲ್ಬಾಗ್ ಸಸ್ಯೋದ್ಯಾನದ ಅಸ್ತಿತ್ವಕ್ಕೆ ಈಗ ಆತಂಕ ಎದುರಾಗಿದೆ.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಸಮೀಪದ ಕ್ಯಾತನಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆಯಲಿದೆ. ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಲ್ಲಿರುವ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಲಿದ್ದು, ಸ್ಥಳದಲ್ಲಿ ಜಿಲ್ಲಾಡಳಿತ ಹಾಗೂ ಸ್ಥಳೀಯರಿಂದ ಭರದ ಸಿದ್ಧತೆಗಳು ನಡೆಯುತ್ತಿವೆ. ಅಂತ್ಯಕ್ರಿಯೆಗೆ ಬರುವ ಗಣ್ಯರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಆಸನ ವ್ಯವಸ್ಥೆ ಮಾಡಲಾಗುತ್ತಿದೆ.
ಹಾಸನ ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಅವರೇ ಖುದ್ದು ಸ್ಥಳದಲ್ಲಿ ಸಿದ್ಧತೆ ಕಾರ್ಯ ನೋಡಿಕೊಳ್ಳುತ್ತಿದ್ದಾರೆ. ಚೆನ್ನಮ್ಮ ಅಂತ್ಯಸಂಸ್ಕಾರಕ್ಕೆ ಹೆಚ್ಚು ಜನರು ಸೇರುವ ನಿರೀಕ್ಷೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಮತ್ತು ನಾಳೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇಂದು ಬೆಂಗಳೂರಿನ ಪದ್ಮನಾಭ ನಗರ ನಿವಾಸದಲ್ಲಿ ಮಧ್ಯಾಹ್ನದವರೆಗೆ ಚೆನ್ನಮ್ಮ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ರಾಜ್ಯ ಸರ್ಕಾರದ ಸಚಿವರಾದ ರಾಮಲಿಂಗಾರೆಡ್ಡಿ, ಯು.ಟಿ.ಖಾದರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಮಾಜಿ ಸಿಎಂ ವೀರಪ್ಪ ಮೊಯಿಲಿ ಸೇರಿದಂತೆ ಚಿತ್ರಗಣ್ಯದ ಗಣ್ಯರು ದೇವೇಗೌಡರ ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.
ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಮನೆಯಿಂದ ಅಂತಿಮ ಯಾತ್ರೆಗೆ ಕೊಂಡೊಯ್ಯುವ ವೇಳೆ ಹೆಚ್.ಡಿ. ದೇವೇಗೌಡರು ಭಾವುಕರಾದರು. ಪತ್ನಿ ಅಗಲಿಕೆಯ ನೋವು ತಾಳದೇ ಬಿಕ್ಕಿ ಬಿಕ್ಕಿ ಅತ್ತ ದೃಶ್ಯಗಳು ಎಲ್ಲರ ಕಣ್ಣಾಲಿಗಳನ್ನು ತೇವಗೊಳಿಸಿದವು. ಈ ಮಧ್ಯೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ನಿ ಚೆನ್ನಮ್ಮ ಅವರೊಂದಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಕೊನೆ ಕ್ಷಣಗಳ ವೀಡಿಯೋ ವೈರಲ್ ಆಗುತ್ತಿದೆ. ತಮ್ಮ ಜೀವನದ ಕೊನೆ ಕ್ಷಣಗಳನ್ನು ಪತಿಯೊಂದಿಗೆ ಕಳೆದ ಚೆನ್ನಮ್ಮ, ಸಾವಿಗೂ ಮುನ್ನ ಗೌಡರ ಆಶೀರ್ವಾದ ಕೂಡ ಪಡೆದಿದ್ದರು.
ಕರ್ನಾಟಕದಲ್ಲಿ ಬರ ನಿರ್ವಹಣೆ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಡಿಸಿಎಂ ಡಾ. ಜಿ. ಪರಮೇಶ್ವರ್ ಭಾನುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಹತ್ವದ ಸಭೆ ನಡೆಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವರಾದ ಯತೀಂದ್ರ, ಈಶ್ವರ್ ಖಂಡ್ರೆ, ರಾಮಲಿಂಗಾರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಎಲ್ಲಾ ಅಧಿಕಾರಿಗಳು ಒಂದು ತಂಡವಾಗಿ ಕೆಲಸ ಮಾಡಬೇಕು. ಕೇವಲ ಪೇಪರ್ ವರದಿ ನೀಡಿದರೆ ನಾನು ಕೇಳುವುದಿಲ್ಲ. ನನಗೆ ಫೀಲ್ಡ್ ರಿಪೋರ್ಟ್ ಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ. ಬರ ನಿರ್ವಹಣೆಗಾಗಿ ಪ್ರಸ್ತುತ ಎಲ್ಲಾ ತಾಲೂಕುಗಳಿಗೆ ತಲಾ 1 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಅಸ್ಮಿತೆ ಮತ್ತು ಪ್ರಮುಖ ಪರಿಸರ ತಾಣವಾಗಿರುವ ಲಾಲ್ಬಾಗ್ ಸಸ್ಯೋದ್ಯಾನದ ಅಸ್ತಿತ್ವಕ್ಕೆ ಈಗ ಆತಂಕ ಎದುರಾಗಿದೆ. ನಗರದ ಉದ್ದೇಶಿತ ಟನಲ್ ರೋಡ್ ಯೋಜನೆಗಾಗಿ ಲಾಲ್ಬಾಗ್ನ ಸುಮಾರು 5 ಎಕರೆಗಿಂತಲೂ ಹೆಚ್ಚು ಹಸಿರು ಭೂಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರವು ಹೈಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಸರ್ಕಾರದ ಈ ವಿವಾದಾತ್ಮಕ ನಡೆಗೆ ಈಗ ಸಾರ್ವಜನಿಕರು, ಪರಿಸರವಾದಿಗಳು ಹಾಗೂ ನಾಗರಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿವೆ.
ಕೇವಲ ರಸ್ತೆಯ ಪ್ರವೇಶ ಮತ್ತು ನಿರ್ಗಮನ ಮಾರ್ಗ ನಿರ್ಮಾಣಕ್ಕಾಗಿ ಭೂಮಿ ಬಳಸಿಕೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆಯಾದರೂ, ಯೋಜನೆಯ ಡಿಪಿಆರ್ ವರದಿ ಮತ್ತು ಟೆಂಡರ್ ದಾಖಲೆಗಳು ಬೇರೆ ಉದ್ದೇಶ ಒಳಗೊಂಡಿವೆ. ಸ್ವಾಧೀನಕ್ಕೆ ಉದ್ದೇಶಿಸಿರುವ 5 ಎಕರೆ ಜಾಗದಲ್ಲಿ ಗುತ್ತಿಗೆದಾರರಿಗೆ 5 ಅಂತಸ್ತಿನ ಬೃಹತ್ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಟೆಂಡರ್‌ನಲ್ಲೇ ಮುಕ್ತ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಐತಿಹಾಸಿಕ ಉದ್ಯಾನದ ಒಳಗೆ ಮಾಲ್‌ಗಳು ಒಳಗೊಂಡ ವಾಣಿಜ್ಯ ಸಂಕೀರ್ಣದ ನಿರ್ಮಾಣವಾದರೆ ಲಾಲ್‌ಬಾಗ್ ಪರಿಸರ ಹಾಳಾಗಲಿದೆ.
ಇನ್ನು ಯೋಜನೆಯ ವಿರುದ್ಧ ಜನಜಾಗೃತಿ ಮೂಡಿಸಲು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಭಾನುವಾರ ಬೆಳಿಗ್ಗೆಯಿಂದಲೇ ಲಾಲ್ಬಾಗ್ ಪ್ರವೇಶ ದ್ವಾರಗಳಲ್ಲಿ "ಲಾಲ್ಬಾಗ್ ಮಾರಾಟಕ್ಕಿಲ್ಲ" ಎಂಬ ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿಗೆ ಮೂಲಸೌಕರ್ಯ ಬೇಕು, ಆದರೆ ಪರಿಸರವನ್ನು ಬಲಿಗೊಟ್ಟು ಮಾಡುವ ಇಂತಹ ರಿಯಲ್ ಎಸ್ಟೇಟ್ ಅಭಿವೃದ್ಧಿ ಬೇಡ. ಸರ್ಕಾರ ತಕ್ಷಣವೇ ಈ ಯೋಜನೆಯ ಪರ್ಯಾಯ ಮಾರ್ಗಗಳನ್ನು ಪರಿಶೀಲಿಸಬೇಕು" ಎಂದು ಒತ್ತಾಯಿಸಿದ್ದಾರೆ.

