
ಬಿಡದಿ ಭಾಗದ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕ್ರಮವನ್ನು ಖಂಡಿಸಿ, ಅದನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರವನ್ನು ಹೆಚ್.ಡಿ ದೇವೇಗೌಡ ಅವರು ಆಗ್ರಹಿಸಿದರು.
ಬಿಡದಿ ಭೂಸ್ವಾಧೀನ ಕೈಬಿಡದಿದ್ದರೆ ಗಾಂಧಿ ಪ್ರತಿಮೆ ಎದುರು ಧರಣಿ: ಎಚ್.ಡಿ. ದೇವೇಗೌಡ ಎಚ್ಚರಿಕೆ
ಮುಖ್ಯಮಂತ್ರಿಗೆ ನೇರವಾಗಿ ಮನವಿ ಮಾಡಿದ ಅವರು, "ನೀವು ಕೂಡ ರೈತನ ಮಗ. ರೈತರ ನೋವನ್ನು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಬೇರೆ ಮಾರ್ಗಗಳಿವೆ.
ಬಿಡದಿ ಟೌನ್‌ಶಿಪ್‌ಗಾಗಿ ಭೂಸ್ವಾಧೀನ ಪ್ರಕ್ರಿಯೆ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ. ರೈತರ ವಿರೋಧದ ನಡುವೆಯೂ ಯೋಜನೆಯನ್ನು ಮುಂದುವರಿಸಿದರೆ ತಾವೇ ರೈತರ ಪರವಾಗಿ ವಿಧಾನಸೌಧದ ಎದುರಿನ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಭಾಗದ ರೈತರ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಕ್ರಮವನ್ನು ಖಂಡಿಸಿ, ಅದನ್ನು ಕೂಡಲೇ ಹಿಂಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದರು.
"ರೈತರ ವಿರುದ್ಧ ಪ್ರಕರಣ ದಾಖಲಿಸಿದರೆ ಅವರ ಮನೆಯಲ್ಲಿರುವ ಕುಟುಂಬದ ಪರಿಸ್ಥಿತಿ ಏನಾಗುತ್ತದೆ? ಅವರ ಮನೆಯ ಹಾಲು ಕರೆಯುವವರು ಯಾರು? ರೈತರ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು" ಎಂದು ಹೇಳಿದರು.
ತಾವು 2026ರ ಜೂನ್ 25ರಂದು ಮುಖ್ಯಮಂತ್ರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ದೇವೇಗೌಡ, "ಪತ್ರ ಬರೆದು 20 ದಿನಗಳಾದರೂ ಅದು ತಲುಪಿದೆ ಎಂಬ ಸ್ವೀಕೃತಿಯನ್ನೂ ಕಳುಹಿಸಿಲ್ಲ. ನಾನೊಬ್ಬ ಸಾಮಾನ್ಯ ರೈತನ ಮಗನಾಗಿ ರೈತರ ಪರವಾಗಿ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗೆ ಬಿಡುವಿಲ್ಲದ ಕಾರ್ಯಕ್ರಮಗಳಿರಬಹುದು. ಆದರೆ ರೈತರ ಬಗ್ಗೆ ಕಾಳಜಿ ವಹಿಸುವರು ಎಂಬ ನಂಬಿಕೆ ಇನ್ನೂ ಇದೆ" ಎಂದರು.
ಸರ್ವೇ ಸ್ಥಗಿತಕ್ಕೆ ಸ್ವಾಗತ
ಸದ್ಯಕ್ಕೆ ಭೂಸಮೀಕ್ಷೆ (ಸರ್ವೆ) ಕಾರ್ಯವನ್ನು ಸರ್ಕಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದನ್ನು ಸ್ವಾಗತಿಸಿದ ಅವರು, ಇದೇ ಹಂತದಲ್ಲಿ ಸಂಪೂರ್ಣ ಯೋಜನೆಯನ್ನು ಕೈಬಿಡುವಂತೆ ಮನವಿ ಮಾಡಿದರು.
"ಸರ್ಕಾರದ ಅಂತಿಮ ನಿರ್ಧಾರವನ್ನು ಕಾದು ನೋಡುತ್ತೇನೆ. ಯೋಜನೆಯನ್ನು ಕೈಬಿಟ್ಟರೆ ಸಂತೋಷ. ಇಲ್ಲದಿದ್ದರೆ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇನೆ. ನನ್ನನ್ನು ಧರಣಿ ಕೂರುವ ಪರಿಸ್ಥಿತಿಗೆ ತಳ್ಳಬೇಡಿ" ಎಂದು ಎಚ್ಚರಿಕೆ ನೀಡಿದರು.
ರೈತರ ಹೋರಾಟಕ್ಕೆ ಬೆಂಬಲ ನೀಡಿರುವ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದ ದೇವೇಗೌಡ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರೂ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಸರ್ಕಾರ ಅವರ ಅಭಿಪ್ರಾಯಕ್ಕೂ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
"ರಾಮನಗರ ಭಾಗದ ಅಭಿವೃದ್ಧಿಗೆ ನಾನು ಹಲವು ವರ್ಷಗಳಿಂದ ಶ್ರಮಿಸಿದ್ದೇನೆ. ಸುಮಾರು 30 ವರ್ಷಗಳ ಹಿಂದೆ ಕುಮಾರಸ್ವಾಮಿ ರಾಮನಗರದಲ್ಲಿ ನೆಲೆಸಿದ್ದರು. ಆ ಭಾಗದ ಅಭಿವೃದ್ಧಿಗೆ ನಾವು ಸದಾ ಬದ್ಧರಾಗಿದ್ದೇವೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ರೈತರ ಬದುಕನ್ನು ನಾಶ ಮಾಡಬಾರದು" ಎಂದು ಹೇಳಿದರು.
ಸಿಎಂ ಕೂಡ ರೈತನ ಮಗ ಎಂದ ಎಚ್ಡಿಡಿ
ಮುಖ್ಯಮಂತ್ರಿಗೆ ನೇರವಾಗಿ ಮನವಿ ಮಾಡಿದ ಅವರು, "ನೀವು ಕೂಡ ರೈತನ ಮಗ. ರೈತರ ನೋವನ್ನು ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಬೇರೆ ಮಾರ್ಗಗಳಿವೆ. ಅದನ್ನು ಬಳಸಿಕೊಳ್ಳಿ. ಈ ಬಡ ರೈತರ ಹೊಟ್ಟೆ ಮೇಲೆ ಹೊಡೆಯಬೇಡಿ" ಎಂದು ಹೇಳಿದರು.
ಭೂಸ್ವಾಧೀನದ ವಿಚಾರದಲ್ಲಿ ಮುಖ್ಯಮಂತ್ರಿ ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರಶ್ನೆ ಎತ್ತಿದ ದೇವೇಗೌಡ, "ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಇದೇ ಯೋಜನೆಗೆ ವಿರೋಧ ವ್ಯಕ್ತವಾಗಿತ್ತು. ಆ ಸಂದರ್ಭದಲ್ಲಿ ಭೂಸ್ವಾಧೀನದ ಅಧಿಸೂಚನೆಯನ್ನು ಕೈಬಿಡಲಾಗಿತ್ತು. ಈಗ 'ಕುಮಾರಸ್ವಾಮಿ ಮಾಡಿದ್ದನ್ನೇ ಮುಂದುವರಿಸುತ್ತಿದ್ದೇನೆ' ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಅದು ಸತ್ಯಕ್ಕೆ ದೂರವಾದ ಮಾತು. ಅಂದೇ ಯೋಜನೆ ಕೈಬಿಡಲಾಗಿತ್ತು" ಎಂದು ಪ್ರತಿಪಾದಿಸಿದರು.
ಬಿಡದಿ ಭಾಗದಲ್ಲಿ ಹೆಚ್ಚಿನವರು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರ ರೈತರಾಗಿದ್ದಾರೆ ಎಂದು ಅವರು ಹೇಳಿದರು. "ಸುಮಾರು 2,800 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದಾರೆ. ಒಂದು ಗುಂಟೆಯಿಂದ ಐದು ಗುಂಟೆಯವರೆಗೆ ಮಾತ್ರ ಜಮೀನು ಹೊಂದಿರುವ ಎರಡು ಸಾವಿರಕ್ಕೂ ಹೆಚ್ಚು ರೈತರು ಆ ಭಾಗದಲ್ಲಿದ್ದಾರೆ. ಅವರ ಜಮೀನು ಕಳೆದುಕೊಂಡರೆ ಅವರು ಜೀವನ ನಡೆಸುವುದು ಹೇಗೆ? ಅವರನ್ನು ಎಲ್ಲಿಗೆ ಕಳುಹಿಸುತ್ತೀರಿ?" ಎಂದು ಪ್ರಶ್ನಿಸಿದರು.
ಬೆಂಗಳೂರು ಅಭಿವೃದ್ಧಿಗೆ ತಾವು ಎಂದಿಗೂ ವಿರೋಧಿಯಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ ದೇವೇಗೌಡ, "ಬೆಂಗಳೂರು ನಗರವನ್ನು ಐದು ಭಾಗಗಳಾಗಿ ವಿಭಜಿಸಿದಾಗಲೂ ನಾನು ವಿರೋಧಿಸಲಿಲ್ಲ. ಹಿರಿಯ ಸಚಿವರೇ ಬಿಡಿಎ ಅಭಿವೃದ್ಧಿಪಡಿಸಿರುವ 20 ಸಾವಿರಕ್ಕೂ ಹೆಚ್ಚು ನಿವೇಶನಗಳು ಖಾಲಿ ಇವೆ, ಅವನ್ನು ಯಾರೂ ಖರೀದಿಸುತ್ತಿಲ್ಲ ಎಂದು ಹೇಳಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಹೊಸದಾಗಿ ಭೂಸ್ವಾಧೀನಕ್ಕೆ ಮುಂದಾಗಿರುವುದೇಕೆ?" ಎಂದು ಪ್ರಶ್ನಿಸಿದರು.
ಯೋಜನೆಯ ಹಿಂದಿನ ಉದ್ದೇಶದ ಕುರಿತು ಅನುಮಾನ ವ್ಯಕ್ತಪಡಿಸಿದ ಅವರು, "ಈ ಯೋಜನೆಗೆ ಕೈಹಾಕಿರುವ ಕಾರಣ ಏನು ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಿಸಿ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್‌ಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಉದ್ದೇಶದಿಂದಲೇ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಮುಂದಿಟ್ಟಿದ್ದಾರೆ ಎನ್ನುವ ಅನುಮಾನವಿದೆ" ಎಂದು ಆರೋಪಿಸಿದರು.
"ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಧಿಕಾರಿಗಳನ್ನು ಬಿಡದಿ ಭೂಸ್ವಾಧೀನಕ್ಕಾಗಿ ಕಳುಹಿಸಿರಲಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ಒಂದೇ ತಿಂಗಳಲ್ಲಿ ಅಧಿಕಾರಿಗಳನ್ನು ಜಮೀನಿನ ಬಳಿ ಕಳುಹಿಸಿ ಸರ್ವೆ ಆರಂಭಿಸಲಾಗಿದೆ. ಸರ್ಕಾರ ರೈತರ ಭಾವನೆಗಳನ್ನು ಗೌರವಿಸಿ ಈ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು" ಎಂದು ದೇವೇಗೌಡ ಆಗ್ರಹಿಸಿದರು.

