
ಹಾಸನ ಡಿಸಿ ಕಚೇರಿ ವಾಟ್ಸ್ಆ್ಯಪ್ ಚಾಟ್ ಪ್ರಕರಣ; ಶಶಿಕಿರಣ್ ವರ್ಗಾವಣೆಗೆ ಶ್ರೇಯಸ್ ಪಟೇಲ್ ಆಗ್ರಹ
ವಾಟ್ಸ್ ಆ್ಯಪ್ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ ಪಿಎ ಶಶಿಕಿರಣ್ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಒತ್ತಾಯಿಸಿದ್ದಾರೆ.
ಹಾಸನ ಜಿಲ್ಲಾಧಿಕಾರಿ ಕಚೇರಿಯನ್ನು ಕೇಂದ್ರವಾಗಿಟ್ಟುಕೊಂಡು ಇತ್ತೀಚೆಗೆ ಸ್ಫೋಟಗೊಂಡಿರುವ ‘ವಾಟ್ಸ್ಆ್ಯಪ್ ಚಾಟ್’ ಹಾಗೂ ಬಹುಕೋಟಿ ಲಂಚಾವತಾರದ ಗಂಭೀರ ಆರೋಪಗಳು ರಾಜ್ಯ ರಾಜಕಾರಣ ಹಾಗೂ ಆಡಳಿತ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿವೆ. ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ಆಪ್ತ ಸಹಾಯಕ ಶಶಿಕಿರಣ್ ವಿರುದ್ಧ ಕೇಳಿಬಂದಿರುವ ಗಂಭೀರ ಭ್ರಷ್ಟಾಚಾರದ ಆರೋಪಗಳ ಬೆನ್ನಲ್ಲೇ, ಈ ಪ್ರಕರಣಕ್ಕೆ ಇದೀಗ ಮಹತ್ವದ ರಾಜಕೀಯ ತಿರುವು ಸಿಕ್ಕಿದೆ. ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಪಟೇಲ್ ಅವರು ಜಿಲ್ಲಾಧಿಕಾರಿಗಳಿಗೆ ಖಡಕ್ ಪತ್ರ ಬರೆದಿದ್ದು, ಆರೋಪ ಎದುರಿಸುತ್ತಿರುವ ಪಿಎ ಶಶಿಕಿರಣ್ ಅವರನ್ನು ತಕ್ಷಣವೇ ಡಿಸಿ ಕಚೇರಿಯಿಂದ ಹೊರಗೆ ವರ್ಗಾಯಿಸುವಂತೆ ಮತ್ತು ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಲಿಖಿತ ವರದಿ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಬೆಳವಣಿಗೆಯು ಹಾಸನ ಜಿಲ್ಲಾಡಳಿತದಲ್ಲಿ ನಡೆದಿರಬಹುದಾದ ಆಪಾದಿತ ಅಕ್ರಮಗಳು ಹಾಗೂ ಭ್ರಷ್ಟಾಚಾರದ ಜಾಲದ ಮೇಲೆ ತನಿಖೆಯ ಕತ್ತಿ ತೂಗುವಂತೆ ಮಾಡಿದೆ.
ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಅಧಿಕೃತ ಪತ್ರ ಬರೆದಿರುವ ಸಂಸದ ಶ್ರೇಯಸ್ ಪಟೇಲ್, ಆಡಳಿತ ಯಂತ್ರದ ಪಾವಿತ್ರ್ಯತೆ ಮತ್ತು ಸಾರ್ವಜನಿಕ ವಿಶ್ವಾಸಾರ್ಹತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಠಿಣ ನಿಲುವು ತಳೆದಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಶಿಕಿರಣ್ ವಿರುದ್ಧ ಭ್ರಷ್ಟಾಚಾರ ಹಾಗೂ ಕರ್ತವ್ಯ ನಿರ್ವಹಣೆಯಲ್ಲಿ ವ್ಯಾಪಕ ಅಕ್ರಮಗಳನ್ನು ನಡೆಸಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಬಹಿರಂಗವಾಗಿವೆ. ಆದ್ದರಿಂದ ಅವರನ್ನು ಡಿಸಿ ಕಚೇರಿಯ ಯಾವುದೇ ವಿಭಾಗ ಅಥವಾ ಕರ್ತವ್ಯದಲ್ಲೂ ಮುಂದುವರಿಸದೆ, ಕಚೇರಿಯಿಂದ ಹೊರಗೆ ಬೇರೆ ಯಾವುದಾದರೂ ಸೂಕ್ತ ಸರ್ಕಾರಿ ಇಲಾಖೆಗೆ ತಕ್ಷಣವೇ ವರ್ಗಾಯಿಸಿ ನಿಯೋಜಿಸಬೇಕು.
ನಿಷ್ಪಕ್ಷಪಾತ ತನಿಖೆಗೆ ಒತ್ತಾಯ
ಶಶಿಕಿರಣ್ ಅದೇ ಕಚೇರಿಯಲ್ಲಿ ಮುಂದುವರಿದರೆ ಸಾಕ್ಷ್ಯ ನಾಶ ಮಾಡುವ ಅಥವಾ ತನಿಖಾ ಪ್ರಕ್ರಿಯೆಯ ಮೇಲೆ ತಮ್ಮ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಿಷ್ಪಕ್ಷಪಾತ ಮತ್ತು ಮುಕ್ತ ತನಿಖೆ ನಡೆಯಬೇಕಾದರೆ ಅವರ ವರ್ಗಾವಣೆ ಅನಿವಾರ್ಯ. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿತ ಅಧಿಕಾರಿಯ ವಿರುದ್ಧ ಆಡಳಿತಾತ್ಮಕವಾಗಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಮಗೆ ಲಿಖಿತವಾಗಿ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ. ಸಂಸದರ ಈ ನೇರ ಪತ್ರವು ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಡಿಸಿ ಲತಾಕುಮಾರಿ ಅವರು ತಮ್ಮದೇ ಆಪ್ತ ಸಹಾಯಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಹಾಸನ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ಬರೋಬ್ಬರಿ 15 ಪುಟಗಳ ಸ್ಫೋಟಕ ವಾಟ್ಸ್ಆ್ಯಪ್ ಚಾಟ್’ ಸ್ಕ್ರೀನ್ಶಾಟ್ಗಳನ್ನು ಬಹಿರಂಗಪಡಿಸಿದ್ದರು. ಸರ್ಕಾರದ ಯಾವುದೋ ಒಬ್ಬ ಪ್ರಾಮಾಣಿಕ ಅಧಿಕಾರಿಯೇ ತಮಗೆ ಈ ಸಾಕ್ಷ್ಯಗಳನ್ನು ತಂದುಕೊಟ್ಟಿದ್ದಾರೆ ಎಂದು ಹೇಳಿದ್ದ ಕುಮಾರಸ್ವಾಮಿ, ಹಾಸನ ಜಿಲ್ಲಾಡಳಿತದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಲಂಚದ ದಂಧೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಈ ಚಾಟ್ಗಳು ಬಿಡುಗಡೆಯಾಗುತ್ತಿದ್ದಂತೆ ಇಡೀ ರಾಜ್ಯ ಸರ್ಕಾರ ಹಾಗೂ ಹಾಸನ ಜಿಲ್ಲಾ ಕಾಂಗ್ರೆಸ್ ವಲಯದಲ್ಲಿ ಭಾರೀ ಕಂಪನ ಉಂಟಾಗಿತ್ತು.
ವಾಟ್ಸ್ಆ್ಯಪ್ ಚಾಟ್ನಲ್ಲಿರುವ ಗಂಭೀರ ಆರೋಪಗಳೇನು?
ಕುಮಾರಸ್ವಾಮಿ ಬಿಡುಗಡೆ ಮಾಡಿದ 15 ಪುಟಗಳ ದಾಖಲೆಗಳಲ್ಲಿ ಆಡಳಿತ ದುರುಪಯೋಗ ಮತ್ತು ಹಣದ ವ್ಯವಹಾರದ ಸ್ಪೋಟಕ ಅಂಶಗಳು ದಾಖಲಾಗಿದ್ದವು. ಹಾಸನ ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ಅಥವಾ ನಿಯಮಾನುಸಾರ ನಡೆಯಬೇಕಿದ್ದ ಮೂರು ಕಲ್ಲು ಪುಡಿ ಮಾಡುವ ಘಟಕಗಳಿಗೆ ಡಿಸಿ ಕಚೇರಿಯಿಂದ ಪರವಾನಗಿ ನೀಡಲು ಬರೋಬ್ಬರಿ 60 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬ ಸಂಭಾಷಣೆ ಚಾಟ್ನಲ್ಲಿದೆ ಎನ್ನಲಾಗಿದೆ. ಅತ್ಯಂತ ಗಂಭೀರ ವಿಚಾರವೆಂದರೆ, ಹಾಲಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರನ್ನೇ ಹಾಸನದಲ್ಲಿ ಮುಂದುವರಿಸಲು ಸಚಿವ ಕೆ.ಎಂ. ಶಿವಲಿಂಗೇಗೌಡರಿಗೆ 75 ಲಕ್ಷ ರೂಪಾಯಿ ಲಂಚ ನೀಡಲಾಗಿದೆ ಎಂಬ ಆಘಾತಕಾರಿ ಸಂಭಾಷಣೆ ಈ ಚಾಟ್ಗಳಲ್ಲಿದೆ ಎಂದು ಆರೋಪಿಸಲಾಗಿತ್ತು. ಡಿಸಿ ಕಚೇರಿಯ ಮಟ್ಟದಲ್ಲಿ ನಡೆಯುವ ಹಲವು ಕಡತಗಳ ವಿಲೇವಾರಿಗೆ ಪಿಎ ಮೂಲಕವೇ ರಹಸ್ಯ ಡೀಲ್ಗಳು ನಡೆಯುತ್ತಿದ್ದವು ಎಂಬ ಗಂಭೀರ ಆಪಾದನೆಗಳು ಕೇಳಿಬಂದಿದ್ದವು.
ಪಿಎ ಶಶಿಕಿರಣ್ ಸ್ಪಷ್ಟನೆ ಹಾಗೂ ಪೊಲೀಸ್ ದೂರು
ತಮ್ಮ ವಿರುದ್ಧದ ಆರೋಪಗಳು ರಾಜ್ಯಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಎಚ್ಚೆತ್ತ ಪಿಎ ಶಶಿಕಿರಣ್, ತಮ್ಮ ಮೇಲಿನ ಆರೋಪಗಳನ್ನು ಸಾರಾಸಾಗಟವಾಗಿ ತಳ್ಳಿಹಾಕಿದ್ದಾರೆ. ಈ ಕುರಿತು ಅವರು ಹಾಸನ ನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ಕೂಡ ದಾಖಲಿಸಿದ್ದಾರೆ. "ನನ್ನ ಮೊಬೈಲ್ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡು, ತಂತ್ರಜ್ಞಾನದ ಮೂಲಕ ನಕಲಿ ವಾಟ್ಸ್ಆ್ಯಪ್ ಸಂದೇಶಗಳನ್ನು ಸೃಷ್ಟಿಸಲಾಗಿದೆ. ನನ್ನ ವೈಯಕ್ತಿಕ ಘನತೆ, ತೇಜೋವಧೆ ಹಾಗೂ ಆಡಳಿತಾತ್ಮಕ ವರ್ಚಸ್ಸಿಗೆ ಕಳಂಕ ತರುವ ದುರುದ್ದೇಶದಿಂದಲೇ ಈ ಷಡ್ಯಂತ್ರ ರೂಪಿಸಲಾಗಿದೆ. ಈ ಚಾಟ್ಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಸೈಬರ್ ಕ್ರೈಂ ಮೂಲಕ ನಕಲಿ ಸಂದೇಶ ಸೃಷ್ಟಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಯ ನಂತರ ಹಾಸನ ಜಿಲ್ಲೆಯ ರಾಜಕೀಯ ಸಮೀಕರಣಗಳು ತೀವ್ರ ಬದಲಾವಣೆ ಕಂಡಿವೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬದ ಭದ್ರಕೋಟೆಯಾಗಿದ್ದ ಹಾಸನದಲ್ಲಿ ಕಾಂಗ್ರೆಸ್ನ ಯುವ ನಾಯಕ ಶ್ರೇಯಸ್ ಪಟೇಲ್ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ನೇರವಾಗಿ ಕಾಂಗ್ರೆಸ್ಸಿಗರ ಹೆಸರು ತಳಕುಹಾಕಿರುವ ಚಾಟ್ ಬಿಡುಗಡೆ ಮಾಡಿರುವುದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿತ್ತು. ಆದರೆ, ಇದೀಗ ಸಂಸದ ಶ್ರೇಯಸ್ ಪಟೇಲ್ ಅವರೇ ಸ್ವತಃ ಮುಂಚೂಣಿಗೆ ಬಂದು, ಆರೋಪಿತ ಅಧಿಕಾರಿಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿರುವುದು ರಾಜಕೀಯ ತಂತ್ರಗಾರಿಕೆಯ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಆಡಳಿತದಲ್ಲಿ ಭ್ರಷ್ಟಾಚಾರವನ್ನು ತಾವು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜನರಿಗೆ ರವಾನಿಸಲು ಸಂಸದರು ಈ ಹೆಜ್ಜೆ ಇಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಸ್ವಪಕ್ಷದ ಶಾಸಕರ ಹೆಸರೇ ಕೇಳಿಬಂದಿರುವ ಪ್ರಕರಣದಲ್ಲಿ ಸಂಸದರು ತನಿಖೆಗೆ ಮತ್ತು ಅಧಿಕಾರಿಯ ವರ್ಗಾವಣೆಗೆ ಪಟ್ಟು ಹಿಡಿದಿರುವುದು ಆಡಳಿತ ಪಕ್ಷಕ್ಕೂ ಇಕ್ಕಟ್ಟನ್ನು ತಂದೊಡ್ಡಿದೆ.

