
ಹಾಸನದ ಪ್ರಸಿದ್ಧ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದೆ.
ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರೆ; 12 ದಿನ ದೇವಿ ದರ್ಶನ
ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಹಾಸನಾಂಬಾ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಅಂದು ಧಾರ್ಮಿಕ ವಿಧಿವಿಧಾನಗಳಿಗೆ ಆದ್ಯತೆ ನೀಡಲಾಗಿದ್ದು, ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ಹಾಸನದ ಪ್ರಸಿದ್ಧ ಹಾಸನಾಂಬಾ ಜಾತ್ರಾ ಮಹೋತ್ಸವಕ್ಕೆ ದಿನಾಂಕ ನಿಗದಿಯಾಗಿದ್ದು,ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಜಾತ್ರೆ ನಡೆಯಲಿದೆ. ಭಕ್ತರಿಗೆ ದೇವಿಯ ದರ್ಶನ ಕಲ್ಪಿಸಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಅಕ್ಟೋಬರ್ 29ರಂದು ಮಧ್ಯಾಹ್ನ 12 ಗಂಟೆಗೆ ಹಾಸನಾಂಬಾ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಆದರೆ ಅಂದು ಸಾರ್ವಜನಿಕರಿಗೆ ದೇವಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಧಾರ್ಮಿಕ ವಿಧಿವಿಧಾನಗಳು ಪೂರ್ಣಗೊಂಡ ಬಳಿಕ ಮುಂದಿನ ದಿನಗಳಿಂದ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ ಒಟ್ಟು 12 ದಿನಗಳ ಕಾಲ ಭಕ್ತರು ಹಾಸನಾಂಬಾ ದೇವಿಯ ದರ್ಶನ ಪಡೆಯಬಹುದಾಗಿದೆ. ನವೆಂಬರ್ 11ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತದೆ. ವರ್ಷಕ್ಕೊಮ್ಮೆ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಸಿಗುವುದರಿಂದ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಜಾತ್ರೆಗೆ ಹಲವು ಕಾರ್ಯಕ್ರಮಗಳ ಸಿದ್ಧತೆ
ಜಾತ್ರಾ ಮಹೋತ್ಸವದ ಅಂಗವಾಗಿ ಆಹಾರ ಮೇಳ, ಚಿತ್ರಸಂತೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದೆ. ಈಗಾಗಲೇ ವಿವಿಧ ಜವಾಬ್ದಾರಿಗಳಿಗಾಗಿ ಹಲವು ಸಮಿತಿಗಳನ್ನು ರಚಿಸಲಾಗಿದೆ. ಹಾಸನ ಜಿಲ್ಲೆಯ ಏಳು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಜಾತ್ರೆಯನ್ನು ಪರಿಸ್ಥಿತಿಗೆ ಅನುಗುಣವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅದ್ಧೂರಿತನಕ್ಕೆ ಹೆಚ್ಚಿನ ಒತ್ತು ನೀಡದೆ, ಭಕ್ತಿ ಮತ್ತು ಸಂಪ್ರದಾಯಕ್ಕೆ ಆದ್ಯತೆ ನೀಡಿ ಉತ್ಸವ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.
ಸೆ.26ರಂದು ಪೋಸ್ಟರ್ ಹಾಗೂ ವೆಬ್ಸೈಟ್ ಬಿಡುಗಡೆ
ಹಾಸನಾಂಬಾ ಜಾತ್ರಾ ಮಹೋತ್ಸವದ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್ ಹಾಗೂ ವೆಬ್ಸೈಟ್ ಅನ್ನು ಸೆಪ್ಟೆಂಬರ್ 26ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಜಾತ್ರೆಗೆ ಆಗಮಿಸುವ ಭಕ್ತರಿಗೆ ಅಗತ್ಯ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ವ್ಯವಸ್ಥೆಗಳನ್ನು ರೂಪಿಸಲಾಗುತ್ತಿದೆ.

