ಆರ್​ಎಸ್​​ಎಸ್​ ಮುಖಂಡ ರಾಮ್​ ಮಾಧವ್​ಗೆ ಪಾಕಿಸ್ತಾನದ ಅಧಿಕಾರಿಗಳ ನಂಟು; ಬಿ.ಕೆ ಹರಿಪ್ರಸಾದ್

ಬಿ.ಕೆ. ಹರಿಪ್ರಸಾದ್ ಅವರು ಬಿಜೆಪಿ ನಾಯಕ ರಾಮ್ ಮಾಧವ್ ವಿದೇಶದಲ್ಲಿ ಪಾಕ್ ಐಎಸ್‌ಐ ಅಧಿಕಾರಿಗಳನ್ನು ರಹಸ್ಯವಾಗಿ ಭೇಟಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿ ರಾಜಕೀಯ ಸಂಚಲನ ಸೃಷ್ಟಿಸಿದ್ದಾರೆ.


Click the Play button to hear this message in audio format

ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸೈದ್ಧಾಂತಿಕ ವಾಗ್ದಾಳಿ ಹೊಸ ಆಯಾಮವನ್ನು ಪಡೆದುಕೊಂಡಿದೆ. ಆರೆಸ್ಸೆಸ್ ಮತ್ತು ಬಿಜೆಪಿ ವಿರುದ್ಧ ನಿರಂತರವಾಗಿ ಮುಗಿಬೀಳುತ್ತಿರುವ ಆಡಳಿತಾರೂಢ ಕಾಂಗ್ರೆಸ್, ಇದೀಗ ಬಿಜೆಪಿಯ ಹಿರಿಯ ಸಂಘಟನಾ ಚತುರ ರಾಮ್ ಮಾಧವ್ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡಿದೆ. ಮುಂಬರುವ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆಯ ಉಸ್ತುವಾರಿಯಾಗಿ ರಾಮ್ ಮಾಧವ್ ನೇಮಕಗೊಂಡ ಬೆನ್ನಲ್ಲೇ ಕೈ ನಾಯಕರು ಹೂಡಿರುವ ಈ ತಂತ್ರ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಪ್ರಸಾದ್ ಅವರ ಸ್ಫೋಟಕ ಆರೋಪ

ಕೆಪಿಸಿಸಿ ಹಿರಿಯ ನಾಯಕರಾದ ಬಿ.ಕೆ. ಹರಿಪ್ರಸಾದ್ ಅವರು ರಾಮ್ ಮಾಧವ್ ವಿರುದ್ಧ ಅತ್ಯಂತ ಗಂಭೀರ ಹಾಗೂ ಸ್ಫೋಟಕ ಆರೋಪವೊಂದನ್ನು ಮಾಡಿದ್ದಾರೆ. ದೇಶದ ಭದ್ರತೆಗೆ ಸಂಬಂಧಿಸಿದಂತೆ ಸದಾ ರಾಷ್ಟ್ರೀಯತೆಯ ಮಾತಾಡುವ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ನಿಲುವುಗಳನ್ನು ಅವರು ಪ್ರಶ್ನಿಸಿದ್ದಾರೆ. 'ಆಪರೇಷನ್ ಸಿಂಧೂರ' ನಡೆಯುವ ಮುನ್ನ ರಾಮ್ ಮಾಧವ್ ಅವರು ಶ್ರೀಲಂಕಾದ ಕೊಲಂಬೋ ಹಾಗೂ ಬ್ರಿಟನ್‌ನ ಲಂಡನ್‌ನಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಉನ್ನತ ಅಧಿಕಾರಿಗಳು ಮತ್ತು ನಿವೃತ್ತ ಮೇಜರ್ ಜನರಲ್ ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರೆ ಎಂದು ಹರಿಪ್ರಸಾದ್ ಗಂಭೀರವಾಗಿ ಹರಿಹಾಯ್ದಿದ್ದಾರೆ. ಈ ಮೂಲಕ ಬಿಜೆಪಿಯ ಪಾಕಿಸ್ತಾನ ವಿರೋಧಿ ನಿಲುವಿನ ಅಸಲಿಯತ್ತನ್ನು ಜನರೆದುರು ಪ್ರಶ್ನಿಸಿದ್ದಾರೆ.

"ಜಿಬಿಎ ಎಲೆಕ್ಷನ್ ಉಸ್ತುವಾರಿಯಾಗಿ ರಾಮ್ ಮಾಧವ್ ಬಂದಿರುವುದು ನಮಗೆ ಸಂತೋಷವೇ. ಆದರೆ ಅವರ ಇತಿಹಾಸ ನೋಡಿದಾಗ ಅವರು ಕೊಲಂಬೋ ಮತ್ತು ಲಂಡನ್‌ನಲ್ಲಿ ಸುಮಾರು ನಾಲ್ಕು ಬಾರಿ ರಹಸ್ಯ ಸಭೆಗಳನ್ನು ನಡೆಸಿದ್ದಾರೆ. ಹಿಲ್ಟನ್ ಹೋಟೆಲ್‌ನಲ್ಲಿ ಪಾಕಿಸ್ತಾನದ ಐಎಸ್‌ಐನ ಮಾಜಿ ಮೇಜರ್ ಜನರಲ್ ಜೊತೆ ಮಾತುಕತೆ ನಡೆಸಿದ್ದಾರೆ. ಅವರು ವಿದೇಶಾಂಗ ಮಂತ್ರಿಯೂ ಅಲ್ಲ, ಎಂಎಲ್‌ಎ ಅಥವಾ ಎಂಪಿಯೂ ಅಲ್ಲ, ಕೇವಲ ಆರೆಸ್ಸೆಸ್ ಪ್ರಚಾರಕರಷ್ಟೇ. ಹಾಗಿದ್ದರೆ ಅವರಿಗೆ ವಿದೇಶಾಂಗ ನೀತಿಯ ಬಗ್ಗೆ ತೀರ್ಮಾನ ಮಾಡಲು ಅಧಿಕಾರ ಕೊಟ್ಟವರು ಯಾರು?" ಎಂದು ಕೆಪಿಸಿಸಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ಬೆಂಬಲಕ್ಕೆ ನಿಂತ ಗೃಹ ಸಚಿವರು

ಬಿ.ಕೆ. ಹರಿಪ್ರಸಾದ್ ಅವರ ಈ ಹೇಳಿಕೆಗೆ ರಾಜ್ಯದ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಸಂಪೂರ್ಣ ಧ್ವನಿಗೂಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಕೇಳುತ್ತಿರುವ ಪ್ರಶ್ನೆಗಳು ತಾರ್ಕಿಕವಾಗಿದ್ದು, ಬಿಜೆಪಿ ಇದರ ವಿರುದ್ಧ ಉತ್ತರಿಸಲಾಗದೆ ಮೂಲ ವಿಷಯಗಳನ್ನು ದಾರಿ ತಪ್ಪಿಸಲು ಯತ್ನಿಸುತ್ತಿದೆ ಎಂದು ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೆಸ್ಸೆಸ್ ಮತ್ತು ಬಿಜೆಪಿಯ ಆಂತರಿಕ ಚಟುವಟಿಕೆಗಳ ಮೇಲೆ ಕಾಂಗ್ರೆಸ್ ನಿಗಾ ಇಟ್ಟಿದೆ ಎಂಬ ಸಂದೇಶವನ್ನು ಗೃಹ ಸಚಿವರು ಈ ಮೂಲಕ ರವಾನಿಸಿದ್ದಾರೆ.

"ನಾನು ಕೇಳುತ್ತಿರುವ ಪ್ರಶ್ನೆಗಳಲ್ಲಿ ಯಾವುದು ತಾರ್ಕಿಕವಾಗಿಲ್ಲ? ಮೂಲ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ಬೇರೆ ವಿಷಯಗಳನ್ನು ಮುಚ್ಚಿಡಲು ಇಂತಹ ತಂತ್ರಗಳನ್ನು ಮಾಡುತ್ತಿದ್ದಾರೆ. ಮೊದಲು ನನ್ನ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿ, " ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಮುಖ್ಯಸ್ಥರ ಹೇಳಿಕೆಯ ಉಲ್ಲೇಖ

ಇತ್ತೀಚೆಗಷ್ಟೇ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರು, "ಭಾರತ ಮತ್ತು ಪಾಕಿಸ್ತಾನ ಯಾವತ್ತಿಗೂ ಶಾಶ್ವತ ವೈರಿಗಳಾಗಿರಲು ಸಾಧ್ಯವಿಲ್ಲ" ಎಂಬ ಹೇಳಿಕೆ ನೀಡಿದ್ದರು. ಇದನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಹರಿಪ್ರಸಾದ್, ಒಂದೆಡೆ ಭಾಗವತ್ ಅವರು ಪಾಕಿಸ್ತಾನದ ಪರ ಮೃದು ಧೋರಣೆ ತಳೆದರೆ, ಇನ್ನೊಂದೆಡೆ ರಾಮ್ ಮಾಧವ್ ವಿದೇಶಗಳಲ್ಲಿ ಐಎಸ್‌ಐ ಅಧಿಕಾರಿಗಳನ್ನು ಭೇಟಿಯಾಗುತ್ತಿರುವುದು ಪರಸ್ಪರ ಪೂರಕವಾಗಿದೆ ಎಂದು ಟೀಕಿಸಿದ್ದಾರೆ. ಸಾಮಾನ್ಯ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಬಗ್ಗೆ ಮಾತನಾಡಿದರೆ ದೇಶದ್ರೋಹದ ಪಟ್ಟ ಕಟ್ಟುವ ಬಿಜೆಪಿ, ತನ್ನದೇ ಸಂಘಟಕರ ರಹಸ್ಯ ಭೇಟಿಗಳ ಬಗ್ಗೆ ಏಕೆ ಮೌನವಾಗಿದೆ ಎಂದು ಅವರು ಸವಾಲು ಹಾಕಿದ್ದಾರೆ.

"ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಪಾಕಿಸ್ತಾನದ ಜೊತೆ ಮಾತನಾಡಿದರೆ ತಪ್ಪಿಲ್ಲ ಎಂದು ಹೇಳಿದ್ದಾರೆ. ಇದೇ ಮಾತನ್ನು ನಾವೇನಾದರೂ ಹೇಳಿದ್ದರೆ ಎರಡು ವರ್ಷ ನಮ್ಮ ಬೆನ್ನು ಬಿದ್ದುಬಿಡುತ್ತಿದ್ದರು. ಇವರು ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಬಂದ ಮೇಲೆ ನನ್ನ ಸಹವಾಸ ಬಿಟ್ಟರು. ವಿದೇಶಾಂಗ ನೀತಿಯ ಬಗ್ಗೆ ಆರೆಸ್ಸೆಸ್ ಯಾವ ಅಧಿಕಾರದ ಮೇಲೆ ತೀರ್ಮಾನ ಕೈಗೊಳ್ಳುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು,ʼʼಎಂದು ಕೆಪಿಸಿಸಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತಿಳಿದ್ದಾರೆ.

ಕಾಂಗ್ರೆಸ್‌ನ ಆಲ್‌ರೌಂಡ್ ರಾಜಕೀಯ ತಂತ್ರ

ಈ ಇಡೀ ಬೆಳವಣಿಗೆಯನ್ನು ಗಮನಿಸಿದರೆ ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ರಾಜ್ಯ ನಾಯಕರು ಆರೆಸ್ಸೆಸ್ ವಿರುದ್ಧ ಸಂಘಟಿತ ದಾಳಿ ನಡೆಸುತ್ತಿರುವುದು ಸ್ಪಷ್ಟವಾಗುತ್ತದೆ. ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಆರೆಸ್ಸೆಸ್ ನಿಲುವುಗಳನ್ನು ಪ್ರಶ್ನಿಸುತ್ತಿರುವ ಬೆನ್ನಲ್ಲೇ, ರಾಜ್ಯದಲ್ಲಿ ಬಿ.ಕೆ. ಹರಿಪ್ರಸಾದ್ ಮತ್ತು ಪ್ರಿಯಾಂಕ್ ಖರ್ಗೆ ಅವರಂತಹ ನಾಯಕರು ತೀಕ್ಷ್ಣ ಸೈದ್ಧಾಂತಿಕ ವಾಗ್ದಾಳಿ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೃದು ಹಿಂದುತ್ವದ ಧೋರಣೆ ಕಾಯ್ದುಕೊಳ್ಳುವ ಮೂಲಕ ಹಿಂದೂ ಮತದಾರರನ್ನು ಸೆಳೆಯುವ ಸಮತೋಲನದ ರಾಜಕಾರಣ ಮಾಡುತ್ತಿದ್ದಾರೆ. ಕ್ರಿಕೆಟ್‌ನ ಆಲ್‌ರೌಂಡ್ ಆಟದಂತೆ ಕಾಂಗ್ರೆಸ್ ವಿವಿಧ ಸಮುದಾಯಗಳನ್ನು ತಲುಪಲು ಈ ಬಹುಮುಖಿ ತಂತ್ರಗಾರಿಕೆ ರೂಪಿಸಿದೆ. ಈ ಗಂಭೀರ ಆರೋಪಗಳ ಕುರಿತು ಬಿಜೆಪಿ ಹಾಗೂ ಆರೆಸ್ಸೆಸ್ ವಲಯದಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲವಾದರೂ, ಮುಂಬರುವ ಚುನಾವಣೆಗಳ ಮೇಲೆ ಇದು ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ.

Read More
Next Story