ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬಗೆ SIR ನೊಟೀಸ್‌ ವಿವಾದ: ಮನೆಗೆ ತೆರಳಿ ದಾಖಲೆ ಪರಿಶೀಲಿಸಿದ ಅಧಿಕಾರಿಗಳು
x

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬಗೆ SIR ನೊಟೀಸ್‌ ವಿವಾದ: ಮನೆಗೆ ತೆರಳಿ ದಾಖಲೆ ಪರಿಶೀಲಿಸಿದ ಅಧಿಕಾರಿಗಳು

2002ರ ಹಳೆಯ ಮತದಾರರ ಪಟ್ಟಿಯಲ್ಲಿ ಹಾಜಬ್ಬ ಅವರ ಹೆಸರು ಕೇವಲ ‘ಹಾಜಬ್ಬ’ ಎಂದು ನಮೂದಾಗಿತ್ತು. ಆದರೆ ನಂತರದ ಅಧಿಕೃತ ದಾಖಲೆಗಳಲ್ಲಿ ಅವರ ಹೆಸರು ‘ಹರೇಕಳ ಹಾಜಬ್ಬ’ ಎಂದೇ ದಾಖಲಾಗಿತ್ತು. ಎನ್ನಲಾಗಿದೆ. ಇದೇ ಕಾರಣಕ್ಕೆ ಅವರಿಗೆ ನೊಟೀಸ್‌ ಜಾರಿಗೊಳಿಸಲಾಗಿತ್ತು ಎನ್ನಲಾಗಿದೆ.


ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವೇಳೆ ಹೆಸರು ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ನೋಟಿಸ್ ಜಾರಿಯಾಗಿದ್ದ ವಿಚಾರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಚುನಾವಣಾ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅವರ ಮನೆಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಸ್ಥಳದಲ್ಲೇ ಅಗತ್ಯ ದಾಖಲೆಗಳನ್ನು ಪಡೆದು ಮತದಾರರ ಪಟ್ಟಿಯಲ್ಲಿನ ಹೆಸರಿನ ಗೊಂದಲವನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹರೇಕಳ ಹಾಜಬ್ಬ ತಿಳಿಸಿದ್ದಾರೆ.

ಮನೆಗೆ ತೆರಳಿದ ಅಧಿಕಾರಿಗಳು

ಹಾಜಬ್ಬ ಅವರಿಗೆ ನೋಟಿಸ್ ಜಾರಿಯಾಗಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಅಂಗನವಾಡಿ ಮೇಲ್ವಿಚಾರಕರು ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಹಾಜಬ್ಬ ಅವರ ಬಳಿಯಿದ್ದ ಪದ್ಮಶ್ರೀ ಪ್ರಶಸ್ತಿ ಪ್ರಮಾಣಪತ್ರ, ರಾಜ್ಯೋತ್ಸವ ಪ್ರಶಸ್ತಿ ಪತ್ರ, ಚುನಾವಣಾ ಗುರುತಿನ ಚೀಟಿ ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಲಾಯಿತು.

ಅಧಿಕಾರಿಗಳು ಯಾವುದೇ ಮೂಲ ದಾಖಲೆಗಳನ್ನು ತಮ್ಮೊಂದಿಗೆ ಕೊಂಡೊಯ್ದಿಲ್ಲ. ದಾಖಲೆಗಳಲ್ಲಿನ ಮಾಹಿತಿಯನ್ನು ಸ್ಥಳದಲ್ಲೇ ಪರಿಶೀಲಿಸಿ, ಅವುಗಳ ನಿಖರತೆಯನ್ನು ಖಚಿತಪಡಿಸಿಕೊಂಡಿದ್ದಾರೆ. ಅಲ್ಲದೆ, ಆತಂಕಪಡುವ ಅಗತ್ಯವಿಲ್ಲ, ಹೆಸರಿನಲ್ಲಿರುವ ಗೊಂದಲವನ್ನು ಅಧಿಕಾರಿಗಳೇ ಸರಿಪಡಿಸುವುದಾಗಿ ತಿಳಿಸಿದ್ದಾರೆ ಎಂದು ಹಾಜಬ್ಬ ಹೇಳಿದ್ದಾರೆ.

ಗ್ರಾಮ ಪಂಚಾಯಿತಿಗೆ ಹೋಗುವ ಅಗತ್ಯವಿಲ್ಲ

ಮೊದಲು ನೀಡಲಾಗಿದ್ದ ನೋಟಿಸ್‌ನಲ್ಲಿ ಸೆಪ್ಟೆಂಬರ್ 11ರಂದು ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಹಾಜರಾಗುವಂತೆ ಹಾಜಬ್ಬ ಅವರಿಗೆ ಸೂಚಿಸಲಾಗಿತ್ತು. ಆದರೆ ಇದೀಗ ಅಧಿಕಾರಿಗಳೇ ಅವರ ಮನೆಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿರುವುದರಿಂದ, ಹಾಜಬ್ಬ ಅವರು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳುವ ಅಗತ್ಯವಿಲ್ಲದಂತಾಗಿದೆ.

ನೋಟಿಸ್ ಜಾರಿಯಾಗಿದ್ದೇಕೆ?

2002ರ ಹಳೆಯ ಮತದಾರರ ಪಟ್ಟಿಯಲ್ಲಿ ಹಾಜಬ್ಬ ಅವರ ಹೆಸರು ಕೇವಲ ‘ಹಾಜಬ್ಬ’ ಎಂದು ನಮೂದಾಗಿತ್ತು. ಆದರೆ ನಂತರದ ಅಧಿಕೃತ ದಾಖಲೆಗಳಲ್ಲಿ ಅವರ ಹೆಸರು ‘ಹರೇಕಳ ಹಾಜಬ್ಬ’ ಎಂದೇ ದಾಖಲಾಗಿದೆ. ಪದ್ಮಶ್ರೀ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋರ್ಟ್ ಹಾಗೂ ಹೊಸ ಮತದಾರರ ಗುರುತಿನ ಚೀಟಿ ಸೇರಿದಂತೆ ವಿವಿಧ ದಾಖಲೆಗಳಲ್ಲಿ ‘ಹರೇಕಳ ಹಾಜಬ್ಬ’ ಎಂಬ ಹೆಸರಿದೆ.

ಚುನಾವಣಾ ಆಯೋಗದ ಎಸ್‌ಐಆರ್ ಪರಿಶೀಲನಾ ಪ್ರಕ್ರಿಯೆಯಲ್ಲಿ ಹಳೆಯ ಮತದಾರರ ಪಟ್ಟಿಯಲ್ಲಿರುವ ಹೆಸರು ಮತ್ತು ಪ್ರಸ್ತುತ ದಾಖಲೆಗಳಲ್ಲಿರುವ ಹೆಸರಿನ ನಡುವೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದಾಖಲೆಗಳನ್ನು ಪರಿಶೀಲಿಸುವ ಸಲುವಾಗಿ ನೋಟಿಸ್ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನನ್ನ ಎಲ್ಲಾ ದಾಖಲೆಗಳಲ್ಲಿ ಹೆಸರು ಸರಿಯಾಗಿದೆ’

ನೋಟಿಸ್ ಬಂದಿದ್ದ ಸಂದರ್ಭದಲ್ಲಿ ಹರೇಕಳ ಹಾಜಬ್ಬ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ನೋಟಿಸ್ ನೀಡಿದ್ದು, ಸೆಪ್ಟೆಂಬರ್ 11ರಂದು ಗ್ರಾಮ ಪಂಚಾಯಿತಿಗೆ ಎಲ್ಲಾ ಮೂಲ ದಾಖಲೆಗಳೊಂದಿಗೆ ಬರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದರು.

ತಮ್ಮ ಎಲ್ಲಾ ಅಧಿಕೃತ ದಾಖಲೆಗಳಲ್ಲೂ ‘ಹರೇಕಳ ಹಾಜಬ್ಬ’ ಎಂದೇ ಹೆಸರು ಸರಿಯಾಗಿದ್ದು, ಅಗತ್ಯವಿರುವ ಎಲ್ಲ ದಾಖಲೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದ್ದರು. ಇದೀಗ ಅಧಿಕಾರಿಗಳೇ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿರುವುದಕ್ಕೆ ಹಾಜಬ್ಬ ಅವರು ನಿರಾಳತೆ ವ್ಯಕ್ತಪಡಿಸಿದ್ದಾರೆ.

Read More
Next Story