ಹನೂರು ಶೂಟೌಟ್ ಪ್ರಕರಣ: ವಿಧಾನಸಭೆಯಲ್ಲಿ ಭಾರಿ ಗದ್ದಲ- ‘ಎನ್‌ಕೌಂಟರ್ ಸರ್ಕಾರ’ ಎಂದ ಪ್ರತಿಪಕ್ಷ ನಾಯಕರು
x

ಹನೂರು ಶೂಟೌಟ್ ಪ್ರಕರಣ: ವಿಧಾನಸಭೆಯಲ್ಲಿ ಭಾರಿ ಗದ್ದಲ- ‘ಎನ್‌ಕೌಂಟರ್ ಸರ್ಕಾರ’ ಎಂದ ಪ್ರತಿಪಕ್ಷ ನಾಯಕರು

ಸದನದಲ್ಲಿ ವಿಪಕ್ಷ ಸದಸ್ಯರು ‘ಎನ್‌ಕೌಂಟರ್ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಇದಕ್ಕೆ ಆಡಳಿತ ಪಕ್ಷದ ನಾಯಕರು ತಿರುಗೇಟು ನೀಡಿದ್ದು, ವಿಪಕ್ಷ ನಾಯಕರನ್ನು ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದು ಕರೆದರು.


Click the Play button to hear this message in audio format

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮ ವ್ಯಾಪ್ತಿಯಲ್ಲಿ ನಡೆದ ಗುಂಡಿನ ದಾಳಿ ಪ್ರಕರಣ ವಿಧಾನಸಭೆಯಲ್ಲೂ ಭಾರಿ ಸದ್ದು ಮಾಡಿದೆ. ಮೂವರು ಮೃತಪಟ್ಟಿರುವ ಪ್ರಕರಣದ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿದ್ದು, ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಹನೂರು ಶೂಟೌಟ್ ಪ್ರಕರಣವನ್ನು ಪ್ರಸ್ತಾಪಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಮೂವರು ಮೃತಪಟ್ಟಿದ್ದಾರೆ, ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಜಿ. ಪರಮೇಶ್ವರ್, ಪ್ರಶ್ನೋತ್ತರ ಕಲಾಪದ ಬಳಿಕ ಚರ್ಚೆಗೆ ನಿಲುವಳಿ ಸೂಚನೆ ನೀಡುವಂತೆ ಸಲಹೆ ನೀಡಿದರು. ಈ ವೇಳೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಮಧ್ಯಪ್ರವೇಶಿಸಿ, ಸರ್ಕಾರ ಘಟನೆಯ ಕುರಿತು ಸ್ವಯಂಪ್ರೇರಿತ ಹೇಳಿಕೆ ನೀಡುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ ಸರ್ಕಾರ ಹೇಳಿಕೆ ನೀಡದ ಹಿನ್ನೆಲೆಯಲ್ಲಿ ನಾವು ಈ ವಿಚಾರವನ್ನು ಪ್ರಸ್ತಾಪಿಸಿದ್ದೇವೆ ಎಂದು ತಿರುಗೇಟು ನೀಡಿದರು.

ಮೂವರ ಕೊಲೆ ಆಗಿದೆ, ಚರ್ಚೆ ಆಗಬೇಕು

ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ತಮಿಳುನಾಡು ಮುಖ್ಯಮಂತ್ರಿ ಕೂಡ ಈ ಘಟನೆ ಕುರಿತು ಮಾತನಾಡಿದ್ದಾರೆ. ತಮಿಳರಿಗೆ ಕರ್ನಾಟಕದಲ್ಲಿ ರಕ್ಷಣೆ ಇಲ್ಲ ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಸರ್ಕಾರಕ್ಕೆ ಕಣ್ಣು ಕಾಣುತ್ತಿಲ್ಲವೇ? ಮೂವರು ಮೃತಪಟ್ಟಿದ್ದಾರೆ. ಎನ್‌ಕೌಂಟರ್ ಆಗಿದೆ, ಕೊಲೆಗಾರರನ್ನು ಹಿಡಿದಿದ್ದೀರಾ? ಈ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸುನೀಲ್ ಕುಮಾರ್ ಅವರು ಡಿಸಿಎಂ ಜಿ. ಪರಮೇಶ್ವರ್ ಅವರನ್ನು ಪ್ರಶ್ನಿಸಿ, “ಎನ್‌ಕೌಂಟರ್ ಮಾಡುವ ಮುನ್ನ ಸತ್ತವರಿಗೆ ನೋಟಿಸ್ ಕೊಟ್ಟಿದ್ದೀರಾ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.

ಆತ್ಮರಕ್ಷಣೆಗಾಗಿ ಪ್ರತಿದಾಳಿ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಪ್ರಕರಣದ ಕುರಿತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಸರ್ಕಾರದ ಪರವಾಗಿ ಸ್ಪಷ್ಟನೆ ನೀಡಿದರು. ಹನೂರು ವ್ಯಾಪ್ತಿಯ ಶಾಗ್ಯ ಬಳಿ ಕಳ್ಳಬೇಟೆಗಾರರು ಅಕ್ರಮವಾಗಿ ಅರಣ್ಯ ಪ್ರವೇಶಿಸಿರುವ ಬಗ್ಗೆ ಹಿಂದಿನ ದಿನ ರಾತ್ರಿ 8 ಗಂಟೆಗೆ ಅರಣ್ಯ ಇಲಾಖೆಗೆ ಮಾಹಿತಿ ಬಂದಿತ್ತು. ಬಳಿಕ ಎರಡು ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಯಿತು ಎಂದು ಅವರು ತಿಳಿಸಿದರು.

ಬೆಳಗಿನ ಜಾವ ಸುಮಾರು 5 ಗಂಟೆಗೆ ಅರಣ್ಯ ಪ್ರದೇಶದಲ್ಲಿ ಬ್ಯಾಟರಿ ಬೆಳಕು ಕಾಣಿಸಿಕೊಂಡಿತ್ತು. ಬಂಡೆಯ ಬಳಿ ಕೆಲವರು ಇರುವುದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಶರಣಾಗುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಬೇಟೆಗಾರರ ಕಡೆಯಿಂದ ಗುಂಡಿನ ದಾಳಿ ನಡೆದಿದೆ. ಆತ್ಮರಕ್ಷಣೆಗಾಗಿ ಅರಣ್ಯ ಸಿಬ್ಬಂದಿ ಪ್ರತಿಯಾಗಿ ಗುಂಡು ಹಾರಿಸಿದ್ದಾರೆ ಎಂದು ಸಚಿವರು ವಿವರಿಸಿದರು.

ಬೇಟೆಗಾರರು ಎತ್ತರದ ಪ್ರದೇಶದಲ್ಲಿದ್ದ ಕಾರಣ ಅವರು ಅಸ್ಪಷ್ಟವಾಗಿ ಗೋಚರಿಸುತ್ತಿದ್ದರು. ಹೀಗಾಗಿ ಗುಂಡಿನ ದಾಳಿ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು. ಗುಂಡಿನ ದಾಳಿ ಬಳಿಕ ಕೂಗಾಟ ಮತ್ತು ಕಿರುಚಾಟ ಕೇಳಿಬಂದಿತ್ತು. ಸಿಬ್ಬಂದಿ ಸ್ಥಳಕ್ಕೆ ತೆರಳಿದಾಗ ಒಬ್ಬ ವ್ಯಕ್ತಿ ಓಡಿ ಹೋಗುತ್ತಿರುವುದು ಕಂಡುಬಂದಿದೆ. ಉಳಿದ ಮೂವರಿಗೆ ಗುಂಡೇಟು ತಗುಲಿದ್ದು, ಅವರು ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದರು ಎಂದು ಸಚಿವರು ತಿಳಿಸಿದರು.

ಬಳಿಕ ಮೂವರ ಮೃತದೇಹಗಳನ್ನು ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಒಟ್ಟು 10 ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು. ಸಿಬ್ಬಂದಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದರು.

ಬಂದೂಕು, ಜಿಂಕೆ ಮಾಂಸ ಸೇರಿದಂತೆ ಹಲವು ವಸ್ತುಗಳು ವಶಕ್ಕೆ

ಅರಣ್ಯ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಚಿವರು ತಿಳಿಸಿದರು. ಬೇಟೆಗಾರರ ಬಳಿ ಇದ್ದ ಎರಡು ಬಂದೂಕುಗಳು, ಎರಡು ಬ್ಯಾಗ್‌ಗಳು, ತಟ್ಟೆ, ಸ್ಪೂನ್, ದಿನಸಿ ಸಾಮಗ್ರಿ, ಬಿಸ್ಕತ್ತು, ಮೊಬೈಲ್‌ಗಳು, ಚಾಕುಗಳು, ಪಟಾಕಿ, ಮದ್ದಿನ ಬಾಕ್ಸ್, ನಾಡಬಂದೂಕಿನ ಗುಂಡುಗಳು, ಚಾರ್ಜರ್ ಬ್ಯಾಟರಿ ಹಾಗೂ ಮೊಬೈಲ್ ಚಾರ್ಜರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಬ್ಯಾಗ್‌ನಲ್ಲಿ ಪ್ರಾಣಿಯ ಮಾಂಸವೂ ಪತ್ತೆಯಾಗಿದ್ದು, ಸುಮಾರು 20ರಿಂದ 35 ಕೆ.ಜಿ.ಯಷ್ಟು ಒಂದೇ ಪ್ರಾಣಿಯ ಮಾಂಸ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಆ ಮೂವರು ಅನುಮತಿ ಇಲ್ಲದೆ ಅರಣ್ಯ ಪ್ರವೇಶಿಸಿದ್ದರು. ಅವರು ಬೇರೆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ. ಬೇಟೆಗಾರರು ಅರಣ್ಯದೊಳಗೆ ಸುಮಾರು 5ರಿಂದ 8 ಕಿ.ಮೀ. ಓಡಾಡಿದ್ದರು. ಅವರ ಬಳಿ ಜಿಂಕೆ ಮಾಂಸ ಪತ್ತೆಯಾಗಿದೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.

‘ಮೃತದೇಹಗಳನ್ನು ಮೈಸೂರಿಗೆ ಯಾಕೆ ಕೊಂಡೊಯ್ದಿರಿ?’

ಅರಣ್ಯ ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಸಚಿವರು ನೀಡಿದ ಉತ್ತರ ತಮಗೆ ಅರ್ಥವಾಗಲಿಲ್ಲ ಎಂದು ಹೇಳಿದರು. ಈ ಪ್ರಕರಣದ ಕುರಿತು ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳಿವೆ. ಚಾಮರಾಜನಗರದಲ್ಲೇ ಜಿಲ್ಲಾಸ್ಪತ್ರೆ ಇರುವಾಗ ಮೃತದೇಹಗಳನ್ನು ಮೈಸೂರಿಗೆ ಯಾಕೆ ಕೊಂಡೊಯ್ಯಲಾಯಿತು ಎಂದು ಪ್ರಶ್ನಿಸಿದರು.

ಈ ವೇಳೆ ಸಚಿವ ಕೃಷ್ಣ ಬೈರೇಗೌಡ ಮಧ್ಯಪ್ರವೇಶಿಸಿ, ಸಚಿವರು ಈಗಾಗಲೇ ಉತ್ತರ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಸುನೀಲ್ ಕುಮಾರ್ ತಿರುಗೇಟು ನೀಡಿ, “ಮೂವರು ಸತ್ತುಹೋಗಿದ್ದಾರೆ. ಆಮೇಲೆ ಪ್ರಶ್ನೋತ್ತರ ಅವಧಿ ನಡೆಸಿ. ಸರ್ಕಾರ ಮೂರು ಜನರನ್ನು ಸಾಯಿಸಿದೆ” ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ಮೃತರ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. “ಅವರ ಕುಟುಂಬದವರು ನೋವಿನಲ್ಲಿ ಇದ್ದಾರೆ. ಇಲ್ಲಿ ಇವರು ರಾಜಕೀಯ ಮಾಡುತ್ತಿದ್ದಾರೆ. ನಾಚಿಕೆಯಾಗಬೇಕು” ಎಂದು ಅವರು ಟೀಕಿಸಿದರು.

ಎನ್‌ಕೌಂಟರ್ ಸರ್ಕಾರಕ್ಕೆ ಧಿಕ್ಕಾರ ಘೋಷಣೆ

ಈ ವೇಳೆ ಸದನದಲ್ಲಿ ವಿಪಕ್ಷ ಸದಸ್ಯರು ‘ಎನ್‌ಕೌಂಟರ್ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತಿರುಗೇಟು ನೀಡಿದ್ದು, ವಿಪಕ್ಷ ನಾಯಕರನ್ನು ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಎಂದು ಕರೆದರು. ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಎನ್‌ಕೌಂಟರ್‌ಗಳನ್ನು ನಡೆಸಿದ್ದೀರ ಎಂದು ಆಡಳಿತ ಪಕ್ಷದ ಸದಸ್ಯರು ಆರೋಪಿಸಿದರು. ಇದರಿಂದ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರ ನಡೆಯಿತು.

‘ಹತ್ತಿರದಿಂದಲೇ ಗುಂಡು ಹಾರಿಸಲಾಗಿದೆ’

ಬಳಿಕ ಸ್ಪೀಕರ್ ಮಧ್ಯಪ್ರವೇಶಿಸಿ, ವಿಪಕ್ಷಗಳಿಗೆ ತಮ್ಮ ಪ್ರಶ್ನೆಗಳನ್ನು ಸ್ಪಷ್ಟವಾಗಿ ಮಂಡಿಸಲು ಅವಕಾಶ ನೀಡಿದರು. ಆರ್. ಅಶೋಕ್ ಮಾತನಾಡಿ, ನಾಲ್ವರು ವ್ಯಕ್ತಿಗಳ ಮೇಲೆ ಗುಂಡು ಹಾರಿಸಲಾಗಿದೆ. ನಾಲ್ಕನೇ ವ್ಯಕ್ತಿ ಮೈಸೂರು ಆಸ್ಪತ್ರೆಯಿಂದ ಕಾಣೆಯಾಗಿದ್ದಾನೆ. ಆತ ಸತ್ಯ ಹೇಳುತ್ತಾನೆ ಎಂಬ ಕಾರಣಕ್ಕೆ ಆತನನ್ನು ಕಾಣೆಯಾಗಿಸಲಾಗಿದೆಯೇ ಎಂದು ಪ್ರಶ್ನಿಸಿದರು.

ಕಾಡುಗಳ್ಳರು ಎಂದು ಆರೋಪಿಸಲಾಗುತ್ತಿದ್ದರೆ 5 ಸಾವಿರ ರೈತರು ಏಕೆ ಹೋರಾಟ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ ಅವರು, ಮೃತರ ವಿರುದ್ಧ ಈ ಹಿಂದೆ ಯಾವುದೇ ಗೂಂಡಾ ಪ್ರಕರಣಗಳಿದ್ದವೆಯೇ ಎಂಬುದನ್ನೂ ಪ್ರಶ್ನಿಸಿದರು. “ಯಾವ ರೇಂಜ್‌ನಲ್ಲಿ ಗುಂಡು ಹಾರಿಸಲಾಗಿದೆ? ಹತ್ತಿರದಿಂದಲೇ ಎನ್‌ಕೌಂಟರ್ ಮಾಡಲಾಗಿದೆ. ಯಾಕೆ?” ಎಂದು ಆರ್. ಅಶೋಕ್ ಪ್ರಶ್ನಿಸಿದರು.

ಆತ್ಮರಕ್ಷಣೆಗಾಗಿ ಸಿಬ್ಬಂದಿಗೆ ಗುಂಡು ಹಾರಿಸುವ ಅಧಿಕಾರವಿದೆ ಎಂಬುದನ್ನು ಒಪ್ಪಿಕೊಂಡ ಅಶೋಕ್, ಗುಂಡು ಕಾಲಿಗೆ ಹೊಡೆಯಬಹುದಿತ್ತಲ್ಲವೇ, ಎದೆಗೆ ಯಾಕೆ ಹೊಡೆಯಲಾಯಿತು ಎಂದು ಪ್ರಶ್ನಿಸಿದರು.

ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ನೂರಾರು ಸಿಬ್ಬಂದಿ ಸುತ್ತುವರಿದಿದ್ದರೂ ಆರೋಪಿಗಳನ್ನು ಏಕೆ ಬಂಧಿಸಲು ಸಾಧ್ಯವಾಗಲಿಲ್ಲ? ಮೂವರ ಮೇಲೆಯೇ ಏಕೆ ಗುಂಡು ಹಾರಿಸಬೇಕಾಯಿತು? ಒಬ್ಬರ ಮೇಲೆ ಗುಂಡು ಹಾರಿಸಿದ್ದರೆ ಉಳಿದವರು ಓಡಿ ಹೋಗುತ್ತಿದ್ದರು ಎಂದು ಅವರು ವಾದಿಸಿದರು.

ಕಟ್ಟಿಗೆ ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ಜನರು ಅರಣ್ಯ ಪ್ರದೇಶಕ್ಕೆ ಹೋಗುತ್ತಾರೆ. ರೈತರು ಅರಣ್ಯಕ್ಕೆ ಹೋಗಬಾರದಾ? ಎಂದು ಆರ್. ಅಶೋಕ್ ಪ್ರಶ್ನಿಸಿದರು.

ಇದೇ ವಿಚಾರವಾಗಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಕೂಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಭಾಗದ ರೈತರನ್ನೇ ಬೇಟೆಗಾರರು ಎಂದು ಆರೋಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಚಾಮರಾಜನಗರವನ್ನು ಪ್ರತಿನಿಧಿಸುವ ಸಚಿವ ಪುಟ್ಟರಂಗ ಶೆಟ್ಟಿ ಈ ಬಗ್ಗೆ ವಿಭಿನ್ನ ರೀತಿಯ ಹೇಳಿಕೆ ನೀಡಿದ್ದಾರೆ. ಬೇಟೆಯಾಡಿ ವಾಪಸ್ ಬರುವಾಗ ಗುಂಡು ಹಾರಿಸಲಾಗಿದೆ ಎಂಬ ಹೇಳಿಕೆಯನ್ನು ನಂಬುವ ಪರಿಸ್ಥಿತಿಯಲ್ಲಿ ತಾವು ಇಲ್ಲ ಎಂದು ಸುನೀಲ್ ಕುಮಾರ್ ಹೇಳಿದರು.

ಸಂಸದ ಸುನೀಲ್ ಬೋಸ್ ಅವರ ಹೇಳಿಕೆಯನ್ನೂ ಉಲ್ಲೇಖಿಸಿದ ಅವರು, ಸಚಿವರು ಮತ್ತು ಜನಪ್ರತಿನಿಧಿಗಳ ಹೇಳಿಕೆಗಳಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿದರು. “ನಿಮ್ಮ ರಾಜಕೀಯ ಮೇಲಾಟಕ್ಕೆ, ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ರೈತರನ್ನೇ ಎನ್‌ಕೌಂಟರ್ ಮಾಡಿದೆ” ಎಂದು ಅವರು ಗಂಭೀರ ಆರೋಪ ಮಾಡಿದರು.

Read More
Next Story