
ಹನೂರು ಪ್ರಕರಣ; ನ್ಯಾಯಾಂಗ ತನಿಖೆಗೆ ಆರ್. ಅಶೋಕ್ ಆಗ್ರಹ
ಕಾಡು ಪ್ರಾಣಿಗಳನ್ನು ಕೊಂದು ಮಾಂಸ ಮಾರಾಟ ಮಾಡಲು ಬಂದಿದ್ದರೆಂಬ ಕಾರಣಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಎನ್‌ಕೌಂಟರ್ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಮೃತರ ಸಂಬಂಧಿಕರು ಇದು ನಕಲಿ ಎನ್‌ಕೌಂಟರ್ ಎಂದು ಆರೋಪಿಸುತ್ತಿದ್ದಾರೆ ಎಂದು ಅಶೋಕ್ ದೂರಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಗೆ ಮೂವರು ಬಲಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪ್ರಕರಣದ ಸತ್ಯಾಸತ್ಯತೆ ಹೊರಬರಲು ತಕ್ಷಣವೇ ನ್ಯಾಯಾಂಗ ತನಿಖೆಗೆ ಆದೇಶಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೂವರು ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಉತ್ತರಗಳೇ ಪರಸ್ಪರ ತಾಳೆಯಾಗುತ್ತಿಲ್ಲ. ಅರಣ್ಯ ಇಲಾಖೆ ಒಂದು ರೀತಿಯ ಹೇಳಿಕೆ ನೀಡಿದರೆ, ಸ್ಥಳೀಯ ಜನಪ್ರತಿನಿಧಿಗಳು ಮತ್ತೊಂದು ಕಥೆ ಹೇಳುತ್ತಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರ ಮಾತುಗಳಲ್ಲೂ ಅನುಮಾನಗಳಿಗೆ ಉತ್ತರ ಸಿಗುತ್ತಿಲ್ಲ. ಹಾಗಾದರೆ ನಿಜವಾದದ್ದು ಯಾವುದು?, ಸಾರ್ವಜನಿಕರು ಯಾರ ಮಾತನ್ನು ನಂಬಬೇಕು?" ಎಂದು ಪ್ರಶ್ನಿಸಿದ್ದಾರೆ.
ಕಾಡು ಪ್ರಾಣಿಗಳನ್ನು ಕೊಂದು ಮಾಂಸ ಮಾರಾಟ ಮಾಡಲು ಬಂದಿದ್ದರೆಂಬ ಕಾರಣಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಎನ್‌ಕೌಂಟರ್ ಮಾಡಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಮೃತರ ಸಂಬಂಧಿಕರು ಇದು ನಕಲಿ ಎನ್‌ಕೌಂಟರ್ ಎಂದು ಆರೋಪಿಸುತ್ತಿದ್ದಾರೆ ಎಂದು ಅಶೋಕ್ ದೂರಿದ್ದಾರೆ.
"ಕಳೆದ 10 ವರ್ಷಗಳಲ್ಲಿ ಅರಣ್ಯ ಪ್ರದೇಶದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಒಂದು ವೇಳೆ ದಾಳಿ ನಡೆಸಿದರೂ ನಿಯಮಾನುಸಾರ ಮೊದಲು ಕಾಲಿಗೆ ಗುಂಡು ಹಾರಿಸಬೇಕಿತ್ತು. ನೇರವಾಗಿ ಎದೆಗೆ ಗುಂಡು ಹಾರಿಸಲಾಗಿದೆ ಎಂದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ," ಎಂದು ಅಶೋಕ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
"ಘಟನೆ ಸಂಬಂಧ ನಾನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದು, ಇನ್ನೂ ಸ್ಥಳ ಮಹಜರು ಕಾರ್ಯವೇ ನಡೆದಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಪೊಲೀಸರು ಜಾಗ ಪರಿಶೀಲಿಸಿ ಮಹಜರು ಮಾಡುವುದಕ್ಕಿಂತ ಮುಂಚೆಯೇ ಶವಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ರವಾನಿಸಿದ್ದು ಏಕೆ? ಹತ್ಯೆಯಾದವರ ಹಿನ್ನೆಲೆ ಕುರಿತು ಸರ್ಕಾರ ಯಾವುದೇ ಅಧಿಕೃತ ಮಾಹಿತಿ ಪ್ರಕಟಿಸಿಲ್ಲ. ಜೊತೆಗೆ, ಶೂಟೌಟ್ ನಡೆಸಿದ ಸಿಬ್ಬಂದಿ ಈಗ ಕಾಣೆಯಾಗಿದ್ದಾರೆ. ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಶರಣಾಗಬೇಕಿತ್ತು. ಅರಣ್ಯ ಸಿಬ್ಬಂದಿಯ ಮಾತಿಗೂ, ನಾಗರಿಕರ ಹೇಳಿಕೆಗೂ ಅಂತರವಿದೆ," ಎಂದು ಅವರು ದೂರಿದ್ದಾರೆ.
ʼನ್ಯಾಯಾಂಗ ತನಿಖೆಯೇ ಪರಿಹಾರ'
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಹಾಗೂ ಸಿಎಂ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ. ಆದರೆ ಈ ಆಂತರಿಕ ತನಿಖೆಗಳಿಂದ ಸತ್ಯ ಹೊರಬರಲು ಸಾಧ್ಯವಿಲ್ಲ ಎಂದಿರುವ ಅಶೋಕ್, "ಆಡಳಿತ ವ್ಯವಸ್ಥೆಯ ಅಧಿಕಾರಿಗಳು ಸರ್ಕಾರದ ಪರವಾಗಿಯೇ ಇರುತ್ತಾರೆ. ಶೂಟೌಟ್ ನಡೆಸಿದ ಇಲಾಖೆಯೇ ತನಿಖೆಯ ವ್ಯಾಪ್ತಿಯಲ್ಲಿರುವಾಗ ನ್ಯಾಯ ಸಿಗಲು ನ್ಯಾಯಾಂಗ ತನಿಖೆ ಒಂದೇ ಸೂಕ್ತ ಹಾದಿ. ತನಿಖೆ ಪೂರ್ಣಗೊಳ್ಳುವವರೆಗೆ ಆರೋಪಿತ ಸಿಬ್ಬಂದಿಯನ್ನು ಕರ್ತವ್ಯದಿಂದ ಮುಕ್ತಿಗೊಳಿಸಬೇಕು," ಎಂದು ಒತ್ತಾಯಿಸಿದ್ದಾರೆ.
ಅಷ್ಟಕ್ಕೂ ಅಲ್ಲಿ ಗುಂಡಿನ ದಾಳಿ ನಡೆಸುವಂತಹ ಅನಿವಾರ್ಯತೆ ಇತ್ತಾ? ಒಬ್ಬರಿಗೆ ಗುಂಡು ಬಿದ್ದಾಗ ಜೊತೆಯಲ್ಲಿದ್ದವರು ಓಡಿಹೋಗುತ್ತಿದ್ದರು. ಆದರೆ ಮೂವರನ್ನೂ ಸಾಲಾಗಿ ಹೊಡೆದುರುಳಿಸಲಾಗಿದೆ. ಮೃತರ ಬಳಿ ಅಪಾಯಕಾರಿ ಆಯುಧಗಳಿದ್ದವೇ? ಎಂಬ ಪ್ರಶ್ನೆಗೆ ಸರ್ಕಾರ ಉತ್ತರ ನೀಡಬೇಕಿದೆ. ಘಟನಾ ಸ್ಥಳಕ್ಕೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿ, ಪ್ರತಿಭಟನೆ ನಡೆಸುತ್ತಿರುವ ಗ್ರಾಮಸ್ಥರಿಗೆ ನ್ಯಾಯ ಕೊಡಿಸುವ ಭರವಸೆ ನೀಡಬೇಕಿತ್ತು," ಎಂದು ಅಶೋಕ್ ಹೇಳಿದ್ದಾರೆ.
ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದ ಮರಿಯ ಮಂಗಲ ಬೀಟ್ನಲ್ಲಿ ಅರಣ್ಯ ಸಿಬ್ಬಂದಿ ನಿನ್ನೆ ಮುಂಜಾನೆ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಮತ್ತೊಬ್ಬ ಪರಾರಿಯಾಗಿದ್ದ. ಮೃತರನ್ನು ತೊಮಿಯರ್ ಪಾಳ್ಯದ ಅಂತೋಣಿಸ್ವಾಮಿ, ಪೀಟರ್ ಹಾಗೂ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆಯ ಬೆನ್ನಲ್ಲೇ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ಉದ್ರಿಕ್ತರ ಗುಂಪು ಸ್ಥಳೀಯ ಅರಣ್ಯ ಕಚೇರಿಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದು, ಕ್ಷೇತ್ರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

