'ಇದು ಎನ್ಕೌಂಟರ್ ಅಲ್ಲ, ಯೋಜಿತ ಕೊಲೆ' ಎಸ್‌ಐಟಿ ತನಿಖೆಗೆ ಮಾರ್ಟಳ್ಳಿ ಅರುಳ್ ಸೆಲ್ವಂ ಆಗ್ರಹ
ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದರೂ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಪ್ರಮುಖ ನಾಯಕರು ಇಲ್ಲಿಯವರೆಗೆ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿಲ್ಲ ಎಂದು ಅರುಳ್ ಸೆಲ್ವಂ ಆರೋಪಿಸಿದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಘಟನೆ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದೆ. ಮೃತಪಟ್ಟವರು ಬೇಟೆಗಾರರಲ್ಲ, ಬದಲಾಗಿ ಮುಗ್ಧ ರೈತರು; ಇದೊಂದು ಅರಣ್ಯ ಸಿಬ್ಬಂದಿಯೇ ಎಸಗಿದ 'ಯೋಜಿತ ಕೊಲೆ' ಎಂದು ಮಾರ್ಟಳ್ಳಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಅರುಳ್ ಸೆಲ್ವಂ ಗಂಭೀರ ಆರೋಪ ಮಾಡಿದ್ದಾರೆ. 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಅರಣ್ಯ ಇಲಾಖೆಯ ಕಾರ್ಯಾಚರಣೆಯ ವಿರುದ್ಧ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಮೃತಪಟ್ಟ ಮೂವರನ್ನೂ ನಾವು ಪ್ರತಿನಿತ್ಯ ನೋಡುತ್ತಿದ್ದೆವು. ಅವರು ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದವರಲ್ಲ. ಕಾಡಿಗೆ ಮೇಯಲು ಹೋಗಿದ್ದ ತಮ್ಮ ಹಸುಗಳನ್ನು ಹುಡುಕಿಕೊಂಡು ಅವರು ಅರಣ್ಯದೊಳಗೆ ತೆರಳಿದ್ದರು. ಕಾಡಿನೊಳಗೆ ಪ್ರವೇಶ ಮಾಡುವುದು ತಪ್ಪು ಎಂದು ಒಪ್ಪಿಕೊಂಡರೂ, ಅರಣ್ಯದೊಳಗೆ ಹೋದ ತಕ್ಷಣ ಅವರನ್ನು ಗುಂಡಿಕ್ಕಿ ಕೊಲ್ಲಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಅರಣ್ಯ ಇಲಾಖೆಯ ಈ ಕ್ರಮ ಸಂಪೂರ್ಣ ಅಮಾನವೀಯವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಮಾಂಸ ಪತ್ತೆಯ ಸುತ್ತ ಗಂಭೀರ ಅನುಮಾನ
ಮೃತರ ಬಳಿ ಕಾಡುಪ್ರಾಣಿಯ ಮಾಂಸ ಪತ್ತೆಯಾಗಿದೆ ಎಂಬ ಅರಣ್ಯ ಇಲಾಖೆಯ ವಾದವನ್ನು ಅರುಳ್ ಸೆಲ್ವಂ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಮೃತರ ಬಳಿ ಮಾಂಸ ಸಿಕ್ಕಿದೆ ಎಂದು ಹೇಳುವ ಅಧಿಕಾರಿಗಳು, ಹಾಗಾದರೆ ಆ ಪ್ರಾಣಿಯ ಚರ್ಮ ಎಲ್ಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಪ್ರಕರಣವನ್ನು ದಿಕ್ಕುತಪ್ಪಿಸಲು ಅರಣ್ಯ ಸಿಬ್ಬಂದಿಯೇ ಕೃತಕವಾಗಿ ಮಾಂಸವನ್ನು ತಂದು ಅಲ್ಲಿಟ್ಟು, ಮೃತರು ಬೇಟೆಗಾರರು ಎಂಬ ಕಥೆ ಕಟ್ಟಿದ್ದಾರೆ ಎಂಬ ಗಂಭೀರ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.
ಯೋಜಿತ ಕೊಲೆ: ಎಸ್‌ಐಟಿ ತನಿಖೆ ಹಾಗೂ ₹2 ಕೋಟಿ ಪರಿಹಾರಕ್ಕೆ ಒತ್ತಾಯ
ಇದೊಂದು ಸ್ಪಷ್ಟವಾದ ಯೋಜಿತ ಕೊಲೆ (ಪ್ಲಾನ್ ಮರ್ಡರ್) ಆಗಿದ್ದು, ಅರಣ್ಯ ಇಲಾಖೆಯಿಂದಲೇ ನಿಷ್ಪಕ್ಷಪಾತ ತನಿಖೆ ಅಸಾಧ್ಯ. ಹೀಗಾಗಿ ಇಡೀ ಪ್ರಕರಣವನ್ನು ಎಸ್‌ಐಟಿ (ವಿಶೇಷ ತನಿಖಾ ದಳ) ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಗುಂಡಿನ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಈ ನಿಟ್ಟಿನಲ್ಲಿ ದೂರು ದಾಖಲಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಸಂತ್ರಸ್ತ ಕುಟುಂಬಗಳಿಗೆ ತಲಾ 2 ಕೋಟಿ ರೂಪಾಯಿ ಪರಿಹಾರ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಚಿವರ ಗೈರಿಗೆ ಆಕ್ರೋಶ ಹಾಗೂ ತಮಿಳುನಾಡು ಸಿಎಂ ಹೇಳಿಕೆಗೆ ಬೆಂಬಲ
ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದರೂ, ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಕೆ.ಜೆ. ಜಾರ್ಜ್ ಸೇರಿದಂತೆ ಪ್ರಮುಖ ನಾಯಕರು ಇಲ್ಲಿಯವರೆಗೆ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿಲ್ಲ. ಇದೇ ಘಟನೆ ಬೇರೆ ಸಮುದಾಯದವರಿಗೆ ಆಗಿದ್ದರೆ ಎಲ್ಲ ಸಚಿವರೂ ಭೇಟಿ ನೀಡುತ್ತಿದ್ದರು ಎಂದು ಅವರು ತಾರತಮ್ಯದ ಆರೋಪ ಮಾಡಿದ್ದಾರೆ.
ಇದೇ ವೇಳೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಈ ಘಟನೆಯ ಬಗ್ಗೆ ಧ್ವನಿ ಎತ್ತಿರುವುದು ಕೇವಲ ಮಾನವೀಯತೆಯ ದೃಷ್ಟಿಯಿಂದಷ್ಟೇ ಹೊರತು ರಾಜಕೀಯ ಕಾರಣಕ್ಕಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ನಾವು ಅಪ್ಪಟ ಕರ್ನಾಟಕದವರು, ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆ ಜಾರಿಯಾಗಬೇಕು ಎಂಬುದೇ ನಮ್ಮ ದೃಢವಾದ ಆಗ್ರಹವಾಗಿದೆ ಎಂದೂ ಅವರು ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

