ಹನೂರು ಶೂಟೌಟ್: ಅರಣ್ಯ ಇಲಾಖೆ ನಿವೃತ್ತ ಅಧಿಕಾರಿಗಳಿಂದ ಸತ್ಯ ಬಹಿರಂಗ
ಹನೂರಿನ ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ ಘಟನೆ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆಯೇ, ‘ದ ಫೆಡರಲ್ ಕರ್ನಾಟಕ’ದ ಸಂದರ್ಶನದಲ್ಲಿ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಗಳು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬೇಟೆಗಾರರು ಬಂದಾಗ ಅಪ್ಪಿಕೊಳ್ಳಲು ಸಾಧ್ಯವಿಲ್ಲ; ಆತ್ಮರಕ್ಷಣೆಗಾಗಿ ಗುಂಡು ಹಾರಿಸಿರುವುದು ಸರಿಯೇ ಎಂದು ಅವರು ಹೇಳಿದ್ದಾರೆ.
ಹನೂರಿನ ಕಾವೇರಿ ವನ್ಯಜೀವಿಧಾಮದಲ್ಲಿ ಆಗಸ್ಟ್ 15ರಂದು ನಡೆದ ಗುಂಡಿನ ದಾಳಿಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿರುವ ಘಟನೆ ಕುರಿತು ಪರ-ವಿರೋಧ ಚರ್ಚೆ ಮುಂದುವರಿದಿದೆ. ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿ ಕಾನೂನುಬದ್ಧವಾಗಿತ್ತೇ, ಮೃತಪಟ್ಟವರು ಬೇಟೆಗಾರರೇ ಅಥವಾ ರೈತರೇ ಎಂಬ ವಿಚಾರದಲ್ಲಿ ವಿವಿಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈ ನಡುವೆ ‘ದ ಫೆಡರಲ್ ಕರ್ನಾಟಕ’ದ ವಿಶೇಷ ಸಂದರ್ಶನದಲ್ಲಿ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿಗಳು ಘಟನೆ ಕುರಿತು ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ನಿವೃತ್ತ ಅಧಿಕಾರಿಗಳ ಪ್ರಕಾರ, ಅರಣ್ಯ ಸಿಬ್ಬಂದಿ ವಿರುದ್ಧ ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಲು ಸಿಬ್ಬಂದಿಗೆ ಕಾನೂನುಬದ್ಧ ಅಧಿಕಾರವಿದೆ. ಮೃತರ ಬಳಿ ಬಂದೂಕು, ಮಾಂಸ ಮತ್ತು ಟಾರ್ಚ್ ಪತ್ತೆಯಾಗಿರುವುದು ಸೇರಿದಂತೆ ಘಟನೆಯ ಸ್ಥಳ ಮತ್ತು ಪರಿಸ್ಥಿತಿಯನ್ನು ಪರಿಗಣಿಸಿದರೆ, ಅವರು ಬೇಟೆಗೆ ತೆರಳಿದ್ದವರು ಎಂಬುದು ಸ್ಪಷ್ಟವಾಗುತ್ತದೆ ಎಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
‘ಸತ್ತವರು ರೈತರಲ್ಲ, ಬೇಟೆಗಾರರು’
ನಿವೃತ್ತ ಉಪ ಸಂರಕ್ಷಣಾಧಿಕಾರಿ ಕೆ.ಎಂ.ಬಿ. ಪ್ರಸಾದ್ ಅವರು ಹನೂರು ಶೂಟೌಟ್‌ನಲ್ಲಿ ಮೃತಪಟ್ಟವರು ರೈತರಲ್ಲ, ಬೇಟೆಗಾರರು ಎಂದು ಹೇಳಿದ್ದಾರೆ. ಕಾಡಿನೊಳಗೆ ಅಕ್ರಮವಾಗಿ ಪ್ರವೇಶಿಸಿ ಬೇಟೆ ನಡೆಸುವವರು ಅರಣ್ಯ ಸಿಬ್ಬಂದಿ ಎದುರು ಪೈರಿಂಗ್ ಮಾಡಿದ ಸಂದರ್ಭದಲ್ಲಿ ಸಿಬ್ಬಂದಿ ಪ್ರತಿಯಾಗಿ ಗುಂಡು ಹಾರಿಸಬಾರದು ಎಂದು ಯಾವುದೇ ಕಾನೂನು ಇಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಅರಣ್ಯ ಸಂರಕ್ಷಣೆಯ ಸಂದರ್ಭದಲ್ಲಿ ಹಲವು ಬಾರಿ ಗುಂಡಿನ ದಾಳಿಯನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಿಬ್ಬಂದಿ ಆತ್ಮರಕ್ಷಣೆಗಾಗಿ ಪೈರಿಂಗ್ ಮಾಡಿಯೇ ಅರಣ್ಯವನ್ನು ರಕ್ಷಿಸಿರುವ ಉದಾಹರಣೆಗಳಿವೆ ಎಂದು ಅವರು ಹೇಳಿದ್ದಾರೆ. ರೈತರು ಕಾಡಿನೊಳಗೆ ಪ್ರವೇಶಿಸುವುದು ಅತಿಕ್ರಮಣವಾಗಿದ್ದರೂ, ಬಂದೂಕು ತೆಗೆದುಕೊಂಡು ಕಾಡಿನೊಳಗೆ ಹೋಗುವ ಪರಿಸ್ಥಿತಿ ಏನನ್ನು ಸೂಚಿಸುತ್ತದೆ ಎಂಬುದನ್ನು ಪ್ರಶ್ನಿಸಬೇಕಿದೆ ಎಂದು ಪ್ರಸಾದ್ ಹೇಳಿದ್ದಾರೆ.
ಕತ್ತಲಿನಲ್ಲಿ ಗುಂಡಿನ ದಾಳಿ ನಡೆದಾಗ ಕಾಲಿಗೆ ಅಥವಾ ಕೈಗೆ ಮಾತ್ರ ಗುಂಡು ಹೊಡೆಯಬೇಕು ಎಂಬ ರೀತಿಯ ಯಾವುದೇ ಆದೇಶವಿಲ್ಲ. ಮೊದಲು ಶರಣಾಗುವಂತೆ ಎಚ್ಚರಿಕೆ ನೀಡಲಾಗುತ್ತದೆ. ಆದರೆ ಶರಣಾಗದೆ ಎದುರಿನಿಂದಲೇ ಪೈರಿಂಗ್ ನಡೆದರೆ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸುವ ಅಧಿಕಾರ ಅರಣ್ಯ ಸಿಬ್ಬಂದಿಗೆ ಇದೆ ಎಂದು ಅವರು ತಿಳಿಸಿದ್ದಾರೆ.
ಅರಣ್ಯ ಸಿಬ್ಬಂದಿ ವಿರುದ್ಧ ಮಾತನಾಡುವವರು ಘಟನೆಯ ಸ್ಥಳದ ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಂಡು ಮಾತನಾಡಬೇಕು. ಗುಂಡಿನ ದಾಳಿಯಲ್ಲಿ ಅರಣ್ಯ ಸಿಬ್ಬಂದಿಯೇ ಮೃತಪಟ್ಟಿದ್ದರೆ ಅದರ ಹೊಣೆ ಯಾರು ಹೊರುತ್ತಿದ್ದರು ಎಂಬ ಪ್ರಶ್ನೆಯನ್ನೂ ಪರಿಗಣಿಸಬೇಕು ಎಂದು ಅವರು ಹೇಳಿದ್ದಾರೆ. ಮೃತರಿಗೆ ಪರಿಹಾರ ನೀಡಿರುವುದು ರಾಜಕೀಯ ನಿರ್ಧಾರ ಎಂದು ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
‘ಕಾಡಿನೊಳಗೆ ಹೋಗಿದ್ದೇಕೆ?’
ನಿವೃತ್ತ ಸಹಾಯಕ ಸಂರಕ್ಷಣಾಧಿಕಾರಿ ವಾಸುದೇವ ಮೂರ್ತಿ ಅವರು, ಮೊದಲನೆಯದಾಗಿ ಕಾಡಿನೊಳಗೆ ಹೋಗುವ ಅಗತ್ಯವೇನಿತ್ತು ಎಂಬ ಪ್ರಶ್ನೆ ಎದುರಾಗುತ್ತದೆ ಎಂದು ಹೇಳಿದ್ದಾರೆ. ಮೃತಪಟ್ಟವರು ದನ ಹುಡುಕಲು ಕಾಡಿಗೆ ತೆರಳಿದ್ದರು ಎಂದು ಕೆಲವರು ಹೇಳುತ್ತಿರುವ ಹಿನ್ನೆಲೆಯಲ್ಲಿ, ದನ ಕಾಡಿನೊಳಗೆ ಹೋಗಿದ್ದರೆ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಬೇಕಿತ್ತು. ಹಾಗೆ ಮಾಡದೆ ಕಾಡಿನೊಳಗೆ ಹೋಗಿರುವುದಕ್ಕೆ ಕಾರಣವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಮೃತರ ಬಳಿ ಆಯುಧ ಹಾಗೂ ಮಾಂಸ ಪತ್ತೆಯಾಗಿರುವುದನ್ನು ಉಲ್ಲೇಖಿಸಿದ ಅವರು, ಈ ವಸ್ತುಗಳು ಅವರ ಬಳಿ ಹೇಗೆ ಬಂದವು ಎಂಬುದಕ್ಕೂ ಸ್ಪಷ್ಟನೆ ಬೇಕಾಗಿದೆ ಎಂದಿದ್ದಾರೆ. ಮೀಸಲು ಅರಣ್ಯದ ಒಳಭಾಗ ವನ್ಯಜೀವಿಗಳಿಗೆ ಮೀಸಲಾಗಿರುವ ಅತ್ಯಂತ ಸಂರಕ್ಷಿತ ಪ್ರದೇಶವಾಗಿದ್ದು, ಅಂತಹ ಪ್ರದೇಶದವರೆಗೆ ಅವರು ಹೇಗೆ ತೆರಳಿದರು ಎಂಬುದನ್ನೂ ಪರಿಶೀಲಿಸಬೇಕಿದೆ ಎಂದು ಹೇಳಿದ್ದಾರೆ.
ತಮಗೆ ಲಭ್ಯವಾದ ಮಾಹಿತಿಯ ಪ್ರಕಾರ, ಅರಣ್ಯ ಸಿಬ್ಬಂದಿ ಮತ್ತು ಶಂಕಿತ ಬೇಟೆಗಾರರು ಮುಖಾಮುಖಿಯಾಗಿದ್ದು, ಮೊದಲು ಬೇಟೆಗಾರರ ಕಡೆಯಿಂದ ಪೈರಿಂಗ್ ನಡೆದ ಬಳಿಕ ಅರಣ್ಯ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ ಎಂದು ವಾಸುದೇವ ಮೂರ್ತಿ ಹೇಳಿದ್ದಾರೆ. ಬೇಟೆಗಾರರು ಅರಣ್ಯಕ್ಕೆ ತೆರಳಿರುವ ಕುರಿತು ಖಚಿತ ಮಾಹಿತಿ ಬಂದ ಬಳಿಕವೇ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು ಎಂಬ ಮಾಹಿತಿಯೂ ಇದೆ ಎಂದು ಅವರು ತಿಳಿಸಿದ್ದಾರೆ.
ರಾತ್ರಿ ವೇಳೆ ಕತ್ತಲೆಯಲ್ಲಿ ಗುರಿಯಿಟ್ಟು ಗುಂಡು ಹಾರಿಸುವುದು ಸುಲಭವಲ್ಲ. ಅರಣ್ಯ ಸಿಬ್ಬಂದಿಯ ಉದ್ದೇಶ ಯಾರನ್ನಾದರೂ ಕೊಲ್ಲುವುದಲ್ಲ. ಎದುರಿಗೆ ವ್ಯಕ್ತಿ ಕಾಣಿಸಿಕೊಂಡಾಗ ಮೊದಲು ನಿಲ್ಲುವಂತೆ ಎಚ್ಚರಿಕೆ ನೀಡಲಾಗುತ್ತದೆ. ಆದರೆ ಆತ್ಮರಕ್ಷಣೆ ಅನಿವಾರ್ಯವಾದ ಸಂದರ್ಭದಲ್ಲಿ ಗುಂಡು ಹಾರಿಸಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.
‘ಎಂಟು ಕಿಲೋಮೀಟರ್ ಒಳಗೆ ಶೂಟೌಟ್’
ನಿವೃತ್ತ ಉಪ ಸಂರಕ್ಷಣಾಧಿಕಾರಿ ಕೃಷ್ಣಕುಮಾರ್ ಅವರು, ಘಟನೆ ನಡೆದ ಸ್ಥಳ ಅರಣ್ಯದ ಸುಮಾರು ಎಂಟು ಕಿಲೋಮೀಟರ್ ಒಳಭಾಗದಲ್ಲಿರುವುದರಿಂದ ಮೃತರು ಬೇಟೆಗಾರರು ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮೃತರ ಬಳಿ ಬಂದೂಕು, ಮಾಂಸ ಮತ್ತು ಟಾರ್ಚ್ ಇದ್ದಿರುವುದು ಅವರು ಬೇಟೆಗೆ ತೆರಳಿದ್ದರು ಎಂಬ ಅನುಮಾನಕ್ಕೆ ಪ್ರಮುಖ ಕಾರಣಗಳಾಗಿವೆ. ಅರಣ್ಯ ಸಿಬ್ಬಂದಿ ಮೊದಲು ಎಚ್ಚರಿಕೆ ನೀಡಿದ ಬಳಿಕವೂ ಪೈರಿಂಗ್ ನಡೆದ ಹಿನ್ನೆಲೆಯಲ್ಲಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಯ ಕ್ರಮದಲ್ಲಿ ತಪ್ಪೇನು ಎಂಬುದು ಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ.
ಬೇಟೆಗಾರರ ಮೇಲೆ ಗುಂಡು ಹಾರಿಸದಿದ್ದರೆ ಅರಣ್ಯ ಸಿಬ್ಬಂದಿಯ ಜೀವಕ್ಕೆ ಅಪಾಯ ಎದುರಾಗಬಹುದಿತ್ತು. ಸಾಮಾನ್ಯ ರೈತರು ರಾತ್ರಿ ವೇಳೆ ಅರಣ್ಯದ ಆಳಭಾಗಕ್ಕೆ ತೆರಳುವುದಿಲ್ಲ; ಇಂತಹ ಸಂದರ್ಭಗಳಲ್ಲಿ ಬೇಟೆಗಾರರು ಮಾತ್ರ ತೆರಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಕೃಷ್ಣಕುಮಾರ್ ಹೇಳಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಿರುವ ಕ್ರಮವನ್ನೂ ಅವರು ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪವಾಗಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
‘ಇದನ್ನು ಶೂಟೌಟ್ ಎನ್ನಬಾರದು’
ಕಾವೇರಿ ವನ್ಯಜೀವಿಧಾಮದ ಇದೇ ಪ್ರದೇಶದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಸಹಾಯಕ ಸಂರಕ್ಷಣಾಧಿಕಾರಿ ಅಂಕರಾಜ್ ಅವರು, ಘಟನೆಗೆ ‘ಶೂಟೌಟ್’ ಎನ್ನುವುದಕ್ಕಿಂತ ಆತ್ಮರಕ್ಷಣೆಗಾಗಿ ನಡೆದ ಪ್ರತಿದಾಳಿ ಎಂದು ಪರಿಗಣಿಸಬೇಕು ಎಂದು ಹೇಳಿದ್ದಾರೆ.
ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ತೆರಳಿದ್ದ ಸಿಬ್ಬಂದಿ ಮೇಲೆ ಬೇಟೆಗಾರರು ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಿಬ್ಬಂದಿ ಪ್ರತಿಯಾಗಿ ಗುಂಡು ಹಾರಿಸಿದ್ದಾರೆ. ಯಾರೂ ಉದ್ದೇಶಪೂರ್ವಕವಾಗಿ ಗುಂಡು ಹಾರಿಸುವುದಿಲ್ಲ. ಅರಣ್ಯ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ ಎಂದು ಅಂಕರಾಜ್ ಹೇಳಿದ್ದಾರೆ.
ಬೇಟೆಗಾರರು ಅರಣ್ಯಕ್ಕೆ ತೆರಳಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು ಎಂಬ ಮಾಹಿತಿ ತಮಗೆ ಲಭ್ಯವಾಗಿದೆ. ಬೇಟೆ ನಡೆಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಮತ್ತು ಬೇಟೆಗಾರರ ನಡುವೆ ಮುಖಾಮುಖಿ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
ಆತ್ಮರಕ್ಷಣೆಗಾಗಿ ಅಗತ್ಯ ಸಂದರ್ಭದಲ್ಲಿ ಗುಂಡು ಹಾರಿಸುವ ಅಧಿಕಾರ ಅರಣ್ಯ ಸಿಬ್ಬಂದಿಗೆ ಇದೆ. ತರಬೇತಿ ಸಂದರ್ಭದಲ್ಲಿ ಕೂಡ ಇಂತಹ ಸಂದರ್ಭಗಳಲ್ಲಿ ಸಿಬ್ಬಂದಿಯೊಂದಿಗೆ ಸರ್ಕಾರ ಇರುತ್ತದೆ ಎಂಬ ಧೈರ್ಯ ನೀಡಲಾಗುತ್ತದೆ ಎಂದು ಅಂಕರಾಜ್ ಹೇಳಿದ್ದಾರೆ.
ಕಾಲಿಗೆ ಗುಂಡು ಹೊಡೆಯಬೇಕಿತ್ತು’ ಎಂಬ ವಾದಕ್ಕೆ ಆಕ್ಷೇಪ
ಗುಂಡು ಹಾರಿಸುವಾಗ ಕಾಲಿಗೆ ಅಥವಾ ಕೈಗೆ ಗುರಿಯಿಡಬೇಕಿತ್ತು ಎಂಬ ವಾದಕ್ಕೂ ನಿವೃತ್ತ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆ ಕತ್ತಲಿನಲ್ಲಿ ಎದುರಿಗೆ ಕಾಣಿಸಿಕೊಳ್ಳುವ ವ್ಯಕ್ತಿಯ ಕಾಲು ಅಥವಾ ಕೈಗೆ ನಿಖರವಾಗಿ ಗುರಿಯಿಟ್ಟು ಗುಂಡು ಹಾರಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಗುಂಡಿನ ದಾಳಿ ನಡೆದ ಬಳಿಕ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವುದು ನಿಯಮದ ಭಾಗವಾಗಿದ್ದು, ಅರಣ್ಯ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ್ದಾರೆ ಎಂದು ಅಂಕರಾಜ್ ಹೇಳಿದ್ದಾರೆ.
ಹನೂರು ಘಟನೆ ಕುರಿತು ತನಿಖೆ ಹಾಗೂ ಕಾನೂನು ಪ್ರಕ್ರಿಯೆಗಳು ಮುಂದುವರಿಯುತ್ತಿರುವ ಸಂದರ್ಭದಲ್ಲಿ, ನಿವೃತ್ತ ಅರಣ್ಯ ಅಧಿಕಾರಿಗಳ ಈ ಹೇಳಿಕೆಗಳು ಪ್ರಕರಣದ ಮತ್ತೊಂದು ಮುಖವನ್ನು ಮುಂದಿಟ್ಟಿವೆ. ಮೃತರು ಬೇಟೆಗಾರರೇ ಅಥವಾ ರೈತರೇ, ಮೊದಲು ಗುಂಡು ಹಾರಿಸಿದವರು ಯಾರು ಮತ್ತು ಅರಣ್ಯ ಸಿಬ್ಬಂದಿಯ ಪ್ರತಿದಾಳಿ ಕಾನೂನುಬದ್ಧವಾಗಿತ್ತೇ ಎಂಬ ಪ್ರಶ್ನೆಗಳಿಗೆ ತನಿಖೆಯ ಮೂಲಕವೇ ಅಂತಿಮ ಉತ್ತರ ದೊರೆಯಬೇಕಿದೆ.

