Grihalakshmi money deposited in the deceaseds account: Strict order to get it back!
x

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ ಮಾತನಾಡಿದರು. 

ಮೃತರ ಖಾತೆಗೆ ಹಾಕಿರುವ 'ಗೃಹಲಕ್ಷ್ಮಿ' ಹಣ ವಾಪಸ್ ಪಡೆಯಲು ಆದೇಶ!

ಫಲಾನುಭವಿಗಳು ಮರಣ ಹೊಂದಿದ ನಂತರವೂ ಎಷ್ಟು ತಿಂಗಳು ಅವರ ಖಾತೆಗೆ ಹಣ ಜಮೆಯಾಗಿದೆಯೋ, ಅಷ್ಟು ಹಣವನ್ನು ಕಡ್ಡಾಯವಾಗಿ ವಾಪಸ್ ಪಡೆಯಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಆದೇಶಿಸಿದೆ.


Click the Play button to hear this message in audio format

ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ‘ಗೃಹಲಕ್ಷ್ಮಿ’ ಯೋಜನೆಯ ಹಣವನ್ನು ಮರಣ ಹೊಂದಿದ ಮಹಿಳೆಯರ ಬ್ಯಾಂಕ್ ಖಾತೆಗಳಿಗೂ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದ್ದು, ಇಂತಹ ಖಾತೆಗಳನ್ನು ತಕ್ಷಣವೇ ಪತ್ತೆ ಹಚ್ಚಿ ಹಣ ಬಿಡುಗಡೆ ಸ್ಥಗಿತಗೊಳಿಸುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.

ಪ್ರತಿ ತಿಂಗಳು 200 ಕೋಟಿ ರೂ. ದುರುಪಯೋಗ?

ರಾಜ್ಯದಲ್ಲಿ ಪ್ರತಿ ತಿಂಗಳು ಅಂದಾಜು 200 ಕೋಟಿ ರೂ. ಅಧಿಕ ಗೃಹಲಕ್ಷ್ಮಿ ಯೋಜನೆಯ ಹಣ ಮೃತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿದೆ. ಈ ಕುರಿತು ಈಗಾಗಲೇ ರಾಜ್ಯಮಟ್ಟದ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು, ಎಲ್ಲಾ ಜಿಲ್ಲೆಗಳಲ್ಲೂ ಮೃತರ ಖಾತೆಗಳ ಮಾಹಿತಿ ಕಲೆಹಾಕಿ ಹಣ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.

"ಫಲಾನುಭವಿಗಳು ಮರಣ ಹೊಂದಿದ ನಂತರವೂ ಎಷ್ಟು ತಿಂಗಳು ಅವರ ಖಾತೆಗೆ ಹಣ ಜಮೆಯಾಗಿದೆಯೋ, ಅಷ್ಟು ಹಣವನ್ನು ಕಡ್ಡಾಯವಾಗಿ ವಾಪಸ್ ಪಡೆಯಬೇಕು. ಮೃತರ ಹೆಸರಿನಲ್ಲಿ ಬೇರೆಯವರು ಸರ್ಕಾರದ ಹಣವನ್ನು ಬಳಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಅಧಿಕಾರಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ವರದಿ ನೀಡಬೇಕು." ಎಂದು ಸಮಿತಿಯ ಅಧ್ಯಕ್ಷ ರಾಜಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನ್ನಭಾಗ್ಯ ದಂಧೆಗೆ ಬ್ರೇಕ್‌

ದೊಡ್ಡಬಳ್ಳಾಪುರದಲ್ಲಿ ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಂಗ್ರಹಿಸಲಾಗಿತ್ತು. ಬಡವರಿಗೆ ಸಿಗಬೇಕಾದ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳ ಶೈಕ್ಷಣಿಕ ಸೌಲಭ್ಯ, ಅಂಗವಿಕಲರ ಪಿಂಚಣಿ ಸೇರಿದಂತೆ ಇತರೆ ಅಗತ್ಯ ಕೆಲಸಗಳಿಗೆ ರೇಷನ್ ಕಾರ್ಡ್ ಅತ್ಯಗತ್ಯವಾಗಿದೆ. ಆದರೆ ಜಿಲ್ಲೆಯಲ್ಲಿ ಏಕಾಏಕಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿರುವುದು ಸರಿಯಲ್ಲ. ಅರ್ಹರಿಗೆ ಮತ್ತೆ ಕಾರ್ಡ್ ನೀಡಬೇಕು ಎಂದು ಒತ್ತಾಯಿಸಿದರು.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದ್ದರೂ, ಗ್ರಾಮೀಣ ಭಾಗದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬೇಡಿಕೆಗೆ ಅನುಗುಣವಾಗಿ ಹೆಚ್ಚುವರಿ ಸರ್ಕಾರಿ ಬಸ್ ಒದಗಿಸಬೇಕು. ದೇವನಹಳ್ಳಿ ಹಾಗೂ ವಿಜಯಪುರ ಟೌನ್‌ನಲ್ಲಿ ಹೈಟೆಕ್ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಲು ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಉದ್ಯೋಗ ಮೇಳ

ಜಿಲ್ಲಾ ಪಂಚಾಯತ್ ಸಿಇಒ ಡಾ. ವಸಂತಿ ಅಮರ್ ಮಾತನಾಡಿ, "ಪಂಚ ಗ್ಯಾರಂಟಿಗಳಲ್ಲಿ ಒಂದಾದ ‘ಯುವನಿಧಿ’ ಯೋಜನೆಯಡಿ ಕೇವಲ ಭತ್ಯೆ ನೀಡುವುದಷ್ಟೇ ಅಲ್ಲದೆ ಯುವಕರಿಗೆ ಉದ್ಯೋಗ ಒದಗಿಸುವುದು ನಮ್ಮ ಆದ್ಯತೆಯಾಗಬೇಕು. ಆಯಾ ತಾಲೂಕು ಮಟ್ಟದಲ್ಲಿ ಸ್ಥಳೀಯ ಶಾಸಕರು ಮತ್ತು ಖಾಸಗಿ ಕಂಪನಿಗಳ ಮುಖ್ಯಸ್ಥರ ಸಭೆ ಕರೆದು 'ಉದ್ಯೋಗ ಮೇಳ' ಆಯೋಜಿಸಬೇಕು. ಉದ್ಯೋಗಾವಕಾಶಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲು ಕಂಪನಿಗಳಿಗೆ ಸೂಚಿಸಬೇಕು" ಎಂದು ತಾಲೂಕು ಇಒಗಳಿಗೆ ಆದೇಶಿಸಿದರು.

Read More
Next Story