ಗೃಹ ಜ್ಯೋತಿ ಯೋಜನೆ : ಮನೆ-ಮನೆ ಸಮೀಕ್ಷೆಯ ಅವಧಿ ಸೆ.30ರವರೆಗೆ ವಿಸ್ತರಣೆ
x

ಗೃಹ ಜ್ಯೋತಿ ಯೋಜನೆ : ಮನೆ-ಮನೆ ಸಮೀಕ್ಷೆಯ ಅವಧಿ ಸೆ.30ರವರೆಗೆ ವಿಸ್ತರಣೆ

ಜು.1ರಿಂದ ರಾಜ್ಯವ್ಯಾಪಿ ಮನೆ-ಮನೆ ಸಮೀಕ್ಷೆ ನಡೆಯುತ್ತಿದೆ. ಸಮೀಕ್ಷೆಯು ಇನ್ನೂ ಬಾಕಿ ಇರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.


Click the Play button to hear this message in audio format

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಯ ಅವಧಿಯನ್ನು ರಾಜ್ಯ ಸರ್ಕಾರವು ಸೆಪ್ಟೆಂಬರ್ 30ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲು ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಕೋರಿದೆ.

2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದ ಗೃಹ ಜ್ಯೋತಿ ಯೋಜನೆಯು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ವಿದ್ಯುತ್ ಬಿಲ್‌ನ ಹೊರೆಯನ್ನು ತಗ್ಗಿಸಿದೆ. ಯೋಜನೆಯ ಫಲಾನುಭವಿಗಳ ದತ್ತಾಂಶವನ್ನು ನವೀಕರಿಸಲು ಮತ್ತು ಅರ್ಹತೆಯನ್ನು ಖಚಿತಪಡಿಸಿಕೊಳ್ಳಲು ಕಳೆದ ಜುಲೈ 1ರಿಂದ ರಾಜ್ಯವ್ಯಾಪಿ ಮನೆ-ಮನೆ ಸಮೀಕ್ಷೆ ನಡೆಯುತ್ತಿದೆ. ಮೂಲತಃ ಈ ಪ್ರಕ್ರಿಯೆಯನ್ನು ಆಗಸ್ಟ್ 31ರೊಳಗೆ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿತ್ತು. ಆದರೆ, ಸಮೀಕ್ಷೆಯು ಇನ್ನೂ ಬಾಕಿ ಇರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.

ಪ್ರಗತಿಯ ಅಂಕಿ-ಅಂಶಗಳು

ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಈವರೆಗೆ ನಡೆದಿರುವ ಸಮೀಕ್ಷೆಯ ವಿವರಗಳನ್ನು ಗಮನಿಸಿದರೆ, ಒಟ್ಟು 68,86,860 ಫಲಾನುಭವಿಗಳ ಪೈಕಿ ಆಗಸ್ಟ್ 31ರವರೆಗೆ 46,70,588 ಫಲಾನುಭವಿಗಳ ಸಮೀಕ್ಷೆ ಪೂರ್ಣಗೊಂಡಿದೆ. ಅಂದರೆ, ಸುಮಾರು ಶೇ. 70ರಷ್ಟು ಕಾರ್ಯ ಮುಕ್ತಾಯಗೊಂಡಿದೆ. ಉಳಿದ ಶೇ. 30ರಷ್ಟು ಫಲಾನುಭವಿಗಳನ್ನು ತಲುಪಲು ಈ ವಿಸ್ತರಣಾ ಅವಧಿ ನಿರ್ಣಾಯಕವಾಗಿದೆ. ಬೆಂಗಳೂರು ನಗರದ ಕೆಲವು ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಫಲಾನುಭವಿಗಳು ಸಮೀಕ್ಷೆಗಾಗಿ ತೆರಳುವ ಸಿಬ್ಬಂದಿಯೊಂದಿಗೆ ಸಹಕರಿಸುತ್ತಿಲ್ಲ ಎಂಬ ದೂರುಗಳು ಬೆಸ್ಕಾಂಗೆ ಬಂದಿವೆ. ಭದ್ರತಾ ಕಾರಣಗಳು ಅಥವಾ ಸಿಬ್ಬಂದಿ ಬರುವ ಸಮಯದಲ್ಲಿ ಮನೆಗಳಲ್ಲಿ ಯಾರೂ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ಅವರು ಮನವಿ ಮಾಡಿದ್ದು, ಸೆಪ್ಟೆಂಬರ್ 1ರಿಂದ ಮೀಟರ್ ರೀಡರ್‌ಗಳು ವಿದ್ಯುತ್ ಸ್ಥಾವರಗಳ ರೀಡಿಂಗ್ ತೆಗೆದುಕೊಳ್ಳಲು ಮನೆಗಳಿಗೆ ಬರುವಾಗ, ಸಮೀಕ್ಷೆಗೆ ಬಾಕಿ ಇರುವವರು ತಮ್ಮ ಅಗತ್ಯ ದಾಖಲೆಗಳನ್ನು ಒದಗಿಸಿ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ಡೋರ್ ಲಾಕ್ ಮನೆಗಳಿಗೆ ವಿಶೇಷ ವ್ಯವಸ್ಥೆ

ಸಮೀಕ್ಷೆಯ ವೇಳೆ ಹಲವು ಮನೆಗಳು ಬೀಗ ಹಾಕಿದ ಸ್ಥಿತಿಯಲ್ಲಿರುವುದು ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದನ್ನು ನಿವಾರಿಸಲು ಸರ್ಕಾರ ಮತ್ತು ಬೆಸ್ಕಾಂ ತಾಂತ್ರಿಕ ಪರಿಹಾರಗಳನ್ನು ರೂಪಿಸಿದೆ. ಸಿಬ್ಬಂದಿಯ ಮೊಬೈಲ್ ಆಪ್‌ಗಳಲ್ಲಿ ಡೋರ್ ಲಾಕ್ ಆಪ್ಷನ್ ನೀಡಲಾಗಿದೆ. ಬೀಗ ಹಾಕಿರುವ ಮನೆಗಳಿಗೆ ಸಿಬ್ಬಂದಿಯವರು ಬೇರೆ ಬೇರೆ ಸಮಯದಲ್ಲಿ ಕನಿಷ್ಠ ಮೂರು ಬಾರಿ ಭೇಟಿ ನೀಡಬೇಕು. ಪ್ರತಿ ಬಾರಿಯೂ ಆ ಸ್ಥಳದ ಅಕ್ಷಾಂಶ ಮತ್ತು ರೇಖಾಂಶವನ್ನು ಕಡ್ಡಾಯವಾಗಿ ನಮೂದಿಸಬೇಕು. ಸಿಬ್ಬಂದಿ ಆಪ್‌ನಲ್ಲಿ ಡೋರ್ ಲಾಕ್ ಎಂದು ನಮೂದಿಸಿದ ತಕ್ಷಣ, ಫಲಾನುಭವಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮೀಟರ್ ರೀಡರ್‌ನ ಹೆಸರು ಮತ್ತು ಮೊಬೈಲ್ ಸಂಖ್ಯೆ ಒಳಗೊಂಡ ಸಂದೇಶ ರವಾನೆಯಾಗುತ್ತದೆ. ಇದರಿಂದ ಫಲಾನುಭವಿಗಳೇ ಸಿಬ್ಬಂದಿಯನ್ನು ಸಂಪರ್ಕಿಸಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ಖಾಲಿ ಇರುವ ಮನೆಗಳ ಪರಿಶೀಲನೆ

ಯಾವುದೇ ಸ್ಥಾವರವನ್ನು ಖಾಲಿ ಎಂದು ಘೋಷಿಸುವ ಮೊದಲು, ಸಿಬ್ಬಂದಿಯವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಸ್ಥಳದ ಭೌಗೋಳಿಕ ಮಾಹಿತಿ ದಾಖಲಿಸಿದ ನಂತರವಷ್ಟೇ ಆಪ್‌ನಲ್ಲಿ 'VACANT' ಎಂದು ನಮೂದಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದು ಯೋಜನೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

ಸಹಾಯವಾಣಿ ಮತ್ತು ಸಂಪರ್ಕ

ಸಮೀಕ್ಷೆಯ ಕುರಿತು ಯಾವುದೇ ಗೊಂದಲಗಳಿದ್ದರೆ ಅಥವಾ ಮಾಹಿತಿಗಾಗಿ ಸಾರ್ವಜನಿಕರು ಬೆಸ್ಕಾಂ ನಿಗಮ ಕಚೇರಿಯ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು. ಸಂಪರ್ಕ ಸಂಖ್ಯೆಗಳು: 9480816111, 9480816112, 9480816113, 9480816114. 'ಗೃಹ ಜ್ಯೋತಿ' ಯೋಜನೆಯು ಸರ್ಕಾರದ ಪ್ರತಿಷ್ಠಿತ ಯೋಜನೆಯಾಗಿದ್ದು, ಇದರ ಸದುಪಯೋಗ ಪಡೆಯಲು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬ ಫಲಾನುಭವಿಯ ಕರ್ತವ್ಯವಾಗಿದೆ. ದಾಖಲೆಗಳನ್ನು ನೀಡದಿರುವುದರಿಂದ ಯೋಜನೆಯ ಪ್ರಯೋಜನ ಕಡಿತವಾಗುವ ಸಾಧ್ಯತೆ ಇರುವುದರಿಂದ, ಬೆಸ್ಕಾಂ ಸಿಬ್ಬಂದಿಗೆ ಸೂಕ್ತ ದಾಖಲೆಗಳನ್ನು ನೀಡಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ಸರ್ಕಾರ ಸೂಚಿಸಿದೆ. ಈ ಅವಧಿ ವಿಸ್ತರಣೆಯು ನಾಗರಿಕರಿಗೆ ಮತ್ತೊಂದು ಅವಕಾಶವನ್ನು ನೀಡಿದ್ದು, ಸೆಪ್ಟೆಂಬರ್ 30ರೊಳಗೆ ತಮ್ಮ ಹೆಸರನ್ನು ದತ್ತಾಂಶದಲ್ಲಿ ಅಪ್‌ಡೇಟ್ ಮಾಡಿಸಿಕೊಳ್ಳುವ ಮೂಲಕ ಯೋಜನೆಯ ನಿರಂತರ ಪ್ರಯೋಜನ ಪಡೆಯಬೇಕಾಗಿದೆ.


Read More
Next Story