
ಗೃಹ ಜ್ಯೋತಿ ಪರಿಶೀಲನೆ; ಪ್ರವರ್ಗ ಮಾಹಿತಿ ಕಡ್ಡಾಯವಲ್ಲ; ಬೆಸ್ಕಾಂ ಸ್ಪಷ್ಟನೆ
ಜಾತಿ ಪ್ರಮಾಣಪತ್ರದ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಪ್ರಶ್ನೆಗಳು ಮತ್ತು ಗೊಂದಲಗಳ ಹಿನ್ನೆಲೆಯಲ್ಲಿ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.
ರಾಜ್ಯಾದ್ಯಂತ ಜುಲೈ 1ರಿಂದ ಆರಂಭವಾಗಿರುವ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ವೇಳೆ ಸಂಗ್ರಹಿಸಲಾಗುತ್ತಿರುವ ಮಾಹಿತಿಯಲ್ಲಿ ಫಲಾನುಭವಿಯ ಪ್ರವರ್ಗ ವಿವರ ಕಡ್ಡಾಯವಲ್ಲ, ಅದು ಸಂಪೂರ್ಣವಾಗಿ ಐಚ್ಛಿಕ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಸ್ಪಷ್ಟಪಡಿಸಿದೆ.
ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಬೆಸ್ಕಾಂ ಸಿಬ್ಬಂದಿ ಹಾಗೂ ಮೀಟರ್ ರೀಡರ್‌ಗಳು ಸೇವಾ ಸಿಂಧು ಮೊಬೈಲ್ ಅಪ್ಲಿಕೇಷನ್ ಹಾಗೂ ಮುದ್ರಿತ ಘೋಷಣಾ ಪತ್ರದ ಮೂಲಕ ಮನೆಗಳಿಗೆ ತೆರಳಿ ಸಂಗ್ರಹಿಸುತ್ತಿದ್ದಾರೆ. ಈ ವೇಳೆ ಕೇಳಲಾಗುತ್ತಿರುವ ಪ್ರವರ್ಗ (ಜಾತಿ ಪ್ರಮಾಣಪತ್ರ) ಮಾಹಿತಿ ಕಡ್ಡಾಯವಲ್ಲ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಜಾತಿ ಪ್ರಮಾಣಪತ್ರದ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಪ್ರಶ್ನೆಗಳು ಮತ್ತು ಗೊಂದಲಗಳ ಹಿನ್ನೆಲೆಯಲ್ಲಿ ಬೆಸ್ಕಾಂ ಈ ಸ್ಪಷ್ಟನೆ ನೀಡಿದೆ.
ಯಾವುದೇ ಫಲಾನುಭವಿಗಳು ಜಾತಿ ಸಂಬಂಧಿತ ಮಾಹಿತಿ ನೀಡಲು ಇಚ್ಛಿಸದಿದ್ದರೆ, ಸೇವಾ ಸಿಂಧು ಮೊಬೈಲ್ ಅಪ್ಲಿಕೇಷನ್‌ನಲ್ಲಿ ಇರುವ 'ಮಾಹಿತಿ ನೀಡಲು ನಿರಾಕರಣೆ' ಆಯ್ಕೆಯನ್ನು ನಮೂದಿಸುವಂತೆ ಸಿಬ್ಬಂದಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ.
ಬಿಜೆಪಿ ಆಕ್ಷೇಪವೇನು?
ಗೃಹ ಜ್ಯೋತಿ ಯೋಜನೆಯ ಮರುಪರಿಶೀಲನೆ ವೇಳೆ ಫಲಾನುಭವಿಗಳಿಂದ ಪ್ಯಾನ್ ಕಾರ್ಡ್ ಹಾಗೂ ಜಾತಿ ಪ್ರಮಾಣಪತ್ರದ ಮಾಹಿತಿಯನ್ನು ಕೇಳಲಾಗುತ್ತಿದೆ ಎಂದು ಆರೋಪಿಸಿದ್ದ ಪ್ರತಿಪಕ್ಷ ಬಿಜೆಪಿ, ಸರ್ಕಾರವು ಆದಾಯ ಮತ್ತು ಜಾತಿಯ ಆಧಾರದ ಮೇಲೆ ಫಲಾನುಭವಿಗಳನ್ನು ವಿಂಗಡಿಸಲು ಮುಂದಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.
ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಫಲಾನುಭವಿಯ ಗುರುತು ಪರಿಶೀಲನೆಗೆ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಸಾಕಾಗಿದ್ದಾಗ, ಪ್ಯಾನ್ ಕಾರ್ಡ್ ಹಾಗೂ ಜಾತಿ ಪ್ರಮಾಣಪತ್ರದ ಮಾಹಿತಿ ಏಕೆ ಬೇಕು ಎಂದು ಪ್ರಶ್ನಿಸಿದ್ದರು. ಉಚಿತ ವಿದ್ಯುತ್ ಯೋಜನೆಯ ಫಲಾನುಭವಿಗಳನ್ನು ಕಡಿಮೆ ಮಾಡುವ ಉದ್ದೇಶದಿಂದಲೇ ಸರ್ಕಾರ ಈ ಪರಿಶೀಲನೆ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದರು.
ಈ ಆಕ್ಷೇಪಗಳಿಗೆ ಪ್ರತಿಕ್ರಿಯಿಸಿರುವ ಬೆಸ್ಕಾಂ, ಪ್ರವರ್ಗ (ಜಾತಿ) ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಪುನರುಚ್ಚರಿಸಿದ್ದು, ಮಾಹಿತಿ ನೀಡಲು ಇಚ್ಛಿಸದ ಫಲಾನುಭವಿಗಳ ಆಯ್ಕೆಯನ್ನು ಗೌರವಿಸುವಂತೆ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಏನಿದು ಗೃಹ ಜ್ಯೋತಿ ಪರಿಶೀಲನೆ?
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹ ಜ್ಯೋತಿ ಯೋಜನೆ ಜಾರಿಯಾಗಿ 3 ವರ್ಷಗಳಾಗಿರುವ ಹಿನ್ನೆಲೆಯಲ್ಲಿ, ಯೋಜನೆಯ ಪ್ರಯೋಜನಗಳು ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುತ್ತಿವೆಯೇ ಮತ್ತು ಯೋಜನೆಯ ದುರುಪಯೋಗ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ವ್ಯಾಪ್ತಿಯಲ್ಲಿ ಜುಲೈ 1ರಿಂದ ಆಗಸ್ಟ್ 31ರವರೆಗೆ ಮನೆ-ಮನೆ ಪರಿಶೀಲನೆ ನಡೆಸಲಾಗುತ್ತಿದೆ.
ಈ ಪರಿಶೀಲನೆಯ ವೇಳೆ ಮೀಟರ್ ರೀಡರ್‌ಗಳು ಮತ್ತು ಎಸ್ಕಾಂ ಸಿಬ್ಬಂದಿ ಫಲಾನುಭವಿಯ ಮನೆಗೆ ಭೇಟಿ ನೀಡಿ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪ್ಯಾನ್ ಕಾರ್ಡ್ (ಅನ್ವಯಿಸಿದರೆ), ಬಾಡಿಗೆ ಅಥವಾ ಲೀಸ್ ಒಪ್ಪಂದ (ಅನ್ವಯಿಸಿದರೆ), ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ ಸೇರಿದಂತೆ ಫಲಾನುಭವಿಯ ವಿವರಗಳನ್ನು ಸೇವಾ ಸಿಂಧು ಮೊಬೈಲ್ ಅಪ್ಲಿಕೇಷನ್‌ನಲ್ಲಿ ನವೀಕರಿಸುತ್ತಿದ್ದಾರೆ. ಫಲಾನುಭವಿ ಮನೆಯಲ್ಲಿ ಇಲ್ಲದಿದ್ದರೆ, ಕುಟುಂಬದ ಸದಸ್ಯರಿಂದ ದೃಢೀಕರಣ ಪಡೆಯುವ ಅವಕಾಶವೂ ಕಲ್ಪಿಸಲಾಗಿದೆ.
ಈ ಪರಿಶೀಲನಾ ಕಾರ್ಯಕ್ಕಾಗಿ ಮೀಟರ್ ರೀಡರ್‌ಗಳನ್ನು ನಿಯೋಜಿಸಿರುವ ಕಾರಣ ಜುಲೈ ತಿಂಗಳಲ್ಲಿ ನಿಯಮಿತ ಮೀಟರ್ ರೀಡಿಂಗ್ ನಡೆಸಲಾಗುತ್ತಿಲ್ಲ. ಬದಲಿಗೆ ಕಳೆದ ಮೂರು ತಿಂಗಳ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಬಿಲ್ ನೀಡಲಾಗುತ್ತಿದ್ದು, ಆಗಸ್ಟ್‌ನಲ್ಲಿ ನೈಜ ಮೀಟರ್ ರೀಡಿಂಗ್ ಆಧರಿಸಿ ಹೊಂದಾಣಿಕೆ ಮಾಡಲಾಗುತ್ತದೆ.

