x

ಫ್ರೀಡಂ ಪಾರ್ಕ್‌ನಲ್ಲಿ ಭುಗಿಲೆದ್ದ ಆಕ್ರೋಶ; 'ನೀಟ್' ಅಕ್ರಮದ ವಿರುದ್ಧ ಸಿಡಿದೆದ್ದ ಬೆಂಗಳೂರಿನ ವಿದ್ಯಾರ್ಥಿಗಳು

ಪ್ರತಿಭಟನೆಯ ನಡುವೆ 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡುತ್ತಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ವಿದ್ಯಾರ್ಥಿಯೊಬ್ಬರು ವ್ಯವಸ್ಥೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು.


Click the Play button to hear this message in audio format

ನೀಟ್ (NEET) ಪರೀಕ್ಷೆಯಲ್ಲಿನ ಬೃಹತ್ ಅಕ್ರಮಗಳು ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಅನ್ನು ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಂಗಳವಾರ ವಿದ್ಯಾರ್ಥಿಗಳ ಆಕ್ರೋಶದ ಕಟ್ಟೆ ಒಡೆದಿತ್ತು.

"ಭ್ರಷ್ಟಾಚಾರ ಮುಕ್ತ ಪರೀಕ್ಷೆಗಳು ಬೇಕು", "ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು" ಎಂಬ ಫಲಕಗಳನ್ನು ಹಿಡಿದ ನೂರಾರು ವಿದ್ಯಾರ್ಥಿಗಳು, ಯುವಜನರು ಹಾಗೂ ಸಾಮಾಜಿಕ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಫ್ರೀಡಂ ಪಾರ್ಕ್ ಆವರಣವು ವಿದ್ಯಾರ್ಥಿಗಳ ನ್ಯಾಯದ ಪರವಾದ ಹೋರಾಟದ ವೇದಿಕೆಯಾಗಿ ಮಾರ್ಪಟ್ಟಿತ್ತು.

'ನಮ್ಮ ಶ್ರಮಕ್ಕೆ ನ್ಯಾಯ ಬೇಕು'

ಪ್ರತಿಭಟನೆಯ ನಡುವೆ 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡುತ್ತಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ವಿದ್ಯಾರ್ಥಿಯೊಬ್ಬರು ವ್ಯವಸ್ಥೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. "ನೀಟ್ ಪರೀಕ್ಷೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಎರಡು-ಮೂರು ವರ್ಷಗಳ ಕಾಲ ಕಠಿಣ ಪರಿಶ್ರಮ ಪಟ್ಟು ಓದಿದ ನಮ್ಮ ಶ್ರಮಕ್ಕೆ ಬೆಲೆಯೇ ಇಲ್ಲವೇ? ರೈತರ ಮತ್ತು ಬಡ ಕುಟುಂಬಗಳ ಮಕ್ಕಳ ವೈದ್ಯರಾಗುವ ಕನಸನ್ನು ಈ ಪ್ರಶ್ನೆಪತ್ರಿಕೆ ಸೋರಿಕೆ ಹಾಳು ಮಾಡುತ್ತಿದೆ. ಇದರ ಸಂಪೂರ್ಣ ಹೊಣೆಗಾರಿಕೆಯನ್ನು ಸರ್ಕಾರವೇ ವಹಿಸಬೇಕು. ನಮ್ಮ ಶ್ರಮಕ್ಕೆ ನ್ಯಾಯ ಸಿಗಲೇಬೇಕು" ಎಂದು ಕಣ್ಣೀರಿಟ್ಟರು.

'ಐದು ನಿಮಿಷ ತಡವಾದರೆ ಪ್ರವೇಶ ಇಲ್ಲ, ಪೇಪರ್ ಲೀಕ್ ಆದರೆ ಕ್ರಮವಿಲ್ಲ'

ವ್ಯವಸ್ಥೆಯ ದ್ವಂದ್ವ ನೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮತ್ತೊಬ್ಬ ಪ್ರತಿಭಟನಾಕಾರರು 'ದ ಫೆಡರಲ್ ಕರ್ನಾಟಕ'ದ ಕ್ಯಾಮೆರಾ ಮುಂದೆ ತಮ್ಮ ನೋವನ್ನು ತೋಡಿಕೊಂಡರು. "ಪರೀಕ್ಷಾ ಕೇಂದ್ರಕ್ಕೆ ಐದು ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗಳಿಗೆ ಒಳಗೆ ಪ್ರವೇಶ ನೀಡುವುದಿಲ್ಲ. ವಿದ್ಯಾರ್ಥಿಗಳ ಮೇಲೆ ಅಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸುವ ಸರ್ಕಾರ, ಇಡೀ ಪ್ರಶ್ನೆಪತ್ರಿಕೆಯೇ ಸೋರಿಕೆಯಾದಂತಹ ಗಂಭೀರ ಪ್ರಕರಣಗಳಲ್ಲಿ ಹೊಣೆಗಾರರ ವಿರುದ್ಧ ತ್ವರಿತ ಕ್ರಮವೇಕೆ ಕೈಗೊಳ್ಳುತ್ತಿಲ್ಲ?" ಎಂದು ಅವರು ನೇರವಾಗಿ ಪ್ರಶ್ನಿಸಿದರು.

ದೆಹಲಿ ಲಾಠಿಚಾರ್ಜ್‌ಗೆ ತೀವ್ರ ಖಂಡನೆ

ಪರೀಕ್ಷಾ ಅಕ್ರಮ ನಡೆದಿರುವುದನ್ನು ಸರ್ಕಾರವೇ ಒಪ್ಪಿಕೊಂಡಿದೆ. ಆದರೆ, ಅದರ ನೈತಿಕ ಹೊಣೆ ಹೊರುವ ಬದಲು, ಪ್ರಜಾಪ್ರಭುತ್ವದ ಅಡಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡಿರುವುದು ಖಂಡನೀಯ ಎಂದು ಸ್ಥಳದಲ್ಲಿದ್ದ ಸಾಮಾಜಿಕ ಕಾರ್ಯಕರ್ತರು ಕಿಡಿಕಾರಿದರು.

ಯುವಕರ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?'

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಕೀಲೆಯೊಬ್ಬರು 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡುತ್ತಾ ಸರ್ಕಾರದ ಮೌನವನ್ನು ಕಟುವಾಗಿ ಟೀಕಿಸಿದರು. "ದೇಶದಲ್ಲಿ ಗಂಭೀರ ಸಮಸ್ಯೆಗಳು ಎದುರಾದಾಗ ಸರ್ಕಾರ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ. ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಲೇಬೇಕು. ದೇಶದ ವಿದ್ಯಾರ್ಥಿಗಳ ಆತಂಕವನ್ನು ಸರ್ಕಾರ ಇನ್ನಾದರೂ ಗಂಭೀರವಾಗಿ ಪರಿಗಣಿಸಬೇಕು" ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು

ಫ್ರೀಡಂ ಪಾರ್ಕ್‌ನಲ್ಲಿ ಜಮಾಯಿಸಿದ ಹೋರಾಟಗಾರರು ಸರ್ಕಾರದ ಮುಂದೆ ಪ್ರಮುಖವಾಗಿ ಮೂರು ಬೇಡಿಕೆಗಳನ್ನು ಮುಂದಿಟ್ಟರು: ನೀಟ್ ಪರೀಕ್ಷಾ ಅಕ್ರಮದಿಂದ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ಶೀಘ್ರ ನ್ಯಾಯ ದೊರಕಿಸಿಕೊಡಬೇಕು. ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣವೇ ರಾಜೀನಾಮೆ ನೀಡಬೇಕು. ನೀಟ್ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಿ, ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೊಳಿಸಬೇಕು.

ಇದರ ಜೊತೆಗೆ, ಅಕ್ರಮಗಳಿಂದಾಗಿ ಮಾನಸಿಕವಾಗಿ ಕುಗ್ಗಿ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಲಡಾಖ್‌ನ ಪರಿಸರವಾದಿ ಸೋನಂ ವಾಂಗ್ಚುಕ್ ಅವರ ಹೋರಾಟಕ್ಕೂ ಬೆಂಬಲ ನೀಡಬೇಕೆಂದು ಆಗ್ರಹಿಸಿದರು.

ಎಎಪಿ (AAP) ಬೆಂಬಲ ಹಾಗೂ ಮುಂದಿನ ಹೋರಾಟದ ಎಚ್ಚರಿಕೆ

ಈ ವಿದ್ಯಾರ್ಥಿ ಚಳವಳಿಗೆ ಆಮ್ ಆದ್ಮಿ ಪಕ್ಷದ (AAP) ಕರ್ನಾಟಕ ರಾಜ್ಯ ಘಟಕದ ಮುಖಂಡರೂ ಸಾಥ್ ನೀಡಿದರು. ಸ್ಥಳಕ್ಕೆ ಧಾವಿಸಿದ ಮುಖಂಡರು, ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ ತರುವಂತೆ ಸರ್ಕಾರವನ್ನು ಒತ್ತಾಯಿಸಿದರು.

ದೆಹಲಿಯಲ್ಲಿ ಶುರುವಾದ ಈ ಕಿಚ್ಚು ಈಗ ಕರ್ನಾಟಕಕ್ಕೂ ವ್ಯಾಪಿಸಿದ್ದು, ಕೇಂದ್ರ ಸರ್ಕಾರ ಶೀಘ್ರವೇ ಎಚ್ಚೆತ್ತುಕೊಂಡು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಳ್ಳಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬೆಂಗಳೂರಿನ ವಿದ್ಯಾರ್ಥಿ ಸಮುದಾಯ ರವಾನಿಸಿದೆ.

Read More
Next Story