ಗೃಹಜ್ಯೋತಿ ಅನರ್ಹರ ಪತ್ತೆಗೆ ಮನೆ ಸಮೀಕ್ಷೆ: ಉಚಿತ ವಿದ್ಯುತ್ ಯೋಜನೆಗೆ ಕತ್ತರಿ?
ಗೃಹಜ್ಯೋತಿ ಯೋಜನೆ ಅನರ್ಹರ ಪತ್ತೆಗೆ ರಾಜ್ಯಾದ್ಯಂತ ಮನೆ ಸಮೀಕ್ಷೆ ಆರಂಭವಾಗಿದ್ದು, ವೋಟರ್ ಐಡಿ ಕಡ್ಡಾಯಗೊಳಿಸಲಾಗಿದೆ. ಉದ್ಯೋಗ ಖಾತರಿ ವೇತನ 300 ರೂ.ಗೆ ಏರಿಕೆಯಾಗಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಜ್ಯೋತಿ’ ಯೋಜನೆಯ ನೈಜ ಫಲಾನುಭವಿಗಳನ್ನು ಗುರುತಿಸುವ ಸಲುವಾಗಿ ಇಂಧನ ಇಲಾಖೆಯು ರಾಜ್ಯಾದ್ಯಂತ ಸಮೀಕ್ಷೆಯನ್ನು ಬುಧವಾರದಿಂದ (ಜುಲೈ ೧) ಆರಂಭಿಸಿದೆ.
ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು ಹಾಗೂ ಕಲಬುರಗಿ ವ್ಯಾಪ್ತಿಯ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಮತ್ತು ಜೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂ ವ್ಯಾಪ್ತಿಗಳಲ್ಲಿ ಈ ದಾಖಲೆಗಳ ಪರಿಶೀಲನೆ ಕಾರ್ಯ ಚುರುಕಿನಿಂದ ಸಾಗಿದೆ. ಯೋಜನೆ ಆರಂಭವಾದ ಸಂದರ್ಭದಲ್ಲಿ ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಲಾಗಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಅನರ್ಹರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಪುನರ್ಪರಿಶೀಲನೆ ಕೈಗೊಳ್ಳಲಾಗಿದೆ. ಎಸ್ಕಾಂ ಮೀಟರ್ ರೀಡರ್‌ಗಳು ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ವಿಶೇಷ ಮೊಬೈಲ್ ಆ್ಯಪ್ ಮೂಲಕ ಮೀಟರ್ ಸಂಖ್ಯೆ ಮತ್ತು ಖಾತೆ ವಿವರಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ.
ಇದರೊಂದಿಗೆ ಫಲಾನುಭವಿಗಳಿಂದ ಘೋಷಣಾ ಪತ್ರವನ್ನು ಭರ್ತಿ ಮಾಡಿಸಿಕೊಳ್ಳಲಾಗುತ್ತಿದೆ. ಗುರುತಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಿಳಾಸದ ಪುರಾವೆ, ಬಾಡಿಗೆದಾರರಾಗಿದ್ದರೆ ಕರಾರು ಪತ್ರ ಹಾಗೂ ಪ್ರಮುಖವಾಗಿ ಕರ್ನಾಟಕದ ಮತದಾರರ ಚೀಟಿಯನ್ನು ಕಡ್ಡಾಯವಾಗಿ ಕೇಳಲಾಗುತ್ತಿದೆ. ಹೊರರಾಜ್ಯದವರು ಈ ಯೋಜನೆಯ ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಯಲು ವೋಟರ್ ಐಡಿಯನ್ನು ಪ್ರಮುಖ ಮಾನದಂಡವಾಗಿಸಲಾಗಿದೆ.
ಸುಳ್ಳು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ದೃಢಪಟ್ಟರೆ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಯೋಜನೆಯಿಂದ ಕೈಬಿಡಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಆದರೆ ಸರ್ಕಾರದ ಈ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣೆಗೆ ಮುನ್ನ ಎಲ್ಲರಿಗೂ ಉಚಿತ ಎಂದಿದ್ದ ಸರ್ಕಾರ, ಈಗ ಖಜಾನೆ ದಿವಾಳಿಯಾಗಿರುವುದನ್ನು ಮುಚ್ಚಿಕೊಳ್ಳಲು ಫಲಾನುಭವಿಗಳ ಸಂಖ್ಯೆಗೆ ಕತ್ತರಿ ಹಾಕುತ್ತಿದೆ ಎಂದು ಆರೋಪಿಸಿದೆ.
"ನಾವು ಗೃಹಜ್ಯೋತಿ ಯೋಜನೆಯ ಅರ್ಹರನ್ನು ಗುರುತಿಸಲು ಪ್ರತಿಯೊಬ್ಬರಿಗೂ ಒಂದು ಫಾರ್ಮ್ ನೀಡುತ್ತಿದ್ದೇವೆ. ಅದನ್ನು ಭರ್ತಿ ಮಾಡಿಕೊಟ್ಟ ನಂತರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ. ಒಂದೇ ಮನೆಯಲ್ಲಿ ಎರಡು ಆರ್‌ಆರ್ ನಂಬರ್ ಇರಲು ಸಾಧ್ಯವಿಲ್ಲ ಮತ್ತು ಕಮರ್ಷಿಯಲ್ ಉದ್ದೇಶಕ್ಕೆ ಬಳಸುವವರಿಗೆ ರೆಸಿಡೆನ್ಶಿಯಲ್ ಸೌಲಭ್ಯ ಸಿಗುವುದಿಲ್ಲ. ಆ ಫಾರ್ಮ್ ಬಂದ ಮೇಲೆ ನಾವು ವಿಚಾರಣೆ ನಡೆಸಿ ಯಾರು ಅರ್ಹರಲ್ಲವೋ ಅವರನ್ನು ಮಾತ್ರ ಯೋಜನೆಯಿಂದ ಕೈಬಿಡುತ್ತೇವೆ, " ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
"ನಾವು ಕರ್ನಾಟಕದ ಜನರಿಗಾಗಿ ಈ ಗ್ಯಾರಂಟಿಗಳನ್ನು ನೀಡುತ್ತಿರುವುದು, ಹೊರಗಿನ ರಾಜ್ಯದವರಿಗಲ್ಲ. ಕರ್ನಾಟಕ ರಾಜ್ಯದಲ್ಲಿ ಯಾರಿಗೆ ಮತದಾನದ ಹಕ್ಕಿದೆಯೋ ಅವರಿಗೆ ಈ ಸೌಲಭ್ಯ ಸಿಗಬೇಕು. ಇಲ್ಲಿನ ಜನರಿಗೆ ಇದರ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ಕ್ಯಾಬಿನೆಟ್‌ನಲ್ಲಿ ಎಲ್ಲರಿಗೂ ಐಡೆಂಟಿಫಿಕೇಶನ್ ಕಾರ್ಡ್ ಪರಿಶೀಲಿಸಲು ತೀರ್ಮಾನಿಸಲಾಗಿದೆ," ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕಾಂಪೌಂಡ್ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿ ಮೂವರ ದುರ್ಮರಣ
ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗೋರಿಯಲ್ಲಿ ಬುಧವಾರ ಮುಂಜಾನೆ ದುರಂತವೊಂದು ಸಂಭವಿಸಿದೆ. ಗಾರವಾಡಿಯ ಮಾರಿಲ್ ಹೌಸ್ ಬಳಿ ಮುಂಜಾನೆ 4:45ರ ಸುಮಾರಿಗೆ ಎತ್ತರದ ಜಾಗದಲ್ಲಿದ್ದ ಕಾಂಪೌಂಡ್ ಗೋಡೆಯೊಂದು ಏಕಾಏಕಿ ಕುಸಿದು ಕೆಳಗಿದ್ದ ಹೆಂಚಿನ ಮನೆಗಳ ಮೇಲೆ ಬಿದ್ದಿದೆ. ಈ ಘಟನೆಯಲ್ಲಿ ನೆಮ್ಮದಿಯಾಗಿ ನಿದ್ರಿಸುತ್ತಿದ್ದ ಹೆಂಚಿನ ಮನೆಯ ನಾಲ್ಕು ಗೋಡೆಗಳು ಧರಾಶಾಹಿಯಾಗಿದ್ದು, ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿದಂತೆ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಮೃತರನ್ನು ಏಳು ವರ್ಷದ ಅನಾಮಿಕ, ನಾಲ್ಕು ವರ್ಷದ ಪರಿ ಮತ್ತು 35 ವರ್ಷದ ಶಾಂತಾ ಎಂದು ಗುರುತಿಸಲಾಗಿದೆ.
ಘಟನೆ ನಡೆದ ತಕ್ಷಣ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಚರಣೆ ನಡೆಸಿ ಗಾಯಾಳುಗಳನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಕೊನೆಯುಸಿರೆಳೆದಿದ್ದಾರೆ. ಬಾಲಕಿಯರ ಪೋಷಕರಾದ ಲಾಲ್ಬು, ಇಂದು ಮತ್ತು ಮತ್ತೊಂದು ಕುಟುಂಬದ ಬಾಲಕೃಷ್ಣ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಕ ಮತ್ತು ಅನುಷ್ಕ ಎಂಬ ಇಬ್ಬರು ಹೆಣ್ಣುಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಭೇಟಿ ನೀಡಿ ಪರಿಶೀಲಿಸಿದ್ದು, ದೆಹಲಿ ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಮಂಗಳೂರಿಗೆ ಧಾವಿಸಿದ್ದಾರೆ. ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಮೃತರ ಕುಟುಂಬಗಳಿಗೆ ತಕ್ಷಣದ ಪರಿಹಾರ ಘೋಷಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಕರಾವಳಿಯಲ್ಲಿ ಮಳೆ ಹೆಚ್ಚಾಗಿದ್ದರೆ, ಬಯಲುಸೀಮೆ ಮತ್ತು ಉತ್ತರ ಕರ್ನಾಟಕದಲ್ಲಿ ಮಳೆಯ ಅಭಾವ ತಲೆದೋರಿದ್ದು, ಜುಲೈ ಅಂತ್ಯದ ವೇಳೆಗೆ ಪರಿಸ್ಥಿತಿ ಸುಧಾರಿಸದಿದ್ದರೆ ಬರಪೀಡಿತ ತಾಲೂಕುಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕಂದಾಯ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
"ಈಗ ಜುಲೈನಲ್ಲಿ ಎಷ್ಟು ದಿವಸ ಮಳೆ ಬರಲಿಲ್ಲ, ಅದರಿಂದ ಎಷ್ಟು ಕ್ರಾಪ್ ಲಾಸ್ (ಬೆಳೆ ಹಾನಿ) ಆಗಿದೆ ಮತ್ತು ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬುದನ್ನೆಲ್ಲಾ ನಾವು ಲೆಕ್ಕ ಹಾಕುತ್ತೇವೆ. ಇದೆಲ್ಲವನ್ನೂ ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಯಾವ ತಾಲೂಕು ಅಥವಾ ಜಿಲ್ಲೆಯಲ್ಲಿ ಅಭಾವವಿದೆಯೋ ಅದನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡುತ್ತೇವೆ," ಎಂದು ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.
ಗ್ರಾಮೀಣ ಕಾರ್ಮಿಕರ ವೇತನ ಹೆಚ್ಚಳ
ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾಗ್ಯೂ, ಇಂದಿನಿಂದ ಜುಲೈ 1 ರಿಂದ ದೇಶಾದ್ಯಂತ ‘ವಿಬಿಜಿ ರಾಮ್‌ಜಿ’ (ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ ಗ್ರಾಮೀಣ) ಕಾಯ್ದೆಯು ಅಧಿಕೃತವಾಗಿ ಜಾರಿಗೆ ಬಂದಿದೆ. ಕೇಂದ್ರ ಸರ್ಕಾರದ ವಿಕಸಿತ ಭಾರತ ಪರಿಕಲ್ಪನೆಯಡಿ ಜಾರಿಯಾಗಿರುವ ಈ ಕಾಯ್ದೆಯು ಗ್ರಾಮೀಣ ಭಾಗದ ಶ್ರಮಿಕ ವರ್ಗಕ್ಕೆ ದೊಡ್ಡ ಸಿಹಿ ಸುದ್ದಿ ನೀಡಿದೆ. ಈ ಹೊಸ ಅಧಿಸೂಚನೆಯನ್ವಯ ದೇಶದ ಯಾವುದೇ ರಾಜ್ಯದಲ್ಲಿ ಗ್ರಾಮೀಣ ಕಾರ್ಮಿಕರ ಕನಿಷ್ಠ ದೈನಂದಿನ ವೇತನ 300 ರೂಪಾಯಿಗಳಿಗಿಂತ ಕಡಿಮೆ ಇರಬಾರದು ಎಂದು ಕಡ್ಡಾಯಗೊಳಿಸಲಾಗಿದೆ. ಈ ಹಿಂದೆ ನರೇಗಾ ಯೋಜನೆಯಡಿ ದೇಶದ ಸರಾಸರಿ ವೇತನ 298 ರೂಪಾಯಿ ಇತ್ತು, ಆದರೆ ಹೊಸ ಕಾಯ್ದೆಯಡಿ ಕನಿಷ್ಠ ವೇತನದ ಸರಾಸರಿ 327 ರೂಪಾಯಿಗಳಿಗೆ ಏರಿಕೆಯಾಗಿದ್ದು, ಇದು ಶೇಕಡಾ 10 ಕ್ಕಿಂತಲೂ ಹೆಚ್ಚಿನ ಹೆಚ್ಚಳವನ್ನು ತಂದಿದೆ. ಕರ್ನಾಟಕ, ಕೇರಳ, ಹರಿಯಾಣ, ಪಂಜಾಬ್‌ನಂತಹ ರಾಜ್ಯಗಳಲ್ಲಿ ದೈನಂದಿನ ವೇತನ ದರವು 360 ರಿಂದ 400 ರೂಪಾಯಿಗಳವರೆಗೆ ಏರಿಕೆಯಾಗಿದೆ.
ದೇಶದ ಸುಮಾರು 21 ರಾಜ್ಯಗಳಲ್ಲಿ ಈ ಹಿಂದೆ ಕೇವಲ 240 ರೂಪಾಯಿ ಆಸುಪಾಸಿನಲ್ಲಿದ್ದ ವೇತನವನ್ನು ನೇರವಾಗಿ 300 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶಗಳಲ್ಲಿ ಶೇಕಡಾ 15 ರಿಂದ 25 ರಷ್ಟು ವೇತನ ಪರಿಷ್ಕರಣೆಯಾಗಿದೆ. ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್‌ನಲ್ಲಿ ಗರಿಷ್ಠ ಅಂದರೆ ಶೇಕಡಾ 24.5 ರಷ್ಟು ವೇತನ ಹೆಚ್ಚಳ ಕಂಡಿದೆ.
ವೇತನ ಹೆಚ್ಚಳ ಮಾತ್ರವಲ್ಲದೆ, ಈ ಕಾಯ್ದೆಯು ಗ್ರಾಮೀಣ ಕುಟುಂಬಗಳಿಗೆ ವರ್ಷದಲ್ಲಿ ಕನಿಷ್ಠ 125 ದಿನಗಳ ಉದ್ಯೋಗ ಖಾತರಿಯನ್ನು ಒದಗಿಸುತ್ತದೆ. ಈ ಹೆಚ್ಚುವರಿ ಉದ್ಯೋಗದ ದಿನಗಳು ಮತ್ತು ಪರಿಷ್ಕೃತ ವೇತನ ದರಗಳು ಗ್ರಾಮೀಣ ಭಾಗದ ಆರ್ಥಿಕ ಭದ್ರತೆ ಹಾಗೂ ಸಮಗ್ರ ಅಭಿವೃದ್ಧಿಗೆ ಮತ್ತು 2047ರ ವಿಕಸಿತ ಭಾರತದ ಗುರಿ ತಲುಪಲು ದಾರಿದೀಪವಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.


