
ವಿಕ್ಟೋರಿಯಾ ಆಸ್ಪತ್ರೆ
ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ; ಫುಟ್‌ಪಾತ್‌ನಲ್ಲೇ ನರಳಿ ಪ್ರಾಣಬಿಟ್ಟ ಡೆಲಿವರಿ ಬಾಯ್
ಆಪರೇಷನ್ ವಿಭಾಗ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ನಡುವಿನ ಸಮನ್ವಯ ಕೊರತೆಯಿಂದಾಗಿ ರೋಗಿಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ವೈದ್ಯೋ ನಾರಾಯಣ ಹರಿಃ ಎನ್ನುವ ಇಂದಿನ ಸಮಾಜದಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಡೆಲಿವರಿ ಬಾಯ್ ಬಲಿಯಾದ ಘಟನೆಯು ಆರೋಗ್ಯ ವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ಮರ್ಮಾಂಗದ ಸೋಂಕಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ 45 ವರ್ಷದ ಡೆಲಿವರಿ ಬಾಯ್ ನವಾಜ್ ಅವರ ಸ್ಥಿತಿ ಗಂಭೀರವಾಗಿದ್ದರೂ ಸರಿಯಾದ ಚಿಕಿತ್ಸೆ ಸಿಗದ ಕಾರಣ ಒತ್ತಡಕ್ಕೊಳಗಾಗಿ, ಫುಟ್‌ಪಾತ್ ಮೇಲೆಯೇ ನರಳಿ ಮೃತಪಟ್ಟಿರುವುದು ಬೆಚ್ಚಿ ಬೀಳಿಸಿದೆ. ಬೇಕಾಬಿಟ್ಟಿ ಚಿಕಿತ್ಸೆ ನೀಡುವ ಮೂಲಕ ಜನರ ಜೀವದ ಜೊತೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನವಾಜ್, ಮರ್ಮಾಂಗದಲ್ಲಿ ಗಡ್ಡೆ ಕಾಣಿಸಿಕೊಂಡ ಹಿನ್ನೆಲೆ ಕಳೆದ ಒಂದೂವರೆ ತಿಂಗಳ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಾಗಿದ್ದರು. ವೈದ್ಯರು ಇದನ್ನು ಸೋಂಕು (Infection) ಎಂದು ಗುರುತಿಸಿ ಸಣ್ಣ ಶಸ್ತ್ರಚಿಕಿತ್ಸೆ ಮಾಡಿದ್ದರು. ನಂತರ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಅಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡಿಲ್ಲ ಎಂಬುದು ಪೋಷಕರ ದೂರಾಗಿದೆ.
ವೈದ್ಯರ ವಿರುದ್ಧ ಆರೋಪವೇನು?
ಶಸ್ತ್ರಚಿಕಿತ್ಸೆ ವಿಭಾಗ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಿಬ್ಬಂದಿ ನಡುವಿನ ಸಮನ್ವಯತೆ ಕೊರತೆಯಿಂದ ರೋಗಿಗೆ ಸೂಕ್ತ ಚಿಕಿತ್ಸೆ ಸಿಗಲಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮರ್ಮಾಂಗದ ಶಸ್ತ್ರ ಚಿಕಿತ್ಸೆ ವೇಳೆ ಸರಿಯಾದ ಹೊಲಿಗೆ ಹಾಕಿರಲಿಲ್ಲ, ಗಾಯ ಮಾಯದಿದ್ದರೂ ಆಸ್ಪತ್ರೆ ಸಿಬ್ಬಂದಿ ರೋಗಿಯನ್ನು ಬಲವಂತವಾಗಿ ಡಿಸ್‌ಚಾರ್ಜ್ ಮಾಡಿದ್ದಾರೆ. ಈ ನೋವಿನಿಂದಲೇ ರೋಗಿ ಮೃತಪಟ್ಟಿದ್ದಾರೆ ಎಂದು ವೈದ್ಯರ ವಿರುದ್ಧ ರೋಗಿಯ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಫುಟ್‌ಪಾತ್‌ನಲ್ಲಿ ಮೂರು ದಿನ ನರಳಾಟ
ಆಸ್ಪತ್ರೆಯಿಂದ ಹೊರಕಳುಹಿಸಿದ ನಂತರ ನವಾಜ್ ಅವರ ಪತ್ನಿಯು ಆಸ್ಪತ್ರೆ ಎದುರಿನ ಫುಟ್‌ಪಾತ್‌ನಲ್ಲೇ ಇದ್ದು, ಮೂರು ದಿನಗಳ ಕಾಲ ಚಿಕಿತ್ಸೆಗಾಗಿ ಅಂಗಲಾಚಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗದ ಹಿನ್ನೆಲೆ ಮರ್ಮಾಂಗದ ತೀವ್ರ ನೋವು ಮತ್ತು ರಕ್ತಸ್ರಾವದಿಂದಾಗಿ ನವಾಜ್ ಮೃತಪಟ್ಟಿದ್ಧಾರೆ ಎಂದು ಹೇಳಲಾಗಿದೆ.
ತನಿಖೆಗೆ ತಜ್ಞರ ಸಮಿತಿ
ಘಟನೆಯು ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ವಿಕ್ಟೋರಿಯಾ ಆಸ್ಪತ್ರೆ ಆಡಳಿತ ಮಂಡಳಿ, ಪ್ರಕರಣದ ಕುರಿತು ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ದೀಪಕ್, "ನವಾಜ್ ಅವರ ಪೋಷಕರು ನಮಗೆ ಮಾಹಿತಿ ನೀಡಿದ್ದಾರೆ. ರೋಗಿಯನ್ನು ಬಲವಂತವಾಗಿ ಡಿಸ್ಚಾರ್ಜ್ ಮಾಡಲಾಗಿದೆ ಮತ್ತು ಗಂಭೀರ ಸ್ಥಿತಿಯಲ್ಲೂ ಚಿಕಿತ್ಸೆ ನೀಡಿಲ್ಲ ಎಂಬ ಆರೋಪಗಳಿವೆ. ಸಮಿತಿಯ ತನಿಖಾ ವರದಿ ಆಧಾರದ ಮೇಲೆ ವೈದ್ಯರ ಅಥವಾ ಸಿಬ್ಬಂದಿಯ ನಿರ್ಲಕ್ಷ್ಯ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದ್ದಾರೆ.
ಈ ಅಮಾನವೀಯ ಘಟನೆಯಿಂದಾಗಿ ನಾಲ್ಕು ಮಕ್ಕಳಿರುವ ನವಾಜ್ ಅವರ ಕುಟುಂಬವೀಗ ಬೀದಿಗೆ ಬಿದ್ದಿದೆ. ತಮಗೆ ನ್ಯಾಯ ಸಿಗಬೇಕೆಂದು ಗೋಳಾಡುತ್ತಿದ್ದಾರೆ. ಒಂದು ಕುಟುಂಬದ ಆಧಾರಸ್ತಂಭವನ್ನೇ ಕಳೆದುಕೊಂಡಿದ್ದು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

