Opposition to book release on Umar Khalid in city; BJP workers arrested
x

ಪ್ರತಿಭಟನಾನಿರತ ಬಿಜೆಪಿ ಯುವ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. 

ನಗರದಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ಬಿಡುಗಡೆಗೆ ವಿರೋಧ; ಬಿಜೆಪಿ ಕಾರ್ಯಕರ್ತರ ಬಂಧನ

ದೆಹಲಿ ಬಾಂಬ್‌ ಸ್ಫೋಟದಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಇಂದಿಗೂ ಜೈಲುಶಿಕ್ಷೆ ಅನುಭವಿಸುತ್ತಿರುವ ಆರೋಪಿಯನ್ನು ವೈಭವೀಕರಿಸುವ ಅಗತ್ಯವೇನಿತ್ತು ಎಂದು ಬಿಜೆಪಿ ಪ್ರಶ್ನಿಸಿದೆ.


Click the Play button to hear this message in audio format

2020 ರ ದೆಹಲಿ ದಂಗೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ತಿಹಾರ್ ಜೈಲಿನಲ್ಲಿರುವ ಉಗ್ರ ಉಮರ್ ಖಾಲಿದ್ ಕುರಿತ ಪುಸ್ತಕ ಬಿಡುಗಡೆಗೆ ರಾಜ್ಯ ಸರ್ಕಾರ ಅವಕಾಶ ನೀಡಿದ್ದನ್ನು ವಿರೋಧಿಸಿ ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮಂಗಳವಾರ(ಏ.28) ದೊಮ್ಮಲೂರಿನ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ಬಳಿ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾನಿರತ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್‌, "ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಲಾಗಿತ್ತು. ದೇಶದ್ರೋಹಿ ಉಮರ್ ಖಾಲಿದ್ 2020 ರ ದೆಹಲಿ ದಂಗೆಯ ಪ್ರಮುಖ ಆಪಾದಿತ. ಅಂದು ನಡೆದ ಸ್ಫೋಟದಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಇಂದಿಗೂ ಜೈಲುಶಿಕ್ಷೆ ಅನುಭವಿಸುತ್ತಿರುವ ಆರೋಪಿಯನ್ನು ವೈಭವೀಕರಿಸುವ ಅಗತ್ಯವೇನಿತ್ತು" ಎಂದು ಪ್ರಶ್ನಿಸಿದರು.

ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ಬೇಡ

ಕಾರ್ಯಕ್ರಮ ಆಯೋಜಕರು ದೇಶದ್ರೋಹಿಗಳಾದ ಕಸಾಬ್, ಸಂಸತ್ತಿನ ದಾಳಿಕೋರರನ್ನು ವೈಭವೀಕರಿಸುವ ಕೆಲಸ ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಲ್ಲಿ ಇಂತಹ ಕಾರ್ಯಕ್ರಮಕ್ಕೆ ಅನುಮತಿ ಸಿಗುವುದಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಇಂತಹ ಭಯೋತ್ಪಾದಕರ ಬಗ್ಗೆ ಮೃದುಧೋರಣೆ ಹೊಂದಿದೆ. ಆದ್ದರಿಂದಲೇ ಇಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪುಸ್ತಕ ಬಿಡುಗಡೆಗೆ ವಿರೋಧ

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎನ್.ರವಿಕುಮಾರ್ ಮಾತನಾಡಿ, "ದೆಹಲಿ ಗಲಭೆ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿತನಾಗಿರುವ ಉಮರ್ ಖಾಲಿದ್ ಹಾಗೂ ಶಾರ್ಜಿಲ್ ಇಮಾಮ್ ಕುರಿತ ಪುಸ್ತಕ ಬಿಡುಗಡೆಗೆ ನಮ್ಮ ವಿರೋಧವಿದೆ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು" ಎಂದು ಆಗ್ರಹಿಸಿದರು.

ಭಯೋತ್ಪಾದಕರ ಕುರಿತು ಪುಸ್ತಕ ಬಿಡುಗಡೆಗೆ ಸಿದ್ಧತೆ ನಡೆದಿದೆ. 2020ರ ಫೆಬ್ರವರಿಯಲ್ಲಿ ನಡೆದ ದೆಹಲಿ ಗಲಭೆ ಸಂಬಂಧ ಸುಪ್ರೀಂ ಕೋರ್ಟ್ ಇವರಿಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಶಾರ್ಜೀಲ್ ಇಮಾಮ್‌ನನ್ನು ಸಿಎಎ ಮತ್ತು ಎನ್‍ಆರ್‌ಸಿ ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಮಾಡಿದ ಭಾಷಣಗಳಿಗಾಗಿ ಬಂಧಿಸಲಾಗಿದೆ. ಎನ್‌ಆರ್‌ಸಿ ಮತ್ತು ಸಿಎಎ ವಿರುದ್ಧ ಹೋರಾಟದ ಸಂದರ್ಭ ಬಾಂಬ್ ಸ್ಫೋಟದಲ್ಲಿ 53 ಜನರ ಹತ್ಯೆಯಾಗಿತ್ತು. ಸುಮಾರು 700 ಜನರು ಗಾಯಗೊಂಡಿದ್ದರು. ಈಗ ಇವರ ಬಗ್ಗೆಯೇ ಪುಸ್ತಕ ಬಿಡುಗಡೆ ಮಾಡುತ್ತಿರುವುದು ಸರಿಯಲ್ಲ ಎಂದರು.

Read More
Next Story