Massive protest rally at Freedom Park on Thursday against voter list revision
x

ಸಾಂದರ್ಭಿಕ ಚಿತ್ರ

SIR| ಮತದಾರರ ಪಟ್ಟಿ ಪರಿಷ್ಕರಣೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ ನಾಳೆ

ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಇದೇ ಪರಿಸ್ಥಿತಿ ನಾಳೆ ಕರ್ನಾಟಕಕ್ಕೂ ಬರುವ ಆತಂಕವಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

'ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ' ಪ್ರಕ್ರಿಯೆ ವಿರುದ್ಧ ಗುರುವಾರ (ಏ.23) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ಜಾತ್ಯಾತೀತ ಪಕ್ಷಗಳ ನೇತೃತ್ವದಲ್ಲಿ ಬೃಹತ್ 'SIR ವಿರೋಧಿ ಪ್ರತಿಭಟನಾ ಸಮಾವೇಶ' ನಡೆಯಲಿದೆ.

ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ದೇಶದ ಪ್ರಜಾತಂತ್ರ ವ್ಯವಸ್ಥೆಯ ಬುನಾದಿಯನ್ನೇ ಅಲುಗಾಡಿಸುತ್ತಿರುವ ಈ ಎಸ್‌ಐಆರ್‌ ಪ್ರಕ್ರಿಯೆ ಕರ್ನಾಟಕದಲ್ಲೂ ನಡೆದರೆ ದೊಡ್ಡ ಗಂಡಾಂತರ ಎದುರಾಗಲಿದೆ ಎಂದು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

"ಒಬ್ಬ ಅರ್ಹ ಮತದಾರನನ್ನು ಮತಪಟ್ಟಿಯಿಂದ ಕೈಬಿಟ್ಟರೂ ಕರ್ನಾಟಕ ಸಹಿಸುವುದಿಲ್ಲ" ಎಂಬ ಘೋಷಣೆಯೊಂದಿಗೆ, ರಾಜ್ಯದಲ್ಲಿ ಈ ಪ್ರಕ್ರಿಯೆಯನ್ನು ಮುಂದುವರಿಸಲು ಅವಕಾಶ ನೀಡುವುದಿಲ್ಲ ಎಂದು ಸಂಘಟನೆಗಳು ಪಟ್ಟು ಹಿಡಿದಿವೆ. ಈ ಪ್ರಕ್ರಿಯೆಯು ಸಂವಿಧಾನಬಾಹಿರ ಎಂದು ವಾದಿಸುತ್ತಿರುವ ಪ್ರತಿಭಟನಾಕಾರರು, ತಕ್ಷಣವೇ ಎಸ್‌ಐಆರ್‌ ಪ್ರಕ್ರಿಯೆ ಸ್ಥಗಿತ ಮಾಡುವಂತೆ ಒತ್ತಾಯಿಸಿದ್ದಾರೆ.

ಪ್ರತಿಭಟನೆಯ ಏಕೆ ?

ದೇಶದಾದ್ಯಂತ ಎಸ್‌ಐಆರ್‌ ಪ್ರಕ್ರಿಯೆಯ ಮೂಲಕ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಕರ್ನಾಟಕದಲ್ಲೂ ಸಹ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಆತುರಾತುರವಾಗಿ ನಡೆಯುತ್ತಿದ್ದು, ಇದು ಮುಂಬರುವ ದಿನಗಳಲ್ಲಿ ಪ್ರಜಾತಂತ್ರದ ಅಸ್ತಿತ್ವಕ್ಕೆ ಧಕ್ಕೆ ತರಲಿದೆ ಎಂಬುದು ಸಂಘಟನೆಗಳ ಆತಂಕವಾಗಿದೆ. ಸಮಾವೇಶದಲ್ಲಿ ಸಮಾಜದ ವಿವಿಧ ಸ್ತರಗಳ ಹೋರಾಟಗಾರರು, ಬುದ್ಧಿಜೀವಿಗಳು ಮತ್ತು ರಾಜಕೀಯ ನಾಯಕರು ಭಾಗವಹಿಸಿ, ಮತದಾರರ ಹಕ್ಕುಗಳನ್ನು ರಕ್ಷಿಸುವಂತೆ ಆಗ್ರಹಿಸಲಿದ್ದಾರೆ.

ಏನಿದು ಎಸ್‌ಐಆರ್‌?

ಭಾರತೀಯ ಚುನಾವಣಾ ಆಯೋಗವು ಕೈಗೊಂಡಿರುವ 'ವಿಷೇಶ ತೀವ್ರ ಪರಿಷ್ಕರಣೆ'. ಈ ಪ್ರಕ್ರಿಯೆಯಿಂದ ಅನರ್ಹ ಮತದಾರರನ್ನು ತೆಗೆದುಹಾಕಲಾಗುವುದು ಎಂದು ಹೇಳುತ್ತಿದೆ. ಆದರೆ ವಿರೋಧ ಪಕ್ಷಗಳು ಮತ್ತು ಹೋರಾಟಗಾರರು ಇದು ರಾಷ್ಟ್ರೀಯ ಪೌರತ್ವ ನೋಂದಣಿ ಮಾದರಿಯ ಪರೋಕ್ಷ ಪ್ರಯತ್ನ ಎಂದು ಆರೋಪಿಸುತ್ತಿವೆ. ಅನೇಕ ಕಡೆಗಳಲ್ಲಿ ವಯಸ್ಸಿನ ವ್ಯತ್ಯಾಸ, ದಾಖಲೆಗಳ ಕೊರತೆ ಕಾರಣ ನೀಡಿ ಮತದಾರರ ಹೆಸರನ್ನು ಡಿಲೀಟ್ ಮಾಡಲಾಗುತ್ತಿದೆ ಎಂಬ ಆರೋಪವಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದು, ವಿಚಾರಣೆಗಳು ನಡೆಯುತ್ತಿವೆ. ಸುಪ್ರೀಂಕೋರ್ಟ್‌ ತೀರ್ಪು ಬರುವವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಬಾರದು ಎಂದು ಹೋರಾಟಗಾರರು ತಮ್ಮ ಬೇಡಿಕೆ ಇಟ್ಟಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಪ್ರಮುಖರು

ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆ ವಿರುದ್ಧ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌, ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಎಚ್‌.ಆರ್‌. ಬಸವರಾಜಪ್ಪ, ಎಐಟಿಯುಸಿ ರಾಜ್ಯಾಧ್ಯಕ್ಷ ಬಾಬು ಮ್ಯಾಥ್ಯೂ ಹಾಗೂ ಹಿರಿಯ ವಕೀಲ ಎಸ್‌. ಬಾಲನ್‌ ಸೇರಿದಂತೆ ಹಲವು ಸಂಘಟನೆಗಳ ಮುಖ್ಯಸ್ಥರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಗತಿಪರ ಸಂಘಟನೆಗಳು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story