Peenya Flyover to be closed for 4 days from May 5; Here are the details of alternative routes
x

ಪೀಣ್ಯ ಫ್ಲೈಓವರ್‌

ಮೇ 5 ರಿಂದ 4 ದಿನ ಪೀಣ್ಯ ಫ್ಲೈ ಓವರ್‌ ಬಂದ್‌; ಬದಲಿ ಮಾರ್ಗಗಳ ವಿವರ ಇಲ್ಲಿದೆ..

ಫ್ಲೈ ಓವರ್‌ ಸುಸ್ಥಿತಿ ಪರಿಶೀಲಿಸಲು ಅಂತಿಮ ಹಂತದ 'ಲೋಡ್ ಟೆಸ್ಟ್' ನಡೆಸಲಾಗುತ್ತಿದೆ. ಮೇಲ್ಸೇತುವೆಯ ಮೇಲೆ ಭಾರವಾದ ವಾಹನಗಳನ್ನು ನಿಲ್ಲಿಸಿ ಅದರ ತಾಂತ್ರಿಕ ಸಾಮರ್ಥ್ಯವನ್ನು ತಜ್ಞರು ಅಳೆಯಲಿದ್ದಾರೆ.


Click the Play button to hear this message in audio format

ತುಮಕೂರು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಮೇ 5 ರಿಂದ ನಾಲ್ಕು ದಿನ ಸಂಚಾರ ದಟ್ಟಣೆಯ ಬಿಸಿ ತಟ್ಟಲಿದೆ. ಪೀಣ್ಯ ಮೇಲ್ಸೇತುವೆಯ (ಪೀಣ್ಯ ಫ್ಲೈಓವರ್) ದೃಢತೆ ಹಾಗೂ ಸುರಕ್ಷತೆ ಪರೀಕ್ಷಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಮೇ 5ರಿಂದ ಸತತ ನಾಲ್ಕು ದಿನಗಳ ಕಾಲ ಮೇಲ್ಸೇತುವೆ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮನವಿ ಮೇರೆಗೆ ಮೇ 5 ರಂದು ಬೆಳಿಗ್ಗೆ 5ರಿಂದ ಮೇ 8 ರಂದು ಬೆಳಿಗ್ಗೆ 11ಗಂಟೆಯವರೆಗೆ ಫ್ಲೈ ಓವರ್‌ನಲ್ಲಿ ಯಾವುದೇ ವಾಹನಗಳು ಸಂಚರಿಸದಂತೆ ನಿರ್ಬಂಧ ಹೇರಲಾಗಿದೆ. ಹಾಗಾಗಿ, ವಾಹನ ಸವಾರರು ಬದಲಿ ಮಾರ್ಗದಲ್ಲಿ ಸಂಚರಿಸಬೇಕು ಎಂದು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

ಏನಿದು ಲೋಡ್ ಪರೀಕ್ಷೆ?

ಫ್ಲೈಓವರ್‌ನ ಸುಸ್ಥಿತಿ ಪರಿಶೀಲಿಸಲು ಅಂತಿಮ ಹಂತದ 'ಲೋಡ್ ಟೆಸ್ಟ್' ನಡೆಸಲಾಗುತ್ತಿದೆ. ಮೇಲ್ಸೇತುವೆಯ ಮೇಲೆ ಭಾರವಾದ ವಾಹನಗಳನ್ನು ನಿಲ್ಲಿಸಿ ಅದರ ತಾಂತ್ರಿಕ ಸಾಮರ್ಥ್ಯವನ್ನು ತಜ್ಞರು ಅಳೆಯಲಿದ್ದಾರೆ. ಈ ಪ್ರಕ್ರಿಯೆಯು ಸತತ ನಾಲ್ಕು ದಿನಗಳ ಕಾಲ ನಡೆಯಲಿದ್ದು, ಆ ಅವಧಿಯಲ್ಲಿ ಮೇಲ್ಸೇತುವೆಯ ಮೇಲೆ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ನಾಲ್ಕು ಆಯ್ದ ಸ್ಪ್ಯಾನ್‌ಗಳ ಮೇಲೆ ತಲಾ 32 ಟನ್ ತೂಕದ ಎಂಟು ಟ್ರಕ್‌ಗಳನ್ನು ನಿಲ್ಲಿಸಿ ಸೇತುವೆಯ ಸಾಮರ್ಥ್ಯ ಅಳೆಯಲಾಗುತ್ತದೆ.

ಫ್ಲೈಓವರ್‌ ಮೇಲೆ ಟ್ರಕ್‌ಗಳನ್ನು ನಿಲ್ಲಿಸಿ ಪರಿಶೀಲಿಸುತ್ತಿರುವುದು. (ಸಂಗ್ರಹ ಚಿತ್ರ)

2010 ರಲ್ಲಿ ಲೋಕಾರ್ಪಣೆಗೊಂಡ ಈ 4.2 ಕಿ.ಮೀ ಉದ್ದದ ಫ್ಲೈಓವರ್, ಡಿಸೆಂಬರ್ 2021 ರಲ್ಲಿ ಕೇಬಲ್‌ಗಳ ಸವೆತದಿಂದಾಗಿ ಭಾರಿ ವಾಹನಗಳಿಗೆ ನಿಷೇಧಿಸಲಾಗಿತ್ತು. ನಂತರ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ತಜ್ಞರ ಸಮಿತಿಯ ಶಿಫಾರಸ್ಸಿನಂತೆ 32 ಕೋಟಿ ರೂ. ವೆಚ್ಚದಲ್ಲಿ ಹಳೆಯ ಕೇಬಲ್‌ಗಳನ್ನು ತೆಗೆದು ಹೊಸದಾಗಿ ಜಿಂಕ್ ಲೇಪಿತ ಮತ್ತು ಬಹು-ಪದರದ ರಕ್ಷಣೆ ಹೊಂದಿರುವ ಕೇಬಲ್‌ಗಳನ್ನು ಅಳವಡಿಸಲಾಗಿತ್ತು.

ಪರ್ಯಾಯ ಮಾರ್ಗ

ನೆಲಮಂಗಲದಿಂದ ಬೆಂಗಳೂರು ಕಡೆಗೆ ಸಂಚಾರ

ನೆಲಮಂಗಲ ಕಡೆಯಿಂದ ಬರುವ ವಾಹನಗಳು ಕೆನ್ನಮೆಟಲ್ ಫ್ಯಾಕ್ಟರಿ ಬಳಿ ಫ್ಲೈಓವರ್ ಏರುವ ಬದಲು, ಕೆಳಭಾಗದ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆ ಮೂಲಕ ಸಾಗಬೇಕು. 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್ ಮತ್ತು ಎಸ್‌ಆರ್‌ಎಸ್‌ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದು.

ನಾಗಸಂದ್ರದ ಬಳಿ ಆರಂಭವಾಗುವ ಫ್ಲೈಓವರ್‌. (ಸಂಗ್ರಹ ಚಿತ್ರ)

ನೆಲಮಂಗಲದ ಕಡೆಗೆ ಸಂಚಾರ

ನಗರದಿಂದ ಹೊರಹೋಗುವ ವಾಹನಗಳು ಗೊರಗುಂಟೆಪಾಳ್ಯದಿಂದ ಫ್ಲೈಓವರ್ ಕೆಳಭಾಗದ ಎನ್‌ಹೆಚ್-4 ರಸ್ತೆ ಮತ್ತು ಸರ್ವಿಸ್ ರಸ್ತೆಯನ್ನು ಬಳಸಬೇಕು. ಎಸ್‌ಆರ್‌ಎಸ್‌ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ ಮತ್ತು 8ನೇ ಮೈಲಿ ದಾಟಿ ಪಾರ್ಲೆ ಜಿ ಟೋಲ್ ಮೂಲಕ ಪ್ರಯಾಣ ಮುಂದುವರಿಸಬಹುದು.

ಸಂಚಾರ ದಟ್ಟಣೆಯ ಭೀತಿ

ಪೀಣ್ಯದಿಂದ ನಾಗಸಂದ್ರದವರೆಗಿನ ಈ ಮೇಲ್ಸೇತುವೆ ಮುಚ್ಚಲ್ಪಟ್ಟರೆ, ಎಲ್ಲಾ ವಾಹನಗಳು ಕೆಳಗಿನ ಸರ್ವಿಸ್ ರಸ್ತೆಯಲ್ಲೇ ಸಂಚರಿಸಬೇಕಾಗುತ್ತದೆ. ಈ ಮಾರ್ಗದಲ್ಲಿ ಐದು ಪ್ರಮುಖ ಟ್ರಾಫಿಕ್ ಸಿಗ್ನಲ್‌ಗಳಿರುವುದರಿಂದ ಭಾರಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ದಟ್ಟಣೆ ನಿರ್ವಹಿಸಲು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವುದು ಪೊಲೀಸರಿಗೆ ಅನಿವಾರ್ಯವಾಗಲಿದೆ.

ಉತ್ತರ ಕರ್ನಾಟಕದ ಸಂಪರ್ಕ ಹೆಬ್ಬಾಗಿಲು

ಬೆಂಗಳೂರಿನಿಂದ ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಮೇಲ್ಸುತುವೆ ರಾಜಧಾನಿ ಹಾಗೂ ಉತ್ತರ ಕರ್ನಾಟಕವನ್ನು ಬೆಸೆಯುವ ಮೂಲಕ ನಗರ ಟ್ರಾಫಿಕನ್ನು ಕಡಿಮೆ ಮಾಡುತ್ತದೆ. ವೇಗದೂತ ಬಸ್‌, ಲಾರಿ, ಟ್ರಕ್‌ಗಳಿಗೆ ಸಂಚಾರಕ್ಕೆ ಅನುಕೂಲವಾಗಿರುವ ಈ ಸೇತುವೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕದ ಭಾಗದ ವಾಹನಗಳ ಸುಗಮ ಸಂಚಾರಕ್ಕೆ ಉತ್ತಮ ಮಾರ್ಗವಾಗಿದೆ.

Read More
Next Story