Our Metro Yellow Line will improve the health and standard of living of Bengaluruans: IISc report
x

ನಮ್ಮ ಮೆಟ್ರೋ ಹಳದಿ ಮಾರ್ಗ

ನಮ್ಮ ಮೆಟ್ರೊ ಹಳದಿ ಮಾರ್ಗದಿಂದ ಬೆಂಗಳೂರಿಗರ ಆರೋಗ್ಯ, ಜೀವನ ಮಟ್ಟ ಸುಧಾರಣೆ: ಐಐಎಸ್‌ಸಿ ವರದಿ

ಸಂಶೋಧನಾ ತಂಡವು ಹಳದಿ ಮಾರ್ಗದ ಕಾರಿಡಾರ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 2025 ಹಾಗೂ ಮೆಟ್ರೊ ಸೇವೆ ಆರಂಭವಾದ ಆರು ತಿಂಗಳ ಬಳಿಕ ಅಂದರೆ ಮಾರ್ಚ್ 2026 ರಲ್ಲಿ ಸುಮಾರು 600 ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳ ಸಮೀಕ್ಷೆ ನಡೆಸಿತ್ತು.


Click the Play button to hear this message in audio format

ಸಿಲಿಕಾನ್ ಸಿಟಿಯ ಬಹುನಿರೀಕ್ಷಿತ 'ನಮ್ಮ ಮೆಟ್ರೊ'ದ ಹಳದಿ ಮಾರ್ಗವು ಕೇವಲ ಸುಗಮ ಸಂಚಾರಕ್ಕೆ ಮಾತ್ರವಲ್ಲದೆ, ಬೆಂಗಳೂರಿಗರ ಸಾರ್ವಜನಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (IISc) ನಡೆಸಿದ ವಿಶೇಷ ಅಧ್ಯಯನ ವರದಿ ತಿಳಿಸಿದೆ.

ಬಯೊಕಾನ್ ಫೌಂಡೇಷನ್ ಆರ್ಥಿಕ ನೆರವಿನೊಂದಿಗೆ ಐಐಎಸ್ಸಿಯ ಸುಸ್ಥಿರ ಸಾರಿಗೆ ಪ್ರಯೋಗಾಲಯವು ನಡೆಸಿದ ʼಸಾರ್ವಜನಿಕ ಆರೋಗ್ಯ ಮತ್ತು ಜೀವನದ ಗುಣಮಟ್ಟದ ಮೇಲೆ ಮೆಟ್ರೊ ಹಳದಿ ಮಾರ್ಗದ ಸಮೂಹ ಕ್ಷಿಪ್ರ ಸಾರಿಗೆ ವ್ಯವಸ್ಥೆಯ ಪ್ರಭಾವದ ಮೌಲ್ಯಮಾಪನʼ ಕುರಿತಾದ ಸಂಶೋಧನಾ ವರದಿಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ.

ರಾಷ್ಟ್ರೀಯ ವಿದ್ಯಾಲಯ (RV) ರಸ್ತೆ ಮತ್ತು ಬೊಮ್ಮಸಂದ್ರವನ್ನು ಸಂಪರ್ಕಿಸುವ ಈ ಹಳದಿ ಮಾರ್ಗದಿಂದ ಆಗಲಿರುವ ಧನಾತ್ಮಕ ಬದಲಾವಣೆಗಳನ್ನು ಈ ವರದಿ ಬಿಂಬಿಸಿದೆ. ಮೆಟ್ರೊ ಕಾರಿಡಾರ್‌ಗೆ ಸಂಬಂಧಿಸಿದಂತೆ ದೇಶದಲ್ಲೇ ಇಂತದ್ದೊಂದು ದೀರ್ಘಕಾಲೀನ ಮೌಲ್ಯಮಾಪನ ನಡೆದಿರುವುದು ಇದೇ ಮೊದಲು.

ಶೇ. 83 ರಷ್ಟು ಜನರಿಂದ ಮೆಟ್ರೋಗೆ ಜೈ !

ಸಂಶೋಧನಾ ತಂಡವು ಹಳದಿ ಮಾರ್ಗದ ಕಾರಿಡಾರ್ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 2025 ಹಾಗೂ ಮೆಟ್ರೊ ಸೇವೆ ಆರಂಭವಾದ ಆರು ತಿಂಗಳ ಬಳಿಕ ಅಂದರೆ ಮಾರ್ಚ್ 2026 ರಲ್ಲಿ ಸುಮಾರು 600 ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳ ಸಮೀಕ್ಷೆ ನಡೆಸಿತ್ತು. ಇದರಲ್ಲಿ ಶೇ. 83 ರಷ್ಟು ಜನರು ತಮ್ಮ ದಿನನಿತ್ಯದ ಸಂಚಾರಕ್ಕಾಗಿ ದ್ವಿಚಕ್ರ ವಾಹನ ಸೇರಿದಂತೆ ಇತರ ಸಾರಿಗೆಗಳ ಬದಲಾಗಿ ಮೆಟ್ರೊ ಹಳದಿ ಮಾರ್ಗ ಬಳಸಲು ತೀವ್ರ ಒಲವು ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಹೆಚ್ಚಳ

ಮೆಟ್ರೊ ಬಳಕೆಯಿಂದಾಗಿ ಪ್ರಯಾಣಿಕರಲ್ಲಿ ದೈಹಿಕ ಚಟುವಟಿಕೆ (ನಡಿಗೆ) ಹೆಚ್ಚಾಗುತ್ತಿದೆ. ಇದರೊಂದಿಗೆ ವಾಯು ಮಾಲಿನ್ಯ ಮತ್ತು ಬಿಸಿಲಿಗೆ ಒಡ್ಡಿಕೊಳ್ಳುವುದು ತಪ್ಪುತ್ತಿರುವುದರಿಂದ ಸಾರ್ವಜನಿಕ ಆರೋಗ್ಯ ಸುಧಾರಿಸುತ್ತಿದೆ. ದ್ವಿಚಕ್ರ ವಾಹನಗಳ ಅವಲಂಬನೆ ಕಡಿಮೆಯಾಗುವುದರಿಂದ ರಸ್ತೆ ಅಪಘಾತಗಳ ಅಪಾಯ ತಗ್ಗಿದೆ. ಜೊತೆಗೆ ನಿವಾಸಿಗಳಲ್ಲಿ ಮಾನಸಿಕ ಯೋಗಕ್ಷೇಮ, ಸಾಮಾಜಿಕ ಸಂಪರ್ಕ ಮತ್ತು ಕೆಲಸದ ಉತ್ಪಾದಕತೆ ಹೆಚ್ಚಿರುವುದು ಅಧ್ಯಯನದಲ್ಲಿ ದೃಢಪಟ್ಟಿದೆ.

"ಸಾರ್ವಜನಿಕ ಸಾರಿಗೆಯಲ್ಲಿ ಮಾಡುವ ಹೂಡಿಕೆಯನ್ನು ಕೇವಲ ಸಂಚಾರ ಪರಿಹಾರವಾಗಿ ನೋಡಬಾರದು. ಇದು ಸಾರ್ವಜನಿಕ ಆರೋಗ್ಯ, ಪರಿಸರ ಸುಸ್ಥಿರತೆ ಕಾಯ್ದುಕೊಳ್ಳುವ ಅತ್ಯುತ್ತಮ ವಿಧಾನ. ಬೆಂಗಳೂರಿನ ದೀರ್ಘಕಾಲೀನ ನಗರಾಭಿವೃದ್ಧಿ ಕಾರ್ಯಸೂಚಿಯಲ್ಲಿ ಸಾರ್ವಜನಿಕ ಸಾರಿಗೆ ಕೇಂದ್ರಬಿಂದುವಾಗಬೇಕು." ಎಂದು ಬಯೊಕಾನ್ ಫೌಂಡೇಷನ್‌ನ ಮಿಷನ್ ಡೈರೆಕ್ಟರ್ ಡಾ. ಅನುಪಮಾ ಶೆಟ್ಟಿ ತಿಳಿಸಿದ್ದಾರೆ.

ವರದಿಯ ಶಿಫಾರಸುಗಳೇನು ?

ಫೀಡರ್ ಸೇವೆಗಳ ಬಲವರ್ಧನೆ ಮಾಡುವ ಮೂಲಕ ಮೆಟ್ರೊ ನಿಲ್ದಾಣಗಳು ಮತ್ತು ಬಿಎಂಟಿಸಿ ಬಸ್ ನಿಲ್ದಾಣಗಳ ಮಧ್ಯೆ ಉತ್ತಮ ಸಂಪರ್ಕ ಕಲ್ಪಿಸುವುದು ಮತ್ತು ಹೆಚ್ಚುವರಿ ಬಸ್ ಸೌಲಭ್ಯ ಒದಗಿಸುವುದು. ಪ್ರಯಾಣಿಕರು ನಿಲ್ದಾಣ ತಲುಪಲು ಸುಲಭವಾಗುವಂತೆ ಕೊನೆಯ ಮೈಲಿ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವುದು. ಮೆಟ್ರೊ ನಿಲ್ದಾಣಗಳನ್ನು ಸುರಕ್ಷಿತವಾಗಿ ಪ್ರವೇಶಿಸಲು ಪಾದಚಾರಿ ಮೂಲಸೌಕರ್ಯಗಳನ್ನು ನವೀಕರಿಸುವ ಬಗ್ಗೆ ಶಿಫಾರಸು ಮಾಡಿದೆ.

ಐಐಎಸ್ಸಿ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಪ್ರೊ. ಆಶಿಶ್ ವರ್ಮಾ ನೇತೃತ್ವದ ತಂಡದಲ್ಲಿ ಡಾ. ಪ್ರಿಯಾಂಕಾ ದಾಸ್, ಆ್ಯನ್ ದಾಸ್, ಐಐಎಸ್ಸಿಯ ಪ್ರೊ. ಪ್ರಭದೀಪ್ ಕೌರ್ ಮತ್ತು ಲಂಡನ್ ಇಂಪೀರಿಯಲ್ ಕಾಲೇಜಿನ ಪ್ರೊ. ಅರುಣಾ ಶಿವಕುಮಾರ್ ಅವರು ಈ ಮಹತ್ವದ ಅಧ್ಯಯನದಲ್ಲಿ ಭಾಗಿಯಾಗಿದ್ದರು. ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ (ELCIA) ಮತ್ತು ಬೆಸ್ಟ್ ಕ್ಲಸ್ಟರ್ (BEST Cluster) ಸಹಯೋಗದೊಂದಿಗೆ ಈ ವರದಿ ಬಿಡುಗಡೆ ಮಾಡಲಾಗಿದೆ.

Read More
Next Story