
ಗುಲಾಬಿ-ನೀಲಿ ಮಾರ್ಗಕ್ಕೆ ರೈಲ್ವೆ ಮಂಡಳಿಯಿಂದ CBTC ಸಿಗ್ನಲಿಂಗ್‌ಗೆ ಹಸಿರುನಿಶಾನೆ
ಮೆಟ್ರೋ ರೈಲುಗಳ ಸಂಚಾರದಲ್ಲಿ ಸುರಕ್ಷತೆ, ವೇಗವನ್ನು ಕಾಪಾಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನವಾದ ಸಿಬಿಟಿಸಿ ಅನಿವಾರ್ಯವಾಗಿದೆ. ಇದು ರೈಲುಗಳ ಚಲನೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಿದೆ
ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಜ್ಜಾಗಿರುವ ನಮ್ಮ ಮೆಟ್ರೋದ 'ಗುಲಾಬಿ ಮಾರ್ಗ' ಮತ್ತು 'ನೀಲಿ ಮಾರ್ಗ' ಯೋಜನೆಗಳಿಗೆ ಭಾರಿ ಪ್ರಗತಿ ದೊರೆತಿದೆ. ರೈಲ್ವೆ ಮಂಡಳಿಯು ಈ ಎರಡು ಮಾರ್ಗಗಳಿಗೆ ಅತ್ಯಂತ ಮಹತ್ವದ ಸಿಬಿಟಿಸಿ (ಕಮ್ಯುನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್) ಸಿಗ್ನಲಿಂಗ್ ವ್ಯವಸ್ಥೆಗೆ ತಾಂತ್ರಿಕ ಅನುಮೋದನೆಯನ್ನು ನೀಡಿದೆ. ಈ ಬೆಳವಣಿಗೆಯು ಲಕ್ಷಾಂತರ ಪ್ರಯಾಣಿಕರ ಸಂಚಾರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ಮೆಟ್ರೋ ರೈಲುಗಳ ಸಂಚಾರದಲ್ಲಿ ಸುರಕ್ಷತೆ ಮತ್ತು ವೇಗವನ್ನು ಕಾಪಾಡಿಕೊಳ್ಳಲು ಅತ್ಯಾಧುನಿಕ ತಂತ್ರಜ್ಞಾನವಾದ ಸಿಬಿಟಿಸಿ ಅನಿವಾರ್ಯವಾಗಿದೆ. ಇದು ರೈಲುಗಳ ಚಲನೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದಲ್ಲದೆ, ಎರಡು ರೈಲುಗಳ ನಡುವೆ ಸುರಕ್ಷಿತ ಅಂತರವನ್ನು ಕಾಪಾಡಲು ಸಹಾಯ ಮಾಡುತ್ತದೆ. ರೈಲುಗಳ ಆವರ್ತನವನ್ನು ಹೆಚ್ಚಿಸಲು ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಈ ತಂತ್ರಜ್ಞಾನ ಅತ್ಯಗತ್ಯ. ಗುಲಾಬಿ ಮಾರ್ಗ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗೆ ನಿರ್ಮಾಣವಾಗುತ್ತಿದ್ದು, ಈ ಮಾರ್ಗವು ದಕ್ಷಿಣ ಬೆಂಗಳೂರನ್ನು ನಗರದ ಹೃದಯಭಾಗದೊಂದಿಗೆ ಸಂಪರ್ಕಿಸುತ್ತದೆ. ಇದು ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ನಿರ್ಣಾಯಕ ಪಾತ್ರ ವಹಿಸಲಿದೆ.
ನೀಲಿ ಮಾರ್ಗವು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಪ್ರಾರಂಭವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ವಿಸ್ತರಿಸಲಿದೆ. ಈ ಮಾರ್ಗ, ಬೆಂಗಳೂರಿನ ಟೆಕ್ ಕಾರಿಡಾರ್ ಮತ್ತು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅತ್ಯಂತ ಪ್ರತಿಷ್ಠಿತ ಯೋಜನೆಯಾಗಿದೆ.
ಬಿಎಂಆರ್‌ಸಿಎಲ್‌ನ ನಿರಂತರ ಶ್ರಮ
ಕಳೆದ ಒಂದು ತಿಂಗಳಿನಿಂದ ಬಿಎಂಆರ್‌ಸಿಎಲ್ ಅಧಿಕಾರಿಗಳು ರೈಲ್ವೆ ಮಂಡಳಿ ಮತ್ತು ಆರ್‌ಡಿಎಸ್‌ಒ (ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್) ಜತೆ ನಿರಂತರವಾಗಿ ಸಮನ್ವಯ ಸಾಧಿಸಿದ್ದಾರೆ. ಅಗತ್ಯವಿರುವ ತಾಂತ್ರಿಕ ದಾಖಲೆಗಳು, ಸುರಕ್ಷತಾ ಮಾನದಂಡಗಳು ಮತ್ತು ವಿನ್ಯಾಸಗಳನ್ನು ಮಂಡಳಿಯ ಮುಂದೆ ಮಂಡಿಸಿ, ಈ ಅನುಮೋದನೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಿಗ್ನಲಿಂಗ್ ಅನುಮೋದನೆಯು ಯೋಜನೆಯ ಕಾಮಗಾರಿಗಳಿಗೆ ವೇಗ ನೀಡಲಿದ್ದು, ಸುರಕ್ಷತಾ ಪ್ರಮಾಣೀಕರಣದ ಪ್ರಕ್ರಿಯೆಗಳನ್ನು ಸುಗಮಗೊಳಿಸಲಿದೆ. ಕೇವಲ ಸಿಗ್ನಲಿಂಗ್ ಅನುಮೋದನೆ ದೊರೆತರೆ ಸಾಲದು, ಪ್ರಯಾಣಿಕರ ಸೇವೆ ಆರಂಭಿಸಲು ಇನ್ನೂ ಹಲವು ಕಠಿಣ ಹಂತಗಳನ್ನು ಬಿಎಂಆರ್‌ಸಿಎಲ್ ದಾಟಬೇಕಿದೆ. ಆರ್‌ಡಿಎಸ್‌ಒದಿಂದ ನಿಗದಿತ ರೈಲುಗಳ ಸುರಕ್ಷಿತವಾಗಿ ಚಲಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಸಿಸಿಆರ್‌ಎಸ್ ಪರಿಶೀಲನೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಾಂತ್ರಿಕ ಮತ್ತು ಕಾನೂನುಬದ್ಧ ಪರಿಶೀಲನೆಯಾಗಿರುತ್ತದೆ. ರಸ್ತೆ ಮತ್ತು ಸಿಗ್ನಲಿಂಗ್ ವ್ಯವಸ್ಥೆಗಳ ಪರೀಕ್ಷಾರ್ಥ ಓಡಾಟವಾಗಿದೆ. ಅಂತಿಮ ಸುರಕ್ಷತಾ ಪ್ರಮಾಣಪತ್ರವನ್ನು ಎಲ್ಲಾ ಮಾನದಂಡಗಳನ್ನು ಪೂರೈಸಿದ ಬಳಿಕ ನಾಗರಿಕ ಸಂಚಾರಕ್ಕೆ ಅಂತಿಮ ಅನುಮತಿವಾಗಿದೆ. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ನಿಗಮವು ಎಲ್ಲ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದೆ ಎಂದು ನಮ್ಮ ಮೆಟ್ರೋ ಹೇಳಿದೆ.
ಪ್ರಯಾಣಿಕರಿಗೆ ಸಿಗುವ ಲಾಭಗಳು
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರವೆಂದು ಪರಿಗಣಿಸಲಾದ ಈ ಮಾರ್ಗಗಳು ಪೂರ್ಣಗೊಂಡರೆ, ಸಿಲ್ಕ್ ಬೋರ್ಡ್ ಜಂಕ್ಷನ್‌ನಂತಹ ಸಂಚಾರ ದಟ್ಟಣೆಯ ಪ್ರದೇಶಗಳಿಂದ ವಿಮಾನ ನಿಲ್ದಾಣಕ್ಕೆ ಅತ್ಯಂತ ವೇಗವಾಗಿ ತಲುಪಲು ಸಾಧ್ಯವಾಗುತ್ತದೆ. ಇದು ಸಾವಿರಾರು ಖಾಸಗಿ ವಾಹನಗಳನ್ನು ರಸ್ತೆಯಿಂದ ದೂರವಿಡಲು ಸಹಕಾರಿಯಾಗಲಿದೆ. ಪರಿಸರ ಸ್ನೇಹಿಯಾಗಿರುವ ಮೆಟ್ರೋ, ಇಂಧನ ಉಳಿತಾಯ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿಯೂ ಮಹತ್ವದ ಪಾತ್ರ ವಹಿಸಲಿದೆ. ಅನುಮೋದನೆ ಸಿಕ್ಕಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದ್ದರೂ, ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂಬುದು ನಾಗರಿಕರ ನಿರೀಕ್ಷೆಯಾಗಿದೆ.

