Metro Phase-3 | Double-decker corridor emits 17 tonnes of additional carbon per day; IISc warns!
x

ಸಾಂದರ್ಭಿಕ ಚಿತ್ರ

ಮೆಟ್ರೋ ಹಂತ-3ರ ಡಬಲ್ ಡೆಕ್ಕರ್ ಕಾರಿಡಾರ್‌ ಯೋಜನೆಗೆ ಐಐಎಸ್‌ಸಿ ಆಕ್ಷೇಪ

ಮೆಟ್ರೋದೊಂದಿಗೆ ಮೇಲ್ಸೇತುವೆ ರಸ್ತೆಯನ್ನು ನಿರ್ಮಿಸುವುದರಿಂದ ಕಾರು, ದ್ವಿಚಕ್ರ ವಾಹನಗಳ ಬಳಕೆ ಹೆಚ್ಚಲಿದೆ. ಹಾಗಾಗಿ ಮೆಟ್ರೋ ಮತ್ತು ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ!


Click the Play button to hear this message in audio format

ನಮ್ಮ ಮೆಟ್ರೋ ಹಂತ-3ರ ಅಡಿಯಲ್ಲಿ ಎಲಿವೇಟೆಡ್ ರಸ್ತೆ ಕಾರಿಡಾರ್‌ಗಳನ್ನು ಸಂಯೋಜಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತೀಯ ವಿಜ್ಞಾನ ಸಂಸ್ಥೆ (IISc) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಯೋಜನೆಗೆ ಸಂಬಂಧಿಸಿದಂತೆ ಐಐಎಸ್‌ಸಿ ನಡೆಸಿರುವ ತಾಂತ್ರಿಕ ಮೌಲ್ಯಮಾಪನ ವರದಿಯು ಹೊರಬಂದಿದ್ದು, ಡಬಲ್ ಡೆಕ್ಕರ್ ಮಾದರಿಯು ನಗರದ ಸಾರ್ವಜನಿಕ ಸಾರಿಗೆಯ ಮೂಲ ಉದ್ದೇಶಗಳನ್ನೇ ಬುಡಮೇಲು ಮಾಡಲಿದೆ ಎಂದು ಎಚ್ಚರಿಸಿದೆ.

ಸಾರ್ವಜನಿಕ ಸಾರಿಗೆಗೆ ಹಿನ್ನಡೆ

ಖಾಸಗಿ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಸಾಮೂಹಿಕ ಸಾರಿಗೆಯನ್ನು ಬಲಪಡಿಸುವುದು ಮೆಟ್ರೋ ಯೋಜನೆಯ ಮುಖ್ಯ ಗುರಿಯಾಗಿದೆ. ಆದರೆ, ಮೆಟ್ರೋದೊಂದಿಗೆ ಮೇಲ್ಸೇತುವೆ ರಸ್ತೆಯನ್ನು ನಿರ್ಮಿಸುವುದರಿಂದ ಮೆಟ್ರೋ ಮತ್ತು ಬಸ್ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿಯಲಿದೆ ಎಂದು ಐಐಎಸ್‌ಸಿಯ 'ಸಸ್ಟೈನಬಲ್ ಟ್ರಾನ್ಸ್‌ಪೋರ್ಟೇಶನ್ ಲ್ಯಾಬ್' ವರದಿ ತಿಳಿಸಿದೆ. ಈ ಮೂಲಸೌಕರ್ಯವು ಸಾರ್ವಜನಿಕರನ್ನು ಸಾರ್ವಜನಿಕ ಸಾರಿಗೆಯಿಂದ ದೂರ ಸರಿಸಿ, ಕಾರು ಮತ್ತು ದ್ವಿಚಕ್ರ ವಾಹನಗಳ ಬಳಕೆಯನ್ನು ಹೆಚ್ಚಿಸಲು ಪ್ರೇರೇಪಿಸುತ್ತದೆ ಎಂದು ಸಂಶೋಧಕರು ವಾದಿಸಿದ್ದಾರೆ.

ವರದಿಯ ಮುಖ್ಯಾಂಶಗಳೇನು ?

ಈ ಸಮಗ್ರ ಯೋಜನೆಯಿಂದಾಗಿ ಮೆಟ್ರೋದಲ್ಲಿ ಪ್ರತಿದಿನ ಪ್ರಯಾಣಿಸುವ ಸುಮಾರು 11 ಸಾವಿರ ಪ್ರಯಾಣಿಕರ ನಷ್ಟವಾಗಲಿದೆ. ಡಬಲ್ ಡೆಕ್ಕರ್ ಮಾದರಿಯಿಂದಾಗಿ ಯೋಜನಾ ವೆಚ್ಚದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌)ಗೆ ಹೆಚ್ಚುವರಿಯಾಗಿ 2,864 ಕೋಟಿ ರೂ. ಭಾರಿ ಆರ್ಥಿಕ ಹೊರೆ ಬೀಳಲಿದೆ. ಈ ಯೋಜನೆಯಿಂದಾಗಿ ನಗರದಲ್ಲಿ ದಿನಕ್ಕೆ 7 ಸಾವಿರ ಲೀಟರ್‌ಗಿಂತಲೂ ಹೆಚ್ಚು ಇಂಧನ ವ್ಯರ್ಥವಾಗಲಿದ್ದು, ವಾತಾವರಣಕ್ಕೆ ಪ್ರತಿದಿನ ಸುಮಾರು 17 ಟನ್ ಹೆಚ್ಚುವರಿ ಇಂಗಾಲದ ಹೊರಸೂಸುವಿಕೆ ಸೇರ್ಪಡೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಐಐಎಸ್‌ಸಿ ತಜ್ಞರ, ಸರ್ಕಾರದ ವಾದವೇನು?

ಡಬಲ್ ಡೆಕ್ಕರ್ ಕಾರಿಡಾರ್ ನಿರ್ಮಾಣವು ಮೆಟ್ರೋ ವ್ಯವಸ್ಥೆಯ ತನ್ನದೇ ಆದ ಗುರಿಗಳಿಗೆ ಮಾಡಿಕೊಳ್ಳುವ 'ಆತ್ಮಹತ್ಯೆ'ಯಂತಾಗಬಹುದು. ಇದು ಸುಸ್ಥಿರ ಸಾರಿಗೆ ಮತ್ತು ಬೆಂಗಳೂರಿನ ಪರಿಸರ ಕಾಳಜಿಗೆ ಪೂರಕವಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಈ ಡಬಲ್ ಡೆಕ್ಕರ್ ಮಾದರಿಯು ಬೆಂಗಳೂರಿನ ಐತಿಹಾಸಿಕ ಸಂಚಾರ ದಟ್ಟಣೆ ಹಾಗೂ ಟ್ರಾಫಿಕ್ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ನೀಡಲಿದ್ದು, ವಾಹನ ಸವಾರರ ಪ್ರಯಾಣದ ಸಮಯವನ್ನು ಉಳಿಸಲಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ.

ಮೇಲ್ಸೇತುವೆ ರಸ್ತೆಗಳು ತಾತ್ಕಾಲಿಕವಾಗಿ ಸಂಚಾರ ಸುಗಮಗೊಳಿಸಿದರೂ, ದೀರ್ಘಾವಧಿಯಲ್ಲಿ ನಗರದ ರಸ್ತೆಗಳಲ್ಲಿ ಖಾಸಗಿ ವಾಹನಗಳ ದಟ್ಟಣೆಯನ್ನು ಮತ್ತಷ್ಟು ಹೆಚ್ಚಿಸಲಿವೆ ಎಂಬುದು ಐಐಎಸ್‌ಸಿ ಅಧ್ಯಯನದ ಸ್ಪಷ್ಟ ಎಚ್ಚರಿಕೆಯಾಗಿದೆ. ಈ ವರದಿಯನ್ನು ಈಗಾಗಲೇ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ (MoHUA) ಸಲ್ಲಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಈ ಯೋಜನೆಯ ಭವಿಷ್ಯ ಏನಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

Read More
Next Story