
ಟ್ರಿನಿಟಿ ಮೆಟ್ರೋ ನಿಲ್ದಾಣ
ಮೆಟ್ರೊ ಕಾಮಗಾರಿ ವೇಳೆ ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕ ಸಾವು; ಕೇಸ್ ದಾಖಲು
ಮೆಟ್ರೊ ಟ್ರಿನಿಟಿ ನಿಲ್ದಾಣದಿಂದ ಸುಮಾರು 100 ಮೀಟರ್ ದೂರದಲ್ಲಿರುವ ಎರಡು ಪಿಲ್ಲರ್‌ಗಳ ಮಧ್ಯೆ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಗುರಪ್ಪ ಅವರು ಮಣ್ಣು ಅಗೆಯುವ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿದೆ.
ನಮ್ಮ ಮೆಟ್ರೊ ನಿಲ್ದಾಣದ ಹೊರಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಗುತ್ತಿಗೆ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ, ಬಿಎಂಆರ್‌ಸಿಎಲ್ ಅಧಿಕಾರಿಗಳು ಸೇರಿದಂತೆ ನಾಲ್ವರ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಸರ್ಸ್ ಎಂ.ಆರ್. ಎಲೆಕ್ಟ್ರಿಕಲ್ಸ್ ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದ ಗುರಪ್ಪ (70) ಮೃತಪಟ್ಟ ದುರ್ದೈವಿ. ಘಟನೆಗೆ ಸಂಬಂಧಿಸಿದಂತೆ ಮೃತರ ಪುತ್ರ ಮೂರ್ತಿ ನೀಡಿದ ದೂರಿನ ಮೇರೆಗೆ ಎಂ.ಆರ್. ಎಲೆಕ್ಟ್ರಿಕಲ್ಸ್ ಸಂಸ್ಥೆಯ ಸೂರಜ್, ರಾಜೇಶ್, ಮಾನಸಾ ಹಾಗೂ ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುರಕ್ಷತಾ ಲೋಪವೇ ಸಾವಿಗೆ ಕಾರಣ
ಮೆಟ್ರೊ ಟ್ರಿನಿಟಿ ನಿಲ್ದಾಣದಿಂದ ಸುಮಾರು 100 ಮೀಟರ್ ದೂರದಲ್ಲಿರುವ ಎರಡು ಪಿಲ್ಲರ್‌ಗಳ ಮಧ್ಯೆ ಬೆಳಕಿನ ವ್ಯವಸ್ಥೆಯ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಗುರಪ್ಪ ಅವರು ಮಣ್ಣು ಅಗೆಯುವ ಕೆಲಸ ಮಾಡುತ್ತಿದ್ದಾಗ ಹಠಾತ್ತನೆ ವಿದ್ಯುತ್ ಸ್ಪರ್ಶಿಸಿದೆ. ಗುತ್ತಿಗೆದಾರರು ಹಾಗೂ ಮೆಟ್ರೊ ಅಧಿಕಾರಿಗಳು ಕಾಮಗಾರಿ ಸ್ಥಳದಲ್ಲಿ ಯಾವುದೇ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದದ್ದೇ ತಂದೆಯ ಸಾವಿಗೆ ನೇರ ಕಾರಣ ಎಂದು ಮೃತರ ಪುತ್ರ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಪೊಲೀಸರಿಂದ ನೋಟಿಸ್ ಜಾರಿ
"ದೂರು ದಾಖಲಾಗುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಪ್ರಕರಣದಲ್ಲಿ ಹೆಸರಿಸಿರುವ ಎಲ್ಲಾ ಆರೋಪಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದ್ದು, ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ" ಎಂದು ಹಲಸೂರು ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಮೂರು ತಿಂಗಳಲ್ಲಿ ಎರಡು ಪ್ರಕರಣ
ಕಳೆದ ಏಪ್ರಿಲ್‌ನಲ್ಲಿ ಯಲಹಂಕದ ಕೋಗಿಲು ಕ್ರಾಸ್ ಜಂಕ್ಷನ್ ಬಳಿ ಏರ್‌ಪೋರ್ಟ್ ಮಾರ್ಗದ ಮೆಟ್ರೋ ಕಾಮಗಾರಿಗೆ ಸಂಬಂಧಿಸಿದ ಭಾರಿ ಗಾತ್ರದ ಸಿಮೆಂಟ್ ಗೋಡೆ (ಗಿರ್ಡರ್) ಹೊತ್ತೊಯ್ಯುತ್ತಿದ್ದ ಟ್ರಕ್, ಮುಂಭಾಗದ ವಾಹನವನ್ನು ತಪ್ಪಿಸಲು ಸಡನ್ ಬ್ರೇಕ್ ಹಾಕಿದಾಗ ಗಿರ್ಡರ್ ಆಟೋರಿಕ್ಷಾದ ಮೇಲೆ ಬಿದ್ದಿತ್ತು. ಆಟೋದಲ್ಲಿದ್ದ ಪ್ರಯಾಣಿಕರು ಪಾರಾಗಿದ್ದರೂ, ಶಿಡ್ಲಘಟ್ಟ ಮೂಲದ ಚಾಲಕ ಖಾಸಿಂ ಸಾಬ್ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಇದೀಗ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ದುರಂತ ಸಂಭವಿಸಿದೆ.

