
ಸರ್ಕಾರಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿದ ಮಧು ಬಂಗಾರಪ್ಪ; ಶಿಕ್ಷಕರೊಂದಿಗೆ ಸಂಭ್ರಮ
ದೆಹಲಿಯ ಮಾದರಿ ಶಾಲೆಗಳಿಗಿಂತಲೂ ಉತ್ತಮವಾಗಿ ರಾಜ್ಯದ ಶಾಲೆಗಳು ಕಾರ್ಯನಿರ್ವಹಿಸುತ್ತಿದೆ. ಆದರೆ ನಮ್ಮ ಶಾಲೆಗಳ ಸಾಧನೆಯನ್ನು ತೋರಿಸುವ ಕೆಲಸವಾಗುತ್ತಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಶಿಕ್ಷಕರ ದಿನಾಚರಣೆಯನ್ನು ಕೇವಲ ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತಗೊಳಿಸದೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೇರವಾಗಿ ಶಾಲೆಗಳ ಆವರಣಕ್ಕೆ ತೆರಳಿ ಶಿಕ್ಷಕರೊಂದಿಗೆ ಸಂಭ್ರಮ ಹಂಚಿಕೊಳ್ಳುವ ಮೂಲಕ ವಿಭಿನ್ನ ಹಾಗೂ ಮಾದರಿ ನಡೆ ಪ್ರದರ್ಶಿಸಿದ್ದಾರೆ. ಬೆಂಗಳೂರಿನ ಥಣಿಸಂದ್ರದ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಹಲವು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ ಸಚಿವರು, ಶಿಕ್ಷಕರ ಸೇವೆಯನ್ನು ಕೊಂಡಾಡುವುದರ ಜೊತೆಗೆ, ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಈ ಕುರಿತು ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ, ಶಿಕ್ಷಣ ಸಚಿವರೇ ಸ್ವತಃ ಶಾಲೆಗೆ ಬಂದು ನಮ್ಮನ್ನು ಗೌರವಿಸಿದ್ದು ನಮ್ಮ ವೃತ್ತಿಜೀವನದ ಸುವರ್ಣ ಕ್ಷಣ ಎಂದು ಭಾವುಕರಾಗಿ ನುಡಿದರು.
ಈ ವೇಳೆ ಸರ್ಕಾರಿ ಶಾಲೆಗಳ ಬಗ್ಗೆ ಬರುವ ಟೀಕೆಗಳನ್ನು ಅಲ್ಲಗಳೆದ ಸಚಿವರು, ಈ ಶಾಲೆ ದೆಹಲಿಯ ಮಾದರಿ ಶಾಲೆಗಳಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ದುರದೃಷ್ಟವಶಾತ್ ಸರ್ಕಾರಿ ಶಾಲೆಗಳ ಸಾಧನೆಯನ್ನು ಜನರಿಗೆ ತೋರಿಸುವ ಕೆಲಸವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 9ನೇ ತರಗತಿಯ ವಿದ್ಯಾರ್ಥಿನಿ ಸಾಭಮ್ಮ, ಖಾಸಗಿ ಶಾಲೆಗಳಿಗಿಂತ ನಮ್ಮ ಸರ್ಕಾರಿ ಶಾಲೆ ಯಾವುದಕ್ಕೂ ಕಡಿಮೆಯಿಲ್ಲ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದು, ಸಚಿವರ ನಿಲುವಿಗೆ ಬಲ ತುಂಬಿದಂತಾಯಿತು.
ಎಸ್. ಬಂಗಾರಪ್ಪ ದೂರದೃಷ್ಟಿ, ಶಿಕ್ಷಣದ ಅಡಿಪಾಯ
ಸಚಿವರು ತಮ್ಮ ತಂದೆ, ಮಾಜಿ ಸಿಎಂ ದಿವಂಗತ ಎಸ್. ಬಂಗಾರಪ್ಪ ಅವರ ಶಿಕ್ಷಣ ಕ್ಷೇತ್ರದ ಕೊಡುಗೆಯನ್ನು ಸ್ಮರಿಸಿದರು. ಬಡ ಮಕ್ಕಳು ಶಾಲೆಯನ್ನು ತೊರೆಯಬಾರದು ಎಂಬ ಉದ್ದೇಶದಿಂದ ಅವರು ಜಾರಿಗೆ ತಂದಿದ್ದ 'ಪ್ರತಿದಿನ ಒಂದು ರೂಪಾಯಿ' ಪ್ರೋತ್ಸಾಹಧನ ಯೋಜನೆಯೇ ಮುಂದೆ ರಾಜ್ಯದಲ್ಲಿ 'ಬಿಸಿಯೂಟ' ಯೋಜನೆಗೆ ನಾಂದಿಯಾಯಿತು ಎಂಬುದನ್ನು ಸಚಿವರು ನೆನಪಿಸಿಕೊಂಡರು. ಅಂದು ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ಅಕ್ಷಯ ಯೋಜನೆಯ ಮೂಲಕ ಆರಂಭವಾದ ಈ ಕ್ರಾಂತಿ, ಇಂದು ಲಕ್ಷಾಂತರ ಮಕ್ಕಳ ಹಸಿವು ನೀಗಿಸುತ್ತಿದೆ ಎಂದು ಶ್ಲಾಘಿಸಿದರು.
ಶಿಕ್ಷಣ ಇಲಾಖೆಯ ಸುಧಾರಣೆಗಳು
ಶಿಕ್ಷಕರ ಕೊರತೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೇಮಕಾತಿ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು. ಅಧಿಕಾರಕ್ಕೆ ಬಂದ ತಕ್ಷಣವೇ ಹಿಂದಿನ ಸರ್ಕಾರದ ತಾಂತ್ರಿಕ ದೋಷಗಳಿಂದ ಬಾಕಿ ಉಳಿದಿದ್ದ 13 ಸಾವಿರ ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ 52 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಪ್ರಸ್ತುತ 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಪದವಿ ಪೂರ್ವ ಉಪನ್ಯಾಸಕರ ನೇಮಕಾತಿಯೂ ಶೀಘ್ರವೇ ನಡೆಯಲಿದೆ.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. 1 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕಗಳನ್ನು ನೀಡುವ ಯೋಜನೆಯನ್ನು ಈ ವರ್ಷವೇ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತಿದೆ ಎಂದು ಸಚಿವರು ಘೋಷಿಸಿದರು.
ನಿವೃತ್ತ ಶಿಕ್ಷಕರ ಸೇವೆಗೆ ಆಹ್ವಾನ
ಶಿಕ್ಷಕರು ಸಚಿವರ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದು, ಅದರಲ್ಲೂ ಮುಖ್ಯವಾಗಿ ನಿವೃತ್ತ ಶಿಕ್ಷಕರು ಮತ್ತೆ ಶಿಕ್ಷಣ ಸೇವೆಗೆ ಮರಳುವ ಆಸಕ್ತಿ ತೋರಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅನುಭವಿ ಶಿಕ್ಷಕರ ಜ್ಞಾನವನ್ನು ಮತ್ತೆ ಶಾಲಾ ತರಗತಿಗಳಲ್ಲಿ ಬಳಸಿಕೊಳ್ಳಲು ಸೂಕ್ತ ಮಾರ್ಗೋಪಾಯ ರೂಪಿಸುತ್ತೇವೆ ಎಂದು ಭರವಸೆ ನೀಡಿದರು. ರಾಜ್ಯದ 46 ಸಾವಿರ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವುದು ಸರ್ಕಾರದ ಆದ್ಯತೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ರಾಜ್ಯದ ಮಾದರಿ ಶಾಲೆಗಳಾಗಿ ಪರಿವರ್ತಿಸುವ ಮೂಲಕ ಪ್ರತಿ ಮಗುವಿಗೂ ಉತ್ತಮ ಮೂಲಸೌಕರ್ಯ ಮತ್ತು ಗುಣಮಟ್ಟದ ಶಿಕ್ಷಣ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದರು.

