x

ಉದ್ಯಾನವನ ಕಾಯಿದೆ ತಿದ್ದುಪಡಿಗೆ ಬಿಲ್:‌ ಲಾಲ್‌ಬಾಗ್, ಕಬ್ಬನ್ ಪಾರ್ಕ್‌ ಕಬಳಿಕೆಗೆ ಹುನ್ನಾರ?

ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ಸೇರಿದಂತೆ ಉದ್ಯಾನವನಗಳ ಶೇ. 5ರಷ್ಟು ಜಾಗವನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವ 'ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ಮಸೂದೆ'ಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.


Click the Play button to hear this message in audio format

ಬೆಂಗಳೂರಿನ ಹಸಿರು ಶ್ವಾಸಕೋಶ ಎಂದೇ ಕರೆಸಿಕೊಳ್ಳುವ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್‌ನ ಒಡಲಿಗೆ ಈಗ ಕತ್ತರಿ ಬೀಳುವ ಕಾಲ ಬಂದಿದೆಯೇ? ಹೀಗೊಂದು ಗಂಭೀರ ಅನುಮಾನ ಮತ್ತು ಆಕ್ರೋಶ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಕಾರಣ, ಸೋಮವಾರದ ವಿಧಾನಸಭಾ ಕಲಾಪದಲ್ಲಿ ಯಾವುದೇ ವಿಸ್ತೃತ ಚರ್ಚೆಯಿಲ್ಲದೆ, ಕೇವಲ ಕೆಲವೇ ನಿಮಿಷಗಳಲ್ಲಿ ಸರ್ಕಾರಿ ಉದ್ಯಾನವನಗಳ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ.

ಏನಿದು ತಿದ್ದುಪಡಿ ಮಸೂದೆ?

ಕರ್ನಾಟಕ ಸರ್ಕಾರಿ ಉದ್ಯಾನವನಗಳ ಸಂರಕ್ಷಣೆಗೆ ಸಂಬಂಧಿಸಿದ ಕಾನೂನಿಗೆ ತಿದ್ದುಪಡಿ ತರುವ ಮೂಲಕ, ಕಬ್ಬನ್ ಪಾರ್ಕ್ ಹಾಗೂ ಲಾಲ್‌ಬಾಗ್‌ನಂತಹ ಸಂರಕ್ಷಿತ ಉದ್ಯಾನಗಳ ಒಟ್ಟು ವಿಸ್ತೀರ್ಣದ ಶೇ. 5ರಷ್ಟು ಜಾಗವನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಳಸಲು ಸರ್ಕಾರ ಹಸಿರು ನಿಶಾನೆ ತೋರಿದೆ.

ಸರ್ಕಾರದ ವಾದದ ಪ್ರಕಾರ, ಈ ಜಾಗವನ್ನು ನೇರವಾಗಿ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುವುದಿಲ್ಲ. ಕೇವಲ ಸರ್ಕಾರಿ ಇಲಾಖೆಗಳು, ಶಾಸನಬದ್ಧ ಪ್ರಾಧಿಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಅವಕಾಶವಿರುತ್ತದೆ. ಯಾವುದೇ ಪ್ರಸ್ತಾವನೆ ಬಂದರೂ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದ ತಜ್ಞರ ಸಮಿತಿ ಪರಿಶೀಲಿಸಲಿದೆ.

ಆದರೆ ಪರಿಸರವಾದಿಗಳ ಪ್ರಶ್ನೆ ಬೇರೆಯೇ ಆಗಿದೆ. ಒಮ್ಮೆ ಸರ್ಕಾರಿ ಪ್ರಾಧಿಕಾರಕ್ಕೆ ಜಾಗ ನೀಡಿದ ಮೇಲೆ, ಯೋಜನೆಯ ಕಾಮಗಾರಿಯನ್ನು ಖಾಸಗಿ ಕಂಪನಿಗೆ ಗುತ್ತಿಗೆ ನೀಡಿದರೆ ಅದು ಪರೋಕ್ಷವಾಗಿ ಖಾಸಗೀಕರಣವೇ ಆಗುತ್ತದೆ ಎಂಬುದು ಅವರ ಆತಂಕ.

ಟನಲ್ ರಸ್ತೆ ಮತ್ತು ಅದಾನಿ ಭೇಟಿ

ಈ ತಿದ್ದುಪಡಿಯ ಹಿಂದೆ 17,780 ಕೋಟಿ ರೂಪಾಯಿ ವೆಚ್ಚದ ಹೆಬ್ಬಾಳದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗಿನ ಸುರಂಗ ರಸ್ತೆ (ಟನಲ್ ರೋಡ್) ಯೋಜನೆ ಇದೆ ಎಂಬ ಆರೋಪ ಕೇಳಿಬರುತ್ತಿದೆ. ವಿಸ್ತೃತ ಯೋಜನಾ ವರದಿ (DPR) ಪ್ರಕಾರ, ಈ ಯೋಜನೆಗಾಗಿ ಲಾಲ್‌ಬಾಗ್‌ನ ಸುಮಾರು 5 ರಿಂದ 6 ಎಕರೆ ಜಾಗವನ್ನು ಬಳಸಿಕೊಳ್ಳುವ ಪ್ರಸ್ತಾವನೆ ಇದೆ.

ಇದಕ್ಕೆ ಪುಷ್ಟಿ ನೀಡುವಂತೆ, ಟನಲ್ ರಸ್ತೆ ಯೋಜನೆಯ ಬಿಡ್ ಪ್ರಕ್ರಿಯೆಯಲ್ಲಿ 'ಅದಾನಿ ಸಮೂಹ'ದ ಹೆಸರು ಕೇಳಿಬರುತ್ತಿರುವ ಬೆನ್ನಲ್ಲೇ, ಗೌತಮ್ ಅದಾನಿ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಈ ಭೇಟಿ ಮತ್ತು ಮಸೂದೆಯ ದಿಢೀರ್ ಅಂಗೀಕಾರದ ನಡುವೆ ನಿಕಟ ಸಂಬಂಧವಿದೆ ಎಂದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆರೋಪಿಸಿವೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Read More
Next Story