ನಾನೇನು ಕಿವಿಯಲ್ಲಿ ದಾಸವಾಳ ಇಟ್ಕೊಂಡಿದ್ದೀನಾ?: ಅಧಿಕಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ತರಾಟೆ
x

"ನಾನೇನು ಕಿವಿಯಲ್ಲಿ ದಾಸವಾಳ ಇಟ್ಕೊಂಡಿದ್ದೀನಾ?": ಅಧಿಕಾರಿಗಳಿಗೆ ಸಚಿವ ಕೃಷ್ಣಬೈರೇಗೌಡ ತರಾಟೆ

ಲಕ್ಷಾಂತರ ಬೀದಿ ನಾಯಿಗಳಿಗೆ ಸಂತಾನಹರಣ ಮಾಡಿದ್ದೇವೆ ಎಂದು ಸುಳ್ಳು ಅಂಕಿಅಂಶ ನೀಡುತ್ತಿದ್ದೀರಿ. ಆದರೆ ನಗರದಲ್ಲಿ ನಾಯಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಗರಂ ಆದರು.


Click the Play button to hear this message in audio format

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಸಸಿ ನೆಡುವ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಪರಿಶೀಲನಾ ಸಭೆಯಲ್ಲಿ, ಯಾವುದೇ ಸಮರ್ಪಕ ಅಂಕಿಅಂಶಗಳಿಲ್ಲದೆ ಬರಿಗೈನಲ್ಲಿ ಸಭೆಗೆ ಹಾಜರಾದ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳನ್ನು ಕಂಡು ಆಕ್ರೋಶಗೊಂಡ ಸಚಿವ ಕೃಷ್ಣಬೈರೇಗೌಡ, ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಸೂಚನೆ ನೀಡುವ ಮೂಲಕ ಹೈಡ್ರಾಮಾ ಸೃಷ್ಟಿಸಿದ್ದಾರೆ.

ನಾನೇನು ಕಿವಿಯಲ್ಲಿ ದಾಸವಾಳ ಇಟ್ಟುಕೊಂಡಿದ್ದೀನಾ?: ಸಚಿವರ ಆಕ್ರೋಶ

ಪಶುಸಂಗೋಪನಾ ಇಲಾಖೆಯಲ್ಲಿ 19 ಜನ ಅಧಿಕಾರಿಗಳಿದ್ದರೂ, ಇಲಾಖೆಯ ಕೆಲಸದ ಕುರಿತು ಕನಿಷ್ಠ ಮಾಹಿತಿಯನ್ನು ಕೂಡ ಸಭೆಗೆ ತರಲು ವಿಫಲರಾದ ಅಧಿಕಾರಿಗಳ ಕಾರ್ಯವೈಖರಿಯನ್ನು ಸಚಿವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಲಕ್ಷಾಂತರ ಬೀದಿ ನಾಯಿಗಳಿಗೆ ಸಂತಾನಹರಣ ಮಾಡಿದ್ದೇವೆ ಎಂದು ಸುಳ್ಳು ಅಂಕಿಅಂಶ ನೀಡುತ್ತಿದ್ದೀರಿ. ಆದರೆ ನಗರದಲ್ಲಿ ನಾಯಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಜನರ ತೆರಿಗೆ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದೀರಿ. ನನ್ನ ಕಿವಿ ಮೇಲೆ ದಾಸವಾಳ ಹೂವು ಇಟ್ಟುಕೊಂಡಿದ್ದೀನಾ? ನಿಮ್ಮ ಜಾದುವೇನು? ಎಂದು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸಭೆಗೆ ಬರಿಗೈನಲ್ಲಿ ಬಂದ ಅಧಿಕಾರಿಯನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆ ಮಾಡಲು ಸೂಚಿಸಿ, ತಮ್ಮ ಆಡಳಿತದ ಬಿಗಿ ನಿಲುವನ್ನು ಪ್ರದರ್ಶಿಸಿದರು.

ನಾಯಿಗಳ ಸಂತಾನಹರಣ: 120 ಕೋಟಿ ರೂ. ನೀರುಪಾಲು?

ಸಚಿವರು ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಹಲವು ದಶಕಗಳಿಂದ ಬೆಂಗಳೂರಿನಲ್ಲಿ ನಾಯಿಗಳ ಸಂತಾನಹರಣ ಚಿಕಿತ್ಸೆ ನಡೆಯುತ್ತಿದ್ದರೂ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಬಿಎಂಪಿ ಅಸ್ತಿತ್ವಕ್ಕೆ ಬಂದ ಬಳಿಕ ಸುಮಾರು 8.80 ಲಕ್ಷ ನಾಯಿಗಳಿಗೆ, ಮತ್ತು 2016-2023ರ ಅವಧಿಯಲ್ಲಿ 3.33 ಲಕ್ಷ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗಿದೆ ಎಂಬುದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ 2019ರ ಸರ್ವೆ ಪ್ರಕಾರ 3.10 ಲಕ್ಷ, 2023ರ ಸರ್ವೆ ಪ್ರಕಾರ 2.79 ಲಕ್ಷ ಬೀದಿ ನಾಯಿಗಳಿವೆ. ಅಧಿಕಾರಿಗಳ ಅಂಕಿಅಂಶದ ಪ್ರಕಾರ, ಇಡೀ ನಗರದ ನಾಯಿಗಳ ಸಂಖ್ಯೆಗಿಂತ ಹೆಚ್ಚಾಗಿ ಸಂತಾನಹರಣ ಚಿಕಿತ್ಸೆ ನಡೆದಿರಬೇಕು. ಹಾಗಾದರೆ ನಾಯಿಗಳು ಎಲ್ಲಿಂದ ಬರುತ್ತಿವೆ? ಇವರು ಸಂತಾನಹರಣ ಯಾರಿಗೆ ಮಾಡಿದರು? ಈ ಹಣವೆಲ್ಲ ಎಲ್ಲಿಗೆ ಹೋಯಿತು? ಕಳೆದ 8 ವರ್ಷಗಳಲ್ಲಿ ಸುಮಾರು 120 ಕೋಟಿ ರೂಪಾಯಿಗೂ ಅಧಿಕ ಹಣವನ್ನು ನಾಯಿಗಳ ಸಂತಾನಹರಣಕ್ಕಾಗಿ ಖರ್ಚು ಮಾಡಲಾಗಿದೆ. ಆದರೂ ಫಲಿತಾಂಶ ಶೂನ್ಯವಾಗಿದ್ದು, ಅಧಿಕಾರಿಗಳ ಕಳ್ಳಾಟ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಕಿಡಿ ಕಾರಿದರು.

ನೆಟ್ಟ 20 ಲಕ್ಷ ಗಿಡಗಳು ಎಲ್ಲಿ ಹೋದವು?

ನಾಯಿಗಳ ವಿಷಯವಷ್ಟೇ ಅಲ್ಲದೆ, ನಗರದಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಸಸಿ ನೆಡುವ ಯೋಜನೆಯಲ್ಲಿಯೂ ಭಾರಿ ಗೋಲ್ಮಾಲ್ ನಡೆದಿರುವ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಪ್ರಕಾರ 2008ರಿಂದ ಇಲ್ಲಿಯವರೆಗೆ ಸುಮಾರು 20 ಲಕ್ಷ ಸಸಿಗಳನ್ನು ನೆಡಲಾಗಿದೆ. ಆದರೆ ಮರಗಣತಿ ಪ್ರಕಾರ ನಗರದಲ್ಲಿ ಇರುವುದು ಕೇವಲ 9 ಲಕ್ಷ ಮರಗಳು ಮಾತ್ರ..! ಉಳಿದ 11 ಲಕ್ಷ ಮರಗಳು ಎಲ್ಲಿಗೆ ಹೋದವು? ಪ್ರತಿ ಸಸಿ ಬೆಳೆಸಲು ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತದೆ. ಗುಂಡಿ ತೆಗೆಯುವುದರಿಂದ ಹಿಡಿದು, ನೀರು ಹಾಕುವುದು, ಟ್ರೀ ಗಾರ್ಡ್ ಅಳವಡಿಕೆ ಸೇರಿದಂತೆ 3 ವರ್ಷದ ನಿರ್ವಹಣೆಗೆ ಸಾವಿರಾರು ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತದೆ. ಆದರೆ ನನ್ನ ಕ್ಷೇತ್ರದಲ್ಲಿ ಈ ರೀತಿ ಅಚ್ಚುಕಟ್ಟಾಗಿ ಸಸಿಗಳನ್ನು ಬೆಳೆಸಿರುವುದನ್ನು ನಾನು ನೋಡಿಲ್ಲ. ಕೇವಲ ಹಣ ಲಪಟಾಯಿಸಲು ಈ ಕಾಗದದ ಮೇಲಿನ ಗಿಡಗಳ ಯೋಜನೆಗಳೇ? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ದೀರ್ಘಾವಧಿಯ ಪರಿಹಾರಕ್ಕೆ ಸೂಚನೆ

ಸಮಸ್ಯೆಯನ್ನು ಬರೀ ಗದರಿಸುವುದಕ್ಕೆ ಸೀಮಿತಗೊಳಿಸದೆ, ಸಚಿವರು ದೀರ್ಘಾವಧಿಯ ಪರಿಹಾರಗಳಿಗೂ ಸೂಚನೆ ನೀಡಿದ್ದಾರೆ. ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಸಂಖ್ಯೆಯನ್ನು ಈಗಿನದ್ದಕ್ಕಿಂತ ದುಪ್ಪಟ್ಟುಗೊಳಿಸಲು ಸೂಚಿಸಿದ್ದಾರೆ. ಇದಕ್ಕೆ ಬೇಕಾದ ಹೆಚ್ಚುವರಿ ಮೂಲ ಸೌಕರ್ಯಗಳನ್ನು ಒದಗಿಸಲು ಆಶ್ವಾಸನೆ ನೀಡಿದ್ದಾರೆ. ವೈದ್ಯಕೀಯ ಸಿಬ್ಬಂದಿ ಕೊರತೆಯಿದ್ದರೆ, ಹೊರಗುತ್ತಿಗೆ ಆಧಾರದ ಮೇಲೆ ವೃತ್ತಿಪರ ಸಂಸ್ಥೆಗಳನ್ನು ಮತ್ತು ವೈದ್ಯರನ್ನು ಕರೆತರುವಂತೆ ಆದೇಶಿಸಿದ್ದಾರೆ. ಸಂತಾನಹರಣದ ಅಂಕಿಅಂಶಗಳು ಮತ್ತು ಸಸಿ ನೆಡುವಿಕೆಯ ದಾಖಲೆಗಳನ್ನು ಕೂಲಂಕಷವಾಗಿ ತನಿಖೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ದಶಕಗಳಿಂದ ಬೇರೂರಿರುವ ಆಡಳಿತಾತ್ಮಕ ಅಕ್ರಮಗಳ ಮೇಲೆ ಬೆಳಕು ಚೆಲ್ಲಿದೆ. ಅಧಿಕಾರಿಗಳು ಕೇವಲ ಅಂಕಿಅಂಶಗಳ ಆಟವಾಡಿ ಸರ್ಕಾರಿ ಬೊಕ್ಕಸಕ್ಕೆ ಕೋಟಿಗಟ್ಟಲೆ ನಷ್ಟ ಉಂಟುಮಾಡುತ್ತಿರುವುದು ಈಗ ಸಾರ್ವಜನಿಕ ಚರ್ಚೆಗೆ ಬಂದಿದೆ. ಸಚಿವರ ಈ ಖಡಕ್ ನಡೆಯಿಂದಾಗಿ, ಮುಂದೆ ಇಲಾಖೆಗಳಲ್ಲಿ ನಡೆಯುವ ಕೆಲಸಗಳು ಕನಿಷ್ಠವಾದರೂ ಪಾರದರ್ಶಕವಾಗಿರಬಹುದು ಎಂಬ ಆಶಾವಾದ ಜನರಲ್ಲಿದೆ.

"ಜನರನ್ನು ಮೂರ್ಖರನ್ನಾಗಿಸಬೇಡಿ" ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಮೂಲಕ, ಕೃಷ್ಣಭೈರೇಗೌಡ ಅವರು ಜವಾಬ್ದಾರಿಯುತ ಆಡಳಿತಕ್ಕೆ ನಾಂದಿ ಹಾಡಲು ಪ್ರಯತ್ನಿಸಿದ್ದಾರೆ. ಆದರೆ, ಈ ಕಳ್ಳಾಟಗಳ ಹಿಂದಿರುವ ಕಿಂಗ್‌ಪಿನ್‌ಗಳನ್ನು ಹುಡುಕಿ ಕಾನೂನು ಕ್ರಮ ಕೈಗೊಳ್ಳುತ್ತಾರೆಯೇ ಅಥವಾ ಪ್ರಕರಣ ಕೇವಲ ಎಚ್ಚರಿಕೆಗೆ ಸೀಮಿತವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Read More
Next Story