
ಮಾನವತಾ ಮೌಲ್ಯಗಳನ್ನು ಅಳವಡಿಸಿಕೊಂಡಾಗಲೇ ಅಂಬೇಡ್ಕರ್‌ಗೆ ಗೌರವ: ಕೃಷ್ಣ ಬೈರೇಗೌಡ
ಡಾ. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲಾ ಸಮುದಾಯಗಳ ಏಳಿಗೆಗೆ-ಅಭ್ಯುದಯಕ್ಕೆ ಬೆಳಕಾದವರು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡುವ ಮನೋಭಾವಕ್ಕೆ ಅವಕಾಶ ನೀಡದೆ, ಎಲ್ಲರೂ ಸಮಾನರು ಎಂಬ ಮಾನವತಾ ಮೌಲ್ಯವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಡಾ. ಬಿ.ಆರ್. ಅಂಬೇಡ್ಕರ್ ಅವರಂತಹ ಮಹನೀಯರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವತಿಯಿಂದ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ. ರಾಜ್‌ಕುಮಾರ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಪೌರಕಾರ್ಮಿಕರ ದಿನಾಚರಣೆ–2026 ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ಇದಕ್ಕೂ ಮುಂಚಿತವಾಗಿ ಜಿಬಿಎ ಕೇಂದ್ರ ಕಛೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಅರ್ಪಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣ ಬೈರೇಗೌಡರು, ಡಾ. ಅಂಬೇಡ್ಕರ್ ಅವರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತವಾದವರಲ್ಲ. ಎಲ್ಲಾ ಸಮುದಾಯಗಳ ಏಳಿಗೆಗೆ-ಅಭ್ಯುದಯಕ್ಕೆ ಬೆಳಕಾದವರು. ಮಾನವತಾ ಧರ್ಮವನ್ನು ಪ್ರಬಲವಾಗಿ ನಂಬಿದವರು. ಬುದ್ಧನ ಕಾಲದಿಂದಲೇ ನಮ್ಮ ದೇಶದಲ್ಲಿ ಮಾನವ ಧರ್ಮದ ಪರಂಪರೆ ಜೀವಂತವಾಗಿದೆ. ಒಂದೇ ಗಾಳಿ, ನೀರು ಸೇವಿಸುವ ಎಲ್ಲಾ ಮನುಷ್ಯರೂ ಒಂದೇ ಎಂಬ ಅರಿವು ನಮ್ಮಲ್ಲಿರಬೇಕು. ಬಸವಣ್ಣ, ಮಹಾತ್ಮ ಗಾಂಧೀಜಿ ಹಾಗೂ ಕುವೆಂಪು ಸೇರಿದಂತೆ ಅನೇಕ ಮಹನೀಯರು ಮಾನವತಾ ಧರ್ಮ ಮತ್ತು ಸಮಾನತೆಯ ಸಂದೇಶವನ್ನು ಪ್ರತಿಪಾದಿಸಿದ್ದಾರೆ. ಆದರೆ ಇಂದಿಗೂ ಸಮಾಜದಲ್ಲಿ ಸಂಪೂರ್ಣ ಸಮಾನತೆ ಸಾಧ್ಯವಾಗಿಲ್ಲ. ನಾವುಗಳು ಸಮಾನತೆಯ ಬದುಕನ್ನು ಸಾಧ್ಯವಾಗಿಸದೆ ಕೇವಲ ಅಂಬೇಡ್ಕರ್ ಅವರ ಮೂರ್ತಿಗೆ ಹೂಮಾಲೆ ಹಾಕಿ ಜೈಕಾರ ಕೂಗಿದರೆ ಗೌರವ ಸಲ್ಲಿಸಿದಂತಾಗುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಮೇಲು-ಕೀಳು ಎಂಬ ಮನೋಭಾವವನ್ನು ಸಮಾಜದಿಂದ ಸಂಪೂರ್ಣವಾಗಿ ತೊಡೆದುಹಾಕಬೇಕು. ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ವಿಭಜಿಸುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಎಲ್ಲರೂ ಸಮಾನರು ಎಂಬ ಮೌಲ್ಯವನ್ನು ನಿಜವಾಗಿ ಅಳವಡಿಸಿಕೊಂಡಾಗಲೇ ನಾವು ಸಮಾನತೆಯ ಸಮಾಜ ನಿರ್ಮಾಣ ಮಾಡಬಹುದು. ಪೌರಕಾರ್ಮಿಕರ ಕುಂದುಕೊರತೆಗಳು ಮತ್ತು ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಜಿಬಿಎ ಹಾಗೂ ಐದು ನಗರ ಪಾಲಿಕೆಗಳು ಒಟ್ಟಾಗಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆಯನ್ನು ಆಚರಿಸುತ್ತಿವೆ.ಜವಾಬ್ದಾರಿ ವಹಿಸಿಕೊಂಡ ತಕ್ಷಣವೇ ಕಾರ್ಯಕ್ರಮ ಆಯೋಜಿಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಎಸ್ಐಆರ್ ಪ್ರಕ್ರಿಯೆಯ ಕಾರಣದಿಂದ ಆಚರಣೆ ವಿಳಂಬವಾಗಿದ್ದು, ಇದೀಗ ಆದ್ಯತೆಯ ಮೇರೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

