ಕೊಲೆಗೆ ತಂತ್ರಜ್ಞಾನದ ತಂತ್ರ: ಎಐ ಚಾಟ್‌ ಬಳಸಿ ಸಂಚು ರೂಪಿಸಿದ ಕೆನ್ನೆತ್..!
x

ಕೊಲೆಗೆ ತಂತ್ರಜ್ಞಾನದ ತಂತ್ರ: ಎಐ ಚಾಟ್‌ ಬಳಸಿ ಸಂಚು ರೂಪಿಸಿದ ಕೆನ್ನೆತ್..!

ಕೊಲೆ ಪ್ರಕರಣದ ಆರೋಪಿ ಕೆನ್ನೆತ್, ಆರು ತಿಂಗಳಿಂದ ಎಐ ಚಾಟ್‌ಬಾಟ್‌ನೊಂದಿಗೆ ನಿರಂತರವಾಗಿ ಚಾಟ್ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿ ಸಂಚು ಕಂಡು ಪೊಲೀಸರು ಬೆಚ್ಚಿದ್ದಾರೆ..!


Click the Play button to hear this message in audio format

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ತ್ರಿವಳಿ ಕೊಲೆ ಪ್ರಕರಣವು ಕೇವಲ ಒಂದು ಕ್ರೂರ ಅಪರಾಧವಾಗಿ ಉಳಿಯದೆ, ತಂತ್ರಜ್ಞಾನದ ದುರ್ಬಳಕೆಯ ಅತಿ ಕೆಟ್ಟ ಉದಾಹರಣೆಯಾಗಿ ಹೊರಹೊಮ್ಮಿದೆ. ಅಪರಾಧವೊಂದನ್ನು ಎಸಗಲು ಕೃತಕ ಬುದ್ಧಿಮತ್ತೆಯ ಸಹಾಯವನ್ನು ಪಡೆದ ವಿರಳ ಪ್ರಕರಣಗಳಲ್ಲಿ ಇದೂ ಒಂದಾಗಿದೆ. ತನಿಖೆ ನಡೆಸುತ್ತಿರುವ ಪೊಲೀಸರು, ಆರೋಪಿ ಕೆನ್ನೆತ್ (25) ಮತ್ತು ಆತನ ಪ್ರಿಯತಮೆ ಶ್ವೇತಾ (24) ಎಸಗಿದ ಕೃತ್ಯದ ಹಿಂದೆ ಅಡಗಿರುವ ಕ್ರೂರ ಯೋಜನೆ ಕಂಡು ಬೆಚ್ಚಿಬಿದ್ದಿದ್ದಾರೆ.

ಕೊಲೆ ಪ್ರಕರಣದ ಮುಖ್ಯ ಆರೋಪಿ ಕೆನ್ನೆತ್, ಕಳೆದ ಆರು ತಿಂಗಳಿಂದ ಎಐ ಚಾಟ್‌ಬಾಟ್‌ನೊಂದಿಗೆ ನಿರಂತರವಾಗಿ ಚಾಟ್ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಕೇವಲ ಮಾಹಿತಿ ಪಡೆಯಲು ಮಾತ್ರವಲ್ಲದೆ, ಕೊಲೆ ಮಾಡುವುದು ಹೇಗೆ?, ಮೃತದೇಹಗಳನ್ನು ವಿಲೇವಾರಿ ಮಾಡುವುದು ಹೇಗೆ?, ರಕ್ತದ ಕಲೆಗಳನ್ನು ಅಳಿಸಿ ಹಾಕುವುದು ಹೇಗೆ? ಎಂಬುದರ ಬಗ್ಗೆಯೂ ಆರೋಪಿ ಎಐ ಚಾಟ್‌ ಸಲಹೆ ಕೇಳಿದ್ದ ಎಂಬುದು ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದಿದೆ. ಜೂನ್ 22ರಂದು ಬೆಂಗಳೂರಿನ ಕೆ.ಆರ್. ಪುರಂ ಸಮೀಪದ ಸೀಗೆಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಮೂವರ ಬರ್ಬರ ಹತ್ಯೆ ನಡೆದಿತ್ತು. ಸೋಮಸುಂದರ್ (52), ಅವರ ಪತ್ನಿ ಮುತ್ತುಲಕ್ಷ್ಮಿ (48) ಮತ್ತು ಅವರ ಕಿರಿಯ ಮಗಳು ಸುಪ್ರಿಯಾ (19) ಅವರ ಶವಗಳು ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದವು. ಸಾವಿನ ಅಂಚಿನಲ್ಲಿದ್ದ ಸೋಮಸುಂದರ್ ಅವರು ನೀಡಿದ ಮರಣೋತ್ತರ ಹೇಳಿಕೆ ಪ್ರಕರಣದ ತನಿಖೆಗೆ ಸಹಾಯ ಮಾಡಿದೆ.

ಎಐ ಚಾಟ್‌ ಬಳಸಿದ ಆರೋಪಿ!

ಆರೋಪಿ ಕೆನ್ನೆತ್ ಕೊಲೆಗೆ ಸುಮಾರು ಆರು ತಿಂಗಳ ಮೊದಲೇ ಯೋಜನೆ ರೂಪಿಸಲು ಎಐ ಚಾಟ್‌ನ ಸಹಾಯ ಪಡೆದಿದ್ದನು. ಅತ್ಯಂತ ಸುಲಭವಾಗಿ ಮತ್ತು ರಹಸ್ಯವಾಗಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡುವುದು ಹೇಗೆ? ಹತ್ಯೆ ಮಾಡಿದ ನಂತರ ಶವವನ್ನು ಯಾರಿಗೂ ಅನುಮಾನ ಬಾರದಂತೆ ವಿಲೇವಾರಿ ಮಾಡುವುದು ಹೇಗೆ?

ರಕ್ತದ ಕಲೆಗಳನ್ನು ಸಂಪೂರ್ಣವಾಗಿ ಅಳಿಸಿ ಹಾಕುವುದು ಹೇಗೆ ಮತ್ತು ಫೋರೆನ್ಸಿಕ್ ತಪಾಸಣೆಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಎಂಬಂತಹ ಪ್ರಶ್ನೆಗಳನ್ನು ಎಐನಲ್ಲಿ ಕೇಳಿದ್ದ ಎಂದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ತಂತ್ರಜ್ಞಾನವನ್ನು ಆರೋಪಿ ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿದ್ದನು. ತನಿಖೆಯ ಪ್ರಕಾರ, ಈ ಕೊಲೆಗೆ ಪ್ರಮುಖ ಕಾರಣ ಆರ್ಥಿಕ ವಿವಾದಗಳು ಮತ್ತು ಕುಟುಂಬದ ಅಸಮಾಧಾನ ಎಂಬುದು ಗೊತ್ತಾಗಿದೆ. ಆರೋಪಿ ಕೆನ್ನೆತ್ ಒಬ್ಬ ವಿಫಲ ಉದ್ಯಮಿಯಾಗಿದ್ದ. ಶ್ವೇತಾ ತನ್ನ ತಾಯಿಯಿಂದ ಸುಮಾರು 50 ಲಕ್ಷ ರೂಪಾಯಿ ಸಾಲ ಪಡೆದು ಕೆನ್ನೆತ್‌ಗೆ 'ಕ್ಲೌಡ್ ಕಿಚನ್' ವ್ಯವಹಾರ ಸ್ಥಾಪಿಸಲು ಸಹಾಯ ಮಾಡಿದ್ದಳು. ಆದರೆ, ಆ ಹಣವೆಲ್ಲಾ ನಷ್ಟದ ಸುಳಿಗೆ ಸಿಲುಕಿತು. ಸಾಲದ ಹೊರೆ ಮತ್ತು ವ್ಯವಹಾರದ ವೈಫಲ್ಯದಿಂದ ಉಂಟಾದ ಹತಾಶೆ ಕೆನ್ನೆತ್‌ನನ್ನು ಕ್ರೂರ ನಿರ್ಧಾರಕ್ಕೆ ತಳ್ಳಿತು. ಈ ವಿಷಯದಲ್ಲಿ ಶ್ವೇತಾಳ ಕುಟುಂಬದವರು ಒತ್ತಡ ಹೇರುತ್ತಿದ್ದರೇ ಅಥವಾ ಅವಮಾನಿಸುತ್ತಿದ್ದರೇ ಎಂಬ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೆನ್ನೆತ್ ತೀವ್ರವಾದ 'ಸೋಷಿಯಲ್ ಐಸೊಲೇಶನ್' ಆಗಿದ್ದನು. ಶ್ವೇತಾ ತನ್ನ ಐಟಿ ಉದ್ಯೋಗವನ್ನು ಕಳೆದುಕೊಂಡು, ಸ್ನೇಹಿತರು ಮತ್ತು ಕುಟುಂಬದವರಿಂದ ಸಂಪೂರ್ಣವಾಗಿ ದೂರವಾಗಿ, ಕೆನ್ನೆತ್‌ನ ಪ್ರಭಾವಕ್ಕೆ ಒಳಗಾಗಿದ್ದಳು. ಇವರಿಬ್ಬರ ಈ ವಿಚಿತ್ರ ಮತ್ತು ಒಂಟಿತನದ ಸಂಬಂಧವು ಕೊನೆಗೆ ಕೊಲೆಯಲ್ಲಿ ಅಂತ್ಯವಾಯಿತು.

ಜೂನ್ 22ರಂದು ಹತ್ಯೆಗೊಳಗಾದವರು ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಈ ವೇಳೆ ಮುತ್ತುಲಕ್ಷ್ಮಿಯವರನ್ನು ಅಪಾರ್ಟ್‌ಮೆಂಟ್‌ಗೆ ಕರೆಸಿ ಚಾಕುವಿನಿಂದ ಇರಿದು ಕೊಲೆ ಮಾಡಿದನು. ನಂತರ ಸೋಮಸುಂದರ್ ಮತ್ತು ಸುಪ್ರಿಯಾಳ ಮೇಲೂ ದಾಳಿ ನಡೆಸಿದನು. ಗಂಭೀರವಾಗಿ ಗಾಯಗೊಂಡಿದ್ದ ಸೋಮಸುಂದರ್ ಆಸ್ಪತ್ರೆಯಲ್ಲಿ ಘಟನೆಯ ಕುರಿತು ಹೇಳಿಕೆ ನೀಡಿದ್ದ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.

ಎಐ ಕಂಪನಿಗೆ ಪೊಲೀಸರ ಪತ್ರ

ಆರೋಪಿಯ ಹೇಳಿಕೆಗಳನ್ನು ಮತ್ತು ಎಐ ಚಾಟ್‌ಬಾಟ್‌ನೊಂದಿಗೆ ಆತ ನಡೆಸಿದ ಸಂಭಾಷಣೆಗಳನ್ನು ತಾಳೆ ನೋಡಲು ಪೊಲೀಸರು ಸಂಬಂಧಪಟ್ಟ ಎಐ ಕಂಪನಿಗೆ ಪತ್ರ ಬರೆದಿದ್ದಾರೆ. ಡಿಜಿಟಲ್ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಮೂಲಕ ಆರೋಪಿಯ ವಿರುದ್ಧ ಬಲವಾದ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಎಐ ಚಾಟ್‌ ಇಂತಹ ಅಪರಾಧದ ಸಂಚುಗಳಿಗೆ ಮಾಹಿತಿ ನೀಡದಂತೆ ರಕ್ಷಣೆ ಅಳವಡಿಸಬೇಕಾದ ಅನಿವಾರ್ಯತೆ ಇದೆ. ಸಮಾಜದಿಂದ ಪ್ರತ್ಯೇಕಗೊಳ್ಳುವ ಯುವಕ-ಯುವತಿಯರ ಬಗ್ಗೆ ಕುಟುಂಬದವರು ಗಮನ ಹರಿಸಬೇಕಾದ ಅವಶ್ಯಕತೆ ಇದೆ ಎಂಬುದು ಪೊಲೀಸರ ಅಭಿಪ್ರಾಯವಾಗಿದೆ.

Read More
Next Story