
ಬೆಂಗಳೂರು ವಿಮಾನ ನಿಲ್ದಾಣದ 18ನೇ ವಾರ್ಷಿಕೋತ್ಸವ: ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆ
2008ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾದ ಭಾರತದ ಮೊದಲ 'ಗ್ರೀನ್‌ಫೀಲ್ಡ್' ವಿಮಾನ ನಿಲ್ದಾಣವಾದ ಇದು, ಬೆಂಗಳೂರನ್ನು ಹೊರ ಜಗತ್ತಿನೊಂದಿಗೆ ಬೆಸೆಯುವ ಮುಖ್ಯ ಹೆಬ್ಬಾಗಿಲಾಗಿದೆ.
ದೇಶದ ಐಟಿ ರಾಜಧಾನಿ ಬೆಂಗಳೂರನ್ನು ಜಾಗತಿಕ ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎಬಿ) ತನ್ನ 18 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿದೆ. ಈ ವಿಶೇಷ ಸಂದರ್ಭವನ್ನು ಗುರುತಿಸಲು ಭಾರತೀಯ ಅಂಚೆ ಇಲಾಖೆಯು ವಿಶಿಷ್ಟವಾದ 'ಶಾಶ್ವತ ಚಿತ್ರಾತ್ಮಕ ಅಂಚೆ ಚೀಟಿ ರದ್ದತಿ ಮೊಹರು' ವಿಶೇಷ ಅಂಚೆ ಲಕೋಟೆ ಮತ್ತು ಅಂಚೆ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದೆ.
ಬೆಂಗಳೂರು ಕೇವಲ ಉದ್ಯಾನ ನಗರಿಯಾಗಿ ಉಳಿಯದೆ, ಇಂದು ಜಾಗತಿಕ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಕೇಂದ್ರವಾಗಿ ಬೆಳೆದಿದೆ. 2008ರಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾದ ಭಾರತದ ಮೊದಲ 'ಗ್ರೀನ್‌ಫೀಲ್ಡ್' ವಿಮಾನ ನಿಲ್ದಾಣವಾದ ಇದು, ಬೆಂಗಳೂರನ್ನು ಹೊರ ಜಗತ್ತಿನೊಂದಿಗೆ ಬೆಸೆಯುವ ಮುಖ್ಯ ಹೆಬ್ಬಾಗಿಲಾಗಿದೆ. ಈ ಪಯಣದ ಸ್ಮರಣಾರ್ಥವಾಗಿ ಅಂಚೆ ಇಲಾಖೆ ಹೊರತಂದಿರುವ ವಸ್ತುಗಳು ನಗರದ ಆಧುನಿಕತೆ ಮತ್ತು ಐತಿಹಾಸಿಕ ಬೇರುಗಳ ನಡುವಿನ ಕೊಂಡಿಯಾಗಿದೆ.
ಮೊಹರಿನಲ್ಲಿ ಏನಿದೆ ವಿಶೇಷ?
ಕೆಂಪೇಗೌಡ ವಿಮಾನ ನಿಲ್ದಾಣದ ಅಂಚೆ ಕಚೇರಿಯಲ್ಲಿ ಬಳಸಲಾಗುವ ಈ ಹೊಸ 'ಶಾಶ್ವತ ಚಿತ್ರಾತ್ಮಕ ಅಂಚೆ ಚೀಟಿ ರದ್ದತಿ ಮೊಹರು' ಅತ್ಯಂತ ವಿಶೇಷವಾಗಿದೆ. ಇದರಲ್ಲಿ ನಗರದ ನಿರ್ಮಾತೃವಿನ ಸ್ಮರಣೆಯಾಗಿ ನಾಡಪ್ರಭು ಕೆಂಪೇಗೌಡರ ಚಿತ್ರಣ, ಆಧುನಿಕ ಬೆಂಗಳೂರಿನ ಹೆಮ್ಮೆಯ ಸಂಕೇತವಾಗಿ ವಿಮಾನ ನಿಲ್ದಾಣದ ಭವ್ಯ ನೋಟ. ಈ ಎರಡನ್ನೂ ಒಟ್ಟಿಗೆ ಅಳವಡಿಸಿರುವುದು, ಬೆಂಗಳೂರಿನ ಶ್ರೀಮಂತ ಪರಂಪರೆ ಮತ್ತು ತಾಂತ್ರಿಕ ಪ್ರಗತಿಯ ನಡುವಿನ ಅವಿನಾಭಾವ ಸಂಬಂಧವನ್ನು ಸಾರುತ್ತದೆ. ಅಂಚೆ ಚೀಟಿ ಸಂಗ್ರಹಕಾರರಿಗೆ ಮತ್ತು ಪ್ರಯಾಣಿಕರಿಗೆ ಇದು ಅಮೂಲ್ಯವಾದ ಸ್ಮರಣಿಕೆಯಾಗಿ ಉಳಿಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್, 2008ರಲ್ಲಿ ಒಂದು ಸಣ್ಣ ಪ್ರಯತ್ನವಾಗಿ ಆರಂಭವಾದ ವಿಮಾನ ನಿಲ್ದಾಣ ಇಂದು ಭಾರತದ ಪ್ರಮುಖ ವಾಯುಯಾನ ಕೇಂದ್ರವಾಗಿ ಬೆಳೆದಿದೆ. ಲಕ್ಷಾಂತರ ಪ್ರಯಾಣಿಕರಿಗೆ ಬೆಂಗಳೂರು ಎಂದರೆ ಮೊದಲು ಕಾಣ ಸಿಗುವುದೇ ನಮ್ಮ ನಿಲ್ದಾಣ. ಅಂಚೆ ಇಲಾಖೆಯ ಈ ಗೌರವವು ನಮ್ಮ 18 ವರ್ಷಗಳ ಶ್ರಮಕ್ಕೆ ಸಿಕ್ಕ ಮನ್ನಣೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಅನುಭವ ನೀಡಲು ನಾವು ಬದ್ಧರಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
ಅಂಚೆ ಇಲಾಖೆಯ ಮೆಚ್ಚುಗೆ
ಬೆಂಗಳೂರು ವಲಯದ ಅಂಚೆ ಸೇವೆಗಳ ನಿರ್ದೇಶಕಿ ವಿ. ತಾರಾ ಅವರು ಮಾತನಾಡಿ, ನಗರದ ಅಭಿವೃದ್ಧಿಯಲ್ಲಿ ವಿಮಾನ ನಿಲ್ದಾಣದ ಪಾತ್ರ ದೊಡ್ಡದು. ಅದರ ಐತಿಹಾಸಿಕ ಮತ್ತು ಪ್ರವಾಸಿ ಪ್ರಾಮುಖ್ಯತೆಯನ್ನು ಗೌರವಿಸಲು ನಾವು ಈ ವಿಶೇಷ ಮೊಹರನ್ನು ಬಿಡುಗಡೆ ಮಾಡಿದ್ದೇವೆ. ಇದು ಕೇವಲ ಒಂದು ಅಂಚೆ ಸೇವೆ ಅಷ್ಟೇ ಅಲ್ಲ, ಬೆಂಗಳೂರಿನ ಹೆಮ್ಮೆಯ ಸಂಕೇತವಾಗಿ ಇತಿಹಾಸದಲ್ಲಿ ಉಳಿಯಲಿದೆ ಎಂದರು.
ಇದು ಎಲ್ಲಿ ಸಿಗುತ್ತದೆ?
ಈ ವಿಶೇಷ ಅಂಚೆ ಸಾಮಗ್ರಿಗಳು ಪ್ರಯಾಣಿಕರು ಮತ್ತು ನಾಗರಿಕರಿಗೆ ವಿಮಾನ ನಿಲ್ದಾಣದ ಅಂಚೆ ಕಚೇರಿಯಲ್ಲಿ ಲಭ್ಯವಾಗಲಿದೆ, ಬೆಂಗಳೂರು ಜಿಪಿಒ ಮತ್ತು ರಾಜ್ಯದ ಎಲ್ಲಾ ಪ್ರಮುಖ ಕಚೇರಿಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ವಿಮಾನ ನಿಲ್ದಾಣದ ‘ಫೀಲ್ಸ್ ಲೈಕ್ ಬಿಎಲ್‌ಆರ್’ ಅಭಿಯಾನದ ಭಾಗವಾಗಿ ಈ ಬಿಡುಗಡೆ ನಡೆದಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಬರಿ ಟಿಕೆಟ್ ಹಿಡಿದು ಓಡುವುದಲ್ಲದೆ, ಬೆಂಗಳೂರಿನ ಸಂಸ್ಕೃತಿ ಮತ್ತು ಇತಿಹಾಸದ ಜೊತೆಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳಬೇಕು ಎಂಬುದು ವಿಮಾನ ನಿಲ್ದಾಣ ಆಡಳಿತದ ಆಶಯವಾಗಿದೆ. 18 ವರ್ಷಗಳ ಸಾಧನೆಯನ್ನು ಅಂಚೆ ಇಲಾಖೆಯ ಮುದ್ರೆ ಹೊತ್ತು ಶಾಶ್ವತಗೊಳಿಸಿರುವುದು ಬೆಂಗಳೂರಿನ ಪಾಲಿಗೆ ಒಂದು ಹೆಮ್ಮೆಯ ವಿಷಯ. ಅಂಚೆ ಚೀಟಿ ಸಂಗ್ರಹಕಾರರಿಗೆ ಮತ್ತು ಇತಿಹಾಸ ಪ್ರಿಯರಿಗೆ ಇದು ಖಂಡಿತವಾಗಿಯೂ ಒಂದು ಅತಿದೊಡ್ಡ ಕೊಡುಗೆಯಾಗಿದೆ.

