
ಬಿಲ್ ಮಾಡುವುದೇ ಅಭಿವೃದ್ಧಿಯೇ?: ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿ
ಕಸ ನಿರ್ವಹಣೆ ವಿಚಾರದಲ್ಲಿ ಇತರೆ ರಾಜ್ಯಗಳ ಪದ್ಧತಿ ಗಮನಿಸಿದರೆ ನಮಗೆ ನಾಚಿಕೆಯಾಗಬೇಕು. ನಮ್ಮಲ್ಲಿ ಹಣಕ್ಕೆ ಕೊರತೆ ಇಲ್ಲ, ಆದರೆ ವೈಜ್ಞಾನಿಕ ಮನಸ್ಥಿತಿಯ ಕೊರತೆಯಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.
ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವ ಅಧಿಕಾರಿಗಳಿಗೆ ಹಾಗೂ ಕೆಲಸದಲ್ಲಿ ನಿರ್ಲಕ್ಷ್ಯ ತೋರುವವರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅವರು, ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದರು. ಅಧಿಕಾರಿಗಳ ಉತ್ತರದ ಶೈಲಿ ಮತ್ತು ಕಾಮಗಾರಿಗಳ ವಾಸ್ತವ ಸ್ಥಿತಿ ಕಂಡು ನಮಗೆ ಅಭಿವೃದ್ಧಿಗೆ ಬೇಕಾದ ಸಾಮರ್ಥ್ಯ ಇಲ್ಲವೇ? ಅಥವಾ ಸಂಪನ್ಮೂಲವಿದ್ದರೂ ಕೇವಲ ಬಿಲ್ ಮಾಡುವುದಷ್ಟೇ ನಿಮ್ಮ ಕೆಲಸವೇ? ಎಂದು ನೇರ ಪ್ರಶ್ನೆ ಕೇಳುವ ಮೂಲಕ ಅಧಿಕಾರಿಗಳ ವಿರುದ್ಧ ಗರಂ ಆದರು.
ಇತರ ರಾಜ್ಯಗಳಲ್ಲಿ ಕಸ ನಿರ್ವಹಣೆ ಹೇಗೆ ನಡೆಯುತ್ತಿದೆ ಎಂಬುದನ್ನು ಗಮನಿಸಿ, ಅಲ್ಲಿನ ಪದ್ಧತಿಗಳನ್ನು ನೋಡಿದರೆ ನಮಗೆ ನಾಚಿಕೆಯಾಗಬೇಕು. ನಮ್ಮಲ್ಲಿ ಹಣಕ್ಕೆ ಕೊರತೆ ಇಲ್ಲ, ಆದರೆ ವೈಜ್ಞಾನಿಕ ಮನಸ್ಥಿತಿಯ ಕೊರತೆಯಿದೆ. ಗ್ರಾಮ ಪಂಚಾಯಿತಿಗಳಿಗೆ ಬರುವ ಅನುದಾನದ ಒಂದು ಪಾಲನ್ನು ಕಡ್ಡಾಯವಾಗಿ ಶಾಶ್ವತ ನಿರ್ಮಾಣ ಕಾರ್ಯಗಳಿಗೆ, ವಿಶೇಷವಾಗಿ ನೀರು ಮತ್ತು ಕಸ ನಿರ್ವಹಣೆಗೆ ಮೀಸಲಿಡಲೇಬೇಕು. ಕೇವಲ ಹಣ ಖರ್ಚು ಮಾಡುವುದು ಅಭಿವೃದ್ಧಿಯಲ್ಲ, ಅದು ಜನರ ಸಮಸ್ಯೆಗಳಿಗೆ ಪರಿಹಾರವಾಗಬೇಕು. ಇಲ್ಲದಿದ್ದರೆ ಹಣ ವೆಚ್ಚ ಮಾಡಿ ಏನು ಪ್ರಯೋಜನ? ಎಂದು ಹರಿಹಾಯ್ದರು.
ಬಿಎಂಆರ್‌ಡಿ ವ್ಯಾಪ್ತಿಯಲ್ಲಿ ರಸ್ತೆ ನಿಯಮ
ಬೆಂಗಳೂರು ಸುತ್ತಮುತ್ತಲಿನ ಬಿಎಂಆರ್‌ಡಿ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಹೊಸ ರಸ್ತೆಗಳ ಗುರುತಿಸುವಿಕೆ ಮತ್ತು ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ವಿಚಾರದಲ್ಲಿ ಸಮಗ್ರ ಯೋಜನೆ ಉಲ್ಲಂಘಿಸುವುದು ಸರಿ ಇಲ್ಲ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ಲ ಎಂದು ಭಾವಿಸಬೇಡಿ. ನಿಯಮ ಮೀರಿ ರಸ್ತೆ ನಿರ್ಮಾಣ ಅಥವಾ ಅಕ್ರಮ ಕಾಮಗಾರಿ ನಡೆಸಿದರೆ, ಅದಕ್ಕೆ ಜವಾಬ್ದಾರರಾದ ಪಿಡಿಒಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ನೀರಿನ ಸೌಲಭ್ಯ ಕಲ್ಪಿಸಬೇಕಾದ ಅಧಿಕಾರಿಗಳು ಜನರ ಸಮಸ್ಯೆಯ ಕಡೆಗೆ ನಿರ್ಲಕ್ಷ್ಯ ತೋರುತ್ತಿರುವುದನ್ನು ಕಂಡು, "ಹಾಲು ಕೊಡುವ ಹಸುವಿನ ಕೆಚ್ಚಲನ್ನೇ ಕೊಯ್ಯಲು ನೀವು ಹೇಸಲ್ಲ..!" ಎಂದು ಕಿಡಿಕಾರಿದರು. ಅಲ್ಲದೆ, "ಒಂದೇ ಕೆಲಸಕ್ಕೆ ಎರಡು ಕಡೆ ಬಿಲ್ ಮಾಡಿದ್ದೀರಾ?" ಎಂದು ನೇರವಾಗಿ ಪ್ರಶ್ನಿಸಿದಾಗ, ಅಧಿಕಾರಿಗಳು ಸರಿಯಾದ ಉತ್ತರ ನೀಡದೆ ಉಡಾಫೆಯಾಗಿ ವರ್ತಿಸಿದ್ದು ಸಚಿವರನ್ನು ಇನ್ನಷ್ಟು ಕೋಪಗೊಳ್ಳುವಂತೆ ಮಾಡಿತು. ಕೆಲಸ ಮಾಡದಿದ್ದರೆ ಅಥವಾ ಅಕ್ರಮದಲ್ಲಿ ಭಾಗಿಯಾಗಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

