
ಶಾಲಾ ವಲಯದಲ್ಲಿ ವೇಗಕ್ಕೆ ಬ್ರೇಕ್, ಪುಟ್‌ಪಾತ್ ಅತಿಕ್ರಮಿಸಿದರೆ ಭಾರಿ ದಂಡ
ಇನ್ನು ಮುಂದೆ ರಸ್ತೆಗಳ ಯೋಜನೆ, ನಿರ್ಮಾಣ ಮತ್ತು ನಿರ್ವಹಣೆಯ ಪ್ರತಿ ಹಂತದಲ್ಲೂ ‘ರಸ್ತೆ ಸುರಕ್ಷತಾ ಆಡಿಟ್’ ಕಡ್ಡಾಯ. ಬೆಂಗಳೂರಿನಲ್ಲಿ ವಾಹನಗಳಿಗಿಂತ ಪಾದಚಾರಿ, ಸೈಕಲ್ ಸವಾರರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಪಾದಚಾರಿಗಳು ಮತ್ತು ಸೈಕಲ್ ಸವಾರರ ಸುರಕ್ಷತೆ ಖಚಿತಪಡಿಸಲು ಕರ್ನಾಟಕ ಸರ್ಕಾರವು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಕರ್ನಾಟಕ ಮೋಟಾರು ವಾಹನ (ತಿದ್ದುಪಡಿ) ನಿಯಮಗಳು, 2026’ ಅನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಅಧಿಸೂಚಿಸಿದ್ದು, ರಸ್ತೆ ವಿನ್ಯಾಸದ ಮಾನದಂಡಗಳು, ಕಡ್ಡಾಯ ಸುರಕ್ಷತಾ ಆಡಿಟ್ ಮತ್ತು ಉಲ್ಲಂಘನೆ ಮಾಡುವವರಿಗೆ ಭಾರಿ ದಂಡ ವಿಧಿಸಲು ಹೊಸ ನಿಯಮಾವಳಿ ರೂಪಿಸಿದೆ.
ಪಾದಚಾರಿ ಸ್ನೇಹಿ ಮೂಲಸೌಕರ್ಯಕ್ಕೆ ಆದ್ಯತೆ
ಇನ್ನು ಮುಂದೆ ರಸ್ತೆಗಳ ಯೋಜನೆ, ನಿರ್ಮಾಣ ಮತ್ತು ನಿರ್ವಹಣೆಯ ಪ್ರತಿ ಹಂತದಲ್ಲೂ ‘ರಸ್ತೆ ಸುರಕ್ಷತಾ ಆಡಿಟ್’ ಮಾಡುವುದು ಕಡ್ಡಾಯ. ನಗರ ಪ್ರದೇಶಗಳಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ವಾಹನಗಳಿಗಿಂತ ಪಾದಚಾರಿಗಳು ಮತ್ತು ಸೈಕಲ್ ಸವಾರರಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಪ್ರತಿಯೊಂದು ರಸ್ತೆಯ ಪಾದಚಾರಿ ಮಾರ್ಗವು ಕನಿಷ್ಠ 1.5 ಮೀಟರ್ ಅಗಲವಿರಬೇಕು. ಇದು ಅಡೆತಡೆಯಿಲ್ಲದ ಪ್ರವೇಶ, ಸಮರ್ಪಕ ಬೆಳಕು ಮತ್ತು ವಿಕಲಚೇತನ ಸ್ನೇಹಿ ವೈಶಿಷ್ಟ್ಯಗಳನ್ನು ಹೊಂದಿರಬೇಕು. ಸೈಕಲ್ ಸವಾರರಿಗಾಗಿ ಪ್ರತ್ಯೇಕ ಪಥಗಳನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಬೇಕು. ರಸ್ತೆ ವಿಸ್ತರಣೆ ಮಾಡುವ ನೆಪದಲ್ಲಿ ಪಾದಚಾರಿ ಮಾರ್ಗದ ಜಾಗವನ್ನು ಕಡಿಮೆ ಮಾಡುವುದನ್ನು ಕೊನೆಯ ಆಯ್ಕೆಯಾಗಿ ಮಾತ್ರ ಪರಿಗಣಿಸಬೇಕು.
ಶಾಲಾ ವಲಯದಲ್ಲಿ 25 ಕಿ.ಮೀ. ವೇಗದ ಮಿತಿ
ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಾಲಾ ವಲಯಗಳಲ್ಲಿ ವಾಹನಗಳ ವೇಗವನ್ನು ಗಂಟೆಗೆ 25 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ. ವಾಹನ ಸವಾರರು ಜೀಬ್ರಾ ಕ್ರಾಸಿಂಗ್ಗಳಲ್ಲಿ ಕಡ್ಡಾಯವಾಗಿ ವಾಹನ ನಿಲ್ಲಿಸಿ ಪಾದಚಾರಿಗಳಿಗೆ ದಾರಿ ಮಾಡಿಕೊಡಬೇಕು. ಸೈಕಲ್ ಸವಾರರನ್ನು ಓವರ್‌ಟೇಕ್ ಮಾಡುವಾಗ ಕನಿಷ್ಠ 1.5 ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
ನಿಯಮ ಮೀರಿದರೆ ಜೇಬಿಗೆ ಕತ್ತರಿ!
ಪಾದಚಾರಿ ಮಾರ್ಗ ಮತ್ತು ಸೈಕಲ್ ಪಥಗಳ ಮೇಲೆ ವಾಹನ ಚಾಲನೆ ಮಾಡುವುದು ಅಥವಾ ಪಾರ್ಕಿಂಗ್ ಮಾಡುವುದು ಈಗ ದುಬಾರಿ ಎನಿಸಲಿದೆ. ಮೊದಲ ಬಾರಿ ನಿಯಮ ಉಲ್ಲಂಘನೆಗೆ 1 ಸಾವಿರ ರೂ, ದಂಡ ವಿಧಿಸಲಾಗುತ್ತದೆ. ಮರುಕಳಿಸಿದರೆ 5 ಸಾವಿರ ರೂ. ದಂಡ, ನಿರಂತರವಾಗಿ ನಿಯಮ ಉಲ್ಲಂಘನೆ ಮಾಡಿದರೆ ಪ್ರತಿದಿನಕ್ಕೆ 1ಸಾವಿರ ರೂ, ಹೆಚ್ಚುವರಿ ದಂಡ ವಿಧಿಸಲಾಗುತ್ತದೆ.
ಅಧಿಕಾರಿಗಳಿಗೂ ಬೀಳಲಿದೆ ಬಿಸಿ!
ಕೇವಲ ಸಾರ್ವಜನಿಕರಷ್ಟೇ ಅಲ್ಲ, ರಸ್ತೆ ವಿನ್ಯಾಸದಲ್ಲಿ ಲೋಪ ಎಸಗುವ ಅಥವಾ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ನಾಗರಿಕ ಸಂಸ್ಥೆಗಳು ಮತ್ತು ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲು ನಿಯಮದಲ್ಲಿ ಅವಕಾಶವಿದೆ. ಕಳಪೆ ರಸ್ತೆ ವಿನ್ಯಾಸದಿಂದ ಪಾದಚಾರಿ ಅಥವಾ ಸೈಕಲ್ ಸವಾರರಿಗೆ ಸಾವು ಅಥವಾ ಗಂಭೀರ ಗಾಯಗಳಾದರೆ, ಸಂಬಂಧಪಟ್ಟ ಏಜೆನ್ಸಿಗಳಿಗೆ 1 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ.
"ಬೆಂಗಳೂರಿನ ಹೆಚ್ಚಿನ ಪಾದಚಾರಿ ಮಾರ್ಗಗಳು ಅತಿಕ್ರಮಣಗೊಂಡಿವೆ. ಈ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ಮಾತ್ರ ನಮ್ಮ ಸಂಚಾರ ಸುರಕ್ಷಿತವಾಗಿರುತ್ತದೆ," ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಸೈಕಲ್ ಸವಾರರು ಕೂಡ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ಮೀಸಲಾದ ಸೈಕಲ್ ಪಥಗಳ ನಿರ್ಮಾಣದಿಂದ ಪರಿಸರ ಸ್ನೇಹಿ ಸಂಚಾರಕ್ಕೆ ಉತ್ತೇಜನ ಸಿಗಲಿದೆ ಎಂದಿದ್ದಾರೆ. ಒಟ್ಟಾರೆ ಕರ್ನಾಟಕದ ಈ ನೂತನ ರಸ್ತೆ ಸುರಕ್ಷತಾ ಚೌಕಟ್ಟು ಜಾರಿಯಾದರೆ, ರಾಜ್ಯವು ಪಾದಚಾರಿ ಸ್ನೇಹಿ ಮೂಲಸೌಕರ್ಯ ಹೊಂದಿರುವ ದೇಶದ ಮಾದರಿ ರಾಜ್ಯವಾಗಿ ಹೊರಹೊಮ್ಮಲಿದೆ.

