The Federal Reality Check| ಸರ್ಕಾರಿ ಶಾಲೆಗಳಿಗೆ ಸಿಜೆಪಿ ನಿಯೋಗ ಭೇಟಿ; ಅವ್ಯವಸ್ಥೆಗೆ ಬೇಸರ ಯಾಕೆ?
ಬೆಂಗಳೂರಿನ ಯಶವಂತಪುರ ಹಾಗೂ ವರ್ತೂರು ಸೇರಿದಂತೆ ಹಲವು ಸರ್ಕಾರಿ ಶಾಲೆಗಳಿಗೆ ಸಿಜೆಪಿ ಪ್ರತಿನಿಧಿಗಳ ತಂಡ ಭೇಟಿ ನೀಡಿದೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅಶುತೋಷ್ ರಂಕಾ ನೇತೃತ್ವದ ತಂಡ, ಶಾಲೆಗಳಲ್ಲಿರುವ ಮೂಲಸೌಕರ್ಯಗಳ ಕೊರತೆಯನ್ನು ನೇರವಾಗಿ ಪರಿಶೀಲಿಸಿತು.
ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ, ಶಿಥಿಲ ಕಟ್ಟಡಗಳು ಮತ್ತು ಶಿಕ್ಷಕರ ಕೊರತೆಯ ನಡುವೆ ಕರ್ನಾಟಕದ ಸರ್ಕಾರಿ ಶಾಲೆಗಳ ವಾಸ್ತವ ಸ್ಥಿತಿ ಮತ್ತೆ ಚರ್ಚೆಗೆ ಬಂದಿದೆ. ಈ ಬೆನ್ನಲ್ಲೇ CJP ನಿಯೋಗ ಬೆಂಗಳೂರಿನ ಸರ್ಕಾರಿ ಶಾಲೆಗಳಿಗೆ 'School Thik Karo' ಅಭಿಯಾನದಡಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಶಾಲೆಗಳಿಗೆ CJP ಭೇಟಿ ನೀಡಿದ ಬೆನ್ನಲ್ಲೇ 'ದ ಫೆಡರಲ್ ಕರ್ನಾಟಕ' ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಗಬ್ಬೆದ್ದು ನಾರುತ್ತಿರುವ ಶೌಚಾಲಯಗಳು ಸೇರಿದಂತೆ ಹಲವು ಸೌಲಭ್ಯಗಳ ಕೊರತೆ ಕಂಡುಬಂದಿದೆ.
ಬೆಂಗಳೂರಿನ ಯಶವಂತಪುರ ಹಾಗೂ ವರ್ತೂರು ಸೇರಿದಂತೆ ಹಲವು ಸರ್ಕಾರಿ ಶಾಲೆಗಳಿಗೆ ಸಿಜೆಪಿ ಪ್ರತಿನಿಧಿಗಳ ತಂಡ ಭೇಟಿ ನೀಡಿದೆ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅಶುತೋಷ್ ರಂಕಾ ನೇತೃತ್ವದ ತಂಡ, ಶಾಲೆಗಳಲ್ಲಿರುವ ಮೂಲಸೌಕರ್ಯಗಳ ಕೊರತೆಯನ್ನು ನೇರವಾಗಿ ಪರಿಶೀಲಿಸಿತು. ಕೆಲವೆಡೆ ಕಟ್ಟಡ ದುರಸ್ತಿ ಕಾರ್ಯ ನಡೆಯುತ್ತಿದ್ದರೆ, ಇನ್ನು ಕೆಲವೆಡೆ ಶೌಚಾಲಯಗಳ ದುಸ್ಥಿತಿ, ಮುರಿದ ಬೆಂಚುಗಳು ಮತ್ತು ಸೀಲಿಂಗ್ ಕುಸಿಯುವ ಭೀತಿ ಎದ್ದು ಕಾಣುತ್ತಿತ್ತು. ಏಕಾಏಕಿ ಭೇಟಿ ನೀಡಿದ ಈ ನಿಯೋಗಕ್ಕೆ ಕೆಲವು ಶಾಲೆಗಳಲ್ಲಿ ತರಗತಿಗಳಿಗೆ ಅಡಚಣೆಯಾಗುತ್ತದೆ ಎಂಬ ಕಾರಣಕ್ಕೆ ಅನುಮತಿ ನಿರಾಕರಿಸಿದ್ದರು. ಆದರೆ ಕೆಲವೊಂದು ಶಾಲೆಗಳಿಗೆ ಅನುಮತಿ ನೀಡಿದರೂ ತರಗತಿಗಳಿಗೆ ಅಡಚಣೆಯಾಯಿತು ಎಂದು ಶಿಕ್ಷಕರು ದೂರಿದ್ದಾರೆ.
ಸಿಜೆಪಿ ನಿಯೋಗದ ಭೇಟಿ ಬೆನ್ನಲ್ಲೇ 'ದ ಫೆಡರಲ್ ಕರ್ನಾಟಕ' ತಂಡ ಶಾಲೆಯೊಂದಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಶಾಲೆಯ ಮುಖ್ಯೋಪಾಧ್ಯಾಯಿನಿ ಓಂಕಾರಿ ಹೆಗಡೆ ಮಾತನಾಡಿ, ಶಾಲೆಯ ಭದ್ರತೆಗೆ ಸೆಕ್ಯುರಿಟಿ, ಪ್ರತಿದಿನ ಸ್ವಚ್ಛತೆ ಮಾಡಲು ಕ್ಲೀನರ್, ಕಂಪ್ಯೂಟರ್ ಶಿಕ್ಷಕರು ಹಾಗೂ ಇಂಟರ್ನೆಟ್ ಸೌಲಭ್ಯದ ತುರ್ತು ಅಗತ್ಯವಿದೆ ಎಂದು ತಿಳಿಸಿದರು. ಪ್ರಸ್ತುತ ಕೇವಲ ನಾಲ್ವರು ಶಿಕ್ಷಕರಿಂದಲೇ ಇಡೀ ಶಾಲೆಯ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದು, ಗಣಿತ, ವಿಜ್ಞಾನ, ಡ್ರಾಯಿಂಗ್ ಮತ್ತು ಸಂಗೀತ ಶಿಕ್ಷಕರ ತೀವ್ರ ಕೊರತೆಯಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಸ್ವಚ್ಛತೆಯ ವಿಚಾರದಲ್ಲೂ ಶಾಲೆ ದೊಡ್ಡ ಸವಾಲು ಎದುರಿಸುತ್ತಿದೆ. ಶಾಲೆಗೆ ಪ್ರತ್ಯೇಕ ಕ್ಲೀನರ್ ಇಲ್ಲದ ಕಾರಣ BBMP ವಾರಕ್ಕೊಮ್ಮೆ ಮಾತ್ರ ಸ್ವಚ್ಛಗೊಳಿಸುತ್ತಿದೆ. ಉಳಿದ ದಿನಗಳಲ್ಲಿ ಮಕ್ಕಳೇ ಸ್ವಚ್ಛತೆ ಮಾಡಬೇಕಾದ ಸ್ಥಿತಿಯಿದೆ. ಫೆಡರಲ್ ತಂಡದ ಪರಿಶೀಲನೆಯಲ್ಲೂ ಶಾಲೆಯ ವರಾಂಡ, ಆವರಣ ಮತ್ತು ಶೌಚಾಲಯಗಳಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂತು.
ಇದಷ್ಟೇ ಅಲ್ಲದೆ, ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ತೀವ್ರ ಅಭಾವವಿರುವುದು ಕಂಡುಬಂದಿದೆ. ಪ್ರಸ್ತುತ ಕೇವಲ ನಾಲ್ವರು ಶಿಕ್ಷಕರಿದ್ದು, ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ವಿಶೇಷ ಶಿಕ್ಷಕರ ಅಗತ್ಯವಿದೆ. ಜೊತೆಗೆ ಮಕ್ಕಳ ಪ್ರತಿಭೆ ಹೊರತರಲು ಡ್ರಾಯಿಂಗ್ ಹಾಗೂ ಮ್ಯೂಸಿಕ್ ಶಿಕ್ಷಕರನ್ನು ನೇಮಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಇತ್ತೀಚೆಗೆ ಬೆಳಗಾವಿಯ ಶಾಲೆಯೊಂದರಲ್ಲಿ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗಳು ಗಾಯಗೊಂಡ ಘಟನೆಯ ಬೆನ್ನಲ್ಲೇ, ಈ ಎಲ್ಲಾ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಜೆಪಿ ನಿಯೋಗ ಭರವಸೆ ನೀಡಿದೆ.
ಸಿಜೆಪಿ ನಿಯೋಗದ ಈ ಭೇಟಿಯು ಸರ್ಕಾರಿ ಶಾಲೆಗಳ ಮೂಲಭೂತ ಸಮಸ್ಯೆಗಳನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಯ ಮಕ್ಕಳಿಗೂ ಉತ್ತಮ ಸೌಲಭ್ಯ, ಶಿಕ್ಷಕರು ಹಾಗೂ ಸ್ವಚ್ಛ ವಾತಾವರಣ ಕಲ್ಪಿಸಲು ಸರ್ಕಾರ ತಕ್ಷಣದ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಮತ್ತೊಂದೆಡೆ, ಶಾಲೆಗಳಿಗೆ ಭೇಟಿ ನೀಡಲು ಅದರದ್ದೇ ಆದ ಪೂರ್ವ ಅನುಮತಿ ಬೇಕು, ಆದರೆ ಸಿಜೆಪಿ ಏಕಾಏಕಿ ಭೇಟಿಯಾಗಿರುವುದು ಇದೀಗ ಭಾರೀ ಚರ್ಚೆಗೂ ಕಾರಣವಾಗಿದೆ.

