Elephant Corridor| ಕನಕಪುರ ರಸ್ತೆಯಲ್ಲಿ ಮೊದಲ ಬಾರಿಗೆ ʼಆನೆ ಮೇಲ್ಸೇತುವೆʼ ಬಳಸಿದ ಸಲಗ
x
ಕನಕಪುರ ರಸ್ತೆಯಲ್ಲಿ ಆನೆ ಮೇಲ್ಸೇತುವೆ ದಾಟುತ್ತಿರುವ ಒಂಟಿ ಸಲಗ

Elephant Corridor| ಕನಕಪುರ ರಸ್ತೆಯಲ್ಲಿ ಮೊದಲ ಬಾರಿಗೆ ʼಆನೆ ಮೇಲ್ಸೇತುವೆʼ ಬಳಸಿದ ಸಲಗ

ಆನೆಗಳ ನೈಸರ್ಗಿಕ ಪಥವನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಒತ್ತಡ ಹೆಚ್ಚಿತ್ತು.


Click the Play button to hear this message in audio format

ಬೆಂಗಳೂರು ಹೊರವಲಯದ ಕನಕಪುರ ರಸ್ತೆಯಲ್ಲಿ ನಿರ್ಮಿಸಿರುವ ರಾಜ್ಯದ ಮೊದಲ 'ಆನೆ ಮೇಲ್ಸೇತುವೆ'ಯಲ್ಲಿ ಇದೇ ಮೊದಲ ಬಾರಿಗೆ ಕಾಡಾನೆ ಯಶಸ್ವಿಯಾಗಿ ಸಂಚರಿಸಿದೆ. ರಾಮನಗರ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ನಡುವೆ ಹಾದು ಹೋಗಿರುವ ರಾಷ್ಟ್ರೀಯು ಹೆದ್ದಾರಿ-209 ರಲ್ಲಿ ಆನೆಗಳ ಮುಕ್ತ ಸಂಚಾರಕ್ಕಾಗಿ ತಾತಗುಣಿ ಬಳಿ ಆನೆ ಮೇಲ್ಸೇತುವೆ ನಿರ್ಮಿಸಲಾಗಿದೆ. 2024ರಲ್ಲಿ ಮೇಲ್ಸೇತುವೆ ಪೂರ್ಣಗೊಂಡರೂ ಈವರೆಗೆ ಆನೆಗಳು ಮೇಲ್ಸೇತುವೆ ಬಳಸಿರಲಿಲ್ಲ.

ಕ್ಯಾಮೆರಾ ಟ್ರಾಪ್‌ ಅಳವಡಿಕೆ

ಮೇಲ್ನೋಟಕ್ಕೆ ನೈಸರ್ಗಿಕ ಪಥದಂತೆ ಕಂಡರೂ ಆನೆಗಳು ರಸ್ತೆ ದಾಟಿರುವುದು ದೃಢಪಟ್ಟಿರಲಿಲ್ಲ. ಅವುಗಳ ಹೆಜ್ಜೆಗುರುತು, ಸಗಣಿ ಕಂಡಿರಲಿಲ್ಲ. ಆನೆಗಳ ಚಲನವಲನ ವೀಕ್ಷಿಸಲೆಂದೇ ರಸ್ತೆಯ ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಯಿತು. ಇಷ್ಟು ದಿನಗಳಾದ ಬಳಿಕ ಈಗ ಒಂಟಿ ಸಲಗವೊಂದು ಸಹಜವಾಗಿ ಮೇಲ್ಭಾಗದ ಸೇತುವೆ ದಾಟುತ್ತಿರುವ ದೃಶ್ಯ ಸೆರೆಯಾಗಿದೆ. ಇದು ಪರಿಸರ ಪ್ರೇಮಿಗಳು ಹಾಗೂ ಅರಣ್ಯ ಇಲಾಖೆಯ ಮೊಗದಲ್ಲಿ ಮಂದಹಾಸ ಮೂಡಿಸಿದೆ.

2023ರ ಮಾರ್ಚ್ ತಿಂಗಳಿನಲ್ಲಿ ಒಂದು ದಿನ ರಾತ್ರಿ ವೇಳೆ ರಸ್ತೆ ದಾಟುತ್ತಿದ್ದ ಆನೆಗೆ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಥಳದಲ್ಲೇ ಮೃತಪಟ್ಟಿತ್ತು. ಈ ದುರಂತವು ಮಾನವ-ಪ್ರಾಣಿ ಸಂಘರ್ಷದ ತೀವ್ರತೆ ಎತ್ತಿ ತೋರಿಸಿತ್ತು. ಆನೆಗಳ ನೈಸರ್ಗಿಕ ಪಥವನ್ನು ರಕ್ಷಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೇಲೆ ಒತ್ತಡ ಹೆಚ್ಚಿತು. ಆಗ ಸುಮಾರು 20 ಕೋಟಿ ರೂ. ವೆಚ್ಚದಲ್ಲಿ ಬೃಹತ್ ವಿಶೇಷ ಮೇಲ್ಸೇತುವೆಯನ್ನು ನಿರ್ಮಿಸಲಾಯಿತು. ಕಾಂಕ್ರಿಟ್ ಸೇತುವೆಯಾಗಿ ಕಾಣದಂತೆ ಮಾಡಲು ನೈಸರ್ಗಿಕ ಅರಣ್ಯದ ವಾತಾವರಣ ನಿರ್ಮಿಸಲಾಯಿತು. ಬಿದಿರು ಮತ್ತು ನೂರಾರು ಹಣ್ಣಿನ ಗಿಡಗಳನ್ನು ಬೆಳೆಸುವ ಮೂಲಕ ಕಾಡಿನ ಭಾಗವೇ ಎಂಬ ಭಾವನೆ ಮೂಡುವಂತೆ ಮಾಡಲಾಗಿತ್ತು.

ಭಾನುವಾರ ಮುಂಜಾನೆ ಸುಮಾರು 3.58ರ ಸುಮಾರಿಗೆ ಒಂಟಿ ಸಲಗ ಯಾವುದೇ ಭಯವಿಲ್ಲದೆ ಮೇಲ್ಸೇತುವೆ ದಾಟಿ ಅರಣ್ಯದ ಮತ್ತೊಂದು ಭಾಗಕ್ಕೆ ಹೋದ ದೃಶ್ಯ ಅರಣ್ಯ ಇಲಾಖೆಯಲ್ಲಿ ಸಂತಸ ಮೂಡಿಸಿದೆ.

ಕನಕಪುರ ರಸ್ತೆಯಲ್ಲಿ ನಿರ್ಮಿಸಿರುವ ಆನೆ ಮೇಲ್ಸೇತುವೆ

ಮೇಲ್ಸೇತುವೆ ಸದ್ಭಳಕೆ

ಇತ್ತೀಚಿನ ದಿನಗಳಲ್ಲಿ ಚಿರತೆಗಳು, ಕಾಡುಹಂದಿಗಳು ಮತ್ತು ಇತರ ಸಣ್ಣಪುಟ್ಟ ವನ್ಯಜೀವಿಗಳು ಕೂಡ ಈ ಸುರಕ್ಷಿತ ಪಥವನ್ನು ಬಳಸುತ್ತಿರುವುದು ಕ್ಯಾಮೆರಾ ಟ್ರ್ಯಾಪ್‌ಗಳಲ್ಲಿ ಕಂಡುಬಂದಿದೆ. ಈ ಯಶಸ್ವಿ ಪ್ರಯೋಗವು ಮುಂದಿನ ದಿನಗಳಲ್ಲಿ ರಾಜ್ಯದ ಇತರ ಪ್ರಮುಖ ಹೆದ್ದಾರಿಗಳಲ್ಲೂ ಜಾರಿ ಮಾಡಲು ಪ್ರೇರಣೆಯಾಗಿದೆ. ಅರಣ್ಯ ಇಲಾಖೆಯ ಈ ದೂರದೃಷ್ಟಿಯ ಕ್ರಮದಿಂದಾಗಿ ಹೆದ್ದಾರಿಗಳಲ್ಲಿ ನಡೆಯುತ್ತಿದ್ದ ವನ್ಯಜೀವಿಗಳ ಅಪಘಾತಗಳಿಗೆ ಶಾಶ್ವತ ಪರಿಹಾರ ಸಿಕ್ಕಂತಾಗಿದೆ ಎಂದು ಪ್ರಾಣಿಪ್ರಿಯರು ಅಭಿಪ್ರಾಯಪಟ್ಟಿದ್ದಾರೆ.

9 ಆನೆ ಕಾರಿಡಾರ್‌ಗಳು

ಕರ್ನಾಟಕದಲ್ಲಿ ಒಟ್ಟು ಒಂಬತ್ತು ಆನೆ ಕಾರಿಡಾರ್‌ಗಳಿವೆ. ಬಂಡೀಪುರ ಉದ್ಯಾನದಲ್ಲಿ ಕಣಿಯನ್‌ಪುರ - ಮೋಯಾರ್ ಕಾರಿಡಾರ್ ಸೇರಿದಂತೆ ಹಲವೆಡೆ ಇರುವ ಕಾರಿಡಾರ್‌ಗಳು ಒತ್ತುವರಿ, ರೈಲ್ವೆ ಮಾರ್ಗ ಸೇರಿದಂತೆ ವಿವಿಧ ಕಾರಣಗಳಿಂದ ನಾಶವಾಗುತ್ತಿದ್ದು, ಆನೆಗಳ ಸಂಚಾರಕ್ಕೆ ತೊಡಕಾಗಿದೆ. ಅವುಗಳನ್ನು ರಕ್ಷಣೆ ಮಾಡುವ ಸಲುವಾಗಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಈಗಾಗಲೇ ಮಂಗಳೂರು-ಬೆಂಗಳೂರು ಹೆದ್ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೆರಿಯಶಾಂತಿ, ರೇಖ್ಯಾ ಮತ್ತು ಅಡ್ಡಹೊಳೆ ಎಂಬಲ್ಲಿ ಆನೆ ಅಂಡರ್‌ಪಾಸ್‌ಗಳನ್ನು ನಿರ್ಮಿಸಿದೆ. ರೈಲ್ವೆ ಸಚಿವಾಲಯವು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಲೋಂಡಾ-ಖಾನಾಪುರ-ದೇಸೂರು ಮಾರ್ಗದಲ್ಲಿ ಅಂಡರ್‌ಪಾಸ್‌ ನಿರ್ಮಿಸಿದೆ.

ಇಲ್ಲದೇ, ಕರಡಿಕ್ಕಲ್- ಮಾದೇಶ್ವರ (ರಾಗಿಹಳ್ಳಿ ಕಾರಿಡಾರ್), ಎಡಯಹಳ್ಳಿ- ದೊಡ್ಡಸಂಪಿಗೆ, ಕಣಿಯನ್‌ಪುರ-ಮೋಯಾರ್ (ಬಂಡಿಪುರ), ಬೇಗೂರು-ಬ್ರಹ್ಮಗಿರಿ (ಕರ್ನಾಟಕ-ಕೇರಳ ಗಡಿ), ಚಾಮರಾಜನಗರ-ತಳಮಲೈ (ಮುದ್ದಹಳ್ಳಿ ಮತ್ತು ಪುಂಜೂರು) ಪ್ರದೇಶದಲ್ಲಿ ಆನೆ ಅಂಡರ್‌ಪಾಸ್‌ ನಿರ್ಮಿಸಲು ಉದ್ದೇಶಿಸಿದೆ.

Read More
Next Story