
ಸಾಂದರ್ಭಿಕ ಚಿತ್ರ
CET Exam| ಬೆಂಗಳೂರಿನಲ್ಲಿ ಜನಿವಾರ ತೆಗೆಸಿದ ಸಿಬ್ಬಂದಿ ; ಚಿಕ್ಕಮಗಳೂರಿನಲ್ಲಿ ಮೂಗುತಿಗೆ ಗಮ್ ಟೇಪ್!
ಪೋಷಕರನ್ನು ಸಮಾಧಾನಪಡಿಸಲು ಯತ್ನಿಸಿದ ಅಧಿಕಾರಿಗಳು, ಘಟನೆ ಕುರಿತು ಎಲ್ಲೂ ದೂರು ನೀಡಬಾರದು ಎಂದು ಪೋಷಕರಿಂದ ಪತ್ರ ಬರೆಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ರಾಜ್ಯಾದ್ಯಂತ ಗುರುವಾರದಿಂದ ಆರಂಭವಾಗಿರುವ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯ (CET) ಮೊದಲ ದಿನವೇ ವಿವಾದ ಸೃಷ್ಟಿಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂಬ ಆರೋಪ ಕೇಳಿಬಂದಿದ್ದರೆ, ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿನಿಯರ ಮೂಗುತಿಗೆ ಗಮ್ ಟೇಪ್ ಅಂಟಿಸಿ ಪರೀಕ್ಷಾ ಕೊಠಡಿಗೆ ಕಳುಹಿಸಿದ ಘಟನೆ ನಡೆದಿದೆ.
ಮಡಿವಾಳದ ಕಾಲೇಜಿನಲ್ಲಿ ನಡೆದಿದ್ದೇನು?
ನಗರದ ಮಡಿವಾಳದಲ್ಲಿರುವ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಐವರು ವಿದ್ಯಾರ್ಥಿಗಳ ಜನಿವಾರ ತೆಗೆಸಿ ಪರೀಕ್ಷೆ ಬರೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಪರೀಕ್ಷೆ ಬರೆಯಲು ಬಂದಿದ್ದ ಆನಂದ್ ಸುಧೀರ್ ರಾವ್ ಸೇರಿದಂತೆ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿದ ಸಿಬ್ಬಂದಿ, ಜನಿವಾರ ತೆಗೆಯುವಂತೆ ಸೂಚಿಸಿದ್ದಾರೆ. ಈ ಘಟನೆಗೆ ವಿದ್ಯಾರ್ಥಿಗಳು ಮತ್ತು ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದಾಗ, ಜನಿವಾರ ತೆಗೆಯದಿದ್ದರೆ ಪರೀಕ್ಷಾ ಕೇಂದ್ರದಿಂದ ಹೊರಹೋಗಿ ಎಂದು ಸಿಬ್ಬಂದಿ ಧಮಕಿ ಹಾಕಿದ್ದಾರೆ ಎನ್ನಲಾಗಿದೆ.
ವರ್ಷಪೂರ್ತಿ ಪರೀಕ್ಷೆಗಾಗಿ ಸಿದ್ಧತೆ ನಡೆಸಿದ್ದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಅನಿವಾರ್ಯವಾಗಿ ಜನಿವಾರವನ್ನು ತೆಗೆಸಿ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ದೂರು ನೀಡದಂತೆ ಅಧಿಕಾರಿಗಳಿಂದ ಒತ್ತಡ
ವಿಷಯ ತಿಳಿಯುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಹಾಗೂ ಕೆಇಎ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೋಷಕರನ್ನು ಸಮಾಧಾನಪಡಿಸಲು ಯತ್ನಿಸಿದ ಅಧಿಕಾರಿಗಳು, ಘಟನೆ ಕುರಿತು ಎಲ್ಲೂ ದೂರು ನೀಡಬಾರದು ಎಂದು ಪೋಷಕರಿಂದ ಪತ್ರ ಬರೆಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಧಾರ್ಮಿಕ ಸಂಘಟನೆಗಳು ಈ ಕೃತ್ಯವನ್ನು ಖಂಡಿಸಿದ್ದು, "ಪರೀಕ್ಷಾ ನಿಯಮಗಳ ಹೆಸರಿನಲ್ಲಿ ಧಾರ್ಮಿಕ ಹಕ್ಕು ಕಸಿದುಕೊಳ್ಳಲಾಗುತ್ತಿದೆ" ಎಂದು ಕಿಡಿಕಾರಿದ್ದಾರೆ.
ಮರುಕಳಿಸಿದ ಹಳೆಯ ಕಹಿ ನೆನಪು
ಕಳೆದ ವರ್ಷವೂ ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜಿನಲ್ಲಿ ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ ಘಟನೆ ಮತ್ತು ಬೀದರ್‌ನಲ್ಲಿ ಜನಿವಾರ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗೆ ಪರೀಕ್ಷೆ ನಿರಾಕರಿಸಿದ ಪ್ರಕರಣಗಳು ಭಾರೀ ಸಂಚಲನ ಮೂಡಿಸಿದ್ದವು. ಈ ವರ್ಷವೂ ಅಂತಹದ್ದೇ ಘಟನೆಗಳು ಮರುಕಳಿಸಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರಿನಲ್ಲಿ ಮೂಗುತಿಗೆ ಗಮ್ ಟೇಪ್
ಚಿಕ್ಕಮಗಳೂರಿನ ಎಂ.ಇ.ಎಸ್ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆಯಲ್ಲಿ ಅಕ್ರಮ ತಡೆಯುವ ನೆಪದಲ್ಲಿ ವಿದ್ಯಾರ್ಥಿನಿಯರ ಮೂಗುತಿಗೆ ಗಮ್ ಟೇಪ್ ಅಂಟಿಸಿ ಒಳಗೆ ಬಿಡಲಾಗಿದೆ. ಯಾವುದೇ ಆಭರಣಗಳಿಗೆ ಅವಕಾಶವಿಲ್ಲದ ಕಾರಣ, ಮೂಗುತಿ ತೆಗೆಯಲು ಸಾಧ್ಯವಾಗದ ವಿದ್ಯಾರ್ಥಿನಿಯರ ಮುಖಕ್ಕೆ ಟೇಪ್ ಹಚ್ಚುವ ಮೂಲಕ ಕೆಇಎ ಸಿಬ್ಬಂದಿ ಈ ಕ್ರಮ ಅನುಸರಿಸಿದ್ದಾರೆ.
ಏನಿದೆ ಕೆಇಎ ಮಾರ್ಗಸೂಚಿ ಏನು?
ಪರೀಕ್ಷೆಯಲ್ಲಿ ಅಕ್ರಮ ತಡೆಯಲು ಕೆಇಎ ಈ ಬಾರಿ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.
ಪುರುಷರು ಅರ್ಧ ತೋಳಿನ ಶರ್ಟ್ ಅಥವಾ ಟೀ-ಶರ್ಟ್ ಮಾತ್ರ ಧರಿಸಬೇಕು. ತೆಳುವಾದ ಅಡಿಭಾಗವಿರುವ ಚಪ್ಪಲಿಯನ್ನಷ್ಟೇ ಹಾಕಬೇಕು.
ಮಹಿಳೆಯರು ದೊಡ್ಡ ಬಟನ್, ಕಸೂತಿ ಕೆಲಸದ ಬಟ್ಟೆ, ಪೂರ್ಣ ತೋಳಿನ ಅಂಗಿ ಮತ್ತು ಜೀನ್ಸ್ ಧರಿಸುವಂತಿಲ್ಲ. ಯಾವುದೇ ರೀತಿಯ ಆಭರಣಗಳನ್ನು ಹಾಕಿಕೊಂಡು ಬರುವಂತಿಲ್ಲ.
ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕಣ್ಗಾವಲು, ಮುಖ ಚಹರೆ ಪತ್ತೆ ಸಾಧನ ಮತ್ತು ಜಾಮರ್‌ಗಳನ್ನು ಅಳವಡಿಸಲಾಗಿದೆ.
ವಿದ್ಯಾರ್ಥಿಗಳು ಪ್ರವೇಶ ಪತ್ರ ಮತ್ತು ಸರ್ಕಾರಿ ಫೋಟೋ ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕು. ಪರೀಕ್ಷೆ ಆರಂಭಕ್ಕೂ 2 ಗಂಟೆ ಮೊದಲು ಹಾಜರಿರಬೇಕು. ಪರೀಕ್ಷೆ ಮುಗಿಯುವವರೆಗೆ ಹೊರಹೋಗಲು ಅವಕಾಶವಿಲ್ಲ ಎಂದು ಕೆಇಎ ಮಾರ್ಗಸೂಚಿಯಲ್ಲಿ ತಿಳಿಸಿದೆ.

