ಸಂಪುಟದಲ್ಲಿ ಮಹಿಳೆಯರಿಗೆ ಸಿಗದ ಸ್ಥಾನಮಾನ: ಮಾರ್ಗರೆಟ್ ಆಳ್ವಾ ಅಸಮಾಧಾನ
x

ಮಾರ್ಗರೆಟ್ ಆಳ್ವಾ

ಸಂಪುಟದಲ್ಲಿ ಮಹಿಳೆಯರಿಗೆ ಸಿಗದ ಸ್ಥಾನಮಾನ: ಮಾರ್ಗರೆಟ್ ಆಳ್ವಾ ಅಸಮಾಧಾನ

ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಮಹಿಳೆಯರನ್ನು ಕಡೆಗಣಿಸಿರುವುದಕ್ಕೆ ಹಿರಿಯ ನಾಯಕಿ ಮಾರ್ಗರೆಟ್ ಆಳ್ವಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಕೆಶಿ ನೇತೃತ್ವದ ಸರ್ಕಾರಕ್ಕೆ ಹೊಸ ಸಂಕಟ ತಂದೊಡ್ಡಿದೆ.


Click the Play button to hear this message in audio format

ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಅವರೊಂದಿಗೆ 13 ಸಚಿವರು ಕೂಡ ಅಧಿಕಾರ ವಹಿಸಿಕೊಂಡಿದ್ದಾರೆ. ವಿವಿಧ ಜಾತಿ, ಸಮುದಾಯಗಳಿಗೆ ಆದ್ಯತೆ ನೀಡಲಾಗಿದೆ. ಆದರೆ, ಮೊದಲ ಹಂತದ ಸಂಪುಟ ರಚನೆಯಲ್ಲಿ ಒಬ್ಬರೇ ಒಬ್ಬರು ಮಹಿಳಾ ಶಾಸಕಿಗೆ ಸ್ಥಾನ ನೀಡದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಸಂಪುಟದಲ್ಲಿ ಮಹಿಳೆಯರನ್ನು ಕಡೆಗಣಿಸಿರುವುದಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಅವರು ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮಾರ್ಗರೇಟ್ ಆಳ್ವಾ ಅವರು, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಡಿ.ಕೆ. ಶಿವಕುಮಾರ್ ಮತ್ತು ಅವರ ತಂಡಕ್ಕೆ ಶುಭ ಹಾರೈಸಿದ್ದಾರೆ. ಇದೇ ವೇಳೆ ತಮ್ಮ ಬೇಸರ ಹಂಚಿಕೊಂಡಿರುವ ಅವರು, ನೂತನ ಸಂಪುಟದಲ್ಲಿ ಕನಿಷ್ಠ ಒಬ್ಬರಾದರೂ ಕಾಂಗ್ರೆಸ್ ಮಹಿಳಾ ಪ್ರತಿನಿಧಿಗೆ ಸ್ಥಾನ ಸಿಗಬಹುದು ಎಂದು ಆಶಿಸಿದ್ದೆ. ಆದರೆ, ಒಬ್ಬರಿಗೂ ಸ್ಥಾನ ನೀಡದಿರುವುದು ತೀವ್ರ ನಿರಾಶೆ ಉಂಟುಮಾಡಿದೆ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಲಕ್ಷ್ಮಿ ಹೆಬ್ಬಾಳ್ಕರ್, ರೂಪಕಲಾ ಶಶಿಧರ್, ನಯನಾ ಮೋಟಮ್ಮ ಮತ್ತು ಖನೀಜ್ ಫಾತಿಮಾ ಸೇರಿದಂತೆ ನಾಲ್ವರು ಮಹಿಳಾ ಶಾಸಕಿಯರಿದ್ದಾರೆ. ಅಲ್ಲದೆ ಬಲ್ಕೀಸ್ ಬಾನು, ಆರತಿ ಕೃಷ್ಣ ಮತ್ತು ಉಮಾಶ್ರೀ ಅವರಂತಹ ಪ್ರಭಾವಿ ಮಹಿಳಾ ವಿಧಾನ ಪರಿಷತ್ ಸದಸ್ಯರೂ ಇದ್ದಾರೆ. ಮೊದಲ ಹಂತದ ಸಂಪುಟ ರಚನೆಯಲ್ಲಿ ಕೆಜಿಎಫ್ ಶಾಸಕಿ ರೂಪಕಲಾ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಮಹಿಳೆಯರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ದೆಹಲಿ ಮಟ್ಟದಲ್ಲಿ ಕಸರತ್ತು ನಡೆಸಿದ್ದರು. ಆದಾಗ್ಯೂ, ಹೈಕಮಾಂಡ್ ಮೊದಲ ಪಟ್ಟಿಯಲ್ಲಿ ಮಹಿಳೆಯರನ್ನು ಕೈಬಿಟ್ಟಿದೆ.

ಸದ್ಯ ರಚನೆಯಾಗಿರುವ ಸಂಪುಟದಲ್ಲಿ ಇನ್ನೂ 20 ಸಚಿವ ಸ್ಥಾನಗಳು ಖಾಲಿ ಉಳಿದಿದ್ದು, ಮುಂದಿನ ದಿನಗಳಲ್ಲಿ ಇವುಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ. ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿ ಏಕೈಕ ಮಹಿಳಾ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು. ಮುಂಬರುವ ದಿನಗಳಲ್ಲಾದರೂ ಡಿ.ಕೆ. ಶಿವಕುಮಾರ್ ಅವರು ಮಹಿಳಾ ಶಾಸಕಿಯರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸುತ್ತಾರಾ ನೋಡಬೇಕಾಗಿದೆ.

Read More
Next Story