
ಬಜೆಟ್ ಸಿದ್ಧತೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ: ಮಾ.6ಕ್ಕೆ ಮಂಡಿಸುವ ಸಾಧ್ಯತೆ
ಬಜೆಟ್ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಇಲಾಖಾವಾರು ಸಭೆಗಳನ್ನು ಆರಂಭಿಸಿದ್ದು, ಪ್ರಸ್ತಾವನೆಗಳನ್ನು ಪಡೆದುಕೊಳ್ಳಲಾರಂಭಿಸಿದ್ದಾರೆ. ಹೊಸ ಯೋಜನೆಗಳ ಅನುಷ್ಠಾನದ ಕುರಿತು ಚರ್ಚೆ ನಡೆಸುತ್ತಿದ್ದಾರೆ.
2026-27ನೇ ಸಾಲಿನ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ಅವರು ಸಿದ್ಧತೆ ಆರಂಭಿಸಿದ್ದು, ಮಾ.6ರಂದು ಆಯವ್ಯಯ ಮಂಡಿಸುವ ಸಾಧ್ಯತೆ ಇದೆ.
ಹಣಕಾಸು ಖಾತೆ ಹೊಂದಿರುವ ಸಿದ್ದರಾಮಯ್ಯ ಅವರಿಗೆ ಇದು ದಾಖಲೆಯ 17ನೇ ಬಜೆಟ್ ಆಗಲಿದೆ. ಬಜೆಟ್ ಮಂಡನೆ ಹಿನ್ನೆಲೆ ಸಿದ್ದರಾಮಯ್ಯ ಅವರು ಇಲಾಖಾವಾರು ಸಭೆಗಳನ್ನು ನಡೆಸುತ್ತಿದ್ದು, ಪ್ರಸ್ತಾವನೆಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಶುಕ್ರವಾರ ಕ್ರೀಡೆ, ಬೃಹತ್ ಕೈಗಾರಿಕಾ, ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿದರು. ಈ ವೇಳೆ ಇಲಾಖಾವಾರು ಬೇಡಿಕೆಗಳನ್ನು ಆಲಿಸಿದರು. ಕಳೆದ ಬಜೆಟ್‌ನಲ್ಲಿ ಪ್ರಕಟಿಸಲಾದ ಯೋಜನೆಗಳ ಪ್ರಗತಿ ಮತ್ತು ಹೊಸ ಯೋಜನೆಗಳ ಅನುಷ್ಠಾನದ ಸಾಧಕ-ಬಾಧಕ ಕುರಿತು ಚರ್ಚೆ ನಡೆಸಿದರು.
ಗ್ಯಾರಂಟಿ ಯೋಜನೆಯ ಹೊರೆಯಾಗಿರುವುದರ ನಡುವೆ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವ ಬಜೆಟ್ ಮಂಡಿಸುವುದು ಸಿದ್ದರಾಮಯ್ಯ ಅವರ ಗುರಿಯಾಗಿದೆ. ಗ್ಯಾರಂಟಿ ಯೋಜನೆಗೆ ಪ್ರತಿವರ್ಷದಂತೆ ಈ ವರ್ಷವೂ ದೊಡ್ಡ ಮೊತ್ತದ ಅನುದಾನ ಮೀಸಲಿಡಬೇಕಿದೆ. ಈ ಯೋಜನೆಗಳ ಯಶಸ್ವಿ ನಡುವೆಯೇ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆಯಾಗದಂತೆ ಸಮತೋಲನ ಕಾಯ್ದುಕೊಳ್ಳುವುದು ದೊಡ್ಡ ಸವಾಲಾಗಿದೆ.
ಇಲಾಖಾವಾರು ಸಭೆಗಳನ್ನು ಇದೇ ತಿಂಗಳು 15 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹಣಕಾಸು ಇಲಾಖೆ ಮೂಲಗಳು ಹೇಳಿವೆ.
ಇಲಾಖಾವಾರು ಸಭೆಗಳ ಬಳಿಕ ವಿವಿಧ ಸಂಘಟನೆ, ರೈತ ಮುಖಂಡರು, ಕೈಗಾರಿಕೋದ್ಯಮಿಗಳೊಂದಿಗೂ ಪ್ರತ್ಯೇಕವಾಗಿ ಸಭೆ ನಡೆಸಿ ಅವರ ಬೇಡಿಕೆಗಳನ್ನು ಆಲಿಸಿ, ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಮಾ.6ರಂದು ಬಜೆಟ್ ಅಧಿವೇಶನ ಕರೆದು, ಅಂದೇ ಮಂಡಿಸುವ ಬಗ್ಗೆ ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ. ನಂತರ ಬಜೆಟ್ ಮೇಲಿನ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.
ಈ ಬಾರಿಯ ಬಜೆಟ್‌ನಲ್ಲಿ ಕೃಷಿ, ನೀರಾವರಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆಯಿದೆ. ಅಲ್ಲದೇ, ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆ ಮತ್ತು ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ಹೆಚ್ಚಿನ ಅನುದಾನ ಸಿಗುವ ಸಾಧ್ಯತೆಯಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೂ ಹೆಚ್ಚಿನ ಒತ್ತು ನೀಡುವ ನಿರೀಕ್ಷೆಯಿದ್ದು, ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎನ್ನಲಾಗಿದೆ.
ಸಿದ್ದರಾಮಯ್ಯ ಮಂಡಿಸಲಿರುವ 17ನೇ ಬಜೆಟ್ ರಾಜ್ಯದ ಆರ್ಥಿಕತೆಗೆ ಯಾವ ದಿಕ್ಕು ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

