
ಎಚ್ಎಂಟಿಗೆ ಮರುಜೀವ: ಸ್ವಾತಂತ್ರ್ಯ ದಿನದಂದು ಒಂದೇ ದಿನ 35 ಲಕ್ಷ ರೂ. ದಾಖಲೆ ಮಾರಾಟ
ಸುಮಾರು ಎರಡೂವರೆ ಕಿ.ಮೀ.ಗೂ ಹೆಚ್ಚು ದೂರದವರೆಗೆ ಜನ ಸಾಲಿನಲ್ಲಿ ನಿಂತು ಗಡಿಯಾರಗಳನ್ನು ಖರೀದಿಸಿದ್ದು, ಹೆಚ್.ಎಂ.ಟಿ. ಬ್ರ್ಯಾಂಡ್ ಮೇಲೆ ಜನರಿಗಿರುವ ನಂಬಿಕೆ ಮತ್ತು ಅಭಿಮಾನಕ್ಕೆ ಸಾಕ್ಷಿಯಾಗಿದೆ
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಾರುಕಟ್ಟೆಗೆ ಬಿಡುಗಡೆಯಾದ ಎಚ್ಎಂಟಿಯ ವಿಶೇಷ ಆವೃತ್ತಿಯ ಕೈಗಡಿಯಾರಗಳಿಗೆ ಗ್ರಾಹಕರು ತೋರಿದ ಅಭೂತಪೂರ್ವ ಸ್ಪಂದನೆ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಲ್ಲಿ ನವೋತ್ಸಾಹವನ್ನು ತುಂಬಿದೆ. ಕೇವಲ ಒಂದೇ ದಿನದಲ್ಲಿ 35 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ವಹಿವಾಟು ನಡೆದಿರುವುದು ಈ ಐತಿಹಾಸಿಕ ಕಂಪನಿಯ ಪುನಶ್ಚೇತನದ ಹಾದಿಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ.
ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ಸಚಿವ ಎಚ್.ಡಿ.ಕುಮಾರಸ್ವಾಮಿ, ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಘಟನೆಯನ್ನು ಅತ್ಯಂತ ಭಾವುಕವಾಗಿ ವಿವರಿಸಿದರು. ಕಂಪನಿಯು ವಿಶೇಷ ಆವೃತ್ತಿಯ ಕೆಲ ಅಪರೂಪದ ಕೈಗಡಿಯಾರಗಳನ್ನು ಬಿಡುಗಡೆ ಮಾಡಿದಾಗ, ಗ್ರಾಹಕರು ಅವುಗಳನ್ನು ಖರೀದಿಸಲು ತೋರಿಸಿದ ಉತ್ಸಾಹ ಅಚ್ಚರಿಯನ್ನು ಮೂಡಿಸಿತ್ತು. ಸುಮಾರು ಎರಡೂವರೆ ಕಿಲೋಮೀಟರ್‌ಗೂ ಹೆಚ್ಚು ದೂರದವರೆಗೆ ಜನ ಸಾಲಿನಲ್ಲಿ ನಿಂತು ಗಡಿಯಾರಗಳನ್ನು ಖರೀದಿಸಿದ್ದು, ಹೆಚ್.ಎಂ.ಟಿ. ಬ್ರ್ಯಾಂಡ್ ಮೇಲೆ ಜನರಿಗಿರುವ ನಂಬಿಕೆ ಮತ್ತು ಅಭಿಮಾನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಪುನಶ್ಚೇತನಕ್ಕೆ ಸಿಕ್ಕ ದೊಡ್ಡ ಬಲ
ಒಂದೇ ದಿನದಲ್ಲಿ ಸಾವಿರಾರು ಕೈಗಡಿಯಾರಗಳು ಮಾರಾಟವಾಗಿ 35 ಲಕ್ಷ ರೂ. ವಹಿವಾಟು ನಡೆದಿದ್ದು, ಈ ಕಂಪನಿಗೆ ಮರುಜೀವ ನೀಡುವ ಸಚಿವರ ಪ್ರಯತ್ನಕ್ಕೆ ದೊಡ್ಡ ಶಕ್ತಿಯಾಗಿದೆ. ಎಚ್ಎಂಟಿ ವಾಚ್ ಕಟ್ಟುವುದು ಹಿಂದೆ ಪ್ರತಿಷ್ಠೆಯ ವಿಷಯವಾಗಿತ್ತು. ಆ ಹಳೆಯ ವೈಭವವನ್ನು ಮರಳಿ ತರುವುದು ನನ್ನ ಗುರಿ. ಅದಕ್ಕಾಗಿ ನಾವು ಕಳೆದ ಎರಡು ವರ್ಷಗಳಿಂದ ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ. ಎಚ್.ಎಂ.ಟಿ. ಕಾರ್ಖಾನೆಯನ್ನು ಮತ್ತೆ ಲಾಭದಾಯಕವಾಗಿ ಮತ್ತು ಕಾರ್ಯನಿರ್ವಹಣೆಗೆ ಸಿದ್ಧಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಯೋಜನಾ ಆಯೋಗದ ಸದಸ್ಯ ವಿ.ಕೆ. ಸಾರಸ್ವತ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಉನ್ನತ ಮಟ್ಟದ ಸಮಿತಿಯು ಈಗಾಗಲೇ ಅಧ್ಯಯನ ನಡೆಸಿ, ಕಂಪನಿಯನ್ನು ಪುನಶ್ಚೇತನಗೊಳಿಸಲು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಈ ವರದಿಯ ಅನುಷ್ಠಾನದ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೂ ಸಚಿವರು ಸುದೀರ್ಘ ಚರ್ಚೆ ನಡೆಸಿದ್ದಾರೆ. ಕಾರ್ಖಾನೆಯ ಆಧುನೀಕರಣ ಮತ್ತು ಮಾರುಕಟ್ಟೆ ವಿಸ್ತರಣೆಯ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿಸಿದರು.
ಯುವಜನತೆಯ ಉತ್ಸಾಹವೇ ಸ್ಫೂರ್ತಿ
ಎಚ್.ಎಂ.ಟಿ.ಯ ಮರುಜೀವಕ್ಕೆ ಅತಿ ದೊಡ್ಡ ಕೊಡುಗೆ ನೀಡುತ್ತಿರುವುದು ಇಂದಿನ ಯುವಜನತೆ ಎಂದು ಕುಮಾರಸ್ವಾಮಿ ಅವರು ಸಂತಸ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ದಿನದಂದು ವಾಚ್ ಖರೀದಿಸಲು ಬಂದವರಲ್ಲಿ ಬಹುತೇಕರು ಯುವಕರು. ವಯಸ್ಸಿನ ಹಂಗಿಲ್ಲದೆ ಹಿರಿಯರು, ಕಿರಿಯರು ಮತ್ತು ಮಕ್ಕಳು ಕೂಡ ಸಾಲಿನಲ್ಲಿ ನಿಂತಿದ್ದು ಕಂಡು ನನಗೆ ಅತೀವ ಸಂತೋಷವಾಯಿತು. ನಮ್ಮ ಈ ಸಾಂಪ್ರದಾಯಿಕ ಕಂಪನಿಯ ಮೇಲೆ ಯುವಕರು ತೋರುತ್ತಿರುವ ಅಭಿಮಾನಕ್ಕೆ ನಾನು ಚಿರಋಣಿ ಎಂದು ಕೃತಜ್ಞತೆ ಸಲ್ಲಿಸಿದರು. ಯುವಕರ ಈ ಬೆಂಬಲವೇ ಬ್ರ್ಯಾಂಡ್ ಅನ್ನು ಆಧುನಿಕತೆಗೆ ತಕ್ಕಂತೆ ಬದಲಿಸಲು ಪ್ರೇರಣೆ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತದ ಕೈಗಾರಿಕಾ ಇತಿಹಾಸದಲ್ಲಿ ಹೆಚ್.ಎಂ.ಟಿ. ತನ್ನದೇ ಆದ ಸ್ಥಾನವನ್ನು ಹೊಂದಿದೆ. ಒಂದು ಕಾಲದಲ್ಲಿ ಸಮಯದ ರಾಜ ಎಂದು ಕರೆಯಲ್ಪಡುತ್ತಿದ್ದ ಎಚ್.ಎಂ.ಟಿ., ನಂತರದ ದಿನಗಳಲ್ಲಿ ಮಾರುಕಟ್ಟೆಯ ಸ್ಪರ್ಧೆ ಮತ್ತು ತಾಂತ್ರಿಕ ಬದಲಾವಣೆಗಳಿಂದಾಗಿ ಹಿನ್ನಡೆ ಅನುಭವಿಸಿತು. ಆದರೆ, ಈಗ ಆತ್ಮನಿರ್ಭರ ಭಾರತದ ಕನಸಿನೊಂದಿಗೆ, ಸ್ಥಳೀಯ ಬ್ರ್ಯಾಂಡ್‌ಗಳನ್ನು ಪ್ರೋತ್ಸಾಹಿಸುವ ಅಲೆಯು ಎಚ್.ಎಂ.ಟಿ.ಗೆ ಮರುಜೀವ ನೀಡುತ್ತಿದೆ. ಸಚಿವ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಎಚ್.ಎಂ.ಟಿ. ಕೇವಲ ಒಂದು ಗಡಿಯಾರ ಕಂಪನಿಯಾಗಿ ಮಾತ್ರವಲ್ಲದೆ, ಭಾರತೀಯ ಕೌಶಲ್ಯ ಮತ್ತು ತಂತ್ರಜ್ಞಾನದ ಹೆಮ್ಮೆಯಾಗಿ ಮತ್ತೆ ಹೊರಹೊಮ್ಮಲಿದೆ ಎಂಬ ನಿರೀಕ್ಷೆ ಮೂಡಿದೆ.
ಕಂಪನಿಯ ಮರುಜೀವಕ್ಕೆ ಸಚಿವರು ಉತ್ಸುಕರಾಗಿದ್ದರೂ, ಮಾರುಕಟ್ಟೆಯಲ್ಲಿನ ತೀವ್ರ ಸ್ಪರ್ಧೆ ಮತ್ತು ಆಧುನಿಕ ಸ್ಮಾರ್ಟ್ ವಾಚ್‌ಗಳ ಯುಗದಲ್ಲಿ ಎಚ್.ಎಂ.ಟಿ. ತನ್ನ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳಲಿದೆ ಎಂಬುದು ಮುಖ್ಯ ಸವಾಲಾಗಿದೆ. ಆದರೂ, ಎಚ್.ಎಂ.ಟಿ.ಯ ಮೇಲಿರುವ ಹಳೆಯ ನೆನಪಿನ ಬಾಂಧವ್ಯ ಮತ್ತು ಗುಣಮಟ್ಟದ ಮೇಲಿನ ನಂಬಿಕೆ ಗ್ರಾಹಕರನ್ನು ಮತ್ತೆ ಸೆಳೆಯುತ್ತಿರುವುದು ಶುಭ ಸೂಚನೆಯಾಗಿದೆ.

