
ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನಕ್ಕೆ ಚಾಲನೆ: ಒತ್ತುವರಿ ತೆರವಿಗೆ ಜಿಬಿಎ ಸಮರ
ಸಾರ್ವಜನಿಕರ ಆಸ್ತಿಯಾದ ಪಾದಚಾರಿ ಮಾರ್ಗಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಅಥವಾ ಅಕ್ರಮ ನಿರ್ಮಾಣಗಳಿಗಾಗಿ ಬಳಸುವುದನ್ನು ತಡೆಯಲು ಸರ್ಕಾರ ಒತ್ತುವರಿ ತೆರವು ಕಾರ್ಯಾಚರಣೆ ನಿರ್ಧಾರ ಕೈಗೊಂಡಿದೆ.
ಪಾದಚಾರಿಗಳ ಹಕ್ಕುಗಳನ್ನು ಮರುಸ್ಥಾಪಿಸಲು ಮತ್ತು ನಗರದ ರಸ್ತೆಗಳನ್ನು ಅಡೆತಡೆಯಿಲ್ಲದ ಸಂಚಾರಕ್ಕೆ ಮುಕ್ತಗೊಳಿಸಲು, ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ‘ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನ’ವನ್ನು ಅಧಿಕೃತವಾಗಿ ಆರಂಭಿಸಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನಿರ್ದೇಶನ ಮತ್ತು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಾರ್ಗದರ್ಶನದಂತೆ 5 ನಗರ ಪಾಲಿಕೆಗಳ ಪ್ರಮುಖ ರಸ್ತೆಗಳಲ್ಲಿ ಬರುವ ಪಾದಚಾರಿ ಮಾರ್ಗಗಳಲ್ಲಿದ್ದ ಅಡೆತಡೆಗಳನ್ನು ತೆರವುಗೊಳಿಸಿ, ಪಾದಚಾರಿಗಳ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ದಟ್ಟಣೆ ಮತ್ತು ಪಾದಚಾರಿ ಮಾರ್ಗಗಳ ಮೇಲಿನ ಅಕ್ರಮ ಒತ್ತುವರಿಯು ಪಾದಚಾರಿಗಳ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ. ಸಾರ್ವಜನಿಕರ ಆಸ್ತಿಯಾದ ಪಾದಚಾರಿ ಮಾರ್ಗಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಅಥವಾ ಅಕ್ರಮ ನಿರ್ಮಾಣಗಳಿಗಾಗಿ ಬಳಸುವುದನ್ನು ತಡೆಯಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ಸಮರ ಸಾರಿದ ಅಧಿಕಾರಿಗಳು
ಬೆಂಗಳೂರಿನ ಐದೂ ನಗರ ಪಾಲಿಕೆಗಳ ಆಯುಕ್ತರ ನೇತೃತ್ವದಲ್ಲಿ, ಪೊಲೀಸ್ ಭದ್ರತೆಯೊಂದಿಗೆ ಬೃಹತ್ ತೆರವು ಕಾರ್ಯಾಚರಣೆ ನಡೆಯಿತು. ಬೆಂಗಳೂರು ಪೂರ್ವ ಪಾಲಿಕೆಯ ವ್ಯಾಪ್ತಿಯ ಮಾರತಹಳ್ಳಿ, ಐಟಿಪಿಎಲ್, ವರ್ತೂರು, ಟಿನ್ ಫ್ಯಾಕ್ಟರಿ ಮತ್ತು ರಾಮಮೂರ್ತಿನಗರ ಭಾಗದಲ್ಲಿ ಅಕ್ರಮ ಶೆಡ್ ಮತ್ತು ನಾಮಫಲಕಗಳನ್ನು ತೆರವುಗೊಳಿಸಲಾಯಿತು. ಬೆಂಗಳೂರು ಕೇಂದ್ರ ಪಾಲಿಕೆಯ ವ್ಯಾಪ್ತಿಯಲ್ಲಿ ಎಂಜಿ ರಸ್ತೆ, ಇಂದಿರಾನಗರ, ಮೆಜೆಸ್ಟಿಕ್ ಮತ್ತು ಜಯನಗರದಂತಹ ಜನನಿಬಿಡ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳನ್ನು ಆವರಿಸಿದ್ದ ಕಟ್ಟಡ ಸಾಮಗ್ರಿ ಮತ್ತು ಅನಧಿಕೃತ ರಚನೆಗಳನ್ನು ತೆರವುಗೊಳಿಸಲಾಯಿತು. ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಉತ್ತರಹಳ್ಳಿ, ಬಿಟಿಎಂ ಲೇಔಟ್, ಕೋರಮಂಗಲ ಮತ್ತು ಜೆಪಿ ನಗರದಲ್ಲಿ ವ್ಯಾಪಾರಿಗಳು ಪಾದಚಾರಿ ಮಾರ್ಗವನ್ನೇ ತಮ್ಮ ವಿಸ್ತರಣಾ ಜಾಗವನ್ನಾಗಿ ಮಾಡಿಕೊಂಡಿದ್ದನ್ನು ಅಧಿಕಾರಿಗಳು ನೆಲಸಮಗೊಳಿಸಿದರು. ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಹೆಬ್ಬಾಳ ಮತ್ತು ಯಲಹಂಕ ಸುತ್ತಮುತ್ತಲಿನ ರಸ್ತೆಗಳಲ್ಲಿ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಲಾಯಿತು. ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಮೈಸೂರು ರಸ್ತೆ, ರಾಜಾಜಿನಗರ ಮತ್ತು ಮಾಗಡಿ ರಸ್ತೆಯಂತಹ ಪ್ರಮುಖ ಮಾರ್ಗಗಳಲ್ಲಿ ಜೆಸಿಬಿಗಳ ಬಳಕೆಯ ಮೂಲಕ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲಾಯಿತು.
ತೆರವುಗೊಂಡ ಅಡೆತಡೆಗಳೇನು?
ಕಾರ್ಯಾಚರಣೆಯ ವೇಳೆ ಅಕ್ರಮ ನಾಮಫಲಕಗಳು, ಅಂಗಡಿಗಳ ಮುಂಭಾಗ ಹಾಕಲಾಗಿದ್ದ ಶೀಟ್‌ಗಳು, ಮೆಟ್ಟಿಲುಗಳು, ಓಎಫ್‌ಸಿ ಕೇಬಲ್‌ಗಳು, ಕಟ್ಟಡ ತ್ಯಾಜ್ಯಗಳು, ತಳ್ಳುಗಾಡಿಗಳು ಮತ್ತು ಶಾಶ್ವತ ಪೆಟ್ಟಿಗೆಗಳನ್ನು ವಶಕ್ಕೆ ಪಡೆಯಲಾಗಿದೆ. ಅತಿಕ್ರಮಣಕಾರರಿಗೆ ಮೊದಲೇ ಎಚ್ಚರಿಕೆ ನೀಡಿದ್ದರೂ ಮಣಿಯದ ಕಾರಣ, ಇದೀಗ ಬಲವಂತದ ತೆರವು ಕಾರ್ಯಾಚರಣೆಯನ್ನು ಅನಿವಾರ್ಯವಾಗಿ ಕೈಗೊಳ್ಳಲಾಗಿದೆ. ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿರುವ ಅಧಿಕಾರಿಗಳು "ಮುಂದಿನ ಶುಕ್ರವಾರದೊಳಗೆ ಪಾದಚಾರಿ ಮಾರ್ಗವನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸದಿದ್ದರೆ, 5 ಸಾವಿರ ರೂ. ದಂಡ ವಿಧಿಸುವುದರ ಜೊತೆಗೆ ಪಾದಚಾರಿ ಮಾರ್ಗದಲ್ಲಿಟ್ಟಿರುವ ಎಲ್ಲಾ ಸರಕುಗಳನ್ನು ಜಪ್ತಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಬೀದಿಬದಿ ವ್ಯಾಪಾರಿಗಳ ಜೀವನೋಪಾಯದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇದೆ, ಆದರೆ ಅದು ಪಾದಚಾರಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಇರಬೇಕು ಎಂಬುದು ಸರ್ಕಾರದ ನಿಲುವು ಎಂದಿದ್ದಾರೆ.
ಇದು ಜನಾಂದೋಲನವಾಗಬೇಕು
ಈ ಅಭಿಯಾನದ ಬಗ್ಗೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತವಾಗಿ ನಡೆಯುವ ಹಕ್ಕಿದೆ. ಪಾದಚಾರಿ ಮಾರ್ಗಗಳ ಒತ್ತುವರಿ ಎಂದರೆ ನಾಗರಿಕರ ಸುರಕ್ಷತೆಯನ್ನು ಕಸಿದುಕೊಂಡಂತೆ. ಇದು ಕೇವಲ ಸರ್ಕಾರದ ಕಾರ್ಯಾಚರಣೆಯಲ್ಲ, ಪ್ರತಿಯೊಬ್ಬ ನಾಗರಿಕನೂ ಪಾಲ್ಗೊಳ್ಳಬೇಕಾದ ಜನಾಂದೋಲನವಾಗಬೇಕು. ಅಲ್ಲದೆ, ಬೀದಿಬದಿ ವ್ಯಾಪಾರಿಗಳಿಗಾಗಿ ಶೇ.20ರಷ್ಟು ಜಾಗವನ್ನು ನಿಗದಿಪಡಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಉಳಿದ ಜಾಗದಲ್ಲಿ ವ್ಯಾಪಾರ ನಡೆಸುವವರು ಪಾದಚಾರಿಗಳ ಓಡಾಟಕ್ಕೆ ಅಡ್ಡಿಪಡಿಸಬಾರದು. ನಾವು ಅವರ ಉದ್ಯೋಗವನ್ನು ಕಿತ್ತುಕೊಳ್ಳುತ್ತಿಲ್ಲ, ಬದಲಾಗಿ ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಅಭಿಯಾನವು ಇಲ್ಲಿಗೆ ಮುಗಿಯುವುದಿಲ್ಲ, ಇದು ನಿರಂತರ ಪ್ರಕ್ರಿಯೆಯಾಗಿ ಮುಂದುವರಿಯಲಿದೆ. ಸಾರ್ವಜನಿಕರಿಂದ ದೂರುಗಳು ಬಂದರೆ ತಕ್ಷಣವೇ ಆ ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆ ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂತ್ರಜ್ಞಾನವನ್ನು ಬಳಸಿ ಅಕ್ರಮ ಒತ್ತುವರಿಗಳನ್ನು ಗುರುತಿಸಲಾಗುತ್ತಿದ್ದು, ಪದೇ ಪದೇ ನಿಯಮ ಉಲ್ಲಂಘಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗಿದೆ. ನಗರದ ಅಭಿವೃದ್ಧಿಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಂತ ಮಹತ್ವದ್ದು. ಪಾದಚಾರಿ ಮಾರ್ಗಗಳು ಕೇವಲ ಸರ್ಕಾರಿ ಆಸ್ತಿಯಲ್ಲ, ಅವು ನಗರದ ಜೀವಾಳ. ನಾಗರಿಕರು ಸ್ವತಃ ತಮ್ಮ ಮನೆ ಅಥವಾ ಅಂಗಡಿಗಳ ಮುಂಭಾಗದ ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸುವ ಮೂಲಕ ಈ ಅಭಿಯಾನಕ್ಕೆ ಕೈಜೋಡಿಸಬೇಕಿದೆ ಎಂದು ತಿಳಿಸಿದ್ದಾರೆ.

