ಜೂ.14 - 24ರೊಳಗೆ ಜಿಬಿಎ ಚುನಾವಣೆ ದಿನಾಂಕ ಘೋಷಿಸಲು ಚುನಾವಣಾ ಆಯೋಗದ ನಿರ್ದೇಶನ
x

ಜೂ.14 - 24ರೊಳಗೆ ಜಿಬಿಎ ಚುನಾವಣೆ ದಿನಾಂಕ ಘೋಷಿಸಲು ಚುನಾವಣಾ ಆಯೋಗದ ನಿರ್ದೇಶನ

ಜಿಬಿಎ ಅಡಿ 369 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಸಭೆಯಲ್ಲಿ ಜಿಬಿಎ ಅಧಿಕಾರಿಗಳು, ಚುನಾವಣಾ ಸಿದ್ಧತೆಯ ವಿವರಗಳನ್ನು ನೀಡಿದ್ದು, ದಿನಾಂಕ ನಿಗದಿ ಮಾತ್ರ ಬಾಕಿ ಇರುವುದಾಗಿ ದೃಢಪಡಿಸಿದ್ದಾರೆ.


Click the Play button to hear this message in audio format

ದಶಕದ ಕಾಯುವಿಕೆಯ ನಂತರ ಸಿಲಿಕಾನ್ ಸಿಟಿ ಬೆಂಗಳೂರಿನ ಆಡಳಿತಾತ್ಮಕ ಸ್ವರೂಪದಲ್ಲಿ ಮಹತ್ತರ ಬದಲಾವಣೆಯಾಗಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ 5 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ರಂಗದಲ್ಲಿ ಭಾರಿ ಚಟುವಟಿಕೆಗಳು ಆರಂಭವಾಗಿವೆ. ಚುನಾವಣೆಯನ್ನು ನಿಗದಿತ ಸಮಯದೊಳಗೆ ನಡೆಸುವ ಕುರಿತು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಸೇರಿದಂತೆ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜೂ.14 ರಿಂದ ಜೂ.24ರೊಳಗೆ ಯಾವುದಾದರೂ ಒಂದು ಸೂಕ್ತ ದಿನಾಂಕವನ್ನು ಸೂಚಿಸುವಂತೆ ಜಿಬಿಎ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಬಿಎ ಅಡಿಯಲ್ಲಿ ಒಟ್ಟು 369 ವಾರ್ಡ್‌ಗಳಿಗೆ ಚುನಾವಣೆ ನಡೆಯಲಿದೆ. ಸಭೆಯಲ್ಲಿ ಭಾಗವಹಿಸಿದ್ದ ಜಿಬಿಎ ಅಧಿಕಾರಿಗಳು, ಚುನಾವಣಾ ಸಿದ್ಧತೆಯ ವಿವರಗಳನ್ನು ನೀಡಿದ್ದು, ದಿನಾಂಕ ನಿಗದಿ ಮಾತ್ರ ಬಾಕಿ ಇರುವುದಾಗಿ ದೃಢಪಡಿಸಿದ್ದಾರೆ. ಆದರೆ, 369 ವಾರ್ಡ್‌ಗಳಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವಾಗ ಎದುರಾಗಬಹುದಾದ ಭದ್ರತೆ ಮತ್ತು ಸಿಬ್ಬಂದಿ ಕೊರತೆಯಂತಹ ಸವಾಲುಗಳ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈ ಸವಾಲುಗಳ ಬಗ್ಗೆ ಈಗಾಗಲೇ ಮೂರು ವಾರಗಳ ಹಿಂದೆಯೇ ಸುಪ್ರೀಂಕೋರ್ಟ್ ಮುಂದೆ ಅಹವಾಲು ಸಲ್ಲಿಸಲಾಗಿದ್ದು, ಅಲ್ಲಿಂದ ಯಾವುದೇ ಪ್ರತ್ಯುತ್ತರ ಬಾರದ ಕಾರಣ ಸಿದ್ಧತೆ ಮುಂದುವರಿಸಲಾಗುತ್ತಿದೆ ಎನ್ನಲಾಗಿದೆ.

ಸುಪ್ರೀಂಕೋರ್ಟ್ ಗಡುವು

ಸಭೆಯ ನಂತರ ಮಾತನಾಡಿದ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ, ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆ ನಡೆಸಲು ಆಯೋಗವು ಸಂಪೂರ್ಣವಾಗಿ ಸನ್ನದ್ಧವಾಗಿದೆ. ಸುಪ್ರೀಂಕೋರ್ಟ್ ನೀಡಿರುವ ಆದೇಶದಂತೆ ಜೂ.30ರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ನ್ಯಾಯಾಲಯದ ಈ ಆದೇಶವು ಸಾಂವಿಧಾನಿಕವಾಗಿ ಅತ್ಯಂತ ಮಹತ್ವದ್ದಾಗಿದ್ದು, ನಿಗದಿತ ಕಾಲಮಿತಿಯೊಳಗೆ ಕಾರ್ಯ ಮುಗಿಸಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸುವುದು ಮೊದಲ ಆದ್ಯತೆಯಾಗಿದೆ. ಚುನಾವಣೆಯನ್ನು ಮುಂದೂಡುವ ಅಧಿಕಾರ ಕೇವಲ ಸುಪ್ರೀಂಕೋರ್ಟ್‌ಗೆ ಮಾತ್ರ ಇದೆ. ನ್ಯಾಯಾಲಯದಿಂದ ಯಾವುದೇ ಹೊಸ ನಿರ್ದೇಶನಗಳು ಬಾರದ ಕಾರಣ, ಸದ್ಯದ ಆದೇಶದಂತೆಯೇ ಸಿದ್ಧತೆಗಳನ್ನು ಮುಂದುವರಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಜೂನ್ 14 ರಿಂದ 24ರ ನಡುವೆ ಘೋಷಣೆ?

ಚುನಾವಣೆಗೆ ಬೇಕಾದ ಮತದಾರರ ಪಟ್ಟಿ ಸಿದ್ಧತೆ, ಸಿಬ್ಬಂದಿಗಳ ನಿಯೋಜನೆ ಸೇರಿದಂತೆ ಬಹುತೇಕ ಎಲ್ಲಾ ತಾಂತ್ರಿಕ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಈಗ ಕೇವಲ ಅಂತಿಮ ದಿನಾಂಕವನ್ನು ಘೋಷಿಸುವುದು ಮಾತ್ರ ಬಾಕಿ ಇದೆ. ಜೂ.14 ರಿಂದ ಜೂ.24ರೊಳಗಾಗಿ ಯಾವುದಾದರೂ ಒಂದು ಸೂಕ್ತ ದಿನಾಂಕವನ್ನು ಸೂಚಿಸುವಂತೆ ಜಿಬಿಎ ಅಧಿಕಾರಿಗಳಿಗೆ ತಿಳಿಸಲಾಗಿದೆ. ಮುಂದಿನ ವಾರದೊಳಗೆ ಅವರು ದಿನಾಂಕ ಸೂಚಿಸದಿದ್ದರೆ, ಆಯೋಗವೇ ತನ್ನ ವಿವೇಚನಾ ಅಧಿಕಾರ ಬಳಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ದಿನಾಂಕ ನಿಗದಿಪಡಿಸುವಾಗ ರಾಜ್ಯದ ಮಳೆಗಾಲದ ಮುನ್ಸೂಚನೆ, ಶಾಲಾ-ಕಾಲೇಜುಗಳ ಪುನರಾರಂಭದ ಅವಧಿ, ಪರೀಕ್ಷೆಗಳು ಮತ್ತು ಇತರ ವಿಚಾರಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಮಳೆಗಾಲದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇರುವುದರಿಂದ, ಜನರಿಗೆ ತೊಂದರೆಯಾಗದಂತೆ ಹಂತ-ಹಂತವಾಗಿ ಯೋಜನೆ ರೂಪಿಸಲಾಗುತ್ತಿದೆ.

ಸರ್ಕಾರದ ಸಹಕಾರ ಹಾಗೂ ಕಾನೂನು ಹೋರಾಟ

ಪಾಲಿಕೆ ವಿಭಜನೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಸ್ತಿತ್ವದ ಬಗ್ಗೆ ಹೈಕೋರ್ಟ್‌ನಲ್ಲಿ ಅರ್ಜಿಗಳು ಬಾಕಿ ಇರುವ ವಿಚಾರ ಮಾಹಿತಿ ಇಲ್ಲ. ನಾವು ಸುಪ್ರೀಂ ಕೋರ್ಟ್ ನೀಡಿದ ಸ್ಪಷ್ಟ ಆದೇಶವನ್ನು ಮಾತ್ರ ಅನುಸರಿಸುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲಿ ನಮಗೆ ಸಂಪೂರ್ಣ ಸಹಕಾರ ಸಿಗುತ್ತಿದೆ. ಅಧಿಕಾರಿಗಳು ತಮ್ಮ ಕೆಲಸದ ಒತ್ತಡ ಮತ್ತು ಪ್ರಾಯೋಗಿಕ ಕಷ್ಟಗಳನ್ನು ನಮ್ಮ ಮುಂದೆ ಹಂಚಿಕೊಂಡಿದ್ದಾರೆ, ಅದನ್ನು ಆಲಿಸುವುದು ಮತ್ತು ಪರಿಹರಿಸುವುದು ಆಯೋಗದ ಕರ್ತವ್ಯ ಎಂದರು.

Read More
Next Story