ಬೆಂಗಳೂರು ಸ್ವಚ್ಛತೆ: 1.22 ಲಕ್ಷ ಟನ್ ತ್ಯಾಜ್ಯ ತೆರವು, ಈಗ ಖಾಸಗಿ ನಿವೇಶನಗಳ ಸರದಿ
x

ಬೆಂಗಳೂರು ಸ್ವಚ್ಛತೆ: 1.22 ಲಕ್ಷ ಟನ್ ತ್ಯಾಜ್ಯ ತೆರವು, ಈಗ ಖಾಸಗಿ ನಿವೇಶನಗಳ ಸರದಿ

ಮಾಲೀಕರು ಸ್ವಚ್ಛಗೊಳಿಸಿಕೊಳ್ಳಲು ನೀಡಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಜಿಬಿಎ ಸ್ವತಃ ಕಾರ್ಯಾಚರಣೆಗಿಳಿದಿದ್ದು, ಈ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡುವುದಾಗಿ ಎಚ್ಚರಿಸಿದೆ.


Click the Play button to hear this message in audio format

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ನಗರದಾದ್ಯಂತ ಕಸದ ಗುಪ್ಪೆಗಳಾಗಿ ಪರಿವರ್ತನೆಯಾಗಿದ್ದ ಸಾವಿರಾರು ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವ ಅಭಿಯಾನಕ್ಕೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಮಾಲೀಕರು ಸ್ವಚ್ಛಗೊಳಿಸಿಕೊಳ್ಳಲು ನೀಡಿದ್ದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಇಂದಿನಿಂದ ಜಿಬಿಎ ಸ್ವತಃ ಕಾರ್ಯಾಚರಣೆಗಿಳಿದಿದ್ದು, ಈ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡುವುದಾಗಿ ಎಚ್ಚರಿಸಿದೆ.

ನಗರದ ಅನೇಕ ಪ್ರದೇಶಗಳಲ್ಲಿ ಆಸ್ತಿ ಮಾಲೀಕರು ತಮ್ಮ ನಿವೇಶನಗಳನ್ನು ನಿರ್ಲಕ್ಷಿಸಿರುವುದರಿಂದ ಅವು ಗಿಡ-ಗಂಟಿಗಳಿಂದ ತುಂಬಿ, ಹಾವು, ಚೇಳು, ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿವೆ. ಇದರಿಂದ ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ನಿವಾರಿಸಲು ತ್ಯಾಜ್ಯದಿಂದ ಸ್ವಾತಂತ್ರ್ಯ ಎಂಬ ವಿಶೇಷ ಅಭಿಯಾನವನ್ನು ಸರ್ಕಾರ ಆರಂಭಿಸಿದೆ. ಜುಲೈ 15ರಿಂದಲೇ ಸರ್ಕಾರವು ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿನ ನಿರ್ಮಾಣ ತ್ಯಾಜ್ಯ ಹಾಗೂ ಕಳೆಗಳನ್ನು ತೆರವುಗೊಳಿಸುವ ಕಾರ್ಯವನ್ನು ಕೈಗೊಂಡಿತ್ತು. ಇದೇ ಸಾಲಿನಲ್ಲಿ ಖಾಸಗಿ ನಿವೇಶನಗಳ ಮಾಲೀಕರಿಗೆ ತಮ್ಮ ಜಾಗವನ್ನು ಸ್ವಚ್ಛಗೊಳಿಸಿಕೊಳ್ಳಲು ಆಗಸ್ಟ್ 22ರವರೆಗೆ ಅವಕಾಶ ನೀಡಲಾಗಿತ್ತು. ಆದರೆ, ಶೇ. 30ರಷ್ಟು ಮಾಲೀಕರು ಮಾತ್ರ ಈ ಮನವಿಗೆ ಸ್ಪಂದಿಸಿದ್ದಾರೆ.

ನಿವೇಶನ ಮಾಲೀಕರಿಗೆ ಸಚಿವರ ಎಚ್ಚರಿಕೆ

ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರಿನಲ್ಲಿ ಚಾಲನೆ ನೀಡಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ನಮ್ಮ ನಿರಂತರ ಮನವಿಯ ನಂತರವೂ ಶೇ. 70ರಷ್ಟು ಮಾಲೀಕರು ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ. ಸ್ವಚ್ಛತೆ ಎನ್ನುವುದು ಕೇವಲ ಸರ್ಕಾರಿ ಜವಾಬ್ದಾರಿಯಲ್ಲ, ಅದು ಪ್ರತಿ ಆಸ್ತಿ ಮಾಲೀಕನ ಕರ್ತವ್ಯ. ಇಂದಿನಿಂದ ಪಾಲಿಕೆಯೇ ಅಂತಹ ನಿವೇಶನಗಳನ್ನು ಸ್ವಚ್ಛಗೊಳಿಸಲಿದ್ದು, ಅದಕ್ಕೆ ತಗಲುವ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ವಸೂಲಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಪಾಲಿಕೆಯಿಂದ ಸ್ವಚ್ಛತಾ ಕಾರ್ಯ ನಡೆಸಿದರೆ ವೆಚ್ಚ ಹೆಚ್ಚಾಗುತ್ತದೆ ಎಂಬುದನ್ನು ಸಚಿವರು ಮನವರಿಕೆ ಮಾಡಿದ್ದಾರೆ. ಜೆಸಿಬಿ ಬಳಸಿ ಗಿಡ-ಗಂಟಿ ತೆರವುಗೊಳಿಸುವುದು ಮತ್ತು ತ್ಯಾಜ್ಯ ವಿಲೇವಾರಿ ಮಾಡಲು ದೊಡ್ಡ ಮೊತ್ತದ ಹಣ ಖರ್ಚಾಗುತ್ತದೆ. ಪಾಲಿಕೆಯ ನಿಯಮದಂತೆ, ಎಸ್‌ಆರ್ ದರದ ಪ್ರಕಾರ ಈ ವೆಚ್ಚವನ್ನು ಮಾಲೀಕರ ಮೇಲೆ ಹೊರಿಸಲಾಗುವುದು. ಮಾಲೀಕರು ಸ್ವತಃ ಸ್ವಚ್ಛಗೊಳಿಸಿಕೊಂಡರೆ ಈ ಹೊರೆಯಿಂದ ತಪ್ಪಿಸಿಕೊಳ್ಳಬಹುದು. ಅಲ್ಲದೆ, ಮೊದಲ ಬಾರಿಗೆ ಸ್ವಚ್ಛಗೊಳಿಸುವಾಗ ದಂಡ ವಿಧಿಸುವುದಿಲ್ಲ, ಆದರೆ ಮುಂದಿನ ದಿನಗಳಲ್ಲಿ ಇದೇ ನಿರ್ಲಕ್ಷ್ಯ ಮುಂದುವರಿದರೆ ದಂಡದ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

1.22 ಲಕ್ಷ ಮೆಟ್ರಿಕ್ ಟನ್ ತ್ಯಾಜ್ಯ ವಿಲೇವಾರಿ

ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನವು ಕಳೆದ ಒಂದೂವರೆ ತಿಂಗಳಿಂದ ಭರದಿಂದ ಸಾಗಿದೆ. ಸರ್ಕಾರಿ ಏಜೆನ್ಸಿಗಳ ಸಹಯೋಗದಲ್ಲಿ ಇದುವರೆಗೆ ಒಟ್ಟು 1,22,732 ಮೆಟ್ರಿಕ್ ಟನ್ ನಿರ್ಮಾಣ ತ್ಯಾಜ್ಯವನ್ನು ನಗರದಿಂದ ತೆರವುಗೊಳಿಸಲಾಗಿದೆ. ಜಿಬಿಎದಿಂದ 67,152 ಮೆಟ್ರಿಕ್ ಟನ್, ಬಿಡಿಎಯಿಂದ 51,323 ಮೆಟ್ರಿಕ್ ಟನ್, ಕೆಐಎಡಿಬಿ ಮತ್ತು ಇತರೆ ಇಲಾಖೆಗಳಿಂದ ಸುಮಾರು 4,200 ಮೆಟ್ರಿಕ್ ಟನ್ ತ್ಯಾಜ್ಯ ತೆರವು ಮಾಡಲಾಗಿದೆ. ಇದಲ್ಲದೆ, ರಸ್ತೆ ಬದಿಯ ಅನಗತ್ಯ ಕಂಬಗಳು ಮತ್ತು ಮೆಟ್ರೋ ಕಾಮಗಾರಿಯಿಂದ ಉಂಟಾಗಿದ್ದ ತ್ಯಾಜ್ಯಗಳನ್ನು ಸಹ ತೆರವುಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ನೋಟಿಸ್ ನೀಡಿದ ನಿವೇಶನಗಳು

ಪ್ರಸ್ತುತ ಮೊದಲ ಹಂತದಲ್ಲಿ ನಗರದ ಐದು ಪಾಲಿಕೆ ವ್ಯಾಪ್ತಿಯಲ್ಲಿ 189 ನಿವೇಶನಗಳನ್ನು ಗುರುತಿಸಿ ಈಗಾಗಲೇ ನೋಟಿಸ್ ನೀಡಲಾಗಿದೆ. ಕೇಂದ್ರ ನಗರ ಪಾಲಿಕೆ 53, ಉತ್ತರ ನಗರ ಪಾಲಿಕೆ 37, ಪಶ್ಚಿಮ ನಗರ ಪಾಲಿಕೆ 41, ಪೂರ್ವ ನಗರ ಪಾಲಿಕೆ 28, ದಕ್ಷಿಣ ನಗರ ಪಾಲಿಕೆ 30 ನಿವೇಶನಗಳನ್ನು ಗುರುತಿಸಲಾಗಿದೆ. ಈ ಎಲ್ಲಾ ನಿವೇಶನಗಳಲ್ಲಿ ಸ್ವಚ್ಛತಾ ಕಾರ್ಯ ಇಂದಿನಿಂದ ಆರಂಭವಾಗಿದೆ. ಅಧಿಕಾರಿಗಳಿಗೆ ನಿರ್ದಿಷ್ಟ ಸೂಚನೆ ನೀಡಲಾಗಿದ್ದು, ಗೇಟ್ ವ್ಯವಸ್ಥೆ ಇರುವ ನಿವೇಶನಗಳಿಗೆ ಹೆಚ್ಚುವರಿ ಶುಲ್ಕ ವಿಧಿಸದಂತೆ ನೋಡಿಕೊಳ್ಳಲು ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರನ್ನು ಸ್ವಚ್ಛ ಮತ್ತು ಸುಂದರ ನಗರವನ್ನಾಗಿ ಮಾಡುವಲ್ಲಿ ಸಾರ್ವಜನಿಕರ ಪಾತ್ರ ಬಹಳ ದೊಡ್ಡದು. ಜಿಬಿಎ ಕಾಯ್ದೆಯನ್ವಯ ತನ್ನ ಸ್ವತ್ತನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಮಾಲೀಕರ ಆದ್ಯ ಕರ್ತವ್ಯ. ಸ್ವಚ್ಛತೆ ಕಾಪಾಡಿಕೊಂಡಿರುವ ಮಾಲೀಕರಿಗೆ ಸರ್ಕಾರವು ಧನ್ಯವಾದ ಪತ್ರಗಳನ್ನು ಕಳುಹಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

Read More
Next Story