ಜಿಬಿಎ ಚುನಾವಣೆ ಮತ್ತೆ ಮುಂದೂಡಿಕೆ ಆಗುತ್ತಾ? ಸುಪ್ರೀಂ ಕೋರ್ಟ್‌ಗೆ ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶ ಕೋರಿದ ಚುನಾವಣಾ ಆಯೋಗ
x

ಜಿಬಿಎ ಚುನಾವಣೆ ಮತ್ತೆ ಮುಂದೂಡಿಕೆ ಆಗುತ್ತಾ? ಸುಪ್ರೀಂ ಕೋರ್ಟ್‌ಗೆ ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶ ಕೋರಿದ ಚುನಾವಣಾ ಆಯೋಗ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶ ಕೋರಿದೆ. 2027ರ ಜನವರಿ 31ರವರೆಗೆ ಗಡುವು ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ.


ಬೆಂಗಳೂರಿನ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆಗೆ ಮತ್ತೆ ವಿಳಂಬವಾಗುವ ಸಾಧ್ಯತೆ ಎದುರಾಗಿದೆ. 2026ರ ಡಿಸೆಂಬರ್‌ 31ರೊಳಗೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಗಡುವು ನೀಡಿದ್ದರೂ, ಇದೀಗ ರಾಜ್ಯ ಚುನಾವಣಾ ಆಯೋಗ ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶ ಕೋರಿ ನ್ಯಾಯಾಲಯದ ಮೊರೆ ಹೋಗಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಸೇರಿದಂತೆ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು, ಚುನಾವಣೆಯನ್ನು 2027ರ ಜನವರಿ 31ರವರೆಗೆ ವಿಸ್ತರಿಸುವಂತೆ ಮನವಿ ಸಲ್ಲಿಸಿದೆ.

ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶಕ್ಕೆ ಮನವಿ

ಜಿಬಿಎ ವ್ಯಾಪ್ತಿಯ ಎರಡು ಚುನಾವಣೆಗಳನ್ನು ನಡೆಸಲು ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಸಮಯ ಬೇಕಿದೆ ಎಂದು ರಾಜ್ಯ ಚುನಾವಣಾ ಆಯೋಗ ಅರ್ಜಿಯಲ್ಲಿ ತಿಳಿಸಿದೆ. ಎಸ್‌ಐಆರ್‌ ಪ್ರಕ್ರಿಯೆ ಹಾಗೂ ಇತರ ಚುನಾವಣಾ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವುದು ಕಷ್ಟವಾಗಬಹುದು ಎಂಬ ಅಂಶವನ್ನು ಆಯೋಗ ಪ್ರಸ್ತಾಪಿಸಿದೆ.

ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, 2026ರ ಡಿಸೆಂಬರ್‌ 31ರೊಳಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿತ್ತು. ಇದೀಗ ಆಯೋಗದ ಹೊಸ ಮನವಿಗೆ ನ್ಯಾಯಾಲಯ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಹಳೆಯ ಮತದಾರರ ಪಟ್ಟಿಯಲ್ಲೇ ಚುನಾವಣೆ ನಡೆಸಲು ಮನವಿ

ಚುನಾವಣಾ ಆಯೋಗವು ಮತ್ತೊಂದು ಪ್ರಮುಖ ಮನವಿಯನ್ನೂ ನ್ಯಾಯಾಲಯದ ಮುಂದಿಟ್ಟಿದೆ. ರಾಜ್ಯದ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು 2025ರ ಅಕ್ಟೋಬರ್‌ 1ರಂದು ಅಸ್ತಿತ್ವದಲ್ಲಿದ್ದ ಮತದಾರರ ಪಟ್ಟಿಯ ಆಧಾರದ ಮೇಲೆ ನಡೆಸಲು ಅನುಮತಿ ನೀಡುವಂತೆ ಕೋರಿದೆ. ಅದರಂತೆ, ಜಿಬಿಎ ಚುನಾವಣೆಯನ್ನು 2026ರ ಏಪ್ರಿಲ್‌ 18ರಂದು ಸಿದ್ಧಪಡಿಸಿ ಪ್ರಕಟಿಸಿದ್ದ ಅಂತಿಮ ಮತದಾರರ ಪಟ್ಟಿಯ ಆಧಾರದ ಮೇಲೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದೆ ಎಂದು ವರದಿಯಾಗಿದೆ.

ಆರು ವರ್ಷಗಳಿಂದ ಬೆಂಗಳೂರಿಗೆ ಕಾರ್ಪೊರೇಟರ್‌ಗಳಿಲ್ಲ

ಬೆಂಗಳೂರಿನ ವಾರ್ಡ್‌ಗಳಿಗೆ ಕಳೆದ ಆರು ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳೇ ಇಲ್ಲದಂತಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಡಳಿತ ಮಂಡಳಿಯ ಅಧಿಕಾರಾವಧಿ 2020ರಲ್ಲೇ ಮುಕ್ತಾಯಗೊಂಡಿತ್ತು. ಕೋವಿಡ್‌ ಸಾಂಕ್ರಾಮಿಕ ಹಾಗೂ ವಾರ್ಡ್‌ ಮರುವಿಂಗಡಣೆಯ ಕಾರಣ ನೀಡಿ ಅಂದಿನ ಬಿಜೆಪಿ ಸರ್ಕಾರ ಚುನಾವಣೆ ಮುಂದೂಡಿತ್ತು. ಇದನ್ನು ಪ್ರಶ್ನಿಸಿ ಕಾಂಗ್ರೆಸ್‌ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳು ಸಮೀಪಿಸುತ್ತಿದ್ದರೂ ಚುನಾವಣೆ ನಡೆದಿಲ್ಲ.

ಇತ್ತೀಚೆಗೆ ಬಿಬಿಎಂಪಿಯನ್ನು ವಿಸರ್ಜಿಸಿ, ಅದರ ಬದಲಿಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಹೊಸ ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಈ ಐದು ಪಾಲಿಕೆಗಳಿಗೆ ಚುನಾವಣೆ ನಡೆಸುವ ಸಿದ್ಧತೆಗಳು ನಡೆಯುತ್ತಿವೆ.

ಈಗಾಗಲೇ ಹಲವು ಬಾರಿ ಮುಂದೂಡಿಕೆಯಾಗಿರುವ ಜಿಬಿಎ ಚುನಾವಣೆ ಮತ್ತೊಮ್ಮೆ ವಿಳಂಬವಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಡಿಸೆಂಬರ್‌ 31ರ ಗಡುವನ್ನು ವಿಸ್ತರಿಸುವಂತೆ ಸಲ್ಲಿಕೆಯಾಗಿರುವ ಚುನಾವಣಾ ಆಯೋಗದ ಅರ್ಜಿಗೆ ಸುಪ್ರೀಂ ಕೋರ್ಟ್‌ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದರ ಮೇಲೆ ಬೆಂಗಳೂರಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಭವಿಷ್ಯ ನಿರ್ಧಾರವಾಗಲಿದೆ.

Read More
Next Story