
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್
ಜಿಬಿಎ ಚುನಾವಣೆ: ಸುಪ್ರೀಂ ಕೋರ್ಟ್ ಗಡುವಿನೊಳಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಸೂಚನೆ
ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಜೂನ್ 30, 2026 ರೊಳಗೆ ಕಡ್ಡಾಯವಾಗಿ ನಡೆಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಈಗಾಗಲೇ ನಿರ್ದೇಶನ ನೀಡಿದೆ.
ಬೆಂಗಳೂರು ಸ್ಥಳೀಯ ಸಂಸ್ಥೆಗಳ (ಜಿಬಿಎ) ಚುನಾವಣೆಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜೂನ್ 30 ನಡೆಸಲು ಅಗತ್ಯವಾದ ಹಣಕಾಸು ಹಾಗೂ ಸಿಬ್ಬಂದಿ ಸೌಲಭ್ಯವನ್ನು ಒದಗಿಸುವಂತೆ ರಾಜ್ಯಪಾಲರ ಕಚೇರಿಯಿಂದ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ.
ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಮೇ 13 ದು ಈ ಕುರಿತು ಅಧಿಕೃತ ಪತ್ರ ಬರೆದಿದ್ದು, ವಿಳಂಬವಿಲ್ಲದೆ ಸುಗಮವಾಗಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಸಕಲ ಸಿದ್ಧತೆ ಮಾಡಿಕೊಡುವಂತೆ ನಿರ್ದೇಶಿಸಿದ್ದಾರೆ.
ಹಿನ್ನೆಲೆ ಮತ್ತು ಜೆಡಿಎಸ್ ಮನವಿ
ಜೆಡಿಎಸ್ (ಜಾತ್ಯತೀತ ಜನತಾದಳ) ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ. ರಂಗನಾಥ್ ಹಾಗೂ ಇತರ ವಕೀಲರು ಇತ್ತೀಚೆಗೆ ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದರು. ಬೆಂಗಳೂರಿನಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯವಿರುವ ಆರ್ಥಿಕ ಮತ್ತು ವ್ಯವಸ್ಥಾಪನಾ ಬೆಂಬಲವನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಕೋರಿದ್ದರು. ಈ ಮನವಿಯನ್ನು ಆಧರಿಸಿ ರಾಜ್ಯಪಾಲರ ಕಚೇರಿ ಇದೀಗ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಪತ್ರದಲ್ಲಿರುವ ಪ್ರಮುಖ ಅಂಶಗಳು
ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಜೂನ್ 30, 2026 ರೊಳಗೆ ಕಡ್ಡಾಯವಾಗಿ ನಡೆಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಈಗಾಗಲೇ ನಿರ್ದೇಶನ ನೀಡಿದೆ. ಈ ಆದೇಶವನ್ನು ಪಾಲಿಸುವುದು ಕಡ್ಡಾಯವಾಗಿದ್ದು, ತಪ್ಪಿದ್ದಲ್ಲಿ 'ನ್ಯಾಯಾಲಯ ನಿಂದನೆ' ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಸಂವಿಧಾನದ 74ನೇ ತಿದ್ದುಪಡಿಯ ಅನ್ವಯ, ಸ್ಥಳೀಯ ಸಂಸ್ಥೆಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸುವುದು ಹಾಗೂ ಚುನಾಯಿತ ಪ್ರತಿನಿಧಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವುದು ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಚುನಾವಣೆ ವಿಳಂಬವಾದರೆ ಪ್ರಜಾಪ್ರಭುತ್ವಕ್ಕೆ ತಪ್ಪು ಸಂದೇಶ ರವಾನೆಯಾಗುವುದಲ್ಲದೆ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವೂ ಕಡಿತಗೊಳ್ಳುವ ಅಪಾಯವಿದೆ. ಇದರಿಂದ ಅಂತಿಮವಾಗಿ ಕರ್ನಾಟಕದ ಜನತೆಗೆ ನಷ್ಟವಾಗಲಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಚುನಾವಣೆಯನ್ನು ಸುಗಮವಾಗಿ ಮತ್ತು ಯಾವುದೇ ಅಡೆತಡೆಯಿಲ್ಲದೆ ನಡೆಸಲು ಅನುಕೂಲವಾಗುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಅಗತ್ಯವಿರುವ ಸಾಕಷ್ಟು ಅನುದಾನ ಹಾಗೂ ಸಿಬ್ಬಂದಿಯನ್ನು ತಕ್ಷಣವೇ ಒದಗಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ.
ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಚುನಾವಣೆಯನ್ನು ಸಕಾಲದಲ್ಲಿ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯಪಾಲರ ಕಚೇರಿ ತನ್ನ ಪತ್ರದಲ್ಲಿ ಸ್ಪಷ್ಟವಾಗಿ ನಿರ್ದೇಶಿಸಿದೆ. ಈ ಪತ್ರದ ಪ್ರತಿಯನ್ನು ಜೆಡಿಎಸ್ ಕಾನೂನು ಘಟಕದ ಮುಖ್ಯಸ್ಥ ಎ.ಪಿ. ರಂಗನಾಥ್ ಅವರಿಗೂ ರವಾನಿಸಲಾಗಿದೆ.

