
ಬೀದಿ ಬದಿ ವ್ಯಾಪಾರಿಗಳು ಮರು ಒತ್ತುವರಿಗೆ ಮುಂದಾದರೆ ದಂಡ : ಕೃಷ್ಣ ಬೈರೇಗೌಡ
ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಕಳೆದ ಎರಡು ತಿಂಗಳಿನಿಂದ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.
ಬೀದಿ ಬದಿ ವ್ಯಾಪಾರಿಗಳಿಂದ ಪಾದಚಾರಿ ಮಾರ್ಗಗಳು ಮರು ಒತ್ತುವರಿಯಾಗದಂತೆ ನಿರಂತರವಾಗಿ ನಿಗಾ ವಹಿಸಬೇಕು, ಒಂದು ವೇಳೆ ವ್ಯಾಪಾರಿಗಳು ಒತ್ತುವರಿಗೆ ಮುಂದಾದರೆ ಅವರ ವಸ್ತುಗಳನ್ನು ವಶಕ್ಕೆ ಪಡೆದು ದಂಡ ವಿಧಿಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು, ರಸ್ತೆ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ, ಅನಾಥ ವಾಹನಗಳ ತೆರವು ಮತ್ತು ನಿರಂತರ ಸ್ವಚ್ಛತಾ ಅಭಿಯಾನದ ಕುರಿತು ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಸಚಿವರು, ನಗರದ ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಕಳೆದ ಎರಡು ತಿಂಗಳಿನಿಂದ ಅಭಿಯಾನದ ಮಾದರಿಯಲ್ಲಿ ನಗರದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿನ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಅಧಿಕಾರಿಗಳ ಶಿಸ್ತಿನ ಕಾರ್ಯಾಚರಣೆಯ ಪರಿಣಾಮ ಈಗಾಗಲೇ ಐದೂ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟಾರೆಯಾಗಿ 1373.32 ಕಿಮೀ ರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಿ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.
ಆದರೆ, ನಗರದ ಹಲವೆಡೆ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ್ದರೂ ಸಹ ಕೆಲವು ಭಾಗಗಳಲ್ಲಿ ವ್ಯಾಪಾರಿಗಳು ಮತ್ತೆ ಒತ್ತುವರಿಗೆ ಮುಂದಾಗಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗುತ್ತಿದೆ. ಇದು ನಿಜಕ್ಕೂ ಕಳವಳಕಾರಿಯಾಗಿದ್ದು, ಪ್ರತಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳ ಸಮನ್ವಯದೊಂದಿಗೆ ಜಂಟಿ ಟಾಸ್ಕ್ ಫೋರ್ಸ್ ರಚಿಸಬೇಕು. ತೆರವುಗೊಳಿಸಿದ ಪಾದಚಾರಿ ಮಾರ್ಗಗಳಲ್ಲಿ ನಿಯಮಿತ ಹಾಗೂ ಅನಿರೀಕ್ಷಿತ ಪರಿಶೀಲನೆ ನಡೆಸಿ, ಮರು ಒತ್ತುವರಿ ಕಂಡುಬಂದ ಕೂಡಲೇ ಸ್ಥಳದಲ್ಲೇ ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಬೇಕು. ಮರು ಒತ್ತುವರಿ ಪ್ರಕರಣಗಳನ್ನು ತಕ್ಷಣ ಗುರುತಿಸಿ, ಫೋಟೋ ಹಾಗೂ ಜಿಯೋ-ಟ್ಯಾಗ್ ಮಾಹಿತಿಯೊಂದಿಗೆ ವರದಿ ಮಾಡುವ ವ್ಯವಸ್ಥೆ ಮಾಡಬೇಕು. ಮಾರ್ಷಲ್‌ಗಳು ಹಾಗೂ ಬೀಟ್ ಪೊಲೀಸ್ ಸಿಬ್ಬಂದಿ ಜಂಟಿಯಾಗಿ ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.
ಮರು ಒತ್ತುವರಿಗೆ ಎಫ್ಐಆರ್, ವಸ್ತುಗಳು ವಶ - ದಂಡ
ಒತ್ತುವರಿ ತೆರವುಗೊಳಿಸಿದ್ದೇವೆ ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ. ತೆರವುಗೊಳಿಸಿದ ಸ್ಥಳದಲ್ಲಿ ಮತ್ತೆ ಒತ್ತುವರಿಯಾಗದಂತೆ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಮರು ಒತ್ತುವರಿ ಮಾಡುವ ಪುನರಾವರ್ತಿತ ಉಲ್ಲಂಘನಾಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿ, ವಸ್ತುಗಳನ್ನು ವಶಪಡಿಸಿಕೊಂಡು, ನಿಯಮಾನುಸಾರ ಹೆಚ್ಚಿನ ದಂಡ ವಿಧಿಸಬೇಕು. ಈ ಸಂಬಂಧ ಅಧಿಕಾರಿಗಳ ಜವಾಬ್ದಾರಿಯನ್ನು ಸ್ಪಷ್ಟವಾಗಿ ನಿಗದಿಪಡಿಸಿ, ಕೈಗೊಂಡ ಕ್ರಮಗಳ ಕುರಿತು ನಿಯಮಿತವಾಗಿ ಪ್ರಗತಿ ವರದಿ ಪರಿಶೀಲಿಸಬೇಕು. ಸಾರ್ವಜನಿಕರ ಸುರಕ್ಷತೆ ಮತ್ತು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸುವುದಷ್ಟೇ ನಮ್ಮ ಉದ್ದೇಶ. ಆ ಉದ್ದೇಶದ ಭಾಗವಾಗಿಯೇ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡದ್ದು. ಹೀಗಾಗಿ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೆ ತೊಂದರೆ ನೀಡದಂತೆಯೂ ನೋಡಿಕೊಳ್ಳಬೇಕು. ಸ್ಟ್ರೀಟ್ ವೆಂಡಿಂಗ್‌ಗೆ ಸಂಬಂಧಿಸಿದಂತೆ ವೆಂಡಿಂಗ್‌ಗೆ ನಿರ್ಬಂಧಿತ ರಸ್ತೆಗಳ ಕುರಿತು ಸಂಬಂಧಿಸಿದ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗಳಿಗೆ ಅಧಿಕೃತವಾಗಿ ಮಾಹಿತಿ ನೀಡಬೇಕು. ಮುಖ್ಯ ರಸ್ತೆಗಳು ಹಾಗೂ ಪ್ರಮುಖ ಜಂಕ್ಷನ್ಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗದ ರೀತಿಯಲ್ಲಿ ವ್ಯಾಪಾರ ನಡೆಸಲು ಪರ್ಯಾಯ ಸ್ಥಳಗಳನ್ನು ಗುರುತಿಸಿ, ಅಗತ್ಯ ಮಾರ್ಗದರ್ಶನ ಹಾಗೂ ಸಹಕಾರ ನೀಡಬೇಕು ಎಂದು ತಾಕೀತು ಮಾಡಿದರು.
ಅನಾಥ ವಾಹನಗಳ ತೆರವು ಕಾರ್ಯಕ್ಕೆ ವೇಗ ನೀಡಿ
ಪಾದಾಚಾರಿ ಮಾರ್ಗಗಳನ್ನು ಸ್ವಚ್ಚಗೊಳಿಸುವ ಹಾಗೂ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸುವ ಅಭಿಯಾನದ ಭಾಗವಾಗಿ ಈಗಾಗಲೇ ದಶಕಗಳ ಕಾಲ ಪೊಲೀಸ್ ಠಾಣೆಗಳ ಆವರಣ, ನಗರದ ವಿವಿಧ ರಸ್ತೆ, ಪಾದಚಾರಿ ಮಾರ್ಗಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿದ್ದ ಅನಾಥ-ಜಪ್ತಿ ವಾಹನಗಳನ್ನು ನಗರದ ಹೊರವಲಯಕ್ಕೆ ಸಾಗಿಸುವ ಅಭಿಯಾನಕ್ಕೆ ಜಯನಗರ ಪೊಲೀಸ್ ಠಾಣೆಯಿಂದ ಚಾಲನೆ ನೀಡಲಾಗಿದೆ. ಲೆಕ್ಕಾಚಾರದ ಪ್ರಕಾರ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ಆವರಣದಲ್ಲಿ ಸುಮಾರು 11,346 ವಾಹನಗಳು ದೀರ್ಘ ಕಾಲದಿಂದ ಜಾಗ ಆಕ್ರಮಿಸಿಕೊಂಡಿದೆ. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ದೂರುಗಳು ಬಂದ ಕಾರಣ, ಎರಡು ತಿಂಗಳಿಂದ ಇದಕ್ಕೆ ಅಗತ್ಯವಾದ ಪೂರ್ವಾಭಾವಿ ಸಭೆ ನಡೆಸಿ ನ್ಯಾಯಾಲಯ ಪ್ರಕರಣಗಳಲ್ಲಿ ಸಿಲುಕಿರುವ ವಾಹನಗಳನ್ನು ಬೇರೆಡೆ ಸಾಗಿಸಲು ವಿಶೇಷ ಮನವಿ ಸಲ್ಲಿಸಿ, ಕಂದಾಯ ಇಲಾಖೆಯ ಸಹಾಯದೊಂದಿಗೆ ಈ ಅಭಿಯಾನ ನಡೆಸಲಾಗುತ್ತಿದೆ. ಕಂದಾಯ ಇಲಾಖೆ ಇಂತಹ ವಾಹನಗಳ ನಿಲುಗಡೆಗೆ ನಗರದ ಹೊರ ವಲಯದಲ್ಲಿ 7 ಕಡೆಗಳಲ್ಲಿ ಸುಮಾರು 26 ಎಕರೆ ಜಾಗ ನೀಡಿದೆ. ಹೀಗಾಗಿ ಅಧಿಕಾರಿಗಳು ಆದಷ್ಟು ಶೀಘ್ರದಲ್ಲಿ ಎಲ್ಲಾ ಜಪ್ತಿ ವಾಹನಗಳನ್ನು ನಿಗದಿತ ಸ್ಥಳಕ್ಕೆ ಸಾಗಿಸಿ, ಜನರಿಗೆ ಉಂಟಾಗುತ್ತಿರುವ ಕಿರಿಕಿರಿಯಿಂದ ಮುಕ್ತಿ ನೀಡಬೇಕು ಎಂದು ಸೂಚಿಸಿದರು.
ಟೋಯಿಂಗ್ ವಾಹನಗಳ ಹರಾಜಿಗೆ ಹಾಕಲು ಸಲಹೆ
ಟೋಯಿಂಗ್ ಮಾಡಿರುವ ವಾಹನಗಳನ್ನು ಕಾನೂನುಬದ್ಧವಾಗಿ ಹರಾಜು ಮಾಡುವ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಂಡು, ಯಾರ್ಡ್‌ಗಳಲ್ಲಿ ಬಾಕಿ ಇರುವ ವಾಹನಗಳನ್ನು ತೆರವುಗೊಳಿಸಬೇಕು. ದಶಕಗಳ ಕಾಲ ಕೆಟ್ಟುನಿಂತ ವಾಹನಗಳನ್ನು ಕಾನೂನುಬದ್ಧವಾಗಿ ಹರಾಜು ಮಾಡಲು ಸಾಧ್ಯವಾಗದಿದ್ದಲ್ಲಿ, ಮುಖ್ಯ ಆಯುಕ್ತರು ಸೂಚಿಸಿದಂತೆ ನೋಂದಾಯಿತ ಸ್ಕ್ರ್ಯಾಪ್ ಸಂಗ್ರಹಕಾರರಿಗೆ ಹಸ್ತಾಂತರಿಸುವ ಸಾಧ್ಯತೆಯ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸಬೇಕು. ಇಂತಹ ಕ್ರಮದಿಂದ ಅನುಪಯುಕ್ತ ವಾಹನಗಳ ವಿಲೇವಾರಿ ಸುಲಭವಾಗುತ್ತದೆ ಎಂದರು.
ವಾರ್ಡ್ ಮಟ್ಟದಲ್ಲಿ ನಿರಂತರ ಸ್ವಚ್ಛತಾ ಅಭಿಯಾನ
ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದ ಭಾಗವಾಗಿ ಐದೂ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ 5,267.65 ಟನ್ ತ್ಯಾಜ್ಯಗಳನ್ನು ತೆರವುಗೊಳಿಸಲಾಗಿದೆ. ಇದು ನಿಜಕ್ಕೂ ಅಭಿನಂದನಾರ್ಹ ಕೆಲಸ. ಆದರೆ, ನಮ್ಮ ಕೆಲಸ ಇಷ್ಟಕ್ಕೆ ನಿಲ್ಲಬಾರದು, ಸ್ವಚ್ಛ ಬೆಂಗಳೂರಿಗಾಗಿ ಐದು ನಗರ ಪಾಲಿಕೆಗಳ ವ್ಯಾಪ್ತಿಯ ಪ್ರತಿ ವಾರ್ಡ್ನಲ್ಲಿ ನಿರಂತರ ಹಾಗೂ ತೀವ್ರ ಸ್ವಚ್ಛತಾ ಅಭಿಯಾನ ಕೈಗೊಳ್ಳಬೇಕು. ನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಂಗಸಂಸ್ಥೆಗಳ ಅಧಿಕಾರಿಗಳನ್ನೊಳಗೊಂಡ ತಂಡಗಳ ಮೂಲಕ ನಿರೀಕ್ಷಿತ ವೇಗದಲ್ಲಿ ಸ್ವಚ್ಛತಾ ಕಾರ್ಯಗಳನ್ನು ಸಮನ್ವಯದಿಂದ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಇದಲ್ಲದೆ, ಖಾಸಗಿ ನಿವೇಶನಗಳಲ್ಲಿ ತ್ಯಾಜ್ಯ ಸುರಿಯುತ್ತಿರುವ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬೇಕು. ತ್ಯಾಜ್ಯ ತೆರವುಗೊಳಿಸದ ಖಾಸಗಿ ನಿವೇಶನಗಳ ವಿರುದ್ಧ ನಿಯಮಾನುಸಾರ ದಂಡ ವಿಧಿಸಿ, ಸಂಬಂಧಪಟ್ಟ ಆಸ್ತಿಯ ಇ-ಖಾತಾದೊಂದಿಗೆ ದಂಡ ವಸೂಲಿ ಮಾಡಿ ಕ್ರಮ ಕೈಗೊಳ್ಳಬೇಕು. ಖಾಸಗಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ದಂಡ ವಿಧಿಸುವ ಕ್ರಮದ ಕುರಿತು ಸಂಬಂಧಿತ ಅಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಇತರೆ ನಿವೇಶನಗಳಲ್ಲಿಯೂ ತ್ಯಾಜ್ಯ ಸುರಿಯದಂತೆ ತಡೆಗಟ್ಟಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

