ಅಕ್ರಮ ಹಣ ವರ್ಗಾವಣೆ: ಬೆಂಗಳೂರಿನ 5 ಕಂಪನಿಗಳ 6 ಕೋಟಿ ರೂ. ಜಪ್ತಿ
x

ಅಕ್ರಮ ಹಣ ವರ್ಗಾವಣೆ: ಬೆಂಗಳೂರಿನ 5 ಕಂಪನಿಗಳ 6 ಕೋಟಿ ರೂ. ಜಪ್ತಿ

ವಿವಿಧ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಿರುವ ಅಧಿಕಾರಿಗಳು, ಸದ್ಯಕ್ಕೆ ಆ ಖಾತೆಗಳಲ್ಲಿದ್ದ 6 ಕೋಟಿ ರೂಪಾಯಿ ನಗದನ್ನು ಮುಟ್ಟುಗೋಲು ಹಾಕಿಕೊಂಡು ಫ್ರೀಜ್‌ ಮಾಡಿದ್ದಾರೆ.


ವರ್ಚುವಲ್ ಡಿಜಿಟಲ್ ಸ್ವತ್ತುಗಳನ್ನು ಬಳಸಿಕೊಂಡು ವಿದೇಶಗಳಿಗೆ ಕಾನೂನುಬಾಹಿರವಾಗಿ ಭಾರೀ ಪ್ರಮಾಣದ ಹಣ ವರ್ಗಾವಣೆ ಮಾಡಿರುವ ಹಗರಣವನ್ನು ಜಾರಿ ನಿರ್ದೇಶನಾಲಯ ಪತ್ತೆಹಚ್ಚಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA), 1999 ರ ನಿಯಮಾವಳಿ ಉಲ್ಲಂಘಿಸಿ ಸುಮಾರು 2,500 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ವಿದೇಶಕ್ಕೆ ರವಾನಿಸಿದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ವಲಯ ಇಡಿ ಅಧಿಕಾರಿಗಳು ಐದು ಪ್ರಮುಖ ಫಿನ್ಟೆಕ್ ಕಂಪನಿಗಳಿಗೆ ಸೇರಿದ 6 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಆರು ಕೋಟಿ ಹಣ ಜಪ್ತಿ ಮಾಡಿದ್ದಾರೆ.

ಜೂ.17ರಂದು ನಡೆದ ಈ ಕಾರ್ಯಾಚರಣೆಯ ವೇಳೆ ಅಕ್ರಮ ವಹಿವಾಟಿಗೆ ಬಳಸಲಾಗಿದ್ದ ವಿವಿಧ ಬ್ಯಾಂಕ್ ಖಾತೆಗಳನ್ನು ಪತ್ತೆಹಚ್ಚಿರುವ ಅಧಿಕಾರಿಗಳು, ಸದ್ಯಕ್ಕೆ ಆ ಖಾತೆಗಳಲ್ಲಿದ್ದ 6 ಕೋಟಿ ರೂಪಾಯಿ ನಗದನ್ನು ಮುಟ್ಟುಗೋಲು ಹಾಕಿಕೊಂಡು ಫ್ರೀಜ್‌ ಮಾಡಿದ್ದಾರೆ.

ಮೆಸರ್ಸ್ ಟ್ರಾನ್ಸಾಕ್ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಕ್ಯಾರೆಟ್ಎಕ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಮೋಕ್ಷಜ್ಞ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಬೈಹಟ್ಕೆ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್, ಮೆಸರ್ಸ್ ಅಭಿಭಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಹಣ ಜಪ್ತಿ ಮಾಡಲಾಗಿದೆ.

ಕಂಪೆನಿಗಳ ಕಾರ್ಯವಿಧಾನ ಹೇಗಿತ್ತು?

ತನಿಖಾಧಿಕಾರಿಗಳ ಪ್ರಕಾರ, ಈ ಕಂಪನಿಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಯಾವುದೇ ಅಧಿಕೃತ ಪರವಾನಗಿ ಅಥವಾ ಅನುಮತಿ ಪಡೆಯದೆ ತಾವೇ ಸ್ವತಃ ಅಂತರರಾಷ್ಟ್ರೀಯ ಹಣ ವರ್ಗಾವಣೆ ವ್ಯವಸ್ಥೆ ನಡೆಸುತ್ತಿದ್ದವು.

ಗ್ರಾಹಕರಿಂದ ಹಣವನ್ನು ಪಡೆದು, ಅದನ್ನು 'ಸ್ಟೇಬಲ್‌ಕಾಯಿನ್‌ʼ (ಸ್ಥಿರ ಮೌಲ್ಯದ ಕ್ರಿಪ್ಟೋಕರೆನ್ಸಿ) ಖರೀದಿಸಲು ಬಳಸಲಾಗುತ್ತಿತ್ತು. ನಂತರ ಈ ಡಿಜಿಟಲ್ ಸ್ವತ್ತುಗಳನ್ನು ವಿದೇಶಿ ಹಾಗೂ ದೇಶೀಯ ಕ್ರಿಪ್ಟೋ ಎಕ್ಸ್‌ಚೇಂಜ್‌ಗಳ ಮೂಲಕ ಮಾರಿ, ಅಧಿಕೃತ ಬ್ಯಾಂಕಿಂಗ್ ಚಾನೆಲ್‌ಗಳನ್ನು ಬೈಪಾಸ್ ಮಾಡಿ ಹಣ ವರ್ಗಾಯಿಸಲಾಗುತ್ತಿತ್ತು.

ತೆರಿಗೆ ಹಣದ ಸ್ವರ್ಗ ಎಂದು ಕರೆಯಲ್ಪಡುವ ವಿದೇಶಗಳಲ್ಲಿ ಶೆಲ್ ಕಂಪನಿಗಳನ್ನು ಸ್ಥಾಪಿಸಿ, ಭಾರತದಿಂದಲೇ ಇವುಗಳನ್ನು ನಿಯಂತ್ರಿಸಲಾಗುತ್ತಿತ್ತು ಎಂಬ ಗಂಭೀರ ಅಂಶವು ತನಿಖೆಯಿಂದ ಬೆಳಕಿಗೆ ಬಂದಿದೆ.

Read More
Next Story