ರಾಜ್ಯದ ಅಭಿವೃದ್ಧಿಯಲ್ಲಿ ಮಹಿಳಾ ಉದ್ಯಮಿಗಳ ಕೊಡುಗೆ ಅನನ್ಯ : ಸಿಎಂ ಶ್ಲಾಘನೆ
x

ರಾಜ್ಯದ ಅಭಿವೃದ್ಧಿಯಲ್ಲಿ ಮಹಿಳಾ ಉದ್ಯಮಿಗಳ ಕೊಡುಗೆ ಅನನ್ಯ : ಸಿಎಂ ಶ್ಲಾಘನೆ

ಮಹಿಳಾ ನಾಯಕತ್ವವನ್ನು ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಬಲಪಡಿಸುವ ಅಗತ್ಯತೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರತಿಪಾದಿಸಿದ್ದಾರೆ.


Click the Play button to hear this message in audio format

ರಾಮಾಯಣದಲ್ಲಿ ರಾಮನಿಗಿಂತ ಸೀತೆಯ ವ್ಯಕ್ತಿತ್ವ ಬಹಳ ದೊಡ್ಡದು. ಆಕೆಯ ತ್ಯಾಗ, ಹೋರಾಟಗಳು ಇಂದಿನ ಮಹಿಳೆಯರಿಗೆ ನಿಜವಾದ ಮಾರ್ಗದರ್ಶಕ. ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗಿಲ್ಲ, ಅವರು ಸೃಷ್ಟಿಕರ್ತರು ಮತ್ತು ಅದ್ಭುತ ಉದ್ಯಮಿಗಳು" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ಲಾಘಿಸಿದ್ದಾರೆ.

ಎಫ್‌ಕೆಸಿಸಿಐ ಸಭಾಂಗಣದಲ್ಲಿ ನಡೆದ ಉಬುಂಟು ಸಂಸ್ಥೆಯ ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ದಿನದ 5ನೇ ಆವೃತ್ತಿಯ 'ಒಗ್ಗಟ್ಟಾಗಿ ಬೆಳೆಯೋಣ' ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳಾ ನಾಯಕತ್ವವನ್ನು ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಬಲಪಡಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು.

ಗ್ರಾಮ ಪಂಚಾಯತಿಯಿಂದ ಸಂಸತ್ತಿನವರೆಗೆ ಮಹಿಳಾ ನಾಯಕತ್ವದ ಅಗತ್ಯವಿದೆ. ಸರ್ಕಾರ ಮಹಿಳಾ ಸಬಲೀಕರಣಕ್ಕೆ ಬದ್ಧವಾಗಿದೆ. ಸಮಾಜದಲ್ಲಿ ಹೆಣ್ಣನ್ನು ಕುಟುಂಬದ ಕಣ್ಣು ಎಂದು ಭಾವಿಸಲಾಗುತ್ತದೆ. ಆ ಕಣ್ಣು ಸಶಕ್ತವಾದರೆ ಇಡೀ ಕುಟುಂಬ ಮತ್ತು ಸಮಾಜವೇ ಸಧೃಢವಾಗುತ್ತದೆ ಎಂದರು. ರಾಜಕೀಯವಾಗಿ ಮಹಿಳಾ ಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಿದ ಅವರು, ಶೇ. 33ರಷ್ಟು ಮೀಸಲಾತಿಯಿಂದ ಮಹಿಳೆಯರು ನಾಯಕರಾಗಿ ಹೊರಹೊಮ್ಮುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಗ್ಯಾರಂಟಿ ಯೋಜನೆಗಳು: ಸ್ವಾವಲಂಬನೆಯತ್ತ ಮಹಿಳೆಯರು

ಸರ್ಕಾರದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಆರ್ಥಿಕ ಸ್ಥಿತಿಯನ್ನು ಸುಧಾರಿಸಿವೆ. ಶಕ್ತಿ ಯೋಜನೆಯಡಿ ಮಹಿಳೆಯರು ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸುತ್ತಿರುವುದು ಅವರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯನ್ನು ಹೆಚ್ಚಿಸಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯದ 1.22 ಕೋಟಿ ಮಹಿಳೆಯರ ಕೈಗೆ ನೇರವಾಗಿ 2,000 ರೂ. ಸಿಗುತ್ತಿದ್ದು, ಇದು ಕುಟುಂಬ ನಿರ್ವಹಣೆಗೆ ದೊಡ್ಡ ಆಸರೆಯಾಗಿದೆ ಎಂದರು. ವಿರೋಧ ಪಕ್ಷಗಳು ಈ ಯೋಜನೆಗಳನ್ನು ಟೀಕಿಸಿದ್ದರೂ, ಮಹಿಳೆಯರ ಬದುಕಿನಲ್ಲಿ ತಂದಿರುವ ಧನಾತ್ಮಕ ಬದಲಾವಣೆ ನಮಗೆ ಸಮಾಧಾನ ತಂದಿದೆ ಎಂದು ತಿಳಿಸಿದರು.

ಸಾಲ ಸೌಲಭ್ಯ

ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ಸರ್ಕಾರ ಶೇ. 4ರ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಸಹಾಯಧನ ಮತ್ತು ಸ್ತ್ರೀಶಕ್ತಿ ಯೋಜನೆಗಳ ಮೂಲಕ ಬೆಂಬಲ ನೀಡುತ್ತಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಪ್ರತಿವರ್ಷ ತಯಾರಾಗುವ ವೈದ್ಯರ ಪೈಕಿ ಶೇ. 40ರಷ್ಟು ಮಹಿಳೆಯರೇ ಇದ್ದಾರೆ. ಮಹಿಳೆಯರು ಕೇವಲ ಉದ್ಯೋಗಿಗಳಲ್ಲ, ಅವರು ಉತ್ತಮ ಚಿಂತಕರು ಮತ್ತು ಉದ್ಯೋಗದಾತರು. ಈ ಉದ್ದಿಮೆಗಳ ನಿರ್ವಹಣೆಯಲ್ಲಿ ಎದುರಾಗುವ ಆರ್ಥಿಕ ಸವಾಲುಗಳನ್ನು ಮಹಿಳೆಯರು ಅತ್ಯಂತ ಧೈರ್ಯದಿಂದ ಮೆಟ್ಟಿ ನಿಂತಿರುವುದು ಅಭಿನಂದನೀಯ ಎಂದರು. ಮಹಿಳೆಯರು ಹೇಗೆ ನಾಯಕರನ್ನು ಬೆಳೆಸುತ್ತಾರೆ ಎನ್ನುವುದಕ್ಕೆ ಸೋನಿಯಾ ಗಾಂಧಿಯವರೇ ಸಾಕ್ಷಿ. ಇಂದಿರಾ ಗಾಂಧಿಯವರ ನಿಧನ ಮತ್ತು ಪತಿಯ ಹತ್ಯೆಯಂತಹ ಕಠಿಣ ಸನ್ನಿವೇಶಗಳನ್ನು ಎದುರಿಸಿ ಪಕ್ಷವನ್ನು ಮುನ್ನಡೆಸಿದರು. ಪ್ರಧಾನಿಯಾಗಲು ಎರಡು ಬಾರಿ ಅವಕಾಶವಿದ್ದರೂ, ಮನಮೋಹನ್ ಸಿಂಗ್ ಅವರನ್ನು ಆ ಸ್ಥಾನಕ್ಕೆ ಆಯ್ಕೆ ಮಾಡಿದರು. ಇದು ಮಹಿಳೆಯರ ತ್ಯಾಗ ಮತ್ತು ವಿಶಾಲ ಮನೋಭಾವದ ಪ್ರತೀಕ ಎಂದು ಬಣ್ಣಿಸಿದರು.

ಬೆಂಗಳೂರು ಟನೆಲ್ ಯೋಜನೆಗೆ ಬೆಂಬಲ ಕೋರಿಕೆ

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸರ್ಕಾರ ಕೈಗೊಂಡಿರುವ ಮಹತ್ವಾಕಾಂಕ್ಷೆಯ ಟನೆಲ್ ಯೋಜನೆಯ ಪರವಾಗಿ ಉದ್ಯಮಿಗಳು ಧ್ವನಿ ಎತ್ತಬೇಕೆಂದು ಮನವಿ ಮಾಡಿದರು. ಈ ಯೋಜನೆ ಜನರ ಸಮಯ ಮತ್ತು ಹಣವನ್ನು ಉಳಿಸುತ್ತದೆ. ರಾಜಕೀಯ ಕಾರಣಕ್ಕಾಗಿ ಕೆಲವರು ವಿರೋಧಿಸುತ್ತಿದ್ದರೂ, 1.4 ಕೋಟಿ ವಾಹನಗಳಿರುವ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ನಾವು 1.5 ಲಕ್ಷ ಕೋಟಿ ರೂ. ವೆಚ್ಚ ಮಾಡುತ್ತಿದ್ದೇವೆ. ಇದು ಅಭಿವೃದ್ಧಿಯ ಹಾದಿ, ಇದಕ್ಕೆ ನಿಮ್ಮ ಸಹಕಾರ ಅಗತ್ಯ ಎಂದು ಹೇಳಿದರು.

ಅಭಿವೃದ್ಧಿಯ ಪಥದಲ್ಲಿ ಪಾಲುದಾರರಾಗಿ

ದುಡ್ಡು ಒಂದೇ ಕಡೆ ಶೇಖರಣೆಯಾದರೆ ಅಭಿವೃದ್ಧಿ ಅಸಾಧ್ಯ, ಅದು ರಕ್ತದಂತೆ ಸದಾ ಹರಿಯುತ್ತಿರಬೇಕು. ಮಹಿಳಾ ಉದ್ಯಮಿಗಳು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಭಾರತದ ಅಭಿವೃದ್ಧಿಯು ದಕ್ಷಿಣ ಭಾರತದ ಅಭಿವೃದ್ಧಿಯನ್ನು ಅವಲಂಬಿಸಿದೆ. ಜೊತೆಗೂಡುವುದು ಆರಂಭ, ಜೊತೆಗೂಡುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಈ ತತ್ವದಂತೆ ಕರ್ನಾಟಕದ ಅಭಿವೃದ್ಧಿ ಪಥದಲ್ಲಿ ನೀವೆಲ್ಲರೂ ಪಾಲುದಾರರಾಗಬೇಕು ಎಂದು ಕರೆ ನೀಡಿದರು.

Read More
Next Story