Bumper offer for Bengaluru property owners; 100-day golden opportunity to convert B-account to A!
x

ಸಾಂದರ್ಭಿಕ ಚಿತ್ರ

ಬೆಂಗಳೂರಿನ ಆಸ್ತಿ ಮಾಲೀಕರಿಗೆ ಭೂ ಗ್ಯಾರಂಟಿ; ʼಬಿʼಯಿಂದ ಎ-ಖಾತೆಗೆ ಬದಲಿಸಲು 100 ದಿನದ ವಿಶೇಷ ಆಂದೋಲನ

ಆಸ್ತಿಗಳ ಫೋಟೋ ತೆಗೆದು, ಜಿಪಿಎಸ್ ಮಾಡಿ ಸಿದ್ಧಪಡಿಸಿದ ಖಾತಾ ದಾಖಲೆಗಳನ್ನು ಸರ್ಕಾರಿ ಪ್ರತಿನಿಧಿಗಳು ನೇರವಾಗಿ ನಾಗರಿಕರ ಮನೆ ಬಾಗಿಲಿಗೇ ತಲುಪಿಸಲಿದ್ದಾರೆ. ಮೇ 16ರಿಂದ ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ವಿಶೇಷ ಶಿಬಿರಗಳು ಆರಂಭವಾಗಲಿವೆ.


Click the Play button to hear this message in audio format

ಸಿಲಿಕಾನ್ ಸಿಟಿ ಬೆಂಗಳೂರಿನ ಸುಮಾರು 23 ಲಕ್ಷ ಆಸ್ತಿ ಮಾಲೀಕರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐತಿಹಾಸಿಕ ತೀರ್ಮಾನ ಕೈಗೊಂಡಿದೆ. ನಗರದ 7 ಲಕ್ಷ ಬಿ-ಖಾತಾ ಆಸ್ತಿಗಳನ್ನು ಎ-ಖಾತೆಯಾಗಿ ಪರಿವರ್ತಿಸಲು ಮತ್ತು ಅನಧಿಕೃತ ಆಸ್ತಿಗಳನ್ನು ಸಕ್ರಮಗೊಳಿಸಲು ಡಿ.ಕೆ. ಶಿವಕುಮಾರ್ ಅವರು '6ನೇ ಗ್ಯಾರಂಟಿ' ಮಾದರಿಯ ಬೃಹತ್ ಅಭಿಯಾನ ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಒಟ್ಟು 23 ಲಕ್ಷ ಆಸ್ತಿಗಳ ಪೈಕಿ 16 ಲಕ್ಷ ಎ-ಖಾತೆ ಹಾಗೂ 7 ಲಕ್ಷ ಬಿ-ಖಾತೆಗಳಿವೆ. ಈ ಎಲ್ಲಾ ದಾಖಲೆಗಳನ್ನು ಡಿಜಿಟಲ್ ರೂಪಕ್ಕೆ ತರಲಾಗುತ್ತಿದ್ದು, ಈಗಾಗಲೇ 7,000 ಕಡತಗಳನ್ನು ಅಂತಿಮಗೊಳಿಸಲಾಗಿದೆ. ಈ ಹಿಂದೆ ಬಿ-ಖಾತೆಯಿಂದ ಎ-ಖಾತೆಗೆ ಬದಲಾಯಿಸಲು ಶೇ.5 ಗೈಡ್‌ಲೈನ್ ವ್ಯಾಲ್ಯೂ ಪಾವತಿಸಬೇಕಿತ್ತು. ಆದರೆ, ಈಗಿನ 100 ದಿನಗಳ ವಿಶೇಷ ಆಂದೋಲನದಲ್ಲಿ ಕೇವಲ ಶೇ 2 ರಷ್ಟು ಪಾವತಿಸಿದರೆ ಸಾಕು. ಈ ಅವಧಿ ಮುಗಿದ ನಂತರ ಮತ್ತೆ ದರ ಶೇ.5 ಕ್ಕೆ ಏರಿಕೆಯಾಗಲಿದೆ.

ಮನೆ ಬಾಗಿಲಿಗೇ ದಾಖಲೆ

ಆಸ್ತಿಗಳ ಫೋಟೋ ತೆಗೆದು, ಜಿಪಿಎಸ್ ಮಾಡಿ ಸಿದ್ಧಪಡಿಸಿದ ಖಾತಾ ದಾಖಲೆಗಳನ್ನು ಸರ್ಕಾರಿ ಪ್ರತಿನಿಧಿಗಳು ನೇರವಾಗಿ ನಾಗರಿಕರ ಮನೆ ಬಾಗಿಲಿಗೇ ತಲುಪಿಸಲಿದ್ದಾರೆ. ಮೇ 16ರಿಂದ ಪ್ರತಿ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ವಿಶೇಷ ಶಿಬಿರಗಳು ಆರಂಭವಾಗಲಿವೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿ 10 ಪ್ರಮುಖ ಸ್ಥಳಗಳಲ್ಲಿ ಈ ಶಿಬಿರಗಳು ನಡೆಯಲಿವೆ. ಸಾರ್ವಜನಿಕರ ಹಿತದೃಷ್ಟಿಯಿಂದ ಬಿಬಿಎಂಪಿ ಸಿಬ್ಬಂದಿ ರಜೆ ದಿನಗಳಲ್ಲೂ ಕೆಲಸ ಮಾಡಲಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್‌ ಭೂ ಗ್ಯಾರಂಟಿ ಘೋಷಿಸಿದರು.

ಟೌನ್ ಪ್ಲಾನಿಂಗ್, ಸೆಟ್‌ಬ್ಯಾಕ್ ನಿಯಮ ಸಡಿಲಿಕೆ

ನಗರದಲ್ಲಿ ಪ್ಲಾನ್ ಇಲ್ಲದೆ ಮನೆ ಕಟ್ಟಿದವರಿಗೆ ಬ್ಯಾಂಕ್ ಸಾಲ ಪಡೆಯಲು ತೊಂದರೆಯಾಗುತ್ತಿರುವುದನ್ನು ಗಮನಿಸಿರುವ ಸರ್ಕಾರ, ಟೌನ್ ಪ್ಲಾನಿಂಗ್ ನಿಯಮಗಳಲ್ಲಿ ವಿಶೇಷ ರಿಯಾಯಿತಿ ನೀಡಲು ಮುಂದಾಗಿದೆ. ವೈಯಲೇಶನ್ (ಉಲ್ಲಂಘನೆ) ಮಿತಿಯನ್ನು ಈಗಿರುವ ಶೇ.5 ರಿಂದ ಶೇ.15 ಕ್ಕೆ ಹೆಚ್ಚಿಸುವ ಬಗ್ಗೆ ಮುಂದಿನ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದು, 30-40 ಮತ್ತು 60-40 ಅಳತೆಯ ನಿವೇಶನಗಳಿಗೆ ಸೆಟ್‌ಬ್ಯಾಕ್ ರಿಲ್ಯಾಕ್ಸೇಷನ್ ನೀಡಲಾಗುವುದು. ಒನ್ ಟೈಮ್ ಸೆಟಲ್ಮೆಂಟ್ ಅರ್ಜಿ ಸಲ್ಲಿಸಲು 3 ತಿಂಗಳು ಹಾಗೂ ಹಣ ಪಾವತಿಸಲು 6 ತಿಂಗಳ ಕಾಲಾವಕಾಶ ನೀಡಲಾಗುವುದು ಎಂದು ಹೇಳಿದರು.

ಶಿವರಾಮ ಕಾರಂತ ಬಡಾವಣೆ ಫಲಾನುಭವಿಗಳಿಗೆ ಸಿಹಿ ಸುದ್ದಿ

ಡಾ. ಶಿವರಾಮ ಕಾರಂತ ಬಡಾವಣೆಗೆ ಭೂಮಿ ನೀಡಿದ 3,502 ಭೂ ಮಾಲೀಕರಲ್ಲಿ ಮೊದಲ ಹಂತವಾಗಿ 1,800 ಜನರಿಗೆ ಮೇ 15ರಿಂದ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭವಾಗಲಿದೆ. ಅರ್ಹರು ಅಗತ್ಯ ದಾಖಲೆ ಒದಗಿಸಿ ತಮ್ಮ ನಿವೇಶನಗಳನ್ನು ಪಡೆದುಕೊಳ್ಳಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಗ್ರೀನ್ ಬೆಂಗಳೂರು, 15 ಲಕ್ಷ ಸಸಿಗಳ ನಾಟಿ

ಕೆಂಪೇಗೌಡ ಜಯಂತಿಯ ಅಂಗವಾಗಿ ಮತ್ತು ಬಿಡಿಎ ಸಂಸ್ಥೆಯ 50ನೇ ವರ್ಷದ ಸವಿನೆನಪಿಗಾಗಿ ಜೂ. 27ರಂದು ಬೆಂಗಳೂರಿನಾದ್ಯಂತ 15 ಲಕ್ಷ ಸಸಿಗಳನ್ನು ನೆಡುವ ಮೂಲಕ ನಗರದ ಹಸಿರು ಹೊದಿಕೆಯನ್ನು ಹೆಚ್ಚಿಸಲು ಸರ್ಕಾರ ಬದ್ಧವಾಗಿದ್ದು, ಆ ಮೂಲಕ ನಗರವನ್ನು ಮತ್ತಷ್ಟು ಹಸಿರನ್ನಾಗಿಸಲು ಕ್ರಮವಹಿಸಲಾಗುವುದು ಎಂದರು.

Read More
Next Story