ದೀಪಾವಳಿಯ ಪಟಾಕಿ ಕಸದಿಂದ ಪೌರಕಾರ್ಮಿಕರಿಗೆ ಸಂಕಷ್ಟ; ಆರೋಗ್ಯದ ಮೇಲೂ ಗಂಭೀರ ಪರಿಣಾಮ
ದೀಪಾವಳಿ ಬಳಿಕ ರಸ್ತೆಗಳಲ್ಲೆಲ್ಲ ಪಟಾಕಿ ತ್ಯಾಜ್ಯ, ಬೂದಿ ಮತ್ತು ಕಾಗದದ ರಾಶಿ. ಇವುಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಸುರಕ್ಷತಾ ಪರಿಕರಗಳ ಕೊರತೆ ಇದೆ. ಜೊತೆಗೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಆತಂಕ ಇದೆ.
ದೀಪಾವಳಿ ಎಂದರೆ ಬೆಳಕಿನ ಹಬ್ಬ. ಮನೆಮನೆಗಳಲ್ಲಿ ದೀಪ ಬೆಳಗಿಸಿ ಸಂಭ್ರಮಿಸುವ ಹಬ್ಬ. ಆದರೆ ಇತ್ತೀಚಿನ ವರ್ಷಗಳಲ್ಲಿ ಪಟಾಕಿ ಸಿಡಿಸುವ ಸಂಭ್ರಮವೂ ಹೆಚ್ಚಾಗಿದೆ. ಹೀಗೆ ಪಟಾಕಿ ಸಿಡಿಸಿ ಸಂಭ್ರಮಿಸುವವರ ನಡುವೆ, ಮರುದಿನ ರಸ್ತೆಯಲ್ಲಿ ಹರಡಿರುವ ಕಸವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸಂಕಷ್ಟ ಮಾತ್ರ ಅನೇಕರ ಗಮನಕ್ಕೆ ಬರುವುದಿಲ್ಲ. ಪಟಾಕಿ ಹೊಗೆ, ಧೂಳು ಹಾಗೂ ರಾಸಾಯನಿಕ ತ್ಯಾಜ್ಯದಿಂದ ಪೌರಕಾರ್ಮಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ದೀಪಾವಳಿ ಬಳಿಕ ಬೆಂಗಳೂರಿನ ರಸ್ತೆಗಳಲ್ಲಿ ಪಟಾಕಿಗಳ ಅವಶೇಷಗಳು, ಸುಟ್ಟ ಕಾಗದಗಳು ಹಾಗೂ ಇತರ ತ್ಯಾಜ್ಯಗಳು ರಾಶಿಯಾಗಿ ಬಿದ್ದಿರುತ್ತವೆ. ಇವುಗಳನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಸೂಕ್ತ ಸುರಕ್ಷತಾ ಪರಿಕರಗಳು ಸಿಗುತ್ತಿಲ್ಲ ಎಂಬ ಅಳಲು ಕೇಳಿಬಂದಿದೆ. ರಾಮಾಂಜನಮ್ಮ, ಲಕ್ಷ್ಮೀದೇವಿ ಮತ್ತು ನರಸಮ್ಮ ಸೇರಿದಂತೆ ಹಲವು ಪೌರಕಾರ್ಮಿಕರು ಮಾತನಾಡಿ, ಪಟಾಕಿ ಕಸ ಗುಡಿಸಲು ಗ್ಲೌಸ್ ಮತ್ತು ಮಾಸ್ಕ್‌ಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೆ ನೀಡಿದ್ದ ಸುರಕ್ಷತಾ ಪರಿಕರಗಳು ಈಗ ಬಳಕೆಗೆ ಇಲ್ಲದಂತಾಗಿವೆ ಎಂದಿದ್ದಾರೆ.
ಇನ್ನು ಪಟಾಕಿ ಹೊಗೆಯಿಂದ ಉಸಿರಾಟದ ತೊಂದರೆ, ಚರ್ಮದ ಅಲರ್ಜಿ ಮತ್ತು ಕಣ್ಣಿನ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರ ಆರೋಗ್ಯದ ಮೇಲೆ ವಾಯುಮಾಲಿನ್ಯ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ್ದಾರೆ. ಪಟಾಕಿ ಸಿಡಿಸುವವರು ತಮ್ಮ ಮನೆಯ ಮುಂದಿನ ಕಸವನ್ನು ತಾವೇ ಸ್ವಚ್ಛಗೊಳಿಸಿದರೆ ಪೌರಕಾರ್ಮಿಕರ ಮೇಲಿನ ಹೊರೆ ಕಡಿಮೆಯಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ದೀಪಾವಳಿ ಬೆಳಕಿನ ಹಬ್ಬವಾಗಿರಲಿ, ಮಾಲಿನ್ಯದ ಹಬ್ಬವಾಗದಿರಲಿ. ಪಟಾಕಿ ಬಳಕೆಯನ್ನು ಕಡಿಮೆ ಮಾಡಿ, ಪೌರಕಾರ್ಮಿಕರ ಆರೋಗ್ಯ ಮತ್ತು ಪರಿಸರದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಿದೆ.

