
ಬಹುಭಾಷಾ ನಟ ಪ್ರಕಾಶ್ ರಾಜ್ ವಿರುದ್ಧ ಅರೆಸ್ಟ್ ವಾರಂಟ್ ಜಾರಿ
ಯಾವುದೇ ಇಲಾಖೆಯಿಂದ ನಿರೀಕ್ಷಿತ ಮಟ್ಟದ ಕಾನೂನು ಕ್ರಮ ಜರುಗದ ಹಿನ್ನೆಲೆಯಲ್ಲಿ ದೂರುದಾರರು ಅಂತಿಮವಾಗಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿ ಖಾಸಗಿ ದೂರು ದಾಖಲಿಸಿದ್ದರು.
ನಾಲ್ಕು ರಾಜ್ಯಗಳಲ್ಲಿ ಕಾನೂನುಬಾಹಿರವಾಗಿ ಮತದಾರರ ಗುರುತಿನ ಚೀಟಿ ಹೊಂದಿರುವ ಆರೋಪದ ಮೇಲೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ನ್ಯಾಯಾಲಯ ನೀಡಿದ್ದ ಸಮನ್ಸ್ಗೆ ಸತತ ಗೈರುಹಾಜರಾಗಿ, ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಬೆಂಗಳೂರಿನ 48ನೇ ಎಸಿಜೆಎಂ ನ್ಯಾಯಾಲಯವು ಬಂಧನ ವಾರೆಂಟ್ ಜಾರಿಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಕಳೆದ 2019 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಕಾಶ್ ರಾಜ್ ಅವರು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ವೇಳೆ ವಕೀಲರಾದ ದಿಲೀಪ್ ಕುಮಾರ್ ಎಂಬುವರು ನಟನ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಪ್ರಕಾಶ್ ರಾಜ್ ಅವರು ದೇಶದ ವಿವಿಧ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಪಾಂಡಿಚೇರಿಯಲ್ಲಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ. ಇದು ಜನಪ್ರತಿನಿಧಿ ಕಾಯ್ದೆ ಹಾಗೂ ದೇಶದ ಚುನಾವಣಾ ನಿಯಮಾವಳಿಗಳ ಅನ್ವಯ ಗಂಭೀರ ಅಪರಾಧ ಎಂದು ಆರೋಪಿಸಿದ್ದರು.
ಕೋರ್ಟ್ ಮೆಟ್ಟಿಲೇರಿದ್ದ ವಕೀಲ
ಈ ಅಕ್ರಮದ ಕುರಿತು ವಕೀಲ ದಿಲೀಪ್ ಕುಮಾರ್ ಅವರು 2019 ರಲ್ಲಿ ಮೊದಲ ಬಾರಿಗೆ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದಾಗ, ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೂ ಅಧಿಕೃತವಾಗಿ ದೂರು ಸಲ್ಲಿಸಲಾಯಿತು.
ಯಾವುದೇ ಇಲಾಖೆಯಿಂದ ನಿರೀಕ್ಷಿತ ಮಟ್ಟದ ಕಾನೂನು ಕ್ರಮ ಜರುಗದ ಹಿನ್ನೆಲೆಯಲ್ಲಿ ದೂರುದಾರರು ಅಂತಿಮವಾಗಿ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಿ ಖಾಸಗಿ ದೂರು ದಾಖಲಿಸಿದ್ದರು.
ಕಾನೂನು ಏನು ಹೇಳುತ್ತದೆ?
ಭಾರತೀಯ ಚುನಾವಣಾ ವ್ಯವಸ್ಥೆ ಪ್ರಕಾರ, ಒಬ್ಬ ವ್ಯಕ್ತಿಯು ದೇಶದ ಯಾವುದೇ ಒಂದು ಕ್ಷೇತ್ರದಲ್ಲಿ ಮಾತ್ರ ಮತದಾನದ ಹಕ್ಕು ಚಲಾಯಿಸಲು ಹಾಗೂ ಗುರುತಿನ ಚೀಟಿ ಹೊಂದಲು ಅರ್ಹನಾಗಿರುತ್ತಾನೆ. ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದುವುದು ಕಾನೂನುಬಾಹಿರವಾಗಿದೆ.
ದೂರಿನ ಅನ್ವಯ ವಿಚಾರಣೆ ನಡೆಸಿದ್ದ 48ನೇ ಎಸಿಜೆಎಂ ನ್ಯಾಯಾಲಯವು, ಈ ಹಿಂದೆ ನಟ ಪ್ರಕಾಶ್ ರಾಜ್ ಅವರಿಗೆ ಖುದ್ದಾಗಿ ಹಾಜರಾಗುವಂತೆ ಹಲವು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ, ನಟ ಪ್ರಕಾಶ್ ರಾಜ್ ನ್ಯಾಯಾಲಯದ ಸಮನ್ಸ್ಗಳನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿದ್ದರು ಎನ್ನಲಾಗಿದೆ.
ಕೋರ್ಟ್ ಪ್ರಕ್ರಿಯೆಗೆ ಯಾವುದೇ ಗೌರವ ಅಥವಾ ಪ್ರತಿಕ್ರಿಯೆ ನೀಡದ ಕಾರಣ ಅಸಮಾಧಾನಗೊಂಡ ನ್ಯಾಯಾಧೀಶರು, ಇದೀಗ ಆರೋಪಿ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದ್ದಾರೆ.

