Commercial LPG price rises to Rs 993. Sudden increase: Youth Congress outraged against the central government
x
ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮಂಜುನಾಥ ಎಚ್.ಎಸ್.

ವಾಣಿಜ್ಯ ಎಲ್‌ಪಿಜಿ ದರ 993 ರೂ;. ದಿಢೀರ್ ಏರಿಕೆ: ಕೇಂದ್ರದ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುವವರೆಗೂ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟಿದ್ದ ಕೇಂದ್ರ ಸರ್ಕಾರ, ಚುನಾವಣೆ ಮುಗಿದ ತಕ್ಷಣವೇ ಬೆಲೆ ಏರಿಕೆಯ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಮೇ 1 ರಿಂದ ಅನ್ವಯವಾಗುವಂತೆ 19 ಕೆ.ಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರವನ್ನು ಬರೋಬ್ಬರಿ 993 ರೂಪಾಯಿಗಳಷ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.

ಐದು ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಾಮಾನ್ಯ ಜನರ ಮೇಲೆ ಆರ್ಥಿಕ ದಾಳಿ ನಡೆಸಿದೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ ಎಚ್.ಎಸ್. ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಲಾಭಕ್ಕಾಗಿ ಜನರ ದಿಕ್ಕುತಪ್ಪಿಸಿದ ಸರ್ಕಾರ

ಕಳೆದ ಮಾರ್ಚ್ ತಿಂಗಳಲ್ಲಿ 144 ರೂಪಾಯಿ ಹಾಗೂ ಏಪ್ರಿಲ್ 1 ರಂದು ಸುಮಾರು 200 ರೂಪಾಯಿಗಳಷ್ಟು ವಾಣಿಜ್ಯ ಸಿಲಿಂಡರ್ ದರ ಏರಿಕೆ ಮಾಡಲಾಗಿತ್ತು. ಇದೀಗ ದಿಢೀರನೆ 993 ರೂ. ಹೆಚ್ಚಳ ಮಾಡಲಾಗಿದ್ದು, ದೆಹಲಿಯಲ್ಲಿ ಒಂದು ವಾಣಿಜ್ಯ ಸಿಲಿಂಡರ್ ಬೆಲೆ ದಾಖಲೆಯ 3071.50 ರೂಪಾಯಿಗಳಿಗೆ ತಲುಪಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುವವರೆಗೂ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟಿದ್ದ ಕೇಂದ್ರ ಸರ್ಕಾರ, ಚುನಾವಣೆ ಮುಗಿದ ತಕ್ಷಣವೇ ಬೆಲೆ ಏರಿಕೆಯ ಬರೆ ಎಳೆದಿದೆ. ಇದು ಜನಪರ ಆಡಳಿತವಲ್ಲ, ಬದಲಾಗಿ ಕೇವಲ ಚುನಾವಣಾ ಲೆಕ್ಕಾಚಾರಕ್ಕಾಗಿ ಜನರನ್ನು ಮೋಸ ಮಾಡುವ ರಾಜಕೀಯ ತಂತ್ರವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಜನಸಾಮಾನ್ಯರ ಬದುಕಿಗೆ ಕಂಟಕ

ಈ ಭಾರೀ ದರ ಏರಿಕೆಯು ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ಸಣ್ಣ ಊಟದ ಅಂಗಡಿಗಳನ್ನು ನೆಚ್ಚಿಕೊಂಡು ಬದುಕುತ್ತಿರುವ ವ್ಯಾಪಾರಿಗಳಿಗೆ ಬಹುದೊಡ್ಡ ಹೊಡೆತ ನೀಡಲಿದೆ. ಇದರ ನೇರ ಪರಿಣಾಮವಾಗಿ ಹೋಟೆಲ್ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಲಿದ್ದು, ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳಲಿದೆ. ಈಗಾಗಲೇ ಗೃಹಬಳಕೆಯ ಅಡುಗೆ ಅನಿಲ (LPG) ದರ ಏರಿಕೆಯಿಂದ ಕಂಗೆಟ್ಟಿರುವ ಗೃಹಿಣಿಯರಿಗೆ ಈ ಬೆಳವಣಿಗೆ ಮತ್ತಷ್ಟು ಆರ್ಥಿಕ ಸಂಕಷ್ಟವನ್ನು ತಂದೊಡ್ಡಿದೆ. ಇಂಧನ ಬೆಲೆಗಳು ಇದೇ ರೀತಿ ಏರಿಕೆಯಾದರೆ ರೈತರ ಕೃಷಿ ವೆಚ್ಚ, ಸಾರಿಗೆ ದರ ಹಾಗೂ ದಿನಸಿ ವಸ್ತುಗಳ ಬೆಲೆಗಳು ದುಪ್ಪಟ್ಟಾಗಿ ಮಧ್ಯಮ ವರ್ಗ ಮತ್ತು ಬಡವರ ಬದುಕು ದುಸ್ತರವಾಗಲಿದೆ ಎಂದು ಮಂಜುನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.

ಕಾರ್ಪೊರೇಟ್ ಕಂಪನಿಗಳ ರಕ್ಷಣೆಗೆ ಕೇಂದ್ರದ ಆದ್ಯತೆ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾದಾಗ ಅದರ ಲಾಭವನ್ನು ಜನರಿಗೆ ವರ್ಗಾಯಿಸದ ಸರ್ಕಾರ, ಇದೀಗ ಏರಿಕೆಯ ನೆಪವೊಡ್ಡಿ ಜನರ ಜೇಬು ಖಾಲಿ ಮಾಡುವ ಕೆಲಸ ಮಾಡುತ್ತಿದೆ. ದೇಶದ ಜನತೆ ಈಗಾಗಲೇ ನಿರುದ್ಯೋಗ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಮಾತ್ರ ಕಾರ್ಪೊರೇಟ್ ಕಂಪನಿಗಳ ಲಾಭ ಕಾಪಾಡಲು ಶ್ರಮಿಸುತ್ತಿದೆ ಎಂಬ ಅನುಮಾನ ದಟ್ಟವಾಗಿದೆ. ಜನರ ಬೆವರಿನ ಹಣದಲ್ಲಿ ಸರ್ಕಾರದ ಪ್ರಚಾರ ಮಾಡುವುದು ನಿಲ್ಲಬೇಕು, ದೇಶದ ಜನರು ಕೇವಲ ತೆರಿಗೆ ಕಟ್ಟುವ ಯಂತ್ರಗಳಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಈ ದೇಶ ಬೆರಳೆಣಿಕೆಯ ಜನರ ಲಾಭಕ್ಕಾಗಿ ನಡೆಯಬಾರದು, ಸಾಮಾನ್ಯ ಜನರ ಬದುಕಿಗಾಗಿ ನಡೆಯಬೇಕು. ಬೆಲೆ ಏರಿಕೆಯ ರಾಜಕೀಯ ತಕ್ಷಣವೇ ನಿಲ್ಲಬೇಕು ಎಂದು ಆಗ್ರಹಿಸಿರುವ ಅವರು, ಜನಸಾಮಾನ್ಯರ ಪರವಾಗಿ ಕಾಂಗ್ರೆಸ್ ಪಕ್ಷವು ಶೀಘ್ರದಲ್ಲೇ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Read More
Next Story